Saturday, April 10, 2021

ನಗರಸಭೆ ಚುನಾವಣೆ : ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಹೆಚ್ಚಿದ ಆಕಾಂಕ್ಷಿಗಳ ಪೈಪೋಟಿ

ಕಾಂಗ್ರೆಸ್-ಜೆಡಿಎಸ್‌ನಲ್ಲಿ ವಿಳಂಬ ಧೋರಣೆ, ಬಿಜೆಪಿಯಲ್ಲಿ ಕಾದು ನೋಡುವ ತಂತ್ರ


    ಭದ್ರಾವತಿ, ಏ. ೧೦: ನಗರಸಭೆ ಚುನಾವಣೆ ಪ್ರಕ್ರಿಯೆಗಳು ಏ.೮ ರಿಂದ ಚುರುಕಿನಿಂದ ನಡೆಯುತ್ತಿದ್ದು, ಈ ನಡುವೆ ಬಿಜೆಪಿ ಹೊರತುಪಡಿಸಿ ಉಳಿದ ರಾಜಕೀಯ ಪಕ್ಷಗಳು ಅಧಿಕೃತ ಅಭ್ಯರ್ಥಿಗಳ ಘೋಷಣೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ.
    ಈಗಾಗಲೇ ನಗರಸಭೆ ೩೫ ವಾರ್ಡ್‌ಗಳ ಪೈಕಿ ೨೧ ವಾರ್ಡ್‌ಗಳಿಗೆ ಬಿಜೆಪಿ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೂ ೧೪ ವಾರ್ಡ್‌ಗಳು ಬಾಕಿ ಉಳಿದಿವೆ. ಉಳಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದುವರೆಗೂ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ನಡುವೆ ಆಮ್ ಆದ್ಮಿ ಪಾರ್ಟಿ ಹಾಗು ಜನತಾದಳ(ಸಂಯುಕ್ತ) ಕರ್ನಾಟಕ ಮತ್ತು ವೆಲ್‌ಫೇರ್ ಪಾರ್ಟಿ ಇಂಡಿಯಾ ಪಕ್ಷದ ಅಭ್ಯರ್ಥಿಗಳು ಸಹ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ದಿನ ಕಳೆದಂತೆ ಚುನಾವಣೆ ಕುತೂಹಲ ಪಡೆದುಕೊಳ್ಳುತ್ತಿದೆ.
     ಮತ್ತೊಂದೆಡೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗುತ್ತಿದೆ.  ಮಾತೃಪಕ್ಷದಲ್ಲಿ ಸ್ಪರ್ಧೆಗೆ ಕೈತಪ್ಪುವ ಆತಂಕ ಹೆಚ್ಚಾಗುತ್ತಿದ್ದು, ಅಸಮಾಧಾನಗೊಂಡವರನ್ನು ಸೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಏ.೧೫ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ಬಹುತೇಕ ಪಕ್ಷಗಳು ಸೋಮವಾರದ ನಂತರ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.
      ಜೆಡಿಎಸ್‌ನಲ್ಲಿ ಆತಂಕ :
    ರಾಜಕೀಯ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಕೆಲವು ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಬೆಂಬಲ ವ್ಯಕ್ತಪಡಿಸುವ ಜೊತೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದರು. ಆದರೆ ಕ್ಷೇತ್ರದಲ್ಲಿ ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಉಂಟಾದ ರಾಜಕೀಯ ಬೆಳವಣಿಗೆಗಳ ಪರಿಣಾಮ  ಜೆಡಿಎಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದು, ಇದರ ಪರಿಣಾಮ ಇದೀಗ ಪಕ್ಷದಲ್ಲಿ ಅಸಮಾಧಾನಿತರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಹಲವು ತಿಂಗಳುಗಳಿಂದ  ಸಿದ್ದತೆ ನಡೆಸಿಕೊಂಡು ಬಂದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಸ್ಪರ್ಧೆಗೆ ಅವಕಾಶ ಸಿಗದಿರುವುದು ಮನದಟ್ಟು ಆಗುತ್ತಿದ್ದಂತೆ ಇದೀಗ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದಾಗಿ ಜೆಡಿಎಸ್ ಪಕ್ಷಕ್ಕೆ ಒಂದೆಡೆ ಆತಂಕ ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
       ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ :
    ಎಲ್ಲಾ ಪಕ್ಷಗಳಿಗಿಂತ ಮೊದಲೇ ೨೧ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಭಾರತೀಯ ಜನತಾ ಪಕ್ಷ ಉಳಿದಿರುವ ಪ್ರಮುಖ ೧೪ ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ಘೋಷಣೆ ನಂತರ ಈ ವಾರ್ಡ್‌ಗಳಿಗೆ ಅಭ್ಯರ್ಥಿಗಳ ಘೋಷಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.  

