Sunday, August 27, 2023

ಬೆಳ್ಳಿಗೆರೆ ಗ್ರಾಮದಲ್ಲಿ ವ್ಯಕ್ತಿ ಮೃತ

    ಭದ್ರಾವತಿ, ಆ. ೨೭: ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಗೆರೆ ಗ್ರಾಮದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
    ಬಾಬು(೪೫) ಮೃತಪಟ್ಟಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಮತ್ತೊಂದೆಡೆ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹಬ್ಬಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು,  ಪ್ರಕರಣ ದಾಖಲಾಗಿಲ್ಲ.

ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಕ್ರೀಡಾ ತರಬೇತಿ

ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಾಪಣ್ಣ, ಕಾರ್ತಿಕ್‌

ಭದ್ರಾವತಿ ಕ್ರೀಡಾಪಟುಗಳಾದ ಪಾಪಣ್ಣ ಮತ್ತು ಕಾರ್ತಿಕ್‌ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿದ್ದು, ಇವರ ನಿಸ್ವಾರ್ಥ ಸೇವೆಯನ್ನು ನ್ಯೂಟೌನ್‌ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಅಭಿನಂದಿಸಿದೆ.
    ಭದ್ರಾವತಿ,  ಆ. ೨೭ :  ಇಬ್ಬರು ಕ್ರೀಡಾಪಟುಗಳು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
    ಹಳೆನಗರದ ನಿವಾಸಿ ಪಾಪಣ್ಣ ಹೆಚ್ಚು ಓದಿಲ್ಲದಿದ್ದರೂ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುವ ಮೂಲಕ ಆ ಮಕ್ಕಳು ತಾಲೂಕು ಹಾಗು ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಲ್ಲಿ ನೆರವಾಗುತ್ತಿದ್ದಾರೆ.  ಅಲ್ಲದೆ ವೃತ್ತಿಯಲ್ಲಿ ಪಾಪಣ್ಣ ಕೂಲಿ ಕೆಲಸಗಾರನಾಗಿದ್ದು,  ದುಡಿದ ಹಣದಲ್ಲಿ ಬಡ ಕ್ರೀಡಾಪಟುಗಳಿಗೆ ಕೈಲಾದ ನೆರವು ನೀಡುತ್ತಿದ್ದಾರೆ.
    ಇದೆ ರೀತಿ  ಹುಣಸೇಕಟ್ಟೆ ನಿವಾಸಿ, ವಿದ್ಯಾರ್ಥಿ ಕಾರ್ತಿಕ್  ಕೂಡ ಕ್ರೀಡಾಪಟು ಆಗಿದ್ದು, ಸರ್ಕಾರಿ ಶಾಲೆಗಳಿಗೆ ತೆರಳಿ ಕ್ರೀಡಾ ತರಬೇತಿ ನೀಡುತ್ತಿದ್ದಾರೆ.   ಈ ಇಬ್ಬರು ಕ್ರೀಡಾ ತರಬೇತಿದಾರರು  ನಗರದ ನ್ಯೂಟೌನ್‌ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ ಕೋರಿಕೆ ಮೇರೆಗೆ  ಕ್ರೀಡಾ ತರಬೇತಿದಾರರಾಗಿ ವಿದ್ಯಾರ್ಥಿನಿಯರಿಗೆ ಉಚಿತ ತರಬೇತಿ ನೀಡುವ ಮೂಲಕ  ಖೋ ಖೋ ದ್ವಿತೀಯ , ಥ್ರೋ ಬಾಲ್ ಪ್ರಥಮ, ಕಬಡ್ಡಿ ಪ್ರಥಮ ಹಾಗೂ ವೈಯಕ್ತಿಕ ಆಟಗಳಲ್ಲಿ  ಅತ್ಯುನ್ನತ ಸಾಧನೆ ಮಾಡಿದ್ದಾರೆ.
    ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಕ್ರೀಡಾಪಟುಗಳಾದ ಪಾಪಣ್ಣ ಮತ್ತು ಕಾರ್ತಿಕ್ ಅವರನ್ನು ಕಾಲೇಜು  ಆಡಳಿತ ಮಂಡಳಿ ಅಭಿನಂದಿಸಿದೆ. ಈ ಇಬ್ಬರ ಸೇವೆ ರಾಜ್ಯಾದ್ಯಂತ ವ್ಯಾಪಿಸಲಿ ಎಂಬ ಆಶಯ ಕ್ರೀಡಾಪಟುಗಳದ್ದಾಗಿದೆ.

