Thursday, June 2, 2022

ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರಾಭ್ಯಾಸದ ಮೂಲಕ ಅಕ್ಷರ ಜ್ಞಾನಕ್ಕೆ ಮುನ್ನುಡಿ

ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆಯಲ್ಲಿ ಅಕ್ಷರಾಭ್ಯಾಸ ಹಾಗು ಶಾರದ ಪೂಜೆ ಆಚರಣೆಯೊಂದಿಗೆ ಪ್ರಸಕ್ತ  ಸಾಲಿನ ಪೂರ್ವ ಪ್ರಾಥಮಿಕ ಶಾಲಾ  ಪ್ರಾರಂಭೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
    ಭದ್ರಾವತಿ, ಜೂ. ೨: ಹಿಂದೂ ಸಂಸ್ಕೃತಿಯ ಕೆಲವು ಪರಂಪರೆಗಳನ್ನು ಇಂದಿಗೂ ಮೈಗೂಡಿಸಿಕೊಂಡು ಬಂದಿರುವ ಕೆಲವು ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ಅಕ್ಷರ ಜ್ಞಾನಕ್ಕೆ ಮುನ್ನುಡಿ ಬರೆಯಲು ಅಕ್ಷರಾಭ್ಯಾಸ ಸೇರಿದಂತೆ ಇನ್ನಿತರ ಆಚರಣೆಗಳನ್ನು ಕೈಗೊಳ್ಳುತ್ತಿವೆ.
    ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಶಿಕ್ಷಣ ಸಂಸ್ಥೆ ಪ್ರಸಕ್ತ  ಸಾಲಿನ ಪೂರ್ವ ಪ್ರಾಥಮಿಕ ಶಾಲಾ  ಪ್ರಾರಂಭೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡುವ ಮೂಲಕ ಗಮನ ಸೆಳೆದಿದೆ.
    ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳನ್ನು ಆಕರ್ಷಿಸುವುದು ಇಂದು ಸವಾಲಿನ ಕೆಲಸವಾಗಿದ್ದು, ಇಂತಹ ಸವಾಲಿನ ನಡುವೆ ವಿದ್ಯಾಸಂಸ್ಥೆ ಅಕ್ಷರಾಭ್ಯಾಸ ಹಾಗೂ ಶಾರದಾ ಪೂಜೆ ಆಚರಣೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ  ರಾಘವೇಂದ್ರ ಉಪಾಧ್ಯಾಯರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಆಡಳಿತಾಧಿಕಾರಿಗಳು ಹಾಗೂ ಪೋಷಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ : ಇಬ್ಬರು ವಿದ್ಯಾರ್ಥಿಗಳು ಸಾವು


ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಕುವೆಂಪು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಾದ ಉತ್ತಮ ಮತ್ತು ಮನೋಜ್.
    ಭದ್ರಾವತಿ, ಜೂ. ೨: ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
    ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಜಂಕ್ಷನ್ ವೃತ್ತದ ಬಳಿ ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ತೀವ್ರ ಗಾಯಗೊಂಡು ಉತ್ತಮ್ ಹಾಗೂ ಮನೋಜ್ ಇಬ್ಬರು ಮೃತಪಟ್ಟಿದ್ದಾರೆ.
ಎನ್.ಆರ್ ಪುರ (ನರಸಿಂಹರಾಜಪುರ)ದ ಜೈಲ್ ಬಿಲ್ಡಿಂಗ್ ನಿವಾಸಿ ಉತ್ತಮ್ ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ದ್ವಿತೀಯ ವಷದ ಎಂಸಿಎ ಹಾಗೂ ಮಂಡಗದ್ದೆ ಸರ್ಕಲ್ ನಿವಾಸಿ ಮನೋಜ್ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಕುವೆಂಪುರವರ ನಾಡಗೀತೆ ಅವಮಾನಿಸಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ


ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪುರವರು ರಚಿಸಿರುವ ನಾಡಗೀತೆಯನ್ನು ಅವಮಾನಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗು ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಗುರುವಾರ ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೨: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ಕುವೆಂಪುರವರು ರಚಿಸಿರುವ ನಾಡಗೀತೆಯನ್ನು ಅವಮಾನಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗು ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಗುರುವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಕುವೆಂಪುರವರು ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂಬ ಆಶಯ ಹೊಂದಿದ್ದರು. ಇದಕ್ಕೆ ಪೂರಕವೆಂಬಂತೆ ಅವರು  ರಚಿಸಿರುವ ಜೈ ಭಾರತ ಜನನಿಯ ತನುಜಾತೆ ನಾಡಗೀತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿ ಮಾಡುವ ಮೂಲಕ ಅವಮಾನಿಸಲಾಗಿದೆ. ಅಲ್ಲದೆ ನಾಡಗೀತೆಯ ಸಾಹಿತ್ಯವನ್ನು ಪಠ್ಯದಿಂದ ತೆಗೆದು ಅಪಮಾನಗೊಳಿಸಲಾಗಿದೆ. ಜೊತೆಗೆ ಸಾಮಾಜಿಕ ಮಹಿಳಾ ಸುಧಾರಕರಾದ ಸಾವಿತ್ರಿಬಾಯಿ ಪುಲೆ, ತಾರಾಬಾಯಿ ಶಿಂಧೆ, ಪಂಡಿತ್ ರಮಾಬಾಯಿ ಸೇರಿದಂತೆ ಹಲವರ ವಿವರಗಳಿಗೆ ಪಠ್ಯ ಪುಸ್ತಕ ಸಮಿತಿ ಕತ್ತರಿ ಪ್ರಯೋಗ ಮಾಡಿದೆ. ವೇದಿಕೆ ಇದನ್ನು ಖಂಡಿಸುವ ಜೊತೆಗೆ ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದೆ.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷೆ ಪುಷ್ಪ ಕೇಶವಮೂರ್ತಿ, ಸಹಕಾರ್ಯದರ್ಶಿ ಶೀಲಾ ರವಿ, ಖಜಾಂಚಿ ಭಾರತಿ ಕುಮಾರ್ ಸೇರಿದಂತೆ ವೇದಿಕೆಯ ನಿರ್ದೇಶಕರು ಉಪಸ್ಥಿತರಿದ್ದರು.

ಅಪಘಾತದಲ್ಲಿ ಎಂಪಿಎಂ ನಿವೃತ್ತ ಕಾರ್ಮಿಕ ರಾಜ್‌ಕುಮಾರ್ ಸಾವು

ರಾಜ್‌ಕುಮಾರ್
ಭದ್ರಾವತಿ, ಜೂ. ೨: ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಕಾರ್ಮಿಕ, ಹುಡ್ಕೋ ಕಾಲೋನಿ ನಿವಾಸಿ ರಾಜ್‌ಕುಮಾರ್(೬೫) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದರು.  ನಗರದ ಉಜ್ಜನಿಪುರ ಎನ್.ಎಚ್-೬೯ ಬೈಪಾಸ್ ರಸ್ತೆಯ ಶಂಕರಪ್ಪ ಕೆರೆ ಬಳಿ ರಾಜ್‌ಕುಮಾರ್‌ರವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ತೀವ್ರಗಾಯಗೊಂಡ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ನಿಧನಕ್ಕೆ ನಗರದ ಅನೇಕ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.