ಅಪಘಾತ : ಬೈಕ್ ಸವಾರ ಸಾವು

ಭದ್ರಾವತಿ, ಏ. ೧೦: ಬೈಕ್ ಸವಾರನೋರ್ವ ಅಪಘಾತದಲ್ಲಿ ಮೃತಪಟ್ಟಿರುವ  ಘಟನೆ ಶುಕ್ರವಾರ ರಾತ್ರಿ ಹೊಸಮನೆ ಹನುಮಂತ ನಗರ ವ್ಯಾಪ್ತಿಯಲ್ಲಿ ನಡೆದಿದೆ.
  ಹೊಸಮನೆ ವಿಜಯನಗರ ನಿವಾಸಿ ಪ್ರಶಾಂತ(೪೧) ಎಂಬಾತ ಮೃತಪಟ್ಟಿದ್ದು, ಇವರು ಬೈಕ್‌ನಲ್ಲಿ ಬರುವಾಗ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತ ನಡೆದ ತಕ್ಷಣ ಕಾರು ಚಾಲಕ ಸ್ಥಳದಲ್ಲಿಯೇ ಕಾರು ಬಿಟ್ಟು ಪರಾರಿಯಾಗಿದ್ದು, ಕಾರು ಕೂಡ್ಲಿಗೆರೆ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮದ ನಿವಾಸಿಯೊಬ್ಬರಿಗೆ ಸೇರಿದೆ ಎನ್ನಲಾಗಿದೆ. ಕಾರಿನ ಒಳಭಾಗದಲ್ಲಿ ಕಾರು ಮಾಲೀಕನ ಪುತ್ರ ನಿದ್ರೆಗೆ ಜಾರಿದಾಗ ಈ ಘಟನೆ ನಡೆದಿದೆ. ಆದರೆ ಅಪಘಾತ ನಡೆದಿರುವ ಘಟನೆ ಆತನ ಅರಿವಿಗೆ ಬಾರದೆ ಕಾರಿನಲ್ಲಿಯೇ ಉಳಿದುಕೊಂಡಿದ್ದು, ಸಂಚಾರಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಈ ನಡುವೆ ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯತನ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.  

ರಮೇಶ್ ಶಂಕರಘಟ್ಟ ಕಾಂಗ್ರೆಸ್ ಸೇರ್ಪಡೆ ಪಕ್ಷಕ್ಕೆ ಬಲ ತಂದಿದೆ - ಶಾಸಕ ಬಿ.ಕೆ.ಸಂಗಮೇಶ್

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶಂಕರಘಟ್ಟದ ರಮೇಶ್‌ರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.
     ಭದ್ರಾವತಿ, ಏ. ೧೦: ಸಹಕಾರಿ ಧುರೀಣ ಆರ್.ಎಂ ಮಂಜುನಾಥ್ ಗೌಡ ಹಾಗೂ ತಾಲ್ಲೂಕಿನ ರಮೇಶ್ ಶಂಕರಘಟ್ಟರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಪಕ್ಷದ ಬಲ ಮತ್ತಷ್ಟು ಹೆಚ್ಚಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ ಹೇಳಿದರು.
    ಅವರು ಶನಿವಾರ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಶಂಕರಘಟ್ಟದ ರಮೇಶ್‌ರನ್ನು ತಮ್ಮ ನಿವಾಸದಲ್ಲಿ ಅಭಿನಂದಿಸಿ ಮಾತನಾಡಿದರು.
ರಮೇಶ್‌ರವರು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಉತ್ತಮ ಸ್ಫರ್ಧೆ ನೀಡಿದ್ದರು.  ಅಲ್ಲದೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ  ಉತ್ತಮ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ.  ಶಿಕ್ಷಣ ಹಾಗೂ ಪತ್ರಿಕಾ ಕ್ಷೇತ್ರದಲ್ಲಿನ  ಇವರ ಅನುಭವ ಪಕ್ಷ ಸಂಘಟನೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ, ಮುಖಂಡರಾದ ಸಿ.ಎಂ ಖಾದರ್, ತಾವರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ವರಪ್ಪ, ಸಿಂಗನಮನೆ ಗ್ರಾಮ ಪಂಚಾಯತಿ ಸದಸ್ಯರಾದ ಅವಿನಾಶ್, ಶಿವಶಂಕರ್, ಮಾಜಿ ಸದಸ್ಯರಾದ ಶಶಿಕುಮಾರ್, ರುದ್ರೇಶ್, ಶ್ರೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.