Thursday, May 22, 2025

ಮದ್ಯಸೇವಿಸಿ ವಾಹನ ಚಾಲನೆ : ೨ನೇ ಬಾರಿ ಕಾನೂನು ಉಲ್ಲಂಘಿಸಿದ ವ್ಯಕ್ತಿಗೆ ೧೫ ಸಾವಿರ ರು. ದಂಡ

ಭದ್ರಾವತಿ ಪಿಆರ್‌ಎಲ್ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‌ಸಿ ನ್ಯಾಯಾಲಯ ಮಧ್ಯ ಸೇವಿಸಿ ವಾಹನ ಚಲಾಯಿಸಿ ೨ನೇ ಬಾರಿ ಕಾನೂನು ಉಲ್ಲಂಘಿಸಿದ ಚಾಲಕರೊಬ್ಬರಿಗೆ ೧೫ ಸಾವಿರ ರು. ದಂಡ ವಿಧಿಸಿದೆ. 
    ಭದ್ರಾವತಿ : ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರಮುಖವಾಗಿ ವಾಹನ ಚಾಲನೆ ಸಂದರ್ಭದಲ್ಲಿ ಮದ್ಯ ಸೇವನೆ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿಂದೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದವರಿಗೆ ಸಾಮಾನ್ಯವಾಗಿ ಕಡಿಮೆ ದಂಡ ವಿಧಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ದಂಡ ಏರಿಕೆ ಮಾಡಲಾಗಿದ್ದು, ಪ್ರಸ್ತುತ ಪ್ರಕರಣವೊಂದರಲ್ಲಿ ಇಲ್ಲಿನ ಪಿಆರ್‌ಎಲ್ ಸಿವಿಲ್ ಜಡ್ಜ್ ಅಂಡ್ ಜೆಎಂಎಫ್‌ಸಿ ನ್ಯಾಯಾಲಯ ೨ನೇ ಬಾರಿ ಕಾನೂನು ಉಲ್ಲಂಘಿಸಿದ ಚಾಲಕರೊಬ್ಬರಿಗೆ ೧೫ ಸಾವಿರ ರು. ದಂಡ ವಿಧಿಸಿದೆ. 
    ಕೆಲವು ತಿಂಗಳ ಹಿಂದೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಮೊದಲ ಬಾರಿಗೆ ಸಿಕ್ಕಿ ಬಿದ್ದವರಿಗೆ ನ್ಯಾಯಾಲಯ ೧೦ ಸಾವಿರ ರು. ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು. ಇದೀಗ ೨ನೇ ಬಾರಿ ಕಾನೂನು ಉಲ್ಲಂಘಿಸಿರುವ ವಾಹನ ಚಾಲಕರೊಬ್ಬರಿಗೆ ೧೫ ಸಾವಿರ ರು. ದಂಡ ವಿಧಿಸಿ ಪುನಃ ನ್ಯಾಯಾಲಯ ಎಚ್ಚರಿಕೆ ನೀಡಿದೆ. 
    ಮದ್ಯ ಸೇವಿಸಿ ವಾಹನ ಚಲಾಯಿಸುವವರು ಈಗಲಾದರೂ ಅರ್ಥಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಅಥವಾ ಕಠಿಣ ಕ್ರಮ ಕೈಗೊಳ್ಳುವ  ಮುನ್ನಚ್ಚರಿಕೆ ನ್ಯಾಯಾಲಯ ನೀಡಿದೆ. ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸಿ ಗೌರವಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. 

ಸಹ ಪ್ರಾಧ್ಯಾಪಕ ಡಾ. ಎಸ್. ವರದರಾಜರಿಗೆ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ

ಡಾ. ಎಸ್. ವರದರಾಜ 
    ಭದ್ರಾವತಿ: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಎಸ್ ವರದರಾಜರವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೩ ದಿನಗಳ ರಾಜ್ಯಮಟ್ಟದ ಕ್ರೀಡಾದ ಪುರುಷರ ಭಾರ ಎತ್ತುವ ಸ್ಪರ್ಧೆಯ ೮೩ ಕೆ.ಜಿ ದೇಹ ತೂಕ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. 
    ವರದರಾಜರವರು ಕಳೆದ ೨ ವರ್ಷಗಳಿಂದ ರಾಷ್ಟ್ರಮಟ್ಟ ಹಾಗು ೧೦ ವರ್ಷಗಳಿಂದ ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕರಾಗಿದ್ದು, ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

ಪೊಲೀಸ್ ವೃತ್ತ ನಿರೀಕ್ಷಕ ಎನ್. ನಂಜಪ್ಪಕ್ಕೆ ಸಂತಾಪ

ಎನ್. ನಂಜಪ್ಪ 
    ಭದ್ರಾವತಿ: ಈ ಹಿಂದೆ ನಗರದ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಎನ್. ನಂಜಪ್ಪ(೫೯)ರವರು ನಿಧನ ಹೊಂದಿದ್ದು, ಇವರ ನಿಧನಕ್ಕೆ ನಗರದ ಗಣ್ಯರು, ಸಹದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ. 
    ಓರ್ವ ಪುತ್ರ,  ಓರ್ವ ಪುತ್ರಿ ಇದ್ದು, ಮೂಲತಃ ಶಿವಮೊಗ್ಗ ಕಾಶಿಪುರ ನಿವಾಸಿಯಾದ ನಂಜಪ್ಪರವರು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ನೇಮಕಗೊಂಡು ನಂತರ ಉಪ ಠಾಣಾನಿರೀಕ್ಷಕರ ಪರೀಕ್ಷೆ ಉತ್ತೀರ್ಣಗೊಂಡು ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. 

