Monday, February 27, 2023

ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರ ವಿರೋಧ

ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶ ಕುರಿತು ಭದ್ರಾವತಿಯಲ್ಲಿ ತಾಲೂಕು ರೈತ ಸಂಘದ ಸಭೆಯಲ್ಲಿ ಚರ್ಚಿಸಲಾಯಿತು.
    ಭದ್ರಾವತಿ, ಫೆ. ೨೭ : ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರು ಹರಿಸುವ ಸರ್ಕಾರದ ಆದೇಶಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
    ತಾಲೂಕು ರೈತ ಸಂಘದ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ )   ವರಿಷ್ಠರಾದ ಕೆ ಟಿ ಗಂಗಾಧರ್, ಭದ್ರಾ ಜಲಾಶಯದ ಅಚ್ಚುಕಟ್ಟು ೧ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ದೀರ್ಘಾವಧಿ ಹಾಗು ಅಲ್ಪಾವಧಿ ಬೇಸಿಗೆ ಬೆಳೆ ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ನಿರ್ಣಯ ಆದೇಶ ಹೊರಡಿಸಿ ಎಡದಂಡೆ, ಬಲದಂಡೆ, ಮಲೆಬೆನ್ನೂರು, ಗೊಂದಿ ಜಲಾಶಯಕ್ಕೆ ೧೩೬ ದಿನಗಳಿಗೆ ನೀರಿನ ಪ್ರಮಾಣ ನಿರ್ಧರಿಸಿ ನೀರನ್ನು ಬೆಳೆಗಳಿಗೆ ಈಗಾಗಲೇ ೪೭ ದಿನಗಳ ನೀರನ್ನು ಒದಗಿಸಲಾಗಿದೆ.  ಇನ್ನು ೮೯ ದಿನಗಳ ನೀರನ್ನು ರೈತರ ಬೆಳೆಗೆ ಒಟ್ಟು ