Wednesday, January 6, 2021

ಅದ್ದೂರಿಯಾಗಿ ಜರುಗಿದ ಶ್ರೀ ಮಾರಿಯಮ್ಮ ಜಾತ್ರಾ ಮಹೋತ್ಸವ

ಭದ್ರಾವತಿ, ಜ. ೬: ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಅಮ್ಮನವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಒಂದು ವಾರದವರೆಗೆ ಪ್ರತಿ ದಿನ ಅಮ್ಮನವರಿಗೆ ವಿಶೇಷ ಆಲಂಕಾರ, ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಕೊನೆಯ ದಿನ ಕೆಂಡದ ಆರತಿ ಸೇವೆ, ಉತ್ಸವ ಮೆರವಣಿಗೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುದವು.
ಬುಧವಾರ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕೋವಿಡ್-೧೯ರ ನಡುವೆಯೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಬಿ.ಎಚ್ ರಸ್ತೆ ಹಾಗು ಉಂಬ್ಳೆಬೈಲು ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ನಿರ್ಮಾಣಗೊಂಡ ಆಕರ್ಷಕವಾದ ದೇವಾನುದೇವತೆಗಳ ಪ್ರದರ್ಶಕಗಳು(ಡಿಸ್ ಪ್ಲೇ) ನೋಡುಗರ ಮನಸೂರೆಗೊಂಡವು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಚಿತ್ರ: ಡಿ೬-ಬಿಡಿವಿಟಿ೪
ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಅಮ್ಮನವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.



ಕಾಗದನಗರ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ

ಭದ್ರಾವತಿ, ಜ. ೬: ಕಾಗದನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಆಲಂಕಾರ, ಅಭಿಷೇಕ, ತಂಬಿಟ್ಟಿನ ಆರತಿ ಸೇವೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುದವು. ಕೋವಿಡ್-೧೯ರ ನಡುವೆಯೂ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

ಚಿತ್ರ: ಡಿ೬-ಬಿಡಿವಿಟಿ೩
ಭದ್ರಾವತಿ ಕಾಗದನಗರದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.


ಎಸ್.ಜಿ ಪೃಥ್ವಿಗೆ ಡಾಕ್ಟರೇಟ್ ಪದವಿ


ಎಸ್.ಜಿ ಪೃಥ್ವಿ ದೆಹಲಿಯ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
     ಭದ್ರಾವತಿ, ಜ. ೬: ನಗರದ ನಿವಾಸಿ ಎಸ್.ಜಿ ಪೃಥ್ವಿ ದೆಹಲಿಯ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
     ಕುಲಸಚಿವ ಶಿವಕುಮಾರ ಶರ್ಮ,  ನಿರ್ದೇಶಕರಾದ ನೀರಜ್  ಜೈನ್, ವಿಜ್ಞಾನಿ ಪ್ರೊಫೆಸರ್ ಎಲ್ಲೋರಸೇನ್ ಮಾರ್ಗದರ್ಶನದಲ್ಲಿ 'ಇನ್ ಫ್ಲೂಯೆನ್ಸ್  ಆಫ್ ಡೈಸ್ ರೆಗ್ಯುಲೇಟೆಡ್ ಮೆಟಾಬೋಲಿಸಂ ಆನ್ ಗೆನೆಸ್ ಅಸೋಸಿಯೇಟೆಡ್ ವಿತ್ ಇಮ್ಯೂನ್-ಎವೇಷನ್ ಅಂಡ್ ಸೆಲ್ಯೂಲಾರ್ ಸರ್ಕೇಡಿಯನ್ ರಿಥಮ್ ಇನ್ ಗ್ಲಿಯೋಮಾ' ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.  
       ಎಸ್.ಜಿ ಪೃಥ್ವಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ದೈಹಿಕ ಶಿಕ್ಷಕ ಶಿವಲಿಂಗೇಗೌಡ ಮತ್ತು ಗೌರಮ್ಮ ದಂಪತಿ ಪುತ್ರರಾಗಿದ್ದು, ಇವರನ್ನು ವಿಇಎಸ್  ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.  

ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ : ಡಾ. ವಿಜಯದೇವಿ

ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅಪೇಕ್ಷ ನೃತ್ಯ ಕಲಾ ವೃಂದದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಂಗ ಕಲಾವಿದ, ಚಲನ ಚಿತ್ರ ಮತ್ತು ಕಿರುತೆರೆ ನಟ ವೈ.ಕೆ ಹನುಮಂತಯ್ಯನವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಭದ್ರಾವತಿ, ಜ. ೬: ಹಿರಿಯ ಕಲಾವಿದರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಡಾ. ವಿಜಯದೇವಿ ಹೇಳಿದರು.
    ಅವರು ನಗರ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಅಪೇಕ್ಷ ನೃತ್ಯ ಕಲಾ ವೃಂದದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ರಂಗ ಕಲಾವಿದ, ಚಲನ ಚಿತ್ರ ಮತ್ತು ಕಿರುತೆರೆ ನಟ ವೈ.ಕೆ ಹನುಮಂತಯ್ಯನವರ ೭೦ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ವೈ.ಕೆ ಹನುಮಂತಯ್ಯನವರ ಕಲಾ ಸೇವೆ ಅಪಾರವಾಗಿದ್ದು, ಹಲವಾರು ಸಂಕಷ್ಟಗಳ ನಡುವೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಇಂದಿಗೂ ಜೀವಂತಿಕೆ ಕಾಯ್ದುಕೊಂಡು ಬಂದಿರುವುದು ಶ್ಲಾಘನೀಯ ಎಂದರು.
   ಹಿರಿಯ ರಂಗ ಕಲಾವಿದ, ಚಲನಚಿತ್ರ ಮತ್ತು ಕಿರುತೆರೆ ನಟ ಆಂಜನೇಯ ಮಾತನಾಡಿ, ಅಂದಿನ ಕಲಾವಿದರು ಸಾಕಷ್ಟು ಸವಾಲುಗಳನ್ನು ಮೆಟ್ಟಿ ತಮ್ಮಲ್ಲಿನ ಪ್ರತಿಭೆಗಳನ್ನು ಹೊರಹಾಕುವ ಮೂಲಕ ರಾಷ್ಟ್ರ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಪೈಕಿ ಹನುಮಂತಯ್ಯನವರು ಸಹ ಒಬ್ಬರಾಗಿದ್ದು, ಸಮಾಜಕ್ಕೆ ಇವರ ಸೇವೆ ಮತ್ತಷ್ಟು ಲಭಿಸುವಂತಾಗಲಿ. ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲೆಂದು ಶುಭ ಹಾರೈಸಿದರು.
   ವೈ.ಕೆ ಹನುಮಂತಯ್ಯ ತಮ್ಮ ಕಲಾ ಸೇವೆಯ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮ ಆಯೋಜಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಭಿನಂದನೆ ನುಡಿಗಳನ್ನಾಡಿದರು.
   ಅಪೇಕ್ಷ ಕಲಾ ವೃಂದದಿಂದ ಹನುಮಂತಯ್ಯನವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸ್ತ್ರೀ ರೋಗ ತಜ್ಞೆ ಡಾ. ವೀಣಾ ಎಸ್. ಭಟ್, ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ಕಸಾಪ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಲಾವಿದ ಚಿದಾನಂದ, ಶಿಕ್ಷಕ ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್‌ರಾವ್ ವರ್ಗಾವಣೆ

ಆಡಳಿತ ಮಂಡಳಿ, ನಿವೃತ್ತ ನೌಕರರರಿಂದ ಬೀಳ್ಕೊಡುಗೆ

ಭಾರತೀಯ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಆಡಳಿತ ಮಂಡಳಿ, ನಿವೃತ್ತ ನೌಕರರರಿಂದ ಬೀಳ್ಕೊಡುಗೆ ನೀಡಲಾಯಿತು.
    ಭದ್ರಾವತಿ, ಜ. ೬: ಭಾರತೀಯ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್ ವರ್ಗಾವಣೆಗೊಂಡಿದ್ದಾರೆ.
   ೨೦೧೦ರಲ್ಲಿ ಉಕ್ಕು ಪ್ರಾಧಿಕಾರದಲ್ಲಿ ಮಹಾಪ್ರಬಂಧಕರಾಗಿ ಸೇರ್ಪಡೆಗೊಂಡಿದ್ದು, ನಂತರ ೨೦೧೮ರಲ್ಲಿ ಧನ್‌ಬಾದ್ ಕೊಲ್ಲರಿಸ್ ವಿಭಾಗದಲ್ಲಿ ಪ್ರಭಾರಿ ಮಹಾಪ್ರಬಂದಕರಾಗಿ ಕರ್ತವ್ಯ ನಿರ್ವಹಿಸಿ ನಂತರ ಕಾರ್ಯಪಾಲಕ ನಿರ್ದೇಶಕರಾಗಿ ಪದೋನ್ನತ್ತಿ ಹೊಂದಿ ವಿಐಎಸ್‌ಎಲ್ ಕಾರ್ಖಾನೆಗೆ ವರ್ಗಾವಣೆಗೊಂಡಿದ್ದರು. ಮೇ.೧೦, ೨೦೧೯ರಂದು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸುಮಾರು ೨೦ ತಿಂಗಳು ಕರ್ತವ್ಯ ನಿರ್ವಹಿಸಿ ಇದೀಗ  ವರ್ಗಾವಣೆಗೊಂಡಿದ್ದಾರೆ.
ಕಾರ್ಖಾನೆ ವತಿಯಿಂದ ಬೀಳ್ಕೊಡುಗೆ :
     ಕಾರ್ಖಾನೆ ಆಡಳಿತ ಮಂಡಳಿ ಹಾಗು ಅಧಿಕಾರಿಗಳ ಸಂಘ ಮತ್ತು ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಕೆ.ಎಲ್ ಶ್ರೀನಿವಾಸ್‌ರಾವ್‌ರವರಿಗೆ ಬೀಳ್ಕೊಡುಗೆ ನೀಡಲಾಯಿತು.
    ನಗರಾಡಳಿತಾಧಿಕಾರಿ ವಿಶ್ವನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್, ಅಧಿಕಾರಿಗಳ ಸಂಘದ ಅಧ್ಯಕ್ಷ ವೀರಣ್ಣ, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಡವೀಶಯ್ಯ, ಬಿ.ಆರ್ ನಾಗರಾಜ್, ಎಸ್. ನರಸಿಂಹಚಾರ್, ನಂಜಪ್ಪ ಮತ್ತು ಹನುಮಂತಪ್ಪ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.