ಸೋಮವಾರ, ಜೂನ್ 23, 2025

ಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನ : ಜೂ.೨೮ರಂದು ದಾವಣಗೆರೆ ನಗರ ಬಂದ್‌ಗೆ ಕರೆ

ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಮುಖರು ಮಾತನಾಡಿದರು. 
    ಭದ್ರಾವತಿ :  ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ತಡೆದು ಪೊಲೀಸರು ವಶಕ್ಕೆ ಪಡೆದರು. 
    ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಮಾಜಿ ಶಾಸಕ ಮಾಯಕೊಂಡ ಬಸವರಾಜನಾಯ್ಕ ಸೇರಿದಂತೆ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಪ್ರಮುಖರು, ರೈತರು ಸೇರಿದಂತೆ ಪ್ರತಿಭಟನಾನಿರತನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. 
    ಜೂ.೨೮ರಂದು ದಾವಣಗೆರೆ ಬಂದ್: 
    ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟ ನಡೆಸಲಾಗುವುದು. ಈ ನಡುವೆ ಜೂ.೨೫ರ ಬುಧವಾರ ಬೆಳಿಗ್ಗೆ ದಾವಣಗೆರೆ ಬಾಡಾ ಕ್ರಾಸ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು. ಜೂ.೨೮ರ ಶನಿವಾರ ದಾವಣಗೆರೆ ನಗರ ಬಂದ್‌ಗೆ ಕರೆ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. 
 

ಭದ್ರಾ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ

ತಕ್ಷಣ ಕಾಮಗಾರಿ ಸ್ಥಗಿತಗೊಳಿಸದಿದ್ದಲ್ಲಿ ಉಗ್ರ ಹೋರಾಟ : ಎಚ್ಚರಿಗೆ 

ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ :  ಭದ್ರಾ ಅಚ್ಚುಕಟ್ಟು ರೈತರ ಬದುಕಿಗೆ ಮಾರಕವಾಗುವಂತೆ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ನೀರು ಪೂರೈಸುವ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಯುವ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಮಂಗೋಟೆ ರುದ್ರೇಶ್ ಸೇರಿದಂತೆ ಪ್ರಮುಖರು ಮಾತನಾಡಿ, ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿಗಳನ್ನು  ಕೈಗೊಳ್ಳಬಾರದು ಎಂಬ ನಿಯಮವಿದ್ದರೂ ಸಹ ಬಲದಂಡೆ ನಾಲೆ ಸೀಳಿ ನೆರೆ ಜಿಲ್ಲೆಗಳಾದ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ೩೪೬ ಗ್ರಾಮಗಳು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಕಡೂರು ತಾಲೂಕುಗಳ ೧೭೨ ಗ್ರಾಮಗಳಿಗೆ ನೀರು ಪೂರೈಸುವ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ.  ಮಧ್ಯ ಕರ್ನಾಟಕದ ಜೀವನದಿ ಭದ್ರಾ ಬೃಹತ್ ಜಲಾಶಯದ ಸುರಕ್ಷತೆ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. 
    ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿರುವ ಬೃಹತ್ ಕಾಮಗಾರಿ ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ(ಬಫರ್‌ಜೋನ್) ಕೈಗೊಂಡಿದೆ. ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟಿನ ಪ್ರದೇಶದ ಜನಪ್ರತಿನಿಧಿಗಳು, ರೈತರ ಸಭೆಯನ್ನು ನಡೆಸದೆ ಕಾಮಗಾರಿ ಕೈಗೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಅಚ್ಚುಕಟ್ಟು ರೈತರ ಕತ್ತು ಹಿಸುಕುವ ಅಮಾನವೀಯ ಕೃತ್ಯವಾಗಿದೆ ಎಂದು ದೂರಿದರು. 
    ಕುಡಿಯುವ ನೀರಿನ ಪೂರೈಕೆಗೆ ಯಾವುದೇ ವಿರೋಧ ಇಲ್ಲ. ಸರ್ಕಾರ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. 
    ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್‌, ಮಾಯಕೊಂಡ ಮಾಜಿ ಶಾಸಕ ಬಸವರಾಜನಾಯ್ಕ, ಮಾಜಿ ಮೇಯರ್ ಅಜಯ್‌ಕುಮಾರ್, ಹರಿಹರ ಕ್ಷೇತ್ರದ ಪೂಜಾರ್, ಬಿ.ಎಂ.ಸತೀಶ ಕೊಳೇನಹಳ್ಳಿ, ಲೋಕಿಕೆರೆ ನಾಗರಾಜ, ಸ್ಥಳೀಯ ರೈತ ಮುಖಂಡ ಆನಂದಕುಮಾರ್, ಮಾಳೇನಹಳ್ಳಿ ವಿಶ್ವನಾಥ್ ಸೇರಿದಂತೆ ದಾವಣಗೆರೆ ಜಿಲ್ಲಾ ರೈತ ಒಕ್ಕೂಟ ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಮುಖರು, ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬದಲ್ಲಿ ನೆಮ್ಮದಿ : ಡಾ. ಶಾಂತಲಾ

ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ಭದ್ರಾವತಿ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ, ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು. 
    ಭದ್ರಾವತಿ : ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಆ ಕುಟುಂಬ ನೆಮ್ಮದಿ, ಶಾಂತಿಯಿಂದ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಕುಟುಂಬದ ಮಹಿಳೆ ಆನಾರೋಗ್ಯಕ್ಕೆ ಒಳಗಾದಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕೆಂದು ಶಿವಮೊಗ್ಗ ನಂಜಪ್ಪ ಆಸ್ಪತ್ರೆ ವೈದ್ಯೆ ಡಾ. ಶಾಂತಲ ಹೇಳಿದರು. 
    ಅವರು ನಗರದ ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ, ಭಾವಸಾರ ಯುವಕ ಸಂಘ ಮತ್ತು ಭಾವಸಾರ ವಿಷನ್ ಇವುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಸಹಯೋಗದೊಂದಿಗೆ ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಮಾಜದಲ್ಲಿ ಇಂದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಆರೋಗ್ಯದ ಸಮಸ್ಯೆಗಳು ಕಾಣಿಸುತ್ತಿವೆ. ಅವರ ತಮ್ಮ ಮಾಸಿಕ ಋತು ಚಕ್ರ, ಶುಚಿತ್ವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಾಣಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾಯಿಲೆ ಉಲ್ಬಣವಾಗಿ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
    ಪ್ರಸ್ತುತ ಜೀವನ ಕ್ರಮ ಸರಿಯಾದ ನಿಟ್ಟಿನಲ್ಲಿ ಸಾಗಬೇಕು. ಅದರಲ್ಲೂ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮಗಳನ್ನುಂಟು ಮಾಡುತ್ತವೆ. ಪ್ರಸ್ತುತ ಜಂಕ್ ಫುಡ್‌ಗಳ ಬಳಕೆ ಹೆಚ್ಚುತ್ತಿದೆ. ಶ್ರಮದಾಯಕ ಕೆಲಸಗಳನ್ನು ಮಾಡದೆ ಕುಳಿತಲ್ಲೆ ಗಂಟೆಗಟ್ಟಲೆ ಕೆಲಸಗಳನ್ನು ಮಾಡುತ್ತಿರುವ ಕಾರಣ ಹಲವಾರು ರೀತಿಯ ಕಾಯಿಲೆಗಳು ಕಂಡು ಬರುತ್ತಿವೆ. ಅದರಲ್ಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೊರಳ ಹಾಗು ಗರ್ಭಕಂಠ ಕ್ಯಾನ್ಸರ್ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿವೆ. ಈ ಕಾಯಿಲೆಗಳ ಗುಣ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ಆರಂಭದ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ವ್ಯಕ್ತಪಡಿಸಿದರು.  
       ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ಗೆ ಆಧುನಿಕ ಚಿಕಿತ್ಸೆಗಳು ಕಂಡು ಹಿಡಿಯಲಾಗಿದೆ. ಅದರಲ್ಲೂ ೯-೧೩ ವರ್ಷ ಹಾಗು ೨೫ನೇ ವರ್ಷದವರಿಗೆ ಕ್ಯಾನ್ಸರ್ ನಿರೋಧಕ ಚುಚ್ಚುಮದ್ದು ನೀಡುವ ಮೂಲಕ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯ ಕಡಿಮೆಗೊಳಿಸಲಾಗುತ್ತಿದೆ ಎಂದರು.
    ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಭಾವಸಾರ ಸಹಕಾರ ಸಂಘದ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಶಿಬಿರ ಉದ್ಘಾಟಿಸಿದರು. ಡಾ.ಕಾವ್ಯ, ಶಿಲ್ಪಾ, ಕಲ್ಪನಾ, ರಘುಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಭಾವಸಾರ ಯುವಕ ಮಂಡಳಿಯವರು ಶಿಬಿರದ ಔಷಧ ವಿತರಣೆ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಶಿಬಿರದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಜನರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. 
       ಸ್ವಪ್ನಕುಮಾರ್ ತೇಲ್ಕರ್ ಪ್ರಾರ್ಥಿಸಿ, ವಿಶ್ವನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಲ್ಪನಾ ವಂದಿಸಿದರು. 