೩೨ ಎಕರೆ ಸೂಡಾ ಜಾಗದ ಗಡಿ ಗುರುತಿಸಿ, ಫಲಕ ಅಳವಡಿಕೆ

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ಭದ್ರಾವತಿ ತಾಲೂಕಿನ ಕಸಬಾ ೧ನೇ ವೃತ್ತ, ಗ್ರಾಮದ ಸ.ನಂ. ೧೧೮/೧, ೧೧೮/೨ಎ, ೧೧೮/೨ನಿ, ೧೪೭ ಮತ್ತಿತರೆ ಒಟ್ಟು ೩೨ ಎಕರೆ ೨೧ ಪ್ರದೇಶದಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು. 
    ಭದ್ರಾವತಿ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ತಾಲೂಕಿನ ಕಸಬಾ ೧ನೇ ವೃತ್ತ, ಗ್ರಾಮದ ಸ.ನಂ. ೧೧೮/೧, ೧೧೮/೨ಎ, ೧೧೮/೨ನಿ, ೧೪೭ ಮತ್ತಿತರೆ ಒಟ್ಟು ೩೨ ಎಕರೆ ೨೧ ಪ್ರದೇಶದಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು. 
    ನಗರಸಭೆ ವ್ಯಾಪ್ತಿಯ ಕೋಡಿಹಳ್ಳಿ ರಸ್ತೆಯ ದೈವಜ್ಞ ಮತ್ತು ಮಾಧವನಗರಕ್ಕೆ ಹೊಂದಿಕೊಂಡಿರುವ ಜಾಗವನ್ನು ಈಗಾಗಲೇ ಆಕ್ರಮಿಸಿಕೊಂಡು ಬಾಳೆ, ತೆಂಗು, ಅಡಕೆ ಮತ್ತು ಭತ್ತದ ಬೆಳೆಗಳನ್ನು ಬೆಳೆಯಲಾಗಿದೆ. ಬೆಳಿಗ್ಗೆ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿ ಅಭಿಲಾಷ್ ಮತ್ತು ಸಿಬ್ಬಂದಿಗಳಾದ ಹರೀಶ್, ಅಮೃತ್ ಸೇರಿದಂತೆ ಇನ್ನಿರರನ್ನೊಳಗೊಂಡ ತಂಡ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ನೇತೃತ್ವದ ಪೊಲೀಸ್ ತಂಡದ ಬಿಗಿ ಭದ್ರತೆಯಲ್ಲಿ ಗಡಿ ಗುರುತಿಸುವ ಮೂಲಕ ಫಲಕಗಳನ್ನು ಅಳವಡಿಸಿತು. 


    ಈ ನಡುವೆ ಈ ಜಾಗದಲ್ಲಿ ಬೆಳೆ ಬೆಳೆದಿರುವವರು ಪ್ರಾಧಿಕಾರದ ತಂಡವರೊಂದಿಗೆ ಕೆಲ ಸಮಯ ವಾಗ್ವಾದ ನಡೆಸಿದರು. ಅಲ್ಲದೆ ಸ್ಥಳದಲ್ಲಿಯೇ ಸಂಬಂಧಿಸಿದ ದಾಖಲೆಗಳನ್ನು ತೋರಿಸುವ ಮೂಲಕ ಅಧಿಕಾರಿಗಳು ಸಮರ್ಥನೆ ನೀಡಿದರು. ನಗರಸಭೆ ಸದಸ್ಯ ಚನ್ನಪ್ಪ ಬೆಳೆ ಬೆಳೆದಿರುವವರಿಗೆ ಪ್ರಾಧಿಕಾರದವರು ಪ್ರಸ್ತುತ ಫಲಕಗಳನ್ನು ಅಳವಡಿಸಲಿದ್ದು, ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಸಮಾಧಾನಪಡಿಸಿದರು. 
ಸೂಡಾ ಸದಸ್ಯ ಎಚ್. ರವಿಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ಪ್ರಾಧಿಕಾರಕ್ಕೆ ಸೇರಿರುವ ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅಧಿಕಾರಿಗಳ ಬಳಿ ಇವೆ. ಈ ಜಾಗದಲ್ಲಿ ಪ್ರಾಧಿಕಾರದಿಂದ ವಸತಿ ಯೋಜನೆಯಡಿ ನಿವೇಶನಗಳನ್ನು ನಿರ್ಮಿಸಿ ವಿತರಿಸಲಾಗುವುದು. ಸುಮಾರು ೧ ಸಾವಿರ ನಿವೇಶನಗಳನ್ನು ಈ ಜಾಗದಲ್ಲಿ ನಿರ್ಮಿಸಬಹುದಾಗಿದ್ದು, ಇದರಿಂದ ನಗರದಲ್ಲಿಯೇ ಅತಿ ದೊಡ್ಡ ಬಡಾವಣೆ ನಿರ್ಮಾಣಗೊಳ್ಳಲಿದೆ. ನಿವೇಶನರಹಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಪ್ರಾಧಿಕಾರ ಹೊಂದಿದೆ ಎಂದರು. 
    ಪ್ರಸ್ತುತ ಬೆಳೆಬೆಳೆದಿರುವವರು ತಮ್ಮ ಬಳಿ ಯಾವುದಾದರೂ ಸೂಕ್ತ ದಾಖಲೆಗಳು ಇದ್ದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಹಾಜರುಪಡಿಸಿ ಗೊಂದಲ ಬಗೆಹರಿಸಿಕೊಳ್ಳಬಹುದು. ಪ್ರಸ್ತುತ ಬೆಳೆದಿರುವ ಬೆಳೆಗಳಿಗೆ ಯಾವುದೇ ರೀತಿ ಹಾನಿ ಮಾಡುವುದಿಲ್ಲ ಎಂದರು.