ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಭದ್ರಾವತಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ನಿವೃತ್ತ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಈ ಹಿಂದಿನಂತೆ ಯಥಾಸ್ಥಿತಿ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಎಚ್.ಎನ್ ಮಹಾರುದ್ರ ಮಾತನಾಡಿ, ಮಾರ್ಚ್ ತಿಂಗಳಿನಲ್ಲಿ ಲೋಕಸಭೆಯಲ್ಲಿ ಹೊಸ ಪಿಂಚಣಿ ಹಾಗೂ ಹಳೇ ಪಿಂಚಣಿ ಪರಿಷ್ಕರಣೆ ಮಾಡುವ ವಿಷಯ ಮಂಡಿಸಲಾಗಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಆರ್ಥಿಕ ಬಿಲ್ ಮಂಡಿಸುವಾಗ ೦೧.೦೪.೨೦೨೬ಕ್ಕೆ ಮೊದಲು ನಿವೃತ್ತಿಯಾಗುವ ಸರ್ಕಾರಿ ನೌಕರರಿಗೆ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ತುಟ್ಟಿ ಭತ್ಯೆ ಪರಿಷ್ಕರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇದು ನಿವೃತ್ತ ನೌಕರರಿಗೆ ಅಘಾತ ಉಂಟುಮಾಡಿದೆ. ಅಲ್ಲದೆ ಇದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರು ತಮ್ಮ ಕರ್ತವ್ಯದ ಅವಧಿಯಲ್ಲಿ ನೌಕರಿಯನ್ನೇ ನಂಬಿ ಬಂದವರು. ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಎಲ್ಲಾ ಯೋಜನೆಗಳನ್ನು ಪ್ರ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಕಾರ್ಯ ನಿರ್ವಹಿಸಿರುತ್ತೇವೆ. ಕರ್ತವ್ಯದ ಅವಧಿಯಲ್ಲಿ ಕರ್ತವ್ಯವೇ ದೇವರೆಂದು ನಂಬಿ ಜೀವವನ್ನು ಮುಡುಪಾಗಿಟ್ಟಿದ್ದೇವೆ. ನಿವೃತ್ತಿಯಾದ ಮೇಲೆ ಬರುವ ಪಿಂಚಣಿಯನ್ನು ನಂಬಿ ಇಳಿವಯಸ್ಸಿನಲ್ಲಿ ಬದುಕು ಕಟ್ಟಿಕೊಂಡವರು. ಇಂತಹ ಹಿರಿಯ ಜೀವಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜೀವನೋಪಾಯಕ್ಕೆ ಬೇಕಾದ ಸೌಲತ್ತುಗಳನ್ನು ಕೊಡುವ ಬದಲು ಕತ್ತರಿ ಹಾಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ತಹಸೀಲ್ದಾರ್-ಗ್ರೇಡ್-೨ ಮಂಜಾನಾಯ್ಕರವರ ಮೂಲಕ ಮನವಿ ಸಲ್ಲಿಸಿಲಾಯಿತು.
ಸಂಘದ ಅಧ್ಯಕ್ಷ ಬಿ.ಎಲ್.ರಂಗಸ್ವಾಮಿ ಪ್ರಭಟನೆ ನೇತೃತ್ವ ವಹಿಸಿದ್ದರು. ಪ್ರಮುಖರಾದ ಟಿ.ಜಿ ಚಂದ್ರಪ್ಪ, ಶಿವಲಿಂಗಪ್ಪ, ಚಂದ್ರಶೇಖರ ಚಕ್ರಸಾಲಿ, ಕಾಂತಪ್ಪ, ಸಿ. ಜಯಪ್ಪ, ಬಲರಾಮಗಿರಿ, ಶಿವೇಗೌಡ, ಚಿದಾನಂದ, ರಂಗಸ್ವಾಮಿ, ರಾಧಾಕೃಷ್ಣ ಭಟ್, ಮೋಹನ್‌ಕುಮಾರ್, ತಿಪ್ಪಮ್ಮ, ಸರೋಜಮ್ಮ ಸೇರಿದಂತೆ ನಿವೃತ್ತ ಸರ್ಕಾರಿ ನೌಕರರು ಪಾಲ್ಗೊಂಡಿದ್ದರು.