Thursday, May 5, 2022

ಕನ್ನಡ ಭಾಷೆ ಕಲಿಕೆಗೆ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಮೇ. ೫: ಕನ್ನಡ ಸಾಹಿತ್ಯ ಪರಿಷತ್ ನಾಡು-ನುಡಿಗಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಗುರುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
    ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ಮೇಲಿನ ಅಭಿಮಾನ ಹೆಚ್ಚಿಸಿಕೊಳ್ಳುವ ಜೊತೆಗೆ ಮಕ್ಕಳಿಗೆ ಕನ್ನಡ ಭಾಷೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಬೇಕು. ಆಗ ಮಾತ್ರ ನಮ್ಮ ಭಾಷೆ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ ಬೆಳೆದು ಬಂದ ದಾರಿ ಹಾಗು ಧ್ಯೇಯೋದ್ದೇಶಗಳನ್ನು ವಿವರಿಸಿದರು.
    ದತ್ತಿದಾನಿಗಳಾದ ಡಾ. ವಿಜಯದೇವಿ, ಡಾ. ಜಿ.ಎಂ ನಟರಾಜ್, ಕರೀಗೌಡ್ರ ನಾಗರಾಜಪ್ಪ ಆರುಂಡಿ ಮತ್ತು ವಾಗೀಶ್ ಕೋಠಿ ಅವರಿಗೆ ಗೌರವ ಸಮರ್ಪಣೆ ನಡೆಯಿತು.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಪರಿಷತ್ ಕಾರ್ಯದರ್ಶಿ ಜಗದೀಶ್ ಸ್ವಾಗತಿಸಿದರು. ಶ್ರೀಧರೇಶ್ ಭಾರದ್ವಾಜ್ ನಿರೂಪಿಸಿದರು. ಎಚ್. ತಿಮ್ಮಪ್ಪ ಸೇರಿದಂತೆಪರಿಷತ್ ಪದಾಧಿಕಾರಿಗಳು, ಮಾಜಿ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ, ಶಿಕ್ಷಕಿ ಮಾಯಮ್ಮ, ಹಳೇನಗರ ಮಹಿಳಾ ಸಮಾಜದ ಉಪಾಧ್ಯಕ್ಷೆ ಕಮಲಾಕುಮಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು


ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ೧೦೮ನೇ ಸಂಸ್ಥಾಪನಾ ದಿನಾಚರಣೆ ಹಾಗು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ದತ್ತಿ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನಗರಸಭೆ ವ್ಯಾಪ್ತಿಯಲ್ಲಿ ಪುನಃ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ : ನಿಷೇಧಿತ ಪ್ಲಾಸ್ಟಿಕ್ ವಶ, ದಂಡ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಪುನಃ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗುರುವಾರ ಅಂಗಡಿ-ಮುಂಗಟ್ಟುಗಳ ಮೇಲೆ ಕಾರ್ಯಾಚರಣೆ ನಡೆಸಿತು.
    ಭದ್ರಾವತಿ, ಮೇ. ೫: ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಪುನಃ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗುರುವಾರ ಅಂಗಡಿ-ಮುಂಗಟ್ಟುಗಳ ಮೇಲೆ ಕಾರ್ಯಾಚರಣೆ ಆರಂಭಿಸಿದೆ.
    ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಈ ನಡುವೆಯೂ ನಿಷೇಧಿಸಲಾಗಿರುವ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಪುನಃ ಜಾಗೃತಗೊಂಡಿರುವ ನಗರಸಭೆ ಆಡಳಿತ ಪೌರಾಯುಕ್ತ ಕೆ. ಪರಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾಗಿದೆ.
    ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ತರಕಾರಿ ಮಾರುಕಟ್ಟೆ ಸುತ್ತಮುತ್ತ ಹಾಗು ಮಾಧವಚಾರ್ ವೃತ್ತ, ಸಿ.ಎನ್ ರಸ್ತೆ  ಸೇರಿದಂತೆ ಕೆಲವೆಡೆ ಕಾರ್ಯಾಚರಣೆ ನಡೆಸಲಾಗಿದ್ದು, ನಿಷೇಧಿತ ಪಾಸ್ಟಿಕ್ ಮಾರಾಟದಲ್ಲಿ ತೊಡಗಿದ್ದ ಅಂಗಡಿ-ಮುಂಗಟ್ಟುಗಳಿಗೆ ದಂಡ ವಿಧಿಸಲಾಗಿದೆ. ಮೊದಲ ದಿನ ಸುಮಾರು ೬ ಸಾವಿರ ರು. ದಂಡ ವಸೂಲಾತಿ ಮಾಡಲಾಗಿದ್ದು, ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ.
    ಪೌರಾಯುಕ್ತ ಕೆ. ಪರಮೇಶ್ ಪತ್ರಿಕೆಯೊಂದಿಗೆ ಮಾತನಾಡಿ, ನಿಷೇಧಿಸಲಾಗಿರುವ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮೊದಲ ಹಂತದಲ್ಲಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
    ಕಾರ್ಯಾಚರಣೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ, ಕಿರಿಯ ಆರೋಗ್ಯ ನಿರೀಕ್ಷಕಿ ಶೃತಿ, ಹೊಸಮನೆ ಪೊಲೀಸ್ ಠಾಣಾಧಿಕಾರಿ ಸುನೀತ, ನಗರಸಭೆ ಮೇಸ್ತ್ರಿ ಎನ್. ಗೋವಿಂದ, ದಾನಂ, ವೆಂಕಟೇಶ್, ಎನ್. ಮಂಜುನಾಥ್, ಅಭಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಭಕ್ತರ ಗಮನ ಸೆಳೆದ ಆಕರ್ಷಕ ಸಿಡಿ ಉತ್ಸವ

ಭದ್ರಾವತಿ ಹಳೆನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವ ಊರ ಹಬ್ಬದ ಅಂಗವಾಗಿ ಗುರುವಾರ ಬೆಳಗ್ಗೆ ಮಹಾ ಸಿಡಿ ಉತ್ಸವ ಅದ್ಧೂರಿಯಾಗಿ ಜರುಗಿತು.
    ಭದ್ರಾವತಿ, ಮೇ. ೫ : ಹಳೆನಗರದ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವ ಊರ ಹಬ್ಬದ ಅಂಗವಾಗಿ ಗುರುವಾರ ಬೆಳಗ್ಗೆ ಮಹಾ ಸಿಡಿ ಉತ್ಸವ ಅದ್ಧೂರಿಯಾಗಿ ಜರುಗಿತು.
    ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ ಉತ್ಸವ ಮೆರವಣಿಗೆಯೊಂದಿಗೆ ಆಗಮಿಸಿದ ಶ್ರೀ ಹಳದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಹಾ ಸಿಡಿ ಉತ್ಸವಕ್ಕೆ ಚಾಲನೆ ನೀಡಿದರು.
    ಅಂಬೇಡ್ಕರ್ ನಗರದ ನಿವಾಸಿ ಲಿಂಗಪ್ಪ ಸಿಡಿ ಆಡುವ ಮೂಲಕ ಈ ಬಾರಿ ಗಮನ ಸೆಳೆದರು. ಪ್ರತಿ ೨ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಿಡಿ ಉತ್ಸವ ಆಕರ್ಷಕ ಸಾಂಪ್ರದಾಯಕ ಆಚರಣೆಯಾಗಿದೆ. ಮಕ್ಕಳ ತೊಟ್ಟಿಲು ಸೇವೆ ಸಿಡಿ ಉತ್ಸವದಲ್ಲಿ ಮತ್ತೊಂದು ಆಕರ್ಷಣೆಯಾಗಿದೆ.
    ಸಿಡಿ ಉತ್ಸವ ವೀಕ್ಷಣೆಗೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು. ಗಣ್ಯರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸೇವಾಕರ್ತರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶ್ರೀ ಪಿಳ್ಳಂಗಿ ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.