ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ಮಾತನಾಡಿದರು.
ಭದ್ರಾವತಿ: ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪ್ರಸ್ತುತ ರಾಜ್ಯಾಧ್ಯಕ್ಷರಾಗಿರುವ ಡಾ. ಮಹೇಶ್‌ಜೋಶಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ಇದನ್ನು ತಾಲೂಕು ಘಟಕ ಸಹ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ತಿಳಿಸಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಷತ್ ತನ್ನದೇ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶತಮಾನದ ಇತಿಹಾಸ ಹೊಂದಿರುವ ಪರಿಷತ್‌ನಲ್ಲಿ ಹಲವಾರು ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ರಾಜ್ಯಾಧ್ಯಕ್ಷರು ಎಲ್ಲಾ ವಿಚಾರಗಳಲ್ಲೂ ಸ್ವತಂತ್ರ ನಿಲುವುಗಳನ್ನು ಕೈಗೊಳ್ಳುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಪರಿಷತ್ ಕಾರ್ಯ ಚಟುವಟಿಕೆಗಳು ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮಂಜುನಾಥ್‌ರವರ ನೇತೃತ್ವದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು, ಮಕ್ಕಳ ಸಾಹಿತ್ಯ ಸಮ್ಮೇಳನಗಳು ಹಾಗು ಇನ್ನಿತರ ಸಾಹಿತ್ಯ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿವೆ. ಇವರು ಸಹ ಸಾಂವಿಧಾನಿಕವಾಗಿ ಚುನಾಯಿತರಾಗಿ ಅಧ್ಯಕ್ಷರಾದವರು ಇವರ ವಿರುದ್ಧ ಸಹ ರಾಜ್ಯಾಧ್ಯಕ್ಷರು ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸರಿಯಲ್ಲ. ಇದನ್ನು ತಾಲೂಕು ಪರಿಷತ್ ಖಂಡಿಸುತ್ತವೆ. ಮುಂದಿನ ಸರ್ವಸದಸ್ಯರ ಸಭೆಯಲ್ಲಿ ಈ ಎಲ್ಲಾ ವಿಚಾರಗಳ ಕುರಿತು ಪ್ರಶ್ನಿಸಲಾವುದು ಎಂದರು.
ಆರಂಭದ ಹಂತದಲ್ಲಿ ಭವನ ಕಾಮಗಾರಿ:
ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಸುಮಾರು 3.8 ಕೋ. ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕನ್ನಡ ಸಾಹಿತ್ಯ ಭವನ ಕಾಮಗಾರಿ ಆರಂಭಗೊಂಡಿದ್ದು, ನೆಲಹಂತದ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ. ನಗರಸಭೆ ವತಿಯಿಂದ 25 ಲಕ್ಷ ರು. ಮತ್ತು ಪರಿಷತ್‌ನಲ್ಲಿ ಪ್ರಸ್ತುತ ಸಂಗ್ರಹವಾಗಿರುವ ಹಣ ಒಟ್ಟು 32 ಲಕ್ಷ ರು. ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಸರ್ಕಾರಿ ನೌಕರರ ಒಂದು ದಿನದ ವೇತನ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದ ಅನುದಾನ ಸಹ ನಿರೀಕ್ಷಿಸಲಾಗುತ್ತಿದೆ ಎಂದರು.
ಸಾಹಿತ್ಯ ಚಟುವಟಿಕೆಗಳಿಗೆ ವೇಗ :
ತಾಲೂಕು ಪರಿಷತ್‌ಗೆ ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳು ಸಾಹಿತ್ಯ ಚಟುವಟಿಕೆಗಳನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾವುದು. ಸಾಹಿತ್ಯಾಸಕ್ತರು ಹಾಗು ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಪ್ರಮುಖರಾದ ಎಂ.ಈ ಜಗದೀಶ್, ನಾಗೋಜಿರಾವ್, ಕಮಲಕರ, ಶೈಲೇಶ್‌ಕೋಠಿ, ಪ್ರಕಾಶ್, ನಾಗೇಶ್, ನಾಗರತ್ನ ವಾಗೀಶ್ ಕೋಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment