Sunday, December 25, 2022

ವಿಜೃಂಭಣೆಯಿಂದ ನಡೆದ ಶ್ರೀ ಪೇಜಾವರ ವಿಶ್ವೇಶತೀರ್ಥರ ಆರಾಧಾನ ಮಹೋತ್ಸವ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ, ಶ್ರೀ ವಾದಿರಾಜಸ್ವಾಮಿಗಳ ಮಠದಲ್ಲಿ ಗುರುರಾಜ ಸೇವಾ ಸಮಿತಿ ಹಾಗೂ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಶಿಷ್ಯವರ್ಗದವರಿಂದ  ಪೇಜಾವರ ವಿಶ್ವೇಶತೀರ್ಥರ ೩ನೇ ವರ್ಷದ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಡಿ. ೨೫ :  ಜಾತಿ, ಧರ್ಮ, ಮತ ಬೇಧಭಾವವಿಲ್ಲದೆ ಎಲ್ಲರ ಪ್ರೀತಿ, ಅಭಿಮಾನ, ಗೌರವಗಳಿಗೆ ಪಾತ್ರರಾಗಿದ್ದ ಶ್ರೀ ಪೇಜಾವರ ವಿಶ್ವೇಶ್ವತೀರ್ಥರ ಜೀವನಾದರ್ಶ ಎಲ್ಲರಿಗೂ ಅನುಕರಣೀಯ ಎಂದು ಪಂಡಿತರಾದ ಮೃತ್ತಿಕಾ ಗುರುರಾಜಾಚಾರ್ ಹೇಳಿದರು.
    ಅವರು ಭಾನುವಾರ ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ, ಶ್ರೀ ವಾದಿರಾಜಸ್ವಾಮಿಗಳ ಮಠದಲ್ಲಿ ಗುರುರಾಜ ಸೇವಾ ಸಮಿತಿ ಹಾಗೂ ಪೇಜಾವರ ವಿಶ್ವೇಶತೀರ್ಥ ಶ್ರೀಪಾದಂಗಳವರ ಶಿಷ್ಯವರ್ಗದವರಿಂದ ಹಮ್ಮಿಕೊಳ್ಳಲಾಗಿದ್ದ ಪೇಜಾವರ ವಿಶ್ವೇಶತೀರ್ಥರ ೩ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಉಪನ್ಯಾಸ ನೀಡಿದರು. ಪೇಜಾವರ ಶ್ರೀಗಳು  ಬಾಲ್ಯದಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ ವಿದ್ಯಾಮಾನ್ಯ ತೀರ್ಥರಿಂದ ವಿದ್ಯಾಭ್ಯಾಸ ಮಾಡಿ ವಿಶ್ವೇಶತೀರ್ಥರೆಂದು ನಾಮಾಂಕಿತರಾಗಿ, ೪ ಬಾರಿ ಪರ‍್ಯಾಯದಲ್ಲಿ ಸರ್ವಜ್ಞಪೀಠವನ್ನಲಂಕರಿಸಿ ಶ್ರೀಕೃಷ್ಣನನ್ನು ಪೂಜಿಸಿದ ಮಹಾಮಹಿಮರು. ತಪಸ್ಸು, ವಿದ್ಯಾದಾನ, ಸಮಾಜದ ಎಲ್ಲಾ ವರ್ಗಗಳ ಜನರ ಹಿತಕ್ಕಾಗಿ ದೇಶಾದ್ಯಂತ ಸಂಚರಿಸಿ ಜಾತಿ, ಮತ ಬೇಧಭಾವವಿಲ್ಲದೆ ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸಿ ಯತಿಕುಲಕ್ಕೆ ಚಕ್ರವರ್ತಿ ಎಂಬ ರೀತಿ ಬಾಳಿದ ಮಹಾಮಹಿಮರು. ಅವರು ತೋರಿದ ದಾರಿಯಲ್ಲಿ ನಾವುಗಳು ಸಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
    ಶ್ರೀ ಮಠದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ನಂತರ ಹಳೇನಗರದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪೇಜಾವರ ಶ್ರೀಗಳ ಭಾವಚಿತ್ರ ಹಾಗು ಅವರ ಪಾದುಕೆಯನ್ನು ಹಿಡಿದು ಚಂಡೆ ವಾದ್ಯದೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಪೇಜಾವರವಿಶ್ವೇಶ್ವರ ತೀರ್ಥರಿಗೆ ಜೈಕಾರ ಹಾಕುವ ಮೂಲಕ ಉತ್ಸವ ನಡೆಸಲಾಯಿತು.
    ಮಠಕ್ಕೆ ಆಗಮಿಸಿದ ಶ್ರೀಗಳ ಪಾದುಕೆ ಹಾಗೂ ಭಾವಚಿತ್ರಕ್ಕೆ ಪುಷ್ಪವೃಷ್ಠಿಯೊಂದಿಗೆ ಮಠದ ಪ್ರಾಕಾರದಲ್ಲಿ ಉತ್ಸವ ನಡೆಸಿ ಶ್ರೀಗಳ ಪಾದಕಾ ಪೂಜೆನಂತರ ಮಹಿಳಾ ಭಜನಾ ಮಂಡಳಿಯವರು ಶ್ರೀಗಳ ಕುರಿತ ಹಾಡು ಸೇರಿದಂತೆ ದಾಸರು ರಚಿಸಿದ ಕೀರ್ತನೆಗಳನ್ನು ಹಾಡಿದರು. ಮಹಾಮಂಗಳಾರತಿ, ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
    ಪಂಡಿತರಾದ ಗೊಪಾಲಾಚಾರ್, ಸತ್ಯನಾರಾಯಣಾಚಾರ್, ಮಾಧುರಾವ್, ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳೀಧರ ತಂತ್ರಿ, ರಮಾಕಾಂತ್, ಪವನಕುಮಾರ್, ಶ್ರೀನಿಧಿ, ಜಯತೀರ್ಥ, ಶೇಷಗಿರಿ, ಜಯಶ್ರೀ, ಶೋಭಾ, ಪರಿಮಳ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.  

