ಗುರುವಾರ, ಆಗಸ್ಟ್ 28, 2025

ಕಾಗದನಗರ ಕನ್ನಡ ಯುವಕರ ಸಂಘದ ೫೩ನೇ ವರ್ಷದ ವಿನಾಯಕ ಮಹೋತ್ಸವ

ಭದ್ರಾವತಿ ಕಾಗದನಗರದ ಕನ್ನಡ ಯುವಕರ ಸಂಘದ ವತಿಯಿಂದ ೫೩ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ. 
    ಭದ್ರಾವತಿ : ಕಾಗದನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆ ಆ.೩೧ರ ಭಾನುವಾರ ನಡೆಯಲಿದೆ.
    ಕನ್ನಡ ಯುವಕರ ಸಂಘ ತನ್ನದೇ ಆದ ಇತಿಹಾಸ ಹೊಂದಿದ್ದು, ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಹಾಗು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ನಿವಾಸಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಈ ಹಿಂದೆ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಭಾಗದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಸಾವಿರಾರು ಮಂದಿ ಗಣಪತಿ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಿದ್ದರು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿದ್ದವು. ಸುಮಾರು ೧೦ ರಿಂದ ೧೫ ಸಾವಿರ ಮಂದಿ ಕಾರ್ಯಕ್ರಮ ವೀಕ್ಷಣೆಗಾಗಿ ಆಗಮಿಸುತ್ತಿದ್ದರು. ಅಲ್ಲದೆ ಲಾಟರಿ ಡ್ರಾ ಸಹ ಏರ್ಪಡಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಇತಿಹಾಸದ ಪುಟದಲ್ಲಿ ಉಳಿದುಕೊಂಡಿವೆ.
    ಕಳೆದ ಸುಮಾರು ೧೦ ವರ್ಷಗಳಿಂದ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ವಸತಿ ಗೃಹಗಳನ್ನು ತೊರೆದಿದ್ದಾರೆ. ಈ ನಡುವೆ ಕೆಲವು ವಸತಿ ಗೃಹಗಳನ್ನು ಕಳೆದ ಸುಮಾರು ೩-೪ ವರ್ಷಗಳಿಂದ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಸಿಬ್ಬಂದಿಗಳಿಗೆ ನೀಡಲಾಗಿದ್ದು, ಬಹುತೇಕ ಸಿಬ್ಬಂದಿಗಳು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಕಾರ್ಖಾನೆ ಒಳ ಭಾಗದಲ್ಲಿರುವ ಆಡಳಿತ ಕಛೇರಿಯ ಕೆಲವು ಕಟ್ಟಡಗಳನ್ನು ಕ್ಷಿಪ್ರ ಕಾರ್ಯ ಪಡೆ ಕಛೇರಿಗಳಿಗೆ ನೀಡಲಾಗಿದೆ. ಇದರಿಂದಾಗಿ ಈ ಭಾಗ ಸ್ವಲ್ಪ ಮಟ್ಟಿಗೆ ಜನ ವಸತಿ ಪ್ರದೇಶವಾಗಿ ಕಂಡು ಬರುತ್ತಿದೆ. ಉಳಿದಂತೆ ಕಾರ್ಖಾನೆಯ ಬಹುತೇಕ ವಸತಿ ಗೃಹಗಳು ಪಾಳು ಬಿದ್ದಿವೆ. ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.  ಆದರೂ ಈ ನಡುವೆ ಕೆಲವು ಯುವಕರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪುನಃ ಹಿಂದಿನ ವೈಭವ ಮರುಕಳುಹಿಸುವ ಆಶಾಭಾವನೆ ಹೊಂದಿದ್ದಾರೆ.
    ಈ ಬಾರಿ ೫ ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಕಾಗದನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆಯೊಂದಿಗೆ ಮೂರ್ತಿ ವಿಸರ್ಜನೆ ನಡೆಯಲಿದೆ.

೫೩ನೇ ವರ್ಷದ ಹಿಂದೂ ಮಹಾಸಭಾ ಗಣಪತಿ

ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೫೩ನೇ ವರ್ಷದ ವಿನಾಯಕ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಶ್ವೇತ ವರ್ಣದ ಅರಳಿದ ಕಮಲದ ಆಕರ್ಷಕ ಆಲಂಕಾರದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 
     ಭದ್ರಾವತಿ : ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ೫೩ನೇ ವರ್ಷದ ವಿನಾಯಕ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಸೆ.೪ರಂದು ಮೂರ್ತಿ ವಿಸರ್ಜನೆ ನಡೆಯಲಿದೆ. 
    ನಗರದ ಪ್ರತಿಷ್ಠಿತ ವಿನಾಯಕ ಮೂರ್ತಿ ಇದ್ದಾಗಿದ್ದು, ಹಲವು ವಿಶಿಷ್ಟತೆ, ವಿಭಿನ್ನತೆಯಿಂದ ಕೂಡಿದೆ. ಹಿಂದೂ ಸಂಘಟನೆಗಳ ಶಕ್ತಿ ಕೇಂದ್ರ ಸ್ಥಾನವೇ ಇದಾಗಿದ್ದು, ಹಿಂದೂ ಧರ್ಮ, ಸಂಸ್ಕೃತಿ ಅನಾವರಣ, ಪ್ರತಿಷ್ಠೆ ಎಲ್ಲವೂ ಅಡಗಿದೆ. ಕಳೆದ ೫೩ ವರ್ಷಗಳಿಂದ ನಿರಂತರವಾಗಿ ವಿನಾಯಕ ಚತುರ್ಥಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. 
    ಈ ಬಾರಿ ಶ್ವೇತ ವರ್ಣದ ಅರಳಿದ ಕಮಲದ ಆಕರ್ಷಕ ಆಲಂಕಾರದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಹಳೇನಗರದ ಶಿಲ್ಪ ಕಲಾವಿದರಾದ ರಂಗಪ್ಪ ಕುಟುಂಬದವರು ಪ್ರತಿ ವರ್ಷದಂತೆ ಈ ಬಾರಿ ಸಹ ಮೂರ್ತಿ ತಯಾರಿಸಿದ್ದು, ಸುಮಾರು ೬ ಅಡಿ ಎತ್ತರವಿದೆ. 
    ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಹೋಮ-ಹವನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈಗಾಗಲೇ ನಗರದ ಪ್ರಮುಖ ವೃತ್ತಗಳಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಸೆ.೪ರಂದು ನಡೆಯಲಿರುವ ವಿಸರ್ಜನಾ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. 

ಪತ್ರಿಕಾ ವಿತರಕರ ಒಕ್ಕೂಟದಿಂದ ಕೀರ್ತನಾಗೆ ಪ್ರತಿಭಾ ಪುರಸ್ಕಾರ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಭದ್ರಾವತಿ ನಗರದ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭದಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ನಗರದ ಆದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. 
    ಕೀರ್ತನಾ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೧೧ ಅಂಕ ಪಡೆದು ಶೇ.೯೭.೭೬ ಫಲಿತಾಂಶದೊಂದಿಗೆ ಅತ್ಯನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದು ಕೀರ್ತನಾ ಗಮನ ಸೆಳೆದಿದ್ದು, ಇವರು ನಗರದ ಹುಡ್ಕೋ ಕಾಲೋನಿ ನಿವಾಸಿ, ದಿನ ಪತ್ರಿಕೆಗಳ ವಿತರಕ ಕೃಷ್ಣಮೂರ್ತಿ ಮತ್ತು ಸ್ವರ್ಣಾಂಬ ದಂಪತಿ ಪುತ್ರಿಯಾಗಿದ್ದಾರೆ. 
    ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗಪ್ಪ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೊಸಮನೆ ಬೋವಿ ಕಾಲೋನಿಯಲ್ಲಿ 41ನೇ ವರ್ಷದ ಶ್ರೀ ವಿನಾಯಕ ಸ್ವಾಮಿ ಮಹೋತ್ಸವ


ಭದ್ರಾವತಿ ನಗರದ ಹೊಸಮನೆ ಭೋವಿ ಕಾಲೋನಿ, ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 41ನೇ ವರ್ಷದ ಶ್ರೀ ವಿನಾಯಕ ಸ್ವಾಮಿ ಮಹೋತ್ಸವ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದ್ದು, ಕಾಗದ ನಗರದ 7ನೇ ವಾರ್ಡ್ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ್  ತರಳಿ ಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗುತ್ತಿವೆ.
    ಭದ್ರಾವತಿ : ನಗರದ ಹೊಸಮನೆ ಭೋವಿ ಕಾಲೋನಿ, ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 41ನೇ ವರ್ಷದ ಶ್ರೀ ವಿನಾಯಕ ಸ್ವಾಮಿ ಮಹೋತ್ಸವ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದ್ದು, ಆ.31ರಂದು ವಿಸರ್ಜನೆಗೊಳ್ಳಲಿದೆ. 
    ಹಳೆನಗರದ ಕುಂಬಾರ ಬೀದಿ ಕಲಾವಿದ ಬಸವರಾಜು ಈ ಬಾರಿ ವಿನಾಯಕ ಮೂರ್ತಿ ತಯಾರಿಸಿದ್ದು, ಭಕ್ತರ ಮನಸೂರೆಗೊಳ್ಳುತ್ತಿದೆ. ಭೋವಿ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶದಲ್ಲಿ  ಭೋವಿ ಸಮಾಜದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಅವರ ದಿವ್ಯ ಸಾನಿಧ್ಯದಲ್ಲಿ ಸಮುದಾಯದವರು ಹಾಗು ವಿವಿಧ ಸಂಘಟನೆಗಳು ಸಂಘಟಿತರಾಗಿ ಶಾಂತಿ, ಸೌಹಾರ್ದಯುತವಾಗಿ ಶ್ರೀ ವಿನಾಯಕ ಚತುರ್ಥಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.   5 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ವಿನಾಯಕ ಮಹೋತ್ಸವದಲ್ಲಿ ಆರ್ಕೆಸ್ಟ್ರಾ ಮತ್ತು ಡ್ಯಾನ್ಸ್ ಈವೆಂಟ್ಸ್ ಕಾರ್ಯಕ್ರಮಗಳು ನಡೆಯಲಿದ್ದು, ಅಲ್ಲದೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಗಣಪತಿ ಹೋಮ, ಸಾಮೂಹಿಕ ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿದೆ.  
     ಕಾಗದ ನಗರದ 7ನೇ ವಾರ್ಡ್ ನಾಗರಕಟ್ಟೆ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ್  ತರಳಿ ಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗುತ್ತಿವೆ.
    ಆ.31ರಂದು ವಿವಿಧ ಕಲಾ ತಂಡಗಳೊಂದಿಗೆ ಬೆಳಗ್ಗೆ 10:30ಕ್ಕೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದ್ದು, ಉತ್ಸವ ಮೆರವಣಿಗೆ ಪ್ರತಿಷ್ಠಾಪನೆ ಸ್ಥಳದಿಂದ ಶಿವಾಜಿ ವೃತ್ತ, ಹೊಸ ಮನೆ ಮುಖ್ಯರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಮೂಲಕ ನಗರದ ಕೆಎಸ್ಆರ್ ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೆ ಸಾಗಿ ಪುನಹ ಹಿಂದಿರುಗಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ಸಾಗಿ ಸಂಜೆ 7:30ಕ್ಕೆ ನಗರಸಭೆ ಮುಂಭಾಗದ ಭದ್ರ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶ್ರೀ ವಿನಾಯಕ ಸೇವಾ ಸಮಿತಿ ಕೋರಿದೆ.