ಹಿರಿಯ ಸಾಹಿತ್ಯ ಎನ್.ಎಸ್ ಲಕ್ಷ್ಮೀನಾರಾಯಣಭಟ್ ನಿಧನಕ್ಕೆ ಕಸಾಪ ಸಂತಾಪ
ಭದ್ರಾವತಿ ನ್ಯೂಟೌನ್‌ನಲ್ಲಿರುವ ಕಸಾಪ ಕಛೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎನ್.ಎಸ್ ಲಕ್ಷ್ಮೀನಾರಾಯಣಭಟ್‌ರವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಭದ್ರಾವತಿ, ಮಾ. ೬: ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತಷ್ಟು ಸದೃಢವಾಗಿ ಬೆಳೆಯಬೇಕಾದರೆ ಇಂದಿನ ಅಧ್ಯಕ್ಷರಾಗಿರುವ ಡಿ.ಬಿ ಶಂಕರಪ್ಪನವರು ಮುಂದುವರೆಯುವುದು ಅಗತ್ಯವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಹೇಳಿದರು.
ಅವರು ಶನಿವಾರ ನ್ಯೂಟೌನ್‌ನಲ್ಲಿರುವ ಪರಿಷತ್ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಹಿರಿಯ ಸಾಹಿತಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್‌ರವರ ನಿಧನಕ್ಕೆ ಸಂತಾಪ ಹಾಗು ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪನವರೊಂದಿಗೆ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಳಿವಯಸ್ಸಿನಲ್ಲೂ ಶಂಕರಪ್ಪನವರ ಕಾರ್ಯ ಚಟುವಟಿಕೆಗಳು ಪರಿಷತ್‌ನ ಇತರರಿಗೆ ಸ್ಪೂರ್ತಿದಾಯಕವಾಗಿವೆ. ಪರಿಷತ್‌ನಲ್ಲಿ ಪಾರದರ್ಶಕತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಅಲ್ಲದೆ ಪರಿಷತ್‌ನ ಎಲ್ಲಾ ಕಾರ್ಯಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದ್ದಾರೆ. ಪ್ರಸ್ತುತ ಜಿಲ್ಲಾಧ್ಯಕ್ಷರ ಚುನಾವಣೆ ಎದುರಾಗಿದ್ದು, ಈ ಹಿಂದೆ ವಯಸ್ಸಿನ ಕಾರಣಕ್ಕಾಗಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಸೂಕ್ತ ಅಭ್ಯರ್ಥಿಗಳಿಗಾಗಿ ಇದುವರೆಗೂ ಹುಡುಕಾಟ ನಡೆಸಲಾಯಿತು. ಆದರೆ ಯಾವುದೇ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಪುನಃ ಚುನಾವಣೆಗೆ ಸ್ಪರ್ಧಿಸುವಂತೆ ಡಿ.ಬಿ ಶಂಕರಪ್ಪನವರಿಗೆ ಮನವಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅವರು ಪರಿಷತ್ ಸದಸ್ಯರ ಅಭಿಪ್ರಾಯ ಪಡೆಯಲು ಖುದ್ದಾಗಿ ಆಗಮಿಸಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪರಿಷತ್ ಚುನಾವಣೆ ಎದುರಿಸಬೇಕಾದರೆ ಸ್ಪರ್ಧಿಸುವ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ತಮ್ಮದೇ ಆದ ಮತದಾರರನ್ನು ಹೊಂದಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಷತ್‌ನ ಗೌರವ ಉಳಿಸಿಕೊಂಡು ಬರುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದಿರುವ ತಪ್ಪುಗಳು ಪುನಃ ಮರುಕಳುಹಿಸಬಾರದು. ಈ ಬಾರಿ ಚುನಾವಣೆಗೆ ಅವರು ಸ್ಪರ್ಧಿಸುತ್ತಿರುವ ಮಾಹಿತಿ ತಿಳಿದು ಬಂದ ಕಾರಣ ಅವರ ವಿರುದ್ಧ ಪುನಃ ಸ್ಪರ್ಧಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ. ಈ ಹಿನ್ನಲೆಯಲ್ಲಿ ನಿಮೆಲ್ಲರ ಅಭಿಪ್ರಾಯ ಬಹಳ ಮುಖ್ಯವಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಜೆ.ಎನ್ ಬಸವರಾಜಪ್ಪ, ಅಪರಂಜಿ ಶಿವರಾಜ್, ಅರಳೇಹಳ್ಳಿ ಅಣ್ಣಪ್ಪ ಸೇರಿದಂತೆ ಪ್ರಮುಖರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಎನ್.ಎಸ್ ಲಕ್ಷ್ಮೀನಾರಾಯಣ ಭಟ್ ಸರಳ ಸಜ್ಜನಿಕೆ ಸಾಹಿತಿ:
ಎನ್.ಎಸ್ ಲಕ್ಷ್ಮೀನಾರಾಯಣಭಟ್‌ರವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಎಂ.ಎನ್ ಸುಂದರ್‌ರಾಜ್ ತಿಳಿಸಿದರು.
ಅಪರೂಪದ ಸಾಹಿತಿಗಳಲ್ಲಿ ಲಕ್ಷ್ಮೀನಾರಾಯಣ ಭಟ್ ಸಹ ಒಬ್ಬರಾಗಿದ್ದು, ಅವರು ತಮ್ಮ ದಿನನಿತ್ಯದ ಬದುಕಿನಲ್ಲಿ ಅತ್ಯಂತ ಸರಳತೆಯನ್ನು ಕಾಯ್ದುಕೊಂಡು ಬಂದಿದ್ದರು. ಅಲ್ಲದೆ ಇತರರಿಗೆ ಮಾದರಿಯಾಗಿ ಬದುಕಿದ್ದರು. ಇವರ ಅಗಲಿಕೆ ತುಂಬಾ ನೋವುಂಟ ಮಾಡಿದೆ ಎಂದರು.
ಲಕ್ಷ್ಮೀನಾರಾಯಣಭಟ್‌ರವರ ನಿಧನಕ್ಕೆ ಸಂತಾಪ ಸೂಚಿಸುವ ಮೂಲಕ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು. ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ, ತಾಲೂಕು ಘಟಕದ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿ ವೈ.ಕೆ ಹನುಮಂಯ್ಯ ಸೇರಿದಂತೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿ. ಚನ್ನಪ್ಪ ಸ್ವಾಗತಿಸಿದರು.