ವಿಜೃಂಭಣೆಯಿಂದ ಜರುಗಿದ ಏಸು ಕ್ರಿಸ್ತರ ಜನ್ಮದಿನಾಚರಣೆ

ಭದ್ರಾವತಿಯಲ್ಲಿ ಏಸು ಕ್ರಿಸ್ತರ ಜನ್ಮದಿನಾಚರಣೆ ಕ್ರಿಸ್‌ಮಸ್ ಅಂಗವಾಗಿ ಶನಿವಾರ ರಾತ್ರಿ ಚರ್ಚ್‌ಗಳು ವಿದ್ಯುತ್ ದೀಪಗಳ ಆಲಂಕಾರದಿಂದ ಕಂಗೊಳಿಸಿದವು.
    ಭದ್ರಾವತಿ, ಡಿ. ೨೫ : ನಗರದಲ್ಲಿ ಕ್ರೈಸ್ತ ಬಾಂಧವರು ಏಸು ಕ್ರಿಸ್ತರ ಜನ್ಮದಿನಾಚರಣೆ ಕ್ರಿಸ್‌ಮಸ್ ಭಾನುವಾರ ವಿಜೃಂಭಣೆಯಿಂದ ಆಚರಿಸುವ ಮೂಲಕ ಹಬ್ಬದ ಶುಭಾಶಯ ಹಂಚಿಕೊಂಡರು.
    ಕ್ರಿಸ್‌ಮಸ್ ಆಚರಣೆ ಹಿನ್ನಲೆಯಲ್ಲಿ ಶನಿವಾರ ರಾತ್ರಿಯಿಂದಲೇ ನಗರದ ಎಲ್ಲಾ ಚರ್ಚ್‌ಗಳಲ್ಲಿ ವಿದ್ಯುತ್ ಅಲಂಕಾರ ಕೈಗೊಳ್ಳಲಾಗಿತ್ತು. ಭಾನುವಾರ ಬೆಳಿಗ್ಗೆ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮಗುರುಗಳು ಕ್ರಿಸ್‌ಮಸ್ ಸಂದೇಶ ನೀಡಿದರು. ಕೊನೆಯಲ್ಲಿ ಕೇಕ್ ವಿತರಿಸಲಾಯಿತು.
    ಅಲ್ಲದೆ ಚರ್ಚ್ ಹೊರಭಾಗದಲ್ಲಿ ಏಸ್‌ಕ್ರಿಸ್ತರ ಜನ್ಮವೃತ್ತಾಂತ ಸಾರುವ ಆಕರ್ಷಕವಾದ ಗೊದೋಳಿಗಳನ್ನು ನಿರ್ಮಿಸಲಾಗಿತ್ತು. ಕ್ರೈಸ್ತ ಬಾಂಧವರಿಗೆ ಇತರೆ ಧರ್ಮಿಯರು ಹಬ್ಬದ ಶುಭಾಶಯ ಕೋರಿದರು.  