ಕಸಾಪ ರಾಜ್ಯಾಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ : ಟಿ. ತಿಮ್ಮಪ್ಪ ಆರೋಪ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ಮಾತನಾಡಿದರು.
    ಭದ್ರಾವತಿ: ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಡಾ. ಮಹೇಶ್‌ಜೋಶಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಇದನ್ನು ತಾಲೂಕು ಘಟಕ ಸಹ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ತಿಳಿಸಿದರು. 
    ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್ ತನ್ನದೇ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಪರಿಷತ್‌ನಲ್ಲಿ ಹಲವಾರು ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯಾಧ್ಯಕ್ಷರು ಎಲ್ಲಾ ವಿಚಾರಗಳಲ್ಲೂ ಸ್ವತಂತ್ರ ನಿಲುವುಗಳನ್ನು ಕೈಗೊಳ್ಳುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. 
    ಶಿವಮೊಗ್ಗ ಜಿಲ್ಲೆಯಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳು ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮಂಜುನಾಥ್‌ರವರ ನೇತೃತ್ವದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ಮಕ್ಕಳ ಸಾಹಿತ್ಯ ಸಮ್ಮೇಳನಗಳು ಹಾಗು ಇನ್ನಿತರ ಸಾಹಿತ್ಯ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿವೆ. ಇವರು ಸಹ ಸಾಂವಿಧಾನಿಕವಾಗಿ ಚುನಾಯಿತರಾಗಿ ಅಧ್ಯಕ್ಷರಾದವರು ಇವರ ವಿರುದ್ಧ ಸಹ ರಾಜ್ಯಾಧ್ಯಕ್ಷರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸರಿಯಲ್ಲ. ಇದನ್ನು ತಾಲೂಕು ಪರಿಷತ್ ಖಂಡಿಸುತ್ತವೆ. ಮುಂದಿನ ಸರ್ವಸದಸ್ಯರ ಸಭೆಯಲ್ಲಿ ಈ ಎಲ್ಲಾ ವಿಚಾರಗಳ ಕುರಿತು ಪ್ರಶ್ನಿಸಲಾವುದು ಎಂದರು. 
     ಆರಂಭದ ಹಂತದಲ್ಲಿ ಭವನ ಕಾಮಗಾರಿ: 
     ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಸುಮಾರು 3.8 ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಸಾಹಿತ್ಯ ಭವನ ಕಾಮಗಾರಿ ಆರಂಭಗೊಂಡಿದ್ದು, ನೆಲಹಂತದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ. ನಗರಸಭೆ ವತಿಯಿಂದ 25 ಲಕ್ಷ ರು. ಮತ್ತು ಪರಿಷತ್‌ನಲ್ಲಿ ಪ್ರಸ್ತುತ ಸಂಗ್ರಹವಾಗಿರುವ ಹಣ ಒಟ್ಟು 32 ಲಕ್ಷ ರು. ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಸರ್ಕಾರಿ ನೌಕರರ ಒಂದು ದಿನದ ವೇತನ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದ ಅನುದಾನ ಸಹ ನಿರೀಕ್ಷಿಸಲಾಗುತ್ತಿದೆ ಎಂದರು. 
     ಸಾಹಿತ್ಯ ಚಟುವಟಿಕೆಗಳಿಗೆ ವೇಗ : 
    ತಾಲೂಕು ಪರಿಷತ್‌ಗೆ ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳು ಸಾಹಿತ್ಯ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾವುದು. ಸಾಹಿತ್ಯಾಸಕ್ತರು ಹಾಗು ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಪ್ರಮುಖರಾದ ಎಂ.ಈ ಜಗದೀಶ್, ನಾಗೋಜಿರಾವ್, ಕಮಲಕರ, ಶೈಲೇಶ್‌ಕೋಠಿ, ಪ್ರಕಾಶ್, ನಾಗೇಶ್, ನಾಗರತ್ನ ವಾಗೀಶ್ ಕೋಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.