Saturday, December 7, 2024

ಛಲವಾದಿಗಳ ಸಮಾಜ, ಮೆಸ್ಕಾಂನಲ್ಲಿ ಮಹಾಪರಿನಿರ್ವಾಣ ದಿನ ಆಚರಣೆ

ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಛಲವಾದಿಗಳ ಸಮಾಜ(ಪ.ಜಾ)ದಲ್ಲಿ ಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೮ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು. 
    ಭದ್ರಾವತಿ: ನ್ಯೂಟೌನ್ ಜಯಶ್ರೀ ವೃತ್ತದಲ್ಲಿರುವ ತಾಲೂಕು ಛಲವಾದಿ ಸಮಾಜ(ಪ.ಜಾ) ಹಾಗು ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿ ಸೇರಿದಂತೆ ನಗರದ ವಿವಿಧೆಡೆ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೮ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.
    ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಅಂಬೇಡ್ಕರ್‌ರವರ ಆಶಯ, ಸಂವಿಧಾನ ಮಹತ್ವ ಕುರಿತು ತಿಳಿಸಲಾಯಿತು. 
    ಜೆಪಿಎಸ್ ಮೆಸ್ಕಾಂ ಕಛೇರಿ: 
    ಮೆಸ್ಕಾಂ ವಿಭಾಗೀಯ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ, ಲೆಕ್ಕಾಧಿಕಾರಿ ಅಶ್ವಿನ್‌ಕುಮಾರ್, ಆಂತರಿಕ ಲೆಕ್ಕಾಧಿಕಾರಿ ಮಲ್ಲೇಶ್ ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಗಿರೀಶ್, ಬೀರಪ್ಪ ಮತ್ತು ಮುನಾಫ್, ಹೇಮಣ್ಣ, ಗುರುಪ್ರಸಾದ್ ಸೇರಿದಂತೆ ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. 
    ತಾಲೂಕು ಛಲವಾದಿಗಳ ಸಮಾಜ: 
    ತಾಲೂಕು ಛಲವಾದಿಗಳ ಸಮಾಜ(ಪ.ಜಾ)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಸ್.ಎಸ್ ಭೈರಪ್ಪ, ಡಿ. ನರಸಿಂಹಮೂರ್ತಿ, ಬದರಿನಾರಾಯಣ ಸೇರಿದಂತೆ ಸಮಾಜದ ಇನ್ನಿತರರು ಪಾಲ್ಗೊಂಡಿದ್ದರು. 
 

ಭದ್ರಾವತಿ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೮ನೇ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು 

ಸಾಮಾಜಿಕ ಸಾಮರಸ್ಯ ದಿನ : ಅಂಬೇಡ್ಕರ್ ಭಾವಚಿತ್ರಕ್ಕೆ ಗೌರವ ಸಮರ್ಪಣೆ

ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಫೋರಂ ವತಿಯಿಂದ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ಜಯನಗರ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. 
    ಭದ್ರಾವತಿ: ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಫೋರಂ ವತಿಯಿಂದ ತಾಲೂಕಿನ ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ಜಯನಗರ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. 
    ಪೋರಂ ಸಂಚಾಲಕ ಕೆ.ಎನ್ ಶ್ರೀಹರ್ಷ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರು ಮಾತನಾಡಿ, ಸಂವಿಧಾನದ ಮಹತ್ವವನ್ನು ತಿಳಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನುಡಿನಮನಗಳನ್ನು ಅರ್ಪಿಸಿದರು. ಪ್ರಧಾನಿ ನರೇಂದ್ರ  ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಮಹತ್ವ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸೋಣ ಎಂಬುದಾಗಿ ಮನವಿ ಮಾಡಿದರು.
ಎಸ್.ಸಿ ಮೋರ್ಚಾ ಅಧ್ಯಕ್ಷ  ಹನುಮಂತ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ್ ಉಪ್ಪಾರ್ ಸಂವಿಧಾನ ಪ್ರತಿಜ್ಞಾ ವಿಧಿ ಭೋದಿಸಿದರು.
    ಗ್ರಾಮದ ಪ್ರಮುಖರಾದ ಚಂದ್ರಪ್ಪ, ನಂಜೇಗೌಡ್ರು, ಅಶೋಕ, ಪಾಪಣ್ಣ, ಶಂಕ್ರನಾಯ್ಕ, ಸ್ವಾಮಿನಾಯ್ಕ, ರೆಡ್ಡಿನಾಯ್ಕ,  ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ  ಮೊಸರಳ್ಳಿ ಅಣ್ಣಪ್ಪ, ರವಿಕುಮಾರ್, ಶಿವಮೂರ್ತಿ, ನಟರಾಜ್, ಶಕುಂತಲಾ, ಲೋಲಾಕ್ಷಿ, ರಾಜಗುರು, ಉಮಾದೇವಿ, ಜಯಲಕ್ಷ್ಮಿ, ಕವಿತಾ ರಾವ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. 

