ಭಾನುವಾರ, ಆಗಸ್ಟ್ 3, 2025

ಆ.೪ರಂದು ಕಾರ್ಮಿಕರ ಭವನ ಲೋಕಾರ್ಪಣೆ


ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್
    ಭದ್ರಾವತಿ : ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಗರದ ಉಜ್ಜನಿಪುರ, ಬೈಪಾಸ್ ರಸ್ತೆ, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಕಾರ್ಮಿಕರ ಭವನ ಆ.೪ರ ಸೋಮವಾರ ಮಧ್ಯಾಹ್ನ ೩ ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. 
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಉಪಸ್ಥಿತಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಉದ್ಘಾಟಿಸುವರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. 
    ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರಾದ ಶಾಸಕ ಗೋಪಾಲಕೃಷ ಬೇಳೂರು, ಸಂಸದ ಬಿ.ವೈ ರಾಘವೇಂದ್ರ, ವಿಧಾನಸಭಾ ಸದಸ್ಯರಾದ ಅರಗ ಜ್ಞಾನೇಂದ್ರ, ಶಾರದಾ ಪೂರ್‍ಯಾನಾಯ್ಕ, ಎಸ್.ಎನ್ ಚನ್ನಬಸಪ್ಪ ಮತ್ತು ಬಿ.ವೈ ವಿಜಯೇಂದ್ರ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್ ಭೋಜೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಡಾ. ಧನಂಜಯ ಸರ್ಜಿ, ಬಲ್ಕೀಶ್ ಬಾನು ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾರ್ಮಿಕ ಮತ್ತು ಸಾರಿಗೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಮತ್ತು ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಭಾಗವಹಿಸಲಿದ್ದಾರೆ. 
    ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಸದಸ್ಯರು, ಕಾರ್ಮಿಕ ಇಲಾಖೆ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ಕಾರ್ಮಿಕ ವರ್ಗದವರು ಹಾಗೂ ಆಡಳಿತ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 
    ಜೂ.೨೮, ೨೦೨೨ರಂದು ಸುಮಾರು ೫ ಕೋ.ರು. ವೆಚ್ಚದಲ್ಲಿ ಕಾರ್ಮಿಕರ ಭವನ ನಿರ್ಮಾಣಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಕೆ.ಸಿ ನಾರಾಯಣ ಗೌಡ ಉಪಸ್ಥಿತಿಯಲ್ಲಿ ಅಂದಿನ ಕಾರ್ಮಿಕ ಸಚಿವರಾಗಿದ್ದ ಶಿವರಾಮ್ ಹೆಬ್ಬಾರ್‌ರವರು ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು ಒಂದು ವರ್ಷದ ಹಿಂದೆಯೇ ಭವನ ನಿರ್ಮಾಣಗೊಂಡಿದ್ದರೂ ಸಹ ಲೋಕಾರ್ಪಣೆಗೊಳ್ಳದೆ ನೆನೆಗುದಿಗೆ ಬಿದ್ದಿತ್ತು. ಇದೀಗ ಲೋಕಾರ್ಪಣೆಗೊಳ್ಳುತ್ತಿದೆ. 
    ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾರ್ಮಿಕರ ಭವನ ನಿರ್ಮಾಣಗೊಂಡಿರುವುದು ಹೆಚ್ಚಿನ ಸಹಕಾರಿಯಾಗಿದೆ. ಸಭೆ, ಸಮಾರಂಭಗಳನ್ನು ನಡೆಸಲು, ಅದರಲ್ಲೂ ವಲಸೆ ಕಾರ್ಮಿಕರು ತಾತ್ಕಾಲಿಕವಾಗಿ ಉಳಿದುಕೊಳ್ಳಲು ಹೆಚ್ಚಿನ ಅನುಕೂಲವಾಗಿದೆ.  

೨೪ ವರ್ಷ ಕರ್ತವ್ಯ ನಿರ್ವಹಿಸಿ ಮನೆಗೆ ಮರಳಿದ ಸೈನಿಕನಿಗೆ ಕುಟುಂಬಸ್ಥರು, ಸ್ನೇಹಿತರಿಂದ ಅದ್ದೂರಿ ಸ್ವಾಗತ

ಭದ್ರಾವತಿ ತಾಲೂಕಿನ ಶ್ರೀ ರಾಮನಗರದ ನಿವಾಸಿ, ಭಾರತೀಯ ಸೈನ್ಯದಲ್ಲಿ ೨೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ ಮರಳಿದ ಕೆ. ಆನಂದ್ ಅವರಿಗೆ ಕುಟುಂಬಸ್ಥರು ಹಾಗು ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು. 
    ಭದ್ರಾವತಿ : ತಾಲೂಕಿನ ಶ್ರೀ ರಾಮನಗರದ ನಿವಾಸಿ, ಭಾರತೀಯ ಸೈನ್ಯದಲ್ಲಿ ೨೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಶನಿವಾರ ರಾತ್ರಿ ಮರಳಿದ ಕೆ. ಆನಂದ್ ಅವರಿಗೆ ಕುಟುಂಬಸ್ಥರು ಹಾಗು ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸನ್ಮಾನಿಸಿ ಗೌರವಿಸಿದರು. 
    ತಮ್ಮ ೨೪ ವರ್ಷಗಳ ವೃತ್ತಿ ಅವಧಿಯಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಪತ್ರಿಕೆ ಜೊತೆ ಮಾತನಾಡಿದ ಆನಂದ್‌ರವರು, ಶ್ರೀನಗರ, ಜಮ್ಮುಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದೇನೆ. ಐಟಿಐ ವೃತ್ತಿಪರ ಶಿಕ್ಷಣಪಡೆದು ಸೈನ್ಯಕ್ಕೆ ಸೇರ್ಪಡೆಗೊಂಡು ಹವಲ್ದಾರ್‌ವರೆಗೂ ಮುಂಬಡ್ತಿ ಪಡೆದು ನಿವೃತ್ತಿ ಹೊಂದಿದ್ದೇನೆ. ಇತ್ತೀಚಿನ ಸಿಂಧೂರ ಯುದ್ಧದಲ್ಲಿ ಪಾಲ್ಗೊಂಡ ಹೆಮ್ಮೆ ನನಗಿದೆ. ಸುಮಾರು ೧೫ ವರ್ಷಗಳ ಹಿಂದೆ ವಿವಾಹವಾಗಿದ್ದು, ನನಗೆ ಇಬ್ಬರು ಮಕ್ಕಳಿದ್ದಾರೆ. ಮೂಲತಃ ಕೃಷಿ ಕುಟುಂಬ ನಮ್ಮದಾಗಿದ್ದು, ಸದ್ಯಕ್ಕೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು. 
ಆನಂದ್‌ರವರ ಸಹೋದರ ಅಣ್ಣ ಕೆ. ನಿರಂಜನ್‌ರವರು ಮಾತನಾಡಿ, ನನ್ನ ತಮ್ಮ ಸೈನಿಕನಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅದರಲ್ಲೂ ೨೪ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮರಳಿರುವುದು ಸಂಭ್ರಮದ ಸಂಗತಿಯಾಗಿದೆ ಎಂದರು. 
    ಆನಂದ್‌ರವರು ಜು.೩೧ರಂದು ನಿವೃತ್ತಿ ಹೊಂದಿದ್ದು, ರೈಲಿನಲ್ಲಿ ೩ ದಿನಗಳ ಕಾಲ ಪ್ರಯಾಣ ಬೆಳೆಸಿ ಮನೆಗೆ ಮರಳಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಆನಂದ್‌ರವರನ್ನು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸುವ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಆನಂದ್ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಕಾರ್ಮಿಕ ಎ. ಕೆಂಪೇಗೌಡ-ಶಾಂತಮ್ಮ ದಂಪತಿ ದ್ವಿತೀಯ ಪುತ್ರರಾಗಿದ್ದಾರೆ.  ಸ್ನೇಹಿತರಾದ  ರಮೇಶ್, ವಸಂತ, ಸೋಮಶೇಖರ್, ನಿಂಗೇಗೌಡ ಮತ್ತು ಎಸ್ ಎನ್ ರವಿ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.