ಭದ್ರಾವತಿಯಲ್ಲಿ ಏಸು ಕ್ರಿಸ್ತರ ಜನ್ಮದಿನಾಚರಣೆ ಕ್ರಿಸ್‌ಮಸ್ ಅಂಗವಾಗಿ  ಏಸ್‌ಕ್ರಿಸ್ತರ ಜನ್ಮವೃತ್ತಾಂತ ಸಾರುವ ಆಕರ್ಷಕವಾದ ಗೊದೋಳಿಗಳನ್ನು ನಿರ್ಮಿಸಲಾಗಿತ್ತು

ಸಮಾಜ ಸೇವಕ ಪೊಲೀಸ್ ಉಮೇಶ್ ಹುಟ್ಟುಹಬ್ಬ : ಹಲವು ಸೇವಾ ಕಾರ್ಯಗಳು

ರಾಜ್ಯಕ್ಕೆ ಮಾದರಿ ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ ಪ್ರಶಂಸೆ

ಭದ್ರಾವತಿ ಹುತ್ತಾ ಕಾಲೋನಿ ಚಂದ್ರಾಲಯದಲ್ಲಿ  ಸಮಾಜ ಸೇವಕ, ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವಿವಿಧ ಸೇವಾ ಕಾರ್ಯಗಳ ಸಮಾರಂಭದಲ್ಲಿ ಪೊಲೀಸ್ ಉಮೇಶ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಡಿ. ೨೫ : ಸಾವಿರಾರು ಕೋಟಿ ರು. ಹಣವಿದ್ದವರೂ ಸಹ ಮಾಡದಂತಹ ಸಮಾಜ ಕಾರ್ಯಗಳನ್ನು ಪೊಲೀಸ್ ಉಮೇಶ್‌ರವರು ಕೈಗೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆಂದು ಚಿಕ್ಕಮಗಳೂರು ಮೂಡಿಗೆರೆ ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ, ಸಮಾಜ ಸೇವಕ ರುದ್ರೇಶ್ ಕಹಳೆ ಪ್ರಶಂಸೆ ವ್ಯಕ್ತಪಡಿಸಿದರು.
    ಅವರು ಭಾನುವಾರ ನಗರದ ಹುತ್ತಾ ಕಾಲೋನಿ ಚಂದ್ರಾಲಯದಲ್ಲಿ ಸಮಾಜ ಸೇವಕ, ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು ಮಾತನಾಡಿದರು.
    ಹುಟ್ಟುಹಬ್ಬ ಆಚರಣೆಯನ್ನು ವಿಶೇಷವಾಗಿ ಆಚರಿಸಿಕೊಳ್ಳುವ ಮೂಲಕ ಪೊಲೀಸ್ ಉಮೇಶ್‌ರವರು ಮಾದರಿಯಾಗಿದ್ದಾರೆ. ಸದಾ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸೇವಾ ಕಾರ್ಯಗಳು ಸಮಾಜದಲ್ಲಿ ಇವರಿಂದ ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
    ಸುರಕ್ಷಾ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಮಾತನಾಡಿ, ಪೊಲೀಸ್ ಉಮೇಶ್‌ರವರ ಸೇವಾ ಕಾರ್ಯಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
    ನಗರದ ಗಣ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳಿಂದ ಪೊಲೀಸ್ ಉಮೇಶ್‌ರವರನ್ನು ಅಭಿನಂದಿಸಲಾಯಿತು. ಹುಟ್ಟುಹಬ್ಬದ ಅಂಗವಾಗಿ ಬಡಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗ್, ಬರವಣಿಗೆ ಪುಸ್ತಕ ಮತ್ತು ಹಿರಿಯ ನಾಗರೀಕರಿಗೆ ಕನ್ನಡಕ ಹಾಗು ಮಹಿಳೆಯರಿಗೆ ಸ್ವೆಟರ್ ಮತ್ತು ನಿರಾಶ್ರಿತರಿಗೆ ಕಂಬಳಿ ವಿತರಿಸಲಾಯಿತು.  
    ಮಹಾಮಾರಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಕಡುಬಡವರಿಗೆ ದವಸ ಧಾನ್ಯ ವಿತರಣೆ, ಪ್ರತಿದಿನ ಆಹಾರ ಪೂರೈಕೆ, ದೇವಸ್ಥಾನಗಳ ಸಭೆ-ಸಮಾರಂಭಗಳಲ್ಲಿ ಉಚಿತ ಅನ್ನದಾಸೋಹ ಸೇರಿದಂತೆ ಇನ್ನಿತರ ಸೇವಾಕಾರ್ಯಗಳನ್ನು ಹಲವಾರು ವರ್ಷಗಳಿಂದ ಪೊಲೀಸ್ ಉಮೇಶ್‌ರವರು ಸ್ನೇಹ ಜೀವಿ ಬಳಗದ ಸಹಯೋಗದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ.


ಭದ್ರಾವತಿ ಹುತ್ತಾ ಕಾಲೋನಿ ಚಂದ್ರಾಲಯದಲ್ಲಿ  ಸಮಾಜ ಸೇವಕ, ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್‌ರವರ ೪೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.