ಶಾಸಕ ಸಂಗಮೇಶ್ವರ್‌ಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಹುಮ್ಮಸ್ಸು
ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ನಗರಸಭೆ ವ್ಯಾಪ್ತಿಯಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವುದು.
ಭದ್ರಾವತಿ, ಮೇ. ೭ : ವಿಧಾನಸಭಾ ಚುನಾವಣೆ ಮತದಾನಕ್ಕೆ ೩ ದಿನ ಮಾತ್ರ ಬಾಕಿ ಉಳಿದಿದ್ದು, ಈ ನಡುವೆ ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಹೆಚ್ಚಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಜೆಡಿಎಸ್ ಮುಂಚೂಣಿಯಲ್ಲಿರುವುದು ಕಂಡು ಬಂದಿದ್ದು, ನಂತರ ಸ್ಥಾನದಲ್ಲಿ ಬಿಜೆಪಿ ಕಂಡು ಬರುತ್ತಿದೆ.
ಮೊದಲ ಬಾರಿಗೆ ಜಾತ್ಯತೀತ ಜನತಾದಳ ಪಕ್ಷದಿಂದ ಸ್ಪರ್ಧಿಸಿರುವ ಶಾರದ ಅಪ್ಪಾಜಿ ಅಬ್ಬರದ ಪ್ರಚಾರಕ್ಕೆ ಹೆಚ್ಚಿನ ಗಮನ ನೀಡಿದ್ದು, ಕಳೆದ ಸುಮಾರು ೨ ವರ್ಷಗಳಿಂದ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಜಿ ಶಾಸಕ, ಪತಿ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗು ಪಕ್ಷದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಚುನಾವಣೆ ಆರಂಭಗೊಂಡಾಗಿನಿಂದ ಪ್ರಚಾರ ಮತ್ತಷ್ಟು ಚುರುಕುಗೊಂಡಿದೆ. ಕ್ಷೇತ್ರದ ಪ್ರತಿಯೊಬ್ಬ ಮತದಾರರನ್ನು ತಲುಪಿರುವ ವಿಶ್ವಾಸ ಹೊಂದಿದ್ದಾರೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಪ್ರಚಾರ ಕಾರ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಅಭ್ಯರ್ಥಿ ಘೋಷಣೆ ಮೊದಲೇ ಸುಮಾರು ೧ ವರ್ಷದಿಂದ ರುದ್ರೇಶ್ ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡಿದ್ದರು. ಚುನಾವಣೆ ಘೋಷಣೆ ನಂತರ ಪ್ರಚಾರ ಹೆಚ್ಚಿನ ವೇಗ ಪಡೆದುಕೊಂಡಿದ್ದು, ಈ ಬಾರಿ ಗೆಲುವಿಗಾಗಿ ಪಕ್ಷದ ಪ್ರಮುಖರು ಹೆಚ್ಚಿನ ಶ್ರಮ ವಹಿಸಿದ್ದಾರೆ.
ಉಳಿದಂತೆ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಚಾರ ಕಾರ್ಯದಲ್ಲಿ ೩ನೇ ಸ್ಥಾನದಲ್ಲಿರುವುದು ಕಂಡು ಬರುತ್ತಿದೆ. ಶಾಸಕರಾಗಿ ಆಯ್ಕೆಯಾದ ನಂತರನಿರಂತರವಾಗಿ ಜನರ ಮಧ್ಯೆಯಲ್ಲಿಯೇ ಇದ್ದು, ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಹುಮ್ಮಸ್ಸಿನಲ್ಲಿದ್ದಾರೆ. ಈ ನಡುವೆ ಚುನಾವಣೆ ಘೋಷಣೆಯಾದಾಗಿನಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಸಂಜೆ ವೇಳೆ ಮಾತ್ರ ಶಾಸಕರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಳಿದಂತೆ ಕುಟುಂಬ ವರ್ಗದವರು, ಪಕ್ಷದ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಆಯಾ ಭಾಗಗಳಲ್ಲಿ ನಿರಂತರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿರುವ ಯುವ ಮುಖಂಡ, ಸಮಾಜ ಸೇವಕ ಆನಂದ್ ಮೆಡಿಕಲ್‌ರವರು ಸಹ ಕಳೆದ ಸುಮಾರು ೧ ವರ್ಷದಿಂದ ನಿರಂತರವಾಗಿ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇವರು ಸಹ ಕ್ಷೇತ್ರದ ಪ್ರತಿಯೊಬ್ಬ ಮತದಾರರನ್ನು ತಲುಪಿರುವ ವಿಶ್ವಾಸ ಹೊಂದಿದ್ದಾರೆ.
ಉಳಿದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ಅಭ್ಯರ್ಥಿ ಸುಮಿತ್ರಬಾಯಿ, ಸಂಯುಕ್ತ (ಕರ್ನಾಟಕ) ಜನತಾದಳ(ಜೆಡಿಯು) ಅಭ್ಯರ್ಥಿ ಶಶಿಕುಮಾರ್ ಎಸ್. ಗೌಡ, ಆರ್‌ಪಿಐಕೆ ಪಕ್ಷದ ಅಭ್ಯರ್ಥಿ ಇ.ಪಿ ಬಸವರಾಜ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಎನ್ ರಾಜು, ಎಸ್.ಕೆ ಸುಧೀಂದ್ರ, ವೈ. ಶಶಿಕುಮಾರ್, ಡಿ. ಮೋಹನ್ ಮತ್ತು ರಾಜಶೇಖರ್‌ರವರು ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.