![](https://blogger.googleusercontent.com/img/a/AVvXsEiOJtkQ7mutSgoBQkUeknJfdZAuHG_UkBxcUyMRrXWgvgwUWWYIy0jt1Q4rkxcW_ZO1vfqdd-i1bv71rTC8qZdIGvUP0s5sOb3nvh267MRkIMAF_1nczZ9UtRz08lGGYBzmM6Fyn4UZW15_2mH2ItsGAgk_kysoRNKzrxRgbkGS3o6X4KXFn47tjD0MwA=w400-h184-rw)
ಭದ್ರಾವತಿಯಲ್ಲಿ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಗರಸಭಾ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿ ವಿಶೇಷವಾಗಿ ರೂಪಿಸಲಾಗಿರುವ ನೋಟ್ ಬುಕ್ ವಿತರಿಸಲಾಯಿತು.
ಭದ್ರಾವತಿ, ಜೂ. ೧೭ : ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದರಿಂದ ನಮ್ಮ ಅಭಿಮಾನ ಹಾಗು ಗೌರವ ಹೆಚ್ಚಾಗುತ್ತದೆ. ಪ್ರಸ್ತುತ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ನಗರಸಭಾ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಅವರು ಶನಿವಾರ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ನ್ಯೂಟೌನ್ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಬಹಳಷ್ಟು ಮಂದಿ ಉನ್ನತ ಸ್ಥಾನಕ್ಕೇರಿದ್ದಾರೆ. ಸರ್ಕಾರಿ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಪ್ರತಿಭಾವಂತ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಉಚಿತ ನೋಟ್ ಬುಕ್ ವಿತರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಕಲ್ಪವೃಕ್ಷ ಸೇವಾ ಟ್ರಸ್ಟ್ ಕೇವಲ ಎರಡು ವರ್ಷಗಳ ಹಿಂದೆ ಆರಂಭಗೊಂಡಿದ್ದು, ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡು ಮಾದರಿಯಾಗಿ ಗುರುತಿಸಿಕೊಂಡಿದೆ. ಟ್ರಸ್ಟ್‌ನಲ್ಲಿರುವ ಪ್ರತಿಯೊಬ್ಬರೂ ಸಹ ಸೇವಾ ಮನೋಭಾವನೆಯೊಂದಿಗೆ ಮುನ್ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಲಾಜರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಅರಳಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರಪ್ಪ ಮತ್ತು ಸಮಾಜ ಸೇವಕ ಎಂ.ಜಿ ರಾಮಚಂದ್ರನ್, ಟ್ರಸ್ಟ್ ಪದಾಧಿಕಾರಿಗಳಾದ ಎನ್.ಆರ್ ಜಯರಾಜ್, ಉಪಾಧ್ಯಕ್ಷ ರಾಮಪ್ಪ ವಿ. ಮುನೇನಕೊಪ್ಪ, ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಸಹಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್ ಮತ್ತು ಖಜಾಂಚಿ ಮಹೇಶ್ವರಪ್ಪ, ನಿರ್ದೇಶಕರಾದ ವಿ.ಎಚ್ ಶಿವಣ್ಣ, ಎಸ್.ಎಚ್ ಹನುಮಂತರಾವ್, ಎಲ್. ಬಸವರಾಜಪ್ಪ, ಡಿ. ಸುಬ್ರಮಣಿ, ನಾಗರಾಜ, ಆರ್. ಕಾಮಾಕ್ಷಿ, ಎನ್. ರೂಪ, ಎ. ವಿಲ್ಸನ್ ಬಾಬು ಮತ್ತು ಕೆ. ಆಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕರ್ನಾಟಕ ರತ್ನ, ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಮುಖಪುಟ ಹಾಗು ಭದ್ರಾ ಜಲಾಶಯ ಹಿಂಬದಿ ಪುಟ ಹೊಂದಿರುವ ವಿಶೇಷವಾಗಿ ರೂಪಿಸಲಾಗಿರುವ ಒಟ್ಟು ೩ ಸಾವಿರ ನೋಟ್ ಬುಕ್‌ಗಳನ್ನು ೮ ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿತರಿಸಲಾಯಿತು.