![](https://blogger.googleusercontent.com/img/b/R29vZ2xl/AVvXsEhQo4dKXBJguwZBItJ_fylUfCvqKvPJXhOqZmerxWSracmWvJc7t5zdlAR-4x2_zRleZm86nZ5swGbryjfHVBrfzBYz8enM5BKFAgki2whRhh5CLC0PJ7CrkUOovwuD8SmUJ9uTAtj3yso5/w400-h251-rw/D18-BDVT1-774031.jpg)
ಭದ್ರಾವತಿ ನಗರಸಭೆ ವಾರ್ಡ್ ನಂ.೨೫ರ ಭಂಡಾರಹಳ್ಳಿ ಕಡದಕಟ್ಟೆ ಎಸ್‌ವಿಎಸ್ ಶಾಲೆ ಮುಂಭಾಗದಲ್ಲಿರುವ ನಾಗಮ್ಮ ಬಡಾವಣೆ ನಗರಸಭೆ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಜಮಾಅತೆ ಇಸ್ಲಾಮೀ ಹಿಂದ್, ತಾಲೂಕು ಕಟ್ಟಡ ಕಾರ್ಮಿಕರ ಸಂಘ, ಎಸ್‌ವಿಎಸ್ ಶಾಲೆ ಮತ್ತು ಕುಂಚ ಕಲಾವಿದರ ಸಂಘದ ವತಿಯಿಂದ ಗುರುವಾರ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ನ. ೧೮: ಮನೆಗೊಂದು ಸಸಿ ನೆಡುವ ಮೂಲಕ ನಮ್ಮ ಸುತ್ತಮುತ್ತಲ ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಗಮನ ಹರಿಸೋಣ ಎಂದು ನಗರಸಭಾ ಸದಸ್ಯೆ ಶೃತಿ ವಸಂತ್ ಹೇಳಿದರು.
ಅವರು ಗುರುವಾರ ವಾರ್ಡ್ ನಂ.೨೫ರ ಭಂಡಾರಹಳ್ಳಿ ಕಡದಕಟ್ಟೆ ಎಸ್‌ವಿಎಸ್ ಶಾಲೆ ಮುಂಭಾಗದಲ್ಲಿರುವ ನಾಗಮ್ಮ ಬಡಾವಣೆ ನಗರಸಭೆ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಜಮಾಅತೆ ಇಸ್ಲಾಮೀ ಹಿಂದ್, ತಾಲೂಕು ಕಟ್ಟಡ ಕಾರ್ಮಿಕರ ಸಂಘ, ಎಸ್‌ವಿಎಸ್ ಶಾಲೆ ಮತ್ತು ಕುಂಚ ಕಲಾವಿದರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವನಮಹೋತ್ಸವ ಹೆಚ್ಚು ಸಹಕಾರಿಯಾಗಿದ್ದು, ದೇಶದಲ್ಲಿ ವನ ಮಹೋತ್ಸವ ಮಹತ್ವ ಅರಿತುಕೊಂಡು ೧೯೫೦ರಿಂದ ನಿರಂತರವಾಗಿ ವನ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ವಿವಿಧ ಸ್ಥಳೀಯ ಸಂಸ್ಥೆಗಳು, ಖಾಸಗಿ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಪ್ರತಿಯೊಬ್ಬರು ವನ ಮಹೋತ್ಸವ ಮಹತ್ವ ಅರಿತು ಖಾಲಿ ಇರುವ ಜಾಗಗಳಲ್ಲಿ ಮನೆಗೊಂದು ಸಸಿ ಎಂಬ ಪರಿಕಲ್ಪನೆಯೊಂದಿಗೆ ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಬೆಳೆಸಬೇಕೆಂದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ, ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು. ಪರಿಸರ ಕಾಪಾಡಿಕೊಳ್ಳುವ ಜವಾಬ್ದಾರಿ ಹೆಚ್ಚಿನಾದ್ದಾಗಿದೆ. ಒಳ್ಳೆಯ ಶಿಕ್ಷಣ ಪಡೆಯುವ ಜೊತೆಗೆ ಒಳ್ಳೆಯ ಪರಿಸರ ನಿರ್ಮಾಣ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದರು.
ಎಸ್‌ವಿಎಸ್ ಶಾಲೆಯ ಸಂಸ್ಥಾಪಕ ಪ್ರಭಾಕರ್ ಮಾತನಾಡಿ, ದೆಹಲಿಯಲ್ಲಿ ಪ್ರಸ್ತುತ ಪರಿಸರ ಮಾಲಿನ್ಯ ತೀರ ಹದಗೆಟ್ಟಿದೆ. ಮಾಲಿನ್ಯ ನಿಯಂತ್ರಿಸಲು ಅಲ್ಲಿನ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಭವಿಷ್ಯದಲ್ಲಿ ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲೂ ಸಹ ಕಂಡು ಬರಬಹುದು. ಈ ಹಿನ್ನಲೆಯಲ್ಲಿ ನಾವೆಲ್ಲರೂ ಎಚ್ಚತ್ತುಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಸುತ್ತಮುತ್ತ ಖಾಲಿ ಇರುವ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಶಿವಮೊಗ್ಗ ವಲಯ ಸಂಚಾಲಕ ಸಲೀಮ್ ಉಮರಿ, ತಾಲೂಕು ಅಧ್ಯಕ್ಷ ಹಫೀಜ್ ರಹಮಾನ್ ಹಾಗು ಪದಾಧಿಕಾರಿಗಳು, ಕುಂಚ ಕಲಾವಿದರ ಸಂಘದ ಪದಾಧಿಕಾರಿಗಳು, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್ ಮತ್ತು ಎಸ್‌ವಿಎಸ್ ಶಾಲೆಯ ಶಿಕ್ಷಕರು ಹಾಗು ಮಕ್ಕಳು ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಂಚ ಕಲಾವಿದರ ಸಂಘದ ಗುರು ವಂದಿಸಿದರು.