ಸ್ವ ಉದ್ಯೋಗ ಪ್ರೇರಣಾ ಶಿಬಿರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ಭದ್ರಾವತಿ ತಾಲೂಕಿನ ಅಂತರಗಂಗೆ ವಲಯದ ಗಾಂಧಿನಗರದ ವಿಘ್ನನೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವ ಉದ್ಯೋಗ ಪ್ರೇರಣಾ ಶಿಬಿರ ಮಹಿಳಾ ಉದ್ಯಮಿ ಅನ್ನಪೂರ್ಣ ಸತೀಶ್‌ ಉದ್ಘಾಟಿಸಿದರು.
    ಭದ್ರಾವತಿ, ಆ. ೨೭:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ವತಿಯಿಂದ ತಾಲೂಕಿನ ಅಂತರಗಂಗೆ ವಲಯದ ಗಾಂಧಿನಗರದ ವಿಘ್ನನೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ನಡೆಯಿತು.
    ಅನು ಗಾರ್ಮೆಂಟ್ಸ್ ಮಹಿಳಾ ಉದ್ಯಮಿ  ಅನ್ನಪೂರ್ಣ ಸತೀಶ್‌ ಶಿಬಿರ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ವಿನೋದ ಅಧ್ಯಕ್ಷತೆ ವಹಿಸಿದ್ದರು.
    ಸ್ವ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆಯಲ್ಲಿ ಇರಬೇಕಾದ ಆಸಕ್ತಿ, ಮಾತುಗಾರಿಕೆ ಮತ್ತು ಆರ್ಥಿಕ ಸಹಾಯವನ್ನು ಬ್ಯಾಂಕುಗಳ ಮೂಲಕ ಪಡೆಯುವ ವಿಧಾನಗಳ ಕುರಿತು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ(ರುಡ್‌ ಸೆಟ್) ಹೊಳಲೂರು,  ನಿರ್ದೇಶಕ ಕಾಂತೇಶ್ ಅಂಬಿಗರ್ ಮಾಹಿತಿ ನೀಡಿದರು.
    ರುಡ್‌ ಸೆಟ್ ಸಂಸ್ಥೆಯಲ್ಲಿ ಪಡೆಯಬಹುದಾದ ತರಬೇತಿಗಳು, ಅವಧಿ ಮತ್ತು ಸಂಸ್ಥೆಯ ನಿಯಮಗಳನ್ನು ಉಪನ್ಯಾಸಕರಾದ ಸುರೇಶ್ ವೈ ಹಳ್ಳಿ ರವರು ಮಾಹಿತಿ ನೀಡಿದರು.‌
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಮಾತನಾಡಿ,  ಸದಸ್ಯರು ಸ್ವಉದ್ಯೋಗ ಆರಂಭ ಮಾಡಿದಲ್ಲಿ ಮಾತ್ರ ಪಡೆದುಕೊಂಡ ತರಬೇತಿ ಫಲಪ್ರದವಾಗಲು ಸಾಧ್ಯ.  ಮಹಿಳೆಯರು ಸ್ವಉದ್ಯೋಗದಿಂದ ಸ್ವಾವಲಂಬಿಯಾಗಿ ಬದುಕಬೇಕೆಂದರು.
    ಸ್ವ ಉದ್ಯೋಗ ತರಬೇತಿದಾರರಾದ ಮಣಿ, ಶಾಲಾ ಮುಖ್ಯ ಶಿಕ್ಷಕ ನಾಗರಾಜ್, ವಲಯ ಮೇಲ್ವಿಚಾರಕರಾದ ಕುಮಾರ್, ಶ್ರೀನಿವಾಸ್,  ಜ್ಞಾನವಿಕಾಸ ಸಮನ್ವಯಧಿಕಾರಿಗಳಾದ ಪ್ರೀತಿ, ಸೌಮ್ಯ, ಸೇವಾಪ್ರತಿನಿಧಿ ಶ್ವೇತಾ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮೀನುಗಾರಿಕೆ ಇಲಾಖೆ ಹೊರಗುತ್ತಿಗೆ ನೌಕರರ ದಿಡೀರ್ ಪ್ರತಿಭಟನೆ

ಭದ್ರಾವತಿ ಬಿಆರ್‌ಪಿ ಮೀನುಗಾರಿಕೆ ಇಲಾಖೆಯ  ಹೊರಗುತ್ತಿಗೆ ನೌಕರರು ಇಎಸ್‌ಐ ಹಾಗು ಪಿಎಫ್‌ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ಭದ್ರಾವತಿ, ಆ. ೨೭ : ಬಿಆರ್‌ಪಿ ಮೀನುಗಾರಿಕೆ ಇಲಾಖೆಯ  ಹೊರಗುತ್ತಿಗೆ ನೌಕರರು ಇಎಸ್‌ಐ ಹಾಗು ಪಿಎಫ್‌ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
    ಇಲಾಖೆ ಕರ್ತವ್ಯ ನಿರ್ವಹಿಸುತ್ತಿರುವ  ಸುಮಾರು ೫೪ ಹೊರಗುತ್ತಿಗೆ ನೌಕರರಿಗೆ ಕಳೆದ ೩ ವರ್ಷಗಳಿಂದ ಗುತ್ತಿಗೆದಾರರು ಇಎಸ್‌ಐ ಹಾಗು ಪಿಎಫ್‌ ಸೌಲಭ್ಯ ನೀಡದೆ ವಂಚಿಸುತ್ತಿದ್ದಾರೆಂದು ಆರೋಪಿಸಲಾಯಿತು.
    ನೌಕರರು ಯೂನಿಕ್‌ ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆದಾರರ ವಿರುದ್ಧ ಬೆಳಿಗ್ಗೆ ಆರಂಭಿಸಿದ ಪ್ರತಿಭಟನೆ ಸಂಜೆವರೆಗೂ ಮುಂದುವರೆಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುತ್ತಿಗೆದಾರರಿಗೆ ತಕ್ಷಣ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಈ ನಡುವೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದು ನೌಕರರನ್ನು ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿತು.
    ಹೊರಗುತ್ತಿಗೆ ನೌಕರರ ಸಮಸ್ಯೆ ತಕ್ಷಣ ಬಗೆಹರಿಸುವ ಮೂಲಕ ಸಂಕಷ್ಟದಲ್ಲಿರುವ ನೌಕರರ ಹಿತ ಕಾಪಾಡುವಂತೆ ಆಗ್ರಹಿಸಲಾಯಿತು.