Monday, July 13, 2020

ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ : ಗುಣಮಟ್ಟದ ಕಾಮಗಾರಿಗೆ ಆಗ್ರಹ


ಭದ್ರಾವತಿ ನಗರಸಭೆ ವಾರ್ಡ್ ನಂ.೬ರ ಶ್ರೀ ಬಸವೇಶ್ವರ ಸಭಾ ಭವನದ ಬಳಿ ನಡೆಯುತ್ತಿರುವ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು. 
ಭದ್ರಾವತಿ, ಜು. ೧೩: ನಗರಸಭೆ ವಾರ್ಡ್ ೬ರ ವ್ಯಾಪ್ತಿಯ ಶ್ರೀ ಬಸವೇಶ್ವರ ಸಭಾ ಭವನದ ಬಳಿ ಕಳೆದ ಸುಮಾರು ೧ ತಿಂಗಳಿನಿಂದ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯತನಿಂದ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 
ಬಾಕ್ಸ್ ಮಾದರಿ ಚರಂಡಿ ಕಾಮಗಾರಿಯಲ್ಲಿ ಕಾಂಕ್ರೀಟ್‌ಗೆ ಅಳವಡಿಸಲಾಗಿರುವ ಕಬ್ಬಿಣದ ಸರಳುಗಳನ್ನು ಹೊರ ತೆಗೆಯಲಾಗಿದೆ. ತಳಮಟ್ಟದಲ್ಲಿ ಯಾವುದೇ ಭದ್ರತೆ ಇಲ್ಲದಂತೆ ಕಾಮಗಾರಿ ನಿರ್ವಹಿಸಲಾಗಿದೆ. ಎರಡು ಬದಿಯ ಕಾಂಕ್ರೀಟ್ ಯಾವುದೇ ಆಧಾರವಿಲ್ಲದೆ ಕೆಳಗೆ ಕುಸಿದು ಬೀಳಲಿದೆ ಎಂದು ಸ್ಥಳೀಯರು ಆರೋಪಿಸಿದರು. 


ಭದ್ರಾವತಿ ನಗರಸಭೆ ವಾರ್ಡ್ ನಂ.೬ರ ಶ್ರೀ ಬಸವೇಶ್ವರ ಸಭಾ ಭವನದ ಬಳಿ ನಡೆಯುತ್ತಿರುವ ಬಾಕ್ಸ್ ಮಾದರಿ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಹಿನ್ನಲೆಯಲ್ಲಿ ಸ್ಥಳೀಯರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
     ಇದೀಗ ಕೈಗೊಳ್ಳುತ್ತಿರುವ ಕಾಮಗಾರಿಯನ್ನು ನೋಡಿದರೆ ಈ ಹಿಂದೆ ಕೈಗೊಳ್ಳಲಾಗಿದ್ದ ಕಾಮಗಾರಿಯೇ ಬಹಳಷ್ಟು ಉತ್ತಮವಾಗಿತ್ತು. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಪ್ರಸ್ತುತ ನಡೆದಿರುವ ಕಾಮಗಾರಿಯನ್ನು ನೆಲಸಮಗೊಳಿಸಿ ಹೊಸದಾಗಿ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಕೆಲವು ದಿನಗಳ ಹಿಂದೆ ಈ ಸಂಬಂಧ ಸ್ಥಳೀಯರು ಪ್ರತಿಭಟನೆ ನಡೆಸಿ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಆಗ್ರಹಿಸಿದ್ದರು. ಆದರೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. 

ತಾಂಡ ಸೀಲ್‌ಡೌನ್ : ಗ್ರಾಮಸ್ಥರ ನೆರವಿಗೆ ಮುಂದಾಗಲು ಆಗ್ರಹ


ಭದ್ರಾವತಿ, ಜು. ೧೩: ಮಹಾಮಾರಿ ಕೊರೋನಾ ವೈರಸ್ ಸೋಂಕು ತಾಲೂಕಿನ ಕಾರೇಹಳ್ಳಿ ತಾಂಡ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದು, ತಕ್ಷಣ ಗ್ರಾಮಸ್ಥರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ತಾಲೂಕು ಬಂಜಾರ ಯುವಕ ಸಂಘ ಒತ್ತಾಯಿಸಿದೆ. 
ತಾಂಡದಲ್ಲಿ ಪರಿಶಿಷ್ಟ ಜಾತಿಯ ಲಂಬಾಣಿ ಕುಟುಂಬದವರು ಕೂಲಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಸೀಲ್‌ಡೌನ್ ಪರಿಣಾಮ ಕಳೆದ ೪ ದಿನಗಳಿಂದ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಈ ಕುಟುಂಬದವರ ನೆರವಿಗೆ ಸರ್ಕಾರ ಮುಂದಾಗಬೇಕು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಗೌರವಾಧ್ಯಕ್ಷ ಶಂಕ್ರಾನಾಯ್ಕ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಮತ್ತು ಖಜಾಂಚಿ ನಾಗಾನಾಯ್ಕ ಆಗ್ರಹಿಸಿದ್ದಾರೆ. 