ನಗರಸಭೆ ಮಾಜಿ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ

    ಭದ್ರಾವತಿ: ವಾರ್ಡ್ ನಂ. ೨೯ರ ನಗರಸಭೆ ಮಾಜಿ ಸದಸ್ಯರೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿರುವುದಾಗಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ನಗರಸಭೆ ಮಾಜಿ ಸದಸ್ಯ ೪೬ ವರ್ಷದ ಅನಿಲ್ ಕುಮಾರ್ ಹೊಸ ಸಿದ್ದಾಪುರ ಗ್ರಾಮದವರಾಗಿದ್ದು, ಅವರ ಮನೆಯ ಪಕ್ಕದ ನಿವಾಸಿಯಾಗಿರುವ ಆನಿ ಯಾನೆ ಅನಿಲ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
    ಹಲ್ಲೆ ನಡೆಯುವ ಹಿಂದಿನ ದಿನ ರಾತ್ರಿ ಅನಿ ಮದ್ಯಪಾನ ಮಾಡಿಕೊಂಡು ರಸ್ತೆಯಲ್ಲಿ ಇದ್ದಂತಹ ಬೀದಿ ದೀಪಗಳ ವೈಯರ್ ಗಳನ್ನು ಕಿತ್ತು ಹಾಕಿ ದೀಪಗಳನ್ನು ಒಡೆದು ಹಾಕಿದ್ದನು. ಅಲ್ಲದೆ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ರಸ್ತೆಯಲ್ಲಿ ಕೂಗಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಯಾಕೆ ಈ ರೀತಿ ಪದೇ ಪದೇ ಏರಿಯಾದಲ್ಲಿ ಗಲಾಟೆ ಮಾಡುತ್ತೀಯಾ ಎಂದು ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದರು.
    ಇದಾದ ಮರುದಿನ ಬೆಳಿಗ್ಗೆ ೯.೪೦ರ ಸಮಯದಲ್ಲಿ ತೋಟಕ್ಕೆ ಹೋಗಲು ಬೈಕ್ ತೆಗೆಯುತ್ತಿರುವಾಗ ಅನಿ ಅಲಿಯಾಸ್ ಅನಿಲ್ ಈತನು ಏಕಾಏಕಿ ಬಂದವನೇ ನಿನ್ನೆ ನನಗೆ ಬುದ್ಧಿ ಹೇಳಲು ಬರುತ್ತೀಯಾ ಎಂದು ಆರೋಪಿಸಿ ಏಕಾಏಕಿ ಮಚ್ಚಿನಿಂದ ಅನಿಲ್ ಕುಮಾರ್ ಅವರ ತಲೆಯ ಎಡಭಾಗಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ.
    ತಕ್ಷಣವೇ ಸ್ಥಳೀಯರು ಗಲಾಟೆ ಬಿಡಿಸಿರುತ್ತಾರೆ, ನಂತರ ಅನಿಲ್ ಕುಮಾರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯೂಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

ವಿಜೃಂಭಣೆಯಿಂದ ಜರುಗಿದ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ವಿಜೃಂಭಣೆಯಿಂದ ಜರಗಿತು. 
    ಭದ್ರಾವತಿ: ಪ್ರತಿ ವರ್ಷದಂತೆ ಈ ಬಾರಿ ಸಹ ಹಳೇನಗರದ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಶ್ರೀ ಸುಬ್ರಮಣ್ಯ ಷಷ್ಠಿ ಉತ್ಸವ ವಿಜೃಂಭಣೆಯಿಂದ ಜರಗಿತು. 
    ಉತ್ಸವದ ಅಂಗವಾಗಿ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಸುಬ್ರಮಣ್ಯ ಮೂಲಮಂತ್ರದಿಂದ ಹೋಮ ಹಾಗೂ ಶ್ರೀ ರಾಮೇಶ್ವರ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಿಂದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದವರೆಗೆ ನಾದಸ್ವರ ವಾದ್ಯಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ನಂತರ ಪೂರ್ಣಾವತಿ, ಬ್ರಹ್ಮಚಾರಿಗಳ ಪೂಜೆ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ದೇವಸ್ಥಾನ ಆಡಳಿತ ಮಂಡಳಿಯರು ಸೇರಿದಂತೆ ಹಳೇನಗರ, ಹೊಸಮನೆ, ಜನ್ನಾಪುರ, ನ್ಯೂಟೌನ್ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಭಕ್ತರು ಪಾಲ್ಗೊಂಡಿದ್ದರು.