ಎ. ಮುನಿರ್ ಬಾಷಾ
ಭದ್ರಾವತಿ, ಜ. ೧೪: ಪರಿಣತಿ ಹೊಂದಿದ ಪರಿಣಾಮಕಾರಿ ತಂಡ ರೂಪಿಸುವ ನಿಟ್ಟಿನಲ್ಲಿ ಖೋ ಖೋ ಫೆಡರೇಷನ್ ಆಫ್ ಇಂಡಿಯಾ ಜ.೧೭ ರಿಂದ ಫೆ.೧೬ರ ವರೆಗೆ ದೆಹಲಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಖೋ ಖೋ ತರಬೇತಿ ಶಿಬಿರಕ್ಕೆ ನಗರಕ್ಕೆ ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು ಎ. ಮುನಿರ್ ಬಾಷಾ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯದಿಂದ ಒಟ್ಟು ೭ ಜನರನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಮುನಿರ್ ಬಾಷಾ ಸಹ ಸ್ಥಾನ ಪಡೆದುಕೊಂಡಿದ್ದಾರೆ. ಮುನಿರ್ ಬಾಷಾರವರು ಈ ಹಿಂದೆ ೨೦೧೬ರಲ್ಲಿ ನಡೆದ ೧೨ನೇ ಸೌತ್ ಇಂಡಿಯನ್ ಗೇಮ್ಸ್ ಖೋ ಖೋ ಪಂದ್ಯಾವಳಿಯಲ್ಲಿ ಭಾರತ ತಂಡದ ಉಪನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ೨೦೧೯ರಲ್ಲಿ ನಡೆದ ೧೩ನೇ ಸೌತ್ ಇಂಡಿಯನ್ ಗೇಮ್ಸ್ ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಶ್ರೀಲಂಕ ವಿರುದ್ಧ ಭಾರತ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಪುನಃ ತಂಡದಲ್ಲಿ ಸ್ಥಾನ ಪಡೆದುಕೊಂಡು ಗಮನ ಸೆಳೆದಿದ್ದಾರೆ.