ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಾಪಣ್ಣ, ಕಾರ್ತಿಕ್
ಭದ್ರಾವತಿ ಕ್ರೀಡಾಪಟುಗಳಾದ ಪಾಪಣ್ಣ ಮತ್ತು ಕಾರ್ತಿಕ್ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುತ್ತಿದ್ದು, ಇವರ ನಿಸ್ವಾರ್ಥ ಸೇವೆಯನ್ನು ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಅಭಿನಂದಿಸಿದೆ.
ಭದ್ರಾವತಿ, ಆ. ೨೭ : ಇಬ್ಬರು ಕ್ರೀಡಾಪಟುಗಳು ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹಳೆನಗರದ ನಿವಾಸಿ ಪಾಪಣ್ಣ ಹೆಚ್ಚು ಓದಿಲ್ಲದಿದ್ದರೂ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡುವ ಮೂಲಕ ಆ ಮಕ್ಕಳು ತಾಲೂಕು ಹಾಗು ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಲ್ಲಿ ನೆರವಾಗುತ್ತಿದ್ದಾರೆ. ಅಲ್ಲದೆ ವೃತ್ತಿಯಲ್ಲಿ ಪಾಪಣ್ಣ ಕೂಲಿ ಕೆಲಸಗಾರನಾಗಿದ್ದು, ದುಡಿದ ಹಣದಲ್ಲಿ ಬಡ ಕ್ರೀಡಾಪಟುಗಳಿಗೆ ಕೈಲಾದ ನೆರವು ನೀಡುತ್ತಿದ್ದಾರೆ.
ಇದೆ ರೀತಿ ಹುಣಸೇಕಟ್ಟೆ ನಿವಾಸಿ, ವಿದ್ಯಾರ್ಥಿ ಕಾರ್ತಿಕ್ ಕೂಡ ಕ್ರೀಡಾಪಟು ಆಗಿದ್ದು, ಸರ್ಕಾರಿ ಶಾಲೆಗಳಿಗೆ ತೆರಳಿ ಕ್ರೀಡಾ ತರಬೇತಿ ನೀಡುತ್ತಿದ್ದಾರೆ. ಈ ಇಬ್ಬರು ಕ್ರೀಡಾ ತರಬೇತಿದಾರರು ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿ ಕೋರಿಕೆ ಮೇರೆಗೆ ಕ್ರೀಡಾ ತರಬೇತಿದಾರರಾಗಿ ವಿದ್ಯಾರ್ಥಿನಿಯರಿಗೆ ಉಚಿತ ತರಬೇತಿ ನೀಡುವ ಮೂಲಕ ಖೋ ಖೋ ದ್ವಿತೀಯ , ಥ್ರೋ ಬಾಲ್ ಪ್ರಥಮ, ಕಬಡ್ಡಿ ಪ್ರಥಮ ಹಾಗೂ ವೈಯಕ್ತಿಕ ಆಟಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಕ್ರೀಡಾಪಟುಗಳಾದ ಪಾಪಣ್ಣ ಮತ್ತು ಕಾರ್ತಿಕ್ ಅವರನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ. ಈ ಇಬ್ಬರ ಸೇವೆ ರಾಜ್ಯಾದ್ಯಂತ ವ್ಯಾಪಿಸಲಿ ಎಂಬ ಆಶಯ ಕ್ರೀಡಾಪಟುಗಳದ್ದಾಗಿದೆ.
No comments:
Post a Comment