ಕೊರೊನಾ ಸೋಂಕು ಏರಿಕೆ : ಪುನಃ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

ಬೆಳಿಗ್ಗೆ ೨, ರಾತ್ರಿ ೫ ಒಂದೇ ದಿನ ೭ ಪ್ರಕರಣಗಳು ಪತ್ತೆ 

ಭದ್ರಾವತಿ ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಮೊದಲ ಹಂತವಾಗಿ ಇದೀಗ ಸೋಮವಾರದಿಂದ ಪುನಃ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. 
ಭದ್ರಾವತಿ, ಜು. ೧೩: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಮೊದಲ ಹಂತವಾಗಿ ಇದೀಗ ಸೋಮವಾರದಿಂದ ಪುನಃ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. 
  ತಾಲೂಕಿನ ಬಹುತೇಕ ಪ್ರಕರಣಗಳಲ್ಲಿ ಹೊರಗಿನಿಂದ ಬಂದವರಿಂದ ಸೋಂಕು ಹರಡುತ್ತಿರುವುದು ಕಂಡು ಬರುತ್ತಿದೆ. ಲಾಕ್‌ಡೌನ್ ಸಡಿಲಗೊಂಡ ನಂತರ ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು,  ಈ ಹಿನ್ನಲೆಯಲ್ಲಿ ಚೆಕ್ ಪೋಸ್ಟ್‌ಗಳಲ್ಲಿ ತಾಲೂಕಿಗೆ ಆಗಮಿಸುವ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. 

      
        ಪ್ರಸ್ತುತ ಕಾರೇಹಳ್ಳಿ, ಹಂಚಿನ ಸಿದ್ದಾಪುರ ಚೆಕ್ ಪೋಸ್ಟ್‌ಗಳು ಕಾರ್ಯಾರಂಭಗೊಂಡಿವೆ.  ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್‌ಗಳಲ್ಲಿ ಬೀಡುಬಿಟ್ಟಿದ್ದು, ಮತ್ತಷ್ಟು ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಇ.ಓ ಮಂಜುನಾಥ್ ಚೆಕ್ ಪೋಸ್ಟ್‌ಗಳ ಪರಿಶೀಲನೆ ನಡೆಸಿದರು. 
ಒಂದೇ ದಿನ ೭ ಸೋಂಕು ಪತ್ತೆ: 
ಭಾನುವಾರ ಒಂದೇ ದಿನ ೭ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಬೆಳಿಗ್ಗೆ ೨, ರಾತ್ರಿ ೫ ಪ್ರಕರಣಗಳು ಪತ್ತೆಯಾಗಿವೆ. ಭೋವಿ ಕಾಲೋನಿಯಲ್ಲಿ ೫೮ ವರ್ಷದ ವ್ಯಕ್ತಿಗೆ, ಹುತ್ತಾ ಕಾಲೋನಿ ಚಂದ್ರಾಲಯ ಬಳಿ ೬೦ ವರ್ಷದ ವ್ಯಕ್ತಿಗೆ, ತರೀಕೆರೆ ರಸ್ತೆಯಲ್ಲಿ ೧೯ ವರ್ಷದ ಯುವಕನಿಗೆ, ಆನವೇರಿ ಬಳಿ ಇಟ್ಟಿಗೆಹಳ್ಳಿಯಲ್ಲಿ ೩೦ ವರ್ಷ ಮಹಿಳೆಗೆ ಹಾಗೂ ಹೊಳೆಹೊನ್ನೂರು ಪೇಟೆ ಬೀದಿಯಲ್ಲಿ ೩೨ ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. 
ಸೋಂಕು ಪ್ರಕರಣಗಳು ಪತ್ತೆಯಾದ ಸ್ಥಳದ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಘೋಷಿಸಲಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಪ್ರದೇಶಗಳ ಸಂಖ್ಯೆ ಏರಿಕೆಯಾಗುತ್ತಿವೆ. 

ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಭದ್ರಾವತಿ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಸುಮಾರು ೨೦ ಲಕ್ಷ ರು. ವೆಚ್ಚದ ಕಾಮಗಾರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಭೂಮಿಪೂಜೆ ನೆರವೇರಿಸಿದರು. 
ಭದ್ರಾವತಿ, ಜು. ೧೩: ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಚಾಲನೆ ನೀಡಿದರು. 
ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಸುಮಾರು ೨೦ ಲಕ್ಷ ರು. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. 
ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಬಸವರಾಜ್, ಶ್ರೀ ಅಕ್ಕಮಹಾದೇವಿ ಸಮುದಾಯ ಭವನದ ಪ್ರಮುಖರು ಉಪಸ್ಥಿತರಿದ್ದರು. 
ಭದ್ರಾವತಿ ಜನ್ನಾಪುರ ೩೩ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ  ಸಾರ್ವಜನಿಕ ಹೈಟೆಕ್ ಶೌಚಾಲಯ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಉದ್ಘಾಟಿಸಿದರು. ಮುಖಂಡ ಕಾಂತರಾಜ್ ಶಾಸಕರು, ಪೌರಾಯುಕ್ತರು ಹಾಗೂ ಗುತ್ತಿಗೆದಾರರನ್ನು ಅಭಿನಂದಿಸಿದರು. 
ಜನ್ನಾಪುರ ವಾರ್ಡ್ ೩೩ರ ಜಯಶ್ರೀ ವೃತ್ತದಲ್ಲಿ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಹೈಟೆಕ್ ಶೌಚಾಲಯ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ನಿರ್ಮಿಸಲಾಗಿರುವ ೧೦ ಲಕ್ಷ ರು. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ನಗರಸಭೆ ಪೌರಾಯುಕ್ತ ಮನೋಹರ್, ಮುಖಂಡರಾದ ಕಾಂತರಾಜ್, ಕಬಡ್ಡಿ ಕೃಷ್ಣೇಗೌಡ, ಅನ್ವರ್ ಆಲಿ, ಆಟೋ ಶಂಕರ್ ಸೇರಿದಂತೆ ಸ್ಥಳೀಯರು ಹಾಗೂ ಗುತ್ತಿಗೆದಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.