Tuesday, July 21, 2020

ಉಕ್ಕಿನ ನಗರದಲ್ಲಿ ಕೊರೋನಾ ಸ್ಪೋಟ : ಒಂದೇ ದಿನ ೧೦ ಪ್ರಕರಣ

ಭದ್ರಾವತಿಯಲ್ಲಿ ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಕೊರೋನಾ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 
ಭದ್ರಾವತಿ, ಜು. ೨೧: ಉಕ್ಕಿನ ನಗರದಲ್ಲಿ ಕೊರೋನಾ ಸೋಂಕು ಮಂಗಳವಾರ ಸ್ಪೋಟಗೊಂಡಿದ್ದು, ಇದೆ ಮೊದಲ ಬಾರಿಗೆ ಒಂದೇ ದಿನ ೧೦ ಪ್ರಕರಣಗಳು ದಾಖಲಾಗಿವೆ. 
ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದುವರೆಗೂ ೭ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಇದೀಗ ಏಕಾಏಕಿ ೧೦ ಪ್ರಕರಣಗಳು  ಅದರಲ್ಲೂ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿರುವುದು ಇಲ್ಲಿನ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. 
ಹಳೇನಗರದ ಖಲಂದರ್ ನಗರದಲ್ಲಿ ೪೦ ವರ್ಷದ ವ್ಯಕ್ತಿ, ಜಟ್‌ಪಟ್ ನಗರದಲ್ಲಿ ೧೬ ವರ್ಷದ ಹುಡುಗ, ಹೊಸಸಿದ್ದಾಪುರದಲ್ಲಿ ೩೮ ವರ್ಷದ ಯುವತಿ, ಕಾಗದನಗರ ೧ನೇ ವಾರ್ಡ್‌ನ ೫೦ ವರ್ಷದ ವ್ಯಕ್ತಿ, ಉಪ್ಪಾರ ಬೀದಿಯಲ್ಲಿ ೨೬ ವರ್ಷದ ಯುವತಿ, ಗೋಣಿಬೀಡಿನಲ್ಲಿ ೩೭ ವರ್ಷದ ಮಹಿಳೆ, ಹೊಸಮನೆ ಎನ್‌ಎಂಸಿ ಬಡಾವಣೆಯಲ್ಲಿ ೬೩ ಮಹಿಳೆ, ವೀರಾಪುರದಲ್ಲಿ ೬೫ ವರ್ಷದ ಮಹಿಳೆ ಮತ್ತು ಹೊಸಮನೆ ಶಿವಾಜಿ ಸರ್ಕಲ್ ಬಳಿ ೪೨ ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. 
        ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಮತ್ತು ದೇವರನರಸೀಪುರದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
       ಚಿಕಿತ್ಸಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶಿವಕುಮಾರ್ ಭೇಟಿ, ಪರಿಶೀಲನೆ : 
ಯಾವುದೇ ರೋಗ ಲಕ್ಷಣಗಳಿಲ್ಲದ ಕೊರೋನಾ ಸೋಂಕು ಪ್ರಕರಣಗಳ ಚಿಕಿತ್ಸೆಗಾಗಿ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಮತ್ತು ದೇವರನರಸೀಪುರದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವಕುಮಾರ್ ಉಪಸ್ಥಿತರಿದ್ದರು. 

ಎರಡು ದಿನ ರೈತರಿಗೆ ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರ

ಭದ್ರಾವತಿ, ಜು. ೨೧: ತಾಲೂಕಿನ ಹಳ್ಳಿಕೆರೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜು.೨೨ ಮತ್ತು ೨೪ರಂದು ಎರಡು ದಿನ ರೈತರಿಗೆ  ಆನ್‌ಲೈನ್ ಮೂಲಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 
ಜು.೨೨ರ ಮಧ್ಯಾಹ್ನ ೩ ಗಂಟೆಯಿಂದ ಮಧ್ಯಾಹ್ನ ೪ವರೆಗೆ ಹವಾಮಾನ ಮತ್ತು ಕೃಷಿ ವಿಷಯ ಕುರಿತು ಶಿವಮೊಗ್ಗ ಕೃಷಿ ತೋಟಗಾರಿಕೆ ವಿಶ್ವ ವಿದ್ಯಾನಿಲಯದ ಗ್ರಾಮೀಣ್ ಕೃಷಿ ಮೌಸಮ್ ಪ್ರಾಜೆಕ್ಟ್ ತಾಂತ್ರಿಕ ಅಧಿಕಾರಿ ಡಾ. ಪ್ರದೀಪ್ ಗೋಪಕ್ಕಲಿ ಮಾಹಿತಿ ನೀಡಲಿದ್ದು, ಗೂಗಲ್ ಮೀಟ್ ಲಾಗಿನ್ ಐ.ಡಿ ಡಬ್ಲ್ಯೂಟಿಎಸ್-ಎಐಎಸ್‌ಕೆ-ಎಎಂಎನ್(Wts-aisk-amn), ಲಿಂಕ್ಎಚ್‌ಟಿಟಿಪಿಎಸ್://ಮೀಟ್.ಗೂಗಲ್. ಕಾಂ. ಡಬ್ಲ್ಯೂ/ಡಬ್ಲ್ಯೂಟಿಎಸ್-ಎಐಎಸ್‌ಕೆ-ಎಎಂಎನ್(https://meet.google.com/Wts-aisk-amn) ಸಂಪರ್ಕಿಸಬಹುದಾಗಿದೆ. 
೨೪ರಂದು ಮಧ್ಯಾಹ್ನ ೩.೩೦ ರಿಂದ ೫ ಗಂಟೆ ವರೆಗೆ ಭತ್ತದ ಬೆಳೆಯಲ್ಲಿ ತಾಂತ್ರೀಕರಣ ವಿಷಯ ಕುರಿತು ತಾಲೂಕು ಕೃಷಿ ಇಲಾಕೆ ಆತ್ಮ ಯೋಜನೆ ತಾಂತ್ರಿಕ ವ್ಯವಸ್ಥಾಪಕ ಬಿ. ರಾಕೇಶ್ ಮಾಹಿತಿ ನೀಡಲಿದ್ದು, ಲಾಗಿನ್  ಐ.ಡಿ ಕೆ.ಎಚ್.ಎಫ್-ಸಿಡಿವಿಎ-ಬಿಎಓ(khf-cdva-bao), ಲಿಂಕ್ ಎಚ್‌ಟಿಟಿಪಿಎಸ್://ಮೀಟ್.ಗೂಗಲ್.ಕಾಂ.ಡಬ್ಲ್ಯೂ/ಕೆ.ಎಚ್.ಎಫ್-ಸಿಡಿವಿಎ-ಬಿಎಓ(https://meet.google.com/khf-cdva-bao) ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ. 


ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಹಾಲಿ-ಮಾಜಿ ಶಾಸಕರ ಬಣಗಳ ನಡುವೆ ಮಾತಿನ ಚಕಮಕಿ

ತಾವರಘಟ್ಟ ಗ್ರಾಮದಲ್ಲಿ ಬಿಗುವಿನ ವಾತಾವರಣ, 

ಪೊಲೀಸರಿಂದ  ಲಘು ಲಾಟಿ ಪ್ರಹಾರ 

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡುತ್ತಿರುವುದು. 
ಭದ್ರಾವತಿ: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ಎರಡು ಬಣಗಳ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ನಡೆದಿದೆ. 
ತಾವರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. ೨೯(ಹಳೇ ಸರ್ವೆ ನಂ.೧೪)ರ ಗೋಮಾಳ ಜಾಗದಲ್ಲಿ ಸ್ಮಶಾನ ನಿರ್ಮಾಣಕ್ಕೆ ಸರ್ಕಾರದಿಂದ ೧ ಎಕರೆ ೨೦ ಗುಂಟೆ ಜಮೀನು ಮಂಜೂರಾತಿಯಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತದಿಂದ ಸರ್ವೆ ಕಾರ್ಯ ನಡೆಸಲು ಗ್ರಾಮಕ್ಕೆ ತೆರಳಿದ್ದಾಗ ಗೋಮಾಳ ಒತ್ತುವರಿ ಮಾಡಿರುವ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಬೆಂಬಲಿಗರು ಪ್ರತಿಭಟನೆ ನಡೆಸಿರುವುದು. 
     ಇದರಿಂದಾಗಿ ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಸ್ಮಶಾನಕ್ಕೆ ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದು, ಇದಕ್ಕೆ ಒಪ್ಪಂದ ರೈತರು ಗೋಮಾಳದಲ್ಲಿ ಖಾಲಿ ಜಾಗವಿದ್ದು, ಆ ಜಾಗವನ್ನು ಬಳಸಿಕೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. 
ಒತ್ತುವರಿ ರೈತರ ಪರವಾಗಿ ಮಾಜಿ ಶಾಸಕ ಅಪ್ಪಾಜಿ ಬೆಂಬಲಕ್ಕೆ ಬಂದ ಹಿನ್ನಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. 
ಗೋಮಾಳ ಜಾಗದ ವಿಸ್ತೀರ್ಣದ ಬಗ್ಗೆ ಸ್ಪಷ್ಟ ಮಾಹಿತಿ ಯಾರ ಬಳಿಯೂ ಇಲ್ಲ. ಪ್ರಸ್ತುತ ಗೋಮಾಳ ಜಾಗದ ಸುತ್ತಮುತ್ತ ೫ ಮಂದಿ ರೈತರು ಜಮೀನು ಹೊಂದಿದ್ದು, ಈ ರೈತರಿಂದ ಗೋಮಾಳ ಜಾಗ ಒತ್ತುವರಿ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ರೈತರ ಖಾತೆಯಲ್ಲಿ ದಾಖಲಾಗಿರುವ ಮಾಹಿತಿಯಂತೆ ಸರ್ವೆ ಕಾರ್ಯ ನಡೆಸಿ ಉಳಿದ  ಜಾಗವನ್ನು ಸ್ಮಶಾನಕ್ಕೆ ಬಿಟ್ಟು ಕೊಡಲಿ ಎಂಬುದು ಗ್ರಾಮಸ್ಥರ ವಾದವಾಗಿದೆ. 
ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 
       ಆದರೆ ಒತ್ತುವರಿ ಮಾಡಿರುವ ರೈತರು ಈಗಾಗಲೇ ಒತ್ತುವರಿ ಮಾಡಿರುವ ಜಾಗದಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಖಾಲಿ ಇರುವ ಜಾಗವನ್ನು ಸ್ಮಶಾನಕ್ಕೆ ಬಳಿಸಿಕೊಳ್ಳುವಂತೆ ಪಟ್ಟು ಹಿಡಿದ್ದಾರೆ. 

ಜು.೨೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಜು. ೨೧: ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆವತಿಯಿಂದ ರಸ್ತೆ ಅಗಲೀಕರಣ ಕಾರ್ಯ ಹಮ್ಮಿಕೊಂಡಿರುವುದರಿಂದ ನಗರದ ಹೊಸಮನೆ ರಸ್ತೆಯ ಇಕ್ಕೆಲಗಳಲ್ಲಿರುವ ವಿದ್ಯುತ್ ಕಂಬಗಳನ್ನು ಜು.೨೨ರಂದು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. 
ಹೊಸಮನೆ ಶಿವಾಜಿ ವೃತ್ತ, ತಮ್ಮಣ್ಣ ಕಾಲೋನಿ, ಕುವೆಂಪು ನಗರ, ಹನುಮಂತ ನಗರ, ತ್ಯಾಗರಾಜ ನಗರ, ವಿಜಯ ನಗರ, ಅಶ್ವಥ್ ನಗರ ಮತ್ತು ಕಬಳಿಕಟ್ಟೆ ಇತ್ಯಾಧಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 


ನಿವೇಶನ, ವಸತಿ ರಹಿತರಿಗೆ ಯೋಜನೆ ಕುರಿತು ಮಾಹಿತಿ ನೀಡದೆ ನಿರ್ಲಕ್ಷ್ಯತನ

ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ 

ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸರ್ಕಾರದ ಯೋಜನೆ ಕುರಿತು ಸರಿಯಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಆಡಳಿತಕ್ಕೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೨೧: ತಾಲೂಕಿನ ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ವಸತಿ ರಹಿತರಿಗೆ ಸರ್ಕಾರದ ಯೋಜನೆ ಕುರಿತು ಸರಿಯಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಆಡಳಿತಕ್ಕೆ ವ್ಯವಸ್ಥಾಪಕ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 
ಸರ್ಕಾರದ ಆದೇಶದಂತೆ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಬಹಳ ವರ್ಷಗಳ ನಂತರ ಫೆ.೧೩, ೨೦೨೦ರಂದು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಮತ್ತು ನಿವೇಶನ ರಹಿತರು ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿದ್ದು, ಶಿವಮೊಗ್ಗ ಜಿಲ್ಲಾ ಪಂಚಾಯತ್ ವತಿಯಿಂದ ಜೂ.೨೬, ೨೦೨೦ರಂದು ಎಲ್ಲಾ ತಾಲೂಕು ಪಂಚಾಯಿತಿಗಳಿಗೆ ಕೈಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳನ್ನು ನಿಗಮದ ವೆಬ್‌ಸೈಟ್‌ನಲ್ಲಿ ನಮೂದಿಸಲು ಆ.೩೧ರವರೆಗೂ ಕಾಲಾವಕಾಶ ಕಲ್ಪಿಸಲಾಗಿದೆ. 
ಈ ಕುರಿತು ಜು.೧ರಂದು ತಾಲೂಕಿನ ಎಲ್ಲಾ ೪೧ ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಲಾಗಿದ್ದು, ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಯೋಜನೆ ಕುರಿತು ಗ್ರಾಮಗಳಲ್ಲಿ ಟಾಂಟಾಂ ಹೊಡೆಸಿ ಪ್ರಚಾರ ಮಾಡಿ ಯಾವುದೇ ನಿವೇಶನ ರಹಿತ ಫಲಾನುಭವಿಗಳು ಕೈಬಿಟ್ಟು ಹೋಗದಂತೆ ಕ್ರಮ ವಹಿಸಬೇಕಾಗಿದೆ. ಆದರೆ ಇದುವರೆಗೂ ಟಾಂಟಾಂ ಹೊಡೆಸಿಲ್ಲ. ಅಲ್ಲದೆ ಪ್ರತಿಕಾ ಪ್ರಚಾರ, ಭಿತ್ತಿಪತ್ತ ಹಂಚದೆ ಕರ್ತವ್ಯ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ. 
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಸತಿ ಸಚಿವ ವಿ. ಸೋಮಣ್ಣ, ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ ಈ ಸಂಬಂಧ ಗಮನ ಹರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 
ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಉಪಾಧ್ಯಕ್ಷ ಬ್ರಹ್ಮಲಿಂಗಯ್ಯ, ಸಂಚಾಲಕರಾದ ಗಾಯಕ್‌ವಾಡ್, ಸುಬ್ಬೇಗೌಡ, ಆನಂದಮೂರ್ತಿ, ರಾಮಾನಾಯ್ಕ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.