
ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೪ನೀ ಜನ್ಮದಿನಾಚರಣೆ ಪತ್ರಕರ್ತ, ಲೇಖಕ ಟೆಲೆಕ್ಸ್ ಎನ್. ರವಿಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ದೇಶದ ಜಾತಿವ್ಯವಸ್ಥೆಯಿಂದ ಘೋರ ಅವಮಾನ, ದೌರ್ಜನ್ಯಗಳನ್ನು ಅನುಭವಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾವು ಬರೆದ ಸಂವಿಧಾನದಲ್ಲಿ ಯಾವ ಜಾತಿಗಳ ವಿರುದ್ದವೂ ಕೇಡು, ಸೇಡು ಬಯಸದೆ ಎಲ್ಲಾ ಜಾತಿ, ಧರ್ಮ ವರ್ಗಗಳಿಗೂ ಸಮಾನ ನ್ಯಾಯವನ್ನು ಕಲ್ಪಿಸುವ ಮೂಲಕ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ ಎಂದು ಪತ್ರಕರ್ತ, ಲೇಖಕ ಟೆಲೆಕ್ಸ್ ಎನ್. ರವಿಕುಮಾರ್ ಹೇಳಿದರು.
ಅವರು ನಗರಸಭೆ ವ್ಯಾಪ್ತಿಯ ಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್, ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ೧೩೪ನೀ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅವಮಾನ, ನೋವು, ದೌರ್ಜನ್ಯಗಳನ್ನು ನುಂಗಿ ಈ ದೇಶದ ದಲಿತರ, ದಮನಿತರ ಪಾಲಿಗೆ ಬದುಕನ್ನು ರೂಪಿಸಿಕೊಟ್ಟವರು. ಜಾತೀಯತೆಯಿಂದ ಕುರುಡಾಗಿದ್ದ ಭಾರತಕ್ಕೆ ಅರಿವಿನ ಕಣ್ಣುಗಳನ್ನು ಕೊಟ್ಟ ನಿಜ ನಾಯಕ, ತಾಯಿಯಂತೆ ಎಲ್ಲಾ ನೋವುಗಳನ್ನು ಒಡಳಿನಲ್ಲಿಟ್ಟುಕೊಂಡು ಸರ್ವ ಸಮಾನತೆಯ ದೇಶ ರೂಪಿಸಿದ ಮಹಾನ್ ನಾಯಕ ಅಂಬೇಡ್ಕರ್. ಭಾರತದ ಮಹಾತಾಯಿಯೇ ಅಂಬೇಡ್ಕರ್ ಆಗಿದ್ದಾರೆ ಎಂದರು.
ಅಂಬೇಡ್ಕರ್ ಅವರ ಅಸ್ತಿತ್ವ, ಅಸ್ಮಿತೆಯನ್ನು ಹತ್ತಿಕ್ಕಲು ಹಿಂದಿನಿಂದಲೂ ಕುತಂತ್ರಗಳು ನಡೆಯುತ್ತಲೇ ಬಂದಿವೆ. ಆದರೆ ಹತ್ತಿಕ್ಕಿದಷ್ಟು ಅಂಬೇಡ್ಕರ್ ಎದ್ದು ನಿಲ್ಲುತ್ತಿದ್ದಾರೆ. ಅವರನ್ನು ನಿರಾಕರಿಸಿದಷ್ಟು ಆವರಿಸಿಕೊಳ್ಳುತ್ತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನವನ್ನೇ ಬರೆದಿಲ್ಲ, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಶೋಕಿಯಾಗಿದೆ ಎಂದವರೇ ಇಂದು ಅಂಬೇಡ್ಕರ್ ಅವರನ್ನು ಎತ್ತಿಕೊಂಡು ಮೆರವಣಿಗೆ ಹೊರಟಿದ್ದಾರೆ. ಇದು ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನಕ್ಕಿರುವ ತಾಕತ್ತು. ಅಂಬೇಡ್ಕರ್ ಎಂದಿಗೂ ಅಳಿಸಲಾಗದ ಮಹಾ ಪ್ರಭೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನದ ಫಲವಾಗಿ ಶಿಕ್ಷಣ, ಉದ್ಯೋಗ, ನ್ಯಾಯ, ಹಕ್ಕುಗಳನ್ನು ಪಡೆದ ಜನಸಮುದಾಯಗಳೇ ಇಂದು ಅಂಬೇಡ್ಕರ್ ಅವರ ಸಿದ್ಧಾಂತ ವಿರೋಧಿಗಳ, ಜಾತಿವಾದಿಗಳ, ಕೋಮುವಾದಿಗಳ ಜೊತೆ ನಿಲ್ಲುತ್ತಿವೆ. ಮೀಸಲಾತಿ ಫಲಾನುಭವಿಗಳೇ ಮೀಸಲಾತಿ ವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುತ್ತಿರುವುದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ಸಂಶೋಧಕ ಹನುಮಂತಪ್ಪ, ಡಾ.ಬಿಆರ್ ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ ನಿದೇಶಕಿಯರಾದ ನೇತ್ರಾವತಿ ಸುಭಾಷ್, ಸಾವಿತ್ರಿಗಣೇಶಪ್ಪ, ಪತ್ರಕರ್ತ ಶಿವಶಂಕರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಂದ ಅಂಬೇಡ್ಕರ್ ಜೀವನ ಚರಿತ್ರೆಯ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಅಂಬೇಢ್ಕರ್ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.