Saturday, August 19, 2023

೧೬೧ ಗ್ರಾಂ ಒಣ ಗಾಂಜಾ ವಶ

ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಭದ್ರಾವತಿ  ಪೇಪರ್‌ ಟೌನ್‌ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಭದ್ರಾವತಿ, ಆ. ೧೯:  ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೇಪರ್‌ ಟೌನ್‌ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಠಾಣಾಧಿಕಾರಿ ಕವಿತಾ ನೇತೃತ್ವದಲ್ಲಿ ಸಿಬ್ಬಂದಿಗಳು ಆ.೧೭ ರಂದು ದಾಳಿ ನಡೆಸಿದ್ದು, ಬಂಧಿತ ಇಬ್ಬರಿಂದ 161 ಗ್ರಾಂ ತೂಕದ ಒಣ ಗಾಂಜಾ ವಶ ಪಡಿಸಿಕೊಂಡು ಎನ್‌ಡಿಪಿಎಸ್‌ ಕಾಯ್ದೆಯಡಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಆ.೨೦ರಂದು ಪುಸ್ತಕ ಬಿಡುಗಡೆ ಸಮಾರಂಭ

    ಭದ್ರಾವತಿ, ಆ. ೧೯: ತಾಲೂಕಿನ ಬಿ.ಆರ್‌ ಪ್ರಾಜೆಕ್ಟ್‌  ಪತ್ರ ಸಂಸ್ಕೃತಿ ಸಂಘಟನೆ ವತಿಯಿಂದ ಆ.೨೦ರಂದು   ಬೆಳಿಗ್ಗೆ ೧೦.೩೦ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
    ಜಿ.ಆರ್‌ ಕುಂಭಾರ್‌ ಅವರ ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡ ʻಚಾರುಲತೆʼ(ನಾಟಕ), ಪ್ರವೀಣ್‌ ಎಂ. ಕಾರ್ಗಡಿ ಅವರ ʻನಡುರಾತ್ರಿಯ ನವಿಲುʼ(ಕವನ ಸಂಕಲನ) ಮತ್ತು ಜಿ.ಎಸ್‌ ಕುಂಭಾರ್‌ ಅವರ ʻನೂರೊಂದು ಕಥೆಗಳುʼ(ಚಿಂತನೆಗಾಗಿ) ಕೃತಿಗಳು ಪುಸ್ತಕ ಬಿಡುಗಡೆಗೊಳ್ಳಲಿವೆ.
    ಸಮಾರಂಭದಲ್ಲಿ ಕೊಟ್ಟೂರು ಸಾಹಿತಿ ಕುಂ. ವೀರಭದ್ರಪ್ಪ(ಕುಂವೀ), ಬೆಂಗಳೂರಿನ ಕವಿ ಡಾ. ಕೂಡ್ಲೂರು ವೆಂಕಟಪ್ಪ, ಶ್ರವಣಬೆಳಗೊಳ ಸಾಹಿತಿ ವಸುಮತಿ ಜೈನ್‌, ಮಹಾರಾಷ್ಟ್ರ ಗಡಿನಾಡ ಕನ್ನಡಿಗ ಸಾಹಿತಿ ಗುರುಪಾದ ಎಸ್. ಕುಂಭಾರ್‌, ಹೊಸನಗರದ ಪ್ರವೀಣ್‌ ಎಂ. ಕಾರ್ಗಡಿ ಮತ್ತು ಬಿ.ಆರ್‌ ಪ್ರಾಜೆಕ್ಟ್‌ ನಿವೃತ್ತ ಇಂಜಿನಿಯರ್‌, ಸಾಹಿತಿ ಹೊಸಹಳ್ಳಿ ದಾಳೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಆ.೨೦ರಂದು ಅರಸು ೧೦೮ನೇ ಜನ್ಮದಿನ ಆಚರಣೆ

    ಭದ್ರಾವತಿ, ಆ. ೧೯: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗು ನಗರಸಭೆ ವತಿಯಿಂದ ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ  ಡಿ. ದೇವರಾಜ ಅರಸುರವರ ೧೦೮ನೇ ಜನ್ಮದಿನ ಆ.೨೦ರಂದು  ಬೆಳಿಗ್ಗೆ ೧೦ ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಚರಿಸಲಾಗುತ್ತಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್ಯಾನಾಯ್ಕ್‌ ಉದ್ಘಾಟಿಸಲಿದ್ದಾರೆ. ಸಚಿವರಾದ ಎಸ್. ಮಧು ಬಂಗಾರಪ್ಪ, ಶಿವರಾಜ ಸಂಗಪ್ಪ ತಂಗಡಗಿ, ಡಿ. ಸುಧಾಕರ್‌, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್‌ ಸದಸ್ಯರಾದ ಎಸ್.ಎಲ್‌ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್‌ ಅರುಣ್‌, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್‌, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್‌, ತಹಸೀಲ್ದಾರ್‌ ಕೆ.ಆರ್‌ ನಾಗರಾಜ್‌, ಗ್ರೇಡ್‌-೨ ತಹಸೀಲ್ದಾರ್‌ ವಿ. ರಂಗಮ್ಮ, ಪೌರಾಯುಕ್ತ ಮನುಕುಮಾರ್‌, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಂ. ಗಂಗಣ್ಣ ಸೇರಿದಂತೆ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಟಿ. ರಾಜೇಶ್ವರಿ ಕೋರಿದ್ದಾರೆ.

ವೇದಾವತಿ ನಿಧನ

ವೇದಾವತಿ
    ಭದ್ರಾವತಿ, ಆ. ೧೯: ಹಳೇನಗರದ ಭೂತನಗುಡಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪದ ನಿವಾಸಿ ವೇದಾವತಿ(೯೨) ನಿಧನ ಹೊಂದಿದರು.
    ಜನ್ನಾಪುರ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುರೇಶ್‌ಕುಮಾರ್ ಸೇರಿದಂತೆ ೪ ಜನ ಪುತ್ರರು ಹಾಗು ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂರುದ್ರ ಭೂಮಿಯಲ್ಲಿ ನೆರವೇರಿತು.
    ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ. ರಾಜು ಹಾಗು ಪದಾಧಿಕಾರಿಗಳು, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ.ಎಲ್ ಅಶೋಕ್, ಉದ್ಯಮಿಗಳಾದ ಬಿ.ಕೆ ಜಗನ್ನಾಥ್, ಬಿ.ಕೆ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಭೂತಾನ್‌ ಅಡಕೆ ಆತಂಕ ಬೇಡ : ಅಡಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧ

ಷೇರುದಾರರ ಸಭೆಯಲ್ಲಿ ಮಾಮ್ಕೋಸ್‌ ಉಪಾಧ್ಯಕ್ಷ ಮಹೇಶ್‌ ಎಚ್.ಎಸ್‌ ಹುಲ್ಕುಳಿ

ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಭದ್ರಾವತಿ ಶಾಖೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಭೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಮಾತನಾಡಿದರು.  
    ಭದ್ರಾವತಿ, ಆ. ೧೯: ಅಡಕೆ ಬೆಳೆಗಾರರು ಭೂತಾನ್‌ ಅಡಕೆ ಕುರಿತು ಆತಂಕಪಡುವ ಅಗತ್ಯವಿಲ್ಲ. ನಮ್ಮ ಅಡಕೆ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಪೈಪೋಟಿ ನೀಡಲು ಸಿದ್ದವಿದೆ ಎಂದು ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಹೇಳಿದರು.
    ಅವರು ಶನಿವಾರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಸಂಘದ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
    ವಿದೇಶದಿಂದ ಆಮದು ಮಾಡಿಕೊಳ್ಳುವ ಅಡಕೆಯಿಂದ ಯಾವುದೇ ರೀತಿ ಆತಂಕ ಬೇಡ. ಈ ಸಂಬಂಧ ಅಡಕೆ ಬೆಳೆಗಾರರ ಹಿತಕಾಪಾಡುವಂತೆ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಫೆ.೧೪ರಿಂದ ಆಮದು ದರ ಕೆ.ಜಿ ಒಂದಕ್ಕೆ ೨೫೧ ರಿಂದ ೩೫೧ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ನಮ್ಮ ಅಡಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ ಎಂದರು.
    ಪ್ರಸ್ತುತ ಸಂಘದಲ್ಲಿ ೨೯,೮೬೨ ಸದಸ್ಯರಿದ್ದು, ಸದೃಢ ಆರ್ಥಿಕ ತಳಹದಿಯನ್ನು ಹೊಂದಿದೆ. ಮುಖ್ಯವಾಗಿ ಪ್ರಾರಂಭದಿಂದಲ್ಲೂ ಲಾಭದಲ್ಲಿಯೇ ಮುನ್ನಡೆಯುತ್ತಿದೆ. ಪ್ರಸ್ತುತ  ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ಒಟ್ಟು ೧೭ ತಾಲೂಕುಗಳ ಆಡಳಿತ ವ್ಯಾಪ್ತಿಯನ್ನು ಹೊಂದಿದೆ. ೧೨ ಶಾಖೆಗಳನ್ನು ಹಾಗು ೧೮ ಅಡಕೆ ಸಂಗ್ರಹಣ ಏಜೆನ್ಸಿಗಳನ್ನು ಹೊಂದಿರುತ್ತದೆ. ೨೦೨೨-೨೩ನೇ ಸಾಲಿನಲ್ಲಿ ರು.೪೪೧ ಲಕ್ಷ ನಿವ್ವಳ ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ರು.೪೯.೬೧ ಲಕ್ಷ ಹೆಚ್ಚು ಲಾಭ ಗಳಿಸಿದೆ. ಒಟ್ಟು ವ್ಯವಹಾರ ರು.೧೨೭೭.೭೧ ಕೋಟಿಗಳಾಗಿದ್ದು, ಕಳೆದ ಸಾಲಿಗಿಂತ ರು.೪೦೪.೩೭ ಕೋಟಿ ಹೆಚ್ಚಿಗೆ ವ್ಯವಹಾರ ನಡೆದಿದೆ ಎಂದರು.
    ಸಂಘದ ಎಲ್ಲಾ ವ್ಯವಹಾರ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಅಡಕೆ ತಂತ್ರಜ್ಞಾನ ಮತ್ತು ಮಾರುಕಟ್ಟೆ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಮ್ಯಾಮ್‌ಕೋಸ್‌ ಎಂಬ ಮೊಬೈಲ್‌ ಆಪ್‌ ಮತ್ತು ಅಂತರ್ಜಾಲ(ವೆಬ್‌ಸೈಟ್) ಹೊಂದಿದೆ. ಇದರ ಮೂಲಕ ಸದಸ್ಯರು ಸದಾಕಾಲ ಸಂಘದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
    ಸಂಘದ ಸದಸ್ಯರ ಹಿತಕಾಪಾಡುವ ನಿಟ್ಟಿನಲ್ಲಿ ಸದಸ್ಯರ ಬಹುದಿನಗಳ ಬೇಡಿಕೆಯಂತೆ ಅಡಕೆ ಆಧಾರ ಸಾಲ, ಕಟಾವು ಸಾಲ, ಕೊಳೆ ಔಷಧಿ ಸಾಲ, ನಿಗದಿತ ಠೇವಣಿ ಆಧಾರ ಸಾಲ, ವಿವಿಧ ಠೇವಣಿ ಯೋಜನೆಗಳು, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ, ಅಡಕೆ ಸಂಶೋಧನಾ ನಿಧಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.
    ಅಲ್ಲದೆ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳು, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪಾರಿತೋಷಕ ಬಹುಮಾನ, ಗುಂಪು ವಿಮಾ ಯೋಜನೆ, ಆರೋಗ್ಯ ವಿಮೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
    ನಿರ್ದೇಶಕರಾದ ಈಶ್ವರಪ್ಪ ಸಿ.ಬಿ ಚಂದವಳ್ಳಿ, ಕೃಷ್ಣಮೂರ್ತಿ ಕೆ.ವಿ ಕಿರುಗುಳಿಗೆ, ಕೆ. ರತ್ನಾಕರ, ತಿಮ್ಮಪ್ಪ ಎಸ್.ಎಂ ಶ್ರೀಧರಪುರ ಗ್ರಾಮ, ವೈ.ಎಸ್‌ ಸುಬ್ರಹ್ಮಣ್ಯ, ಎಚ್.ಟಿ  ಸುಬ್ರಹ್ಮಣ್ಯ ವಡ್ಡಿನಬೈಲು, ಸುರೇಶಚಂದ್ರ .ಎ, ಅಂಬ್ಲೂರು, ಬಡಿಯಣ್ಣ ಎಚ್.ಎಂ ಹೊಲಗೋಡು ಮತ್ತು ವಿಜಯಲಕ್ಷ್ಮಿ ಸೇರಿದಂತೆ ಶಾಖೆ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
        ಉಪಾಧ್ಯಕ್ಷ ಮಹೇಶ್‌ ಎಚ್. ಎಸ್‌ ಹುಲ್ಕುಳಿ ಮತ್ತು ನೂತನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಷೇರುದಾರರು ಪ್ರತಿವರ್ಷ ಷೇರುದಾರರ ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
    ನಿರ್ದೇಶಕರಾದ ಜಿ.ಈ ವಿರುಪಾಕ್ಷಪ್ಪ ಸ್ವಾಗತಿಸಿ, ಕೆ.ಕೆ ಜಯಶ್ರೀ ಸಂಗಡಿಗರು ಪ್ರಾರ್ಥಿಸಿದರು. ಟಿ.ಆರ್‌ ಭೀಮರಾವ್‌ ನಿರೂಪಿಸಿ, ಆರ್. ದೇವಾನಂದ್‌ ವಂದಿಸಿದರು. ಇನ್ನಿತರರು ಉಪಸ್ಥಿತರಿದ್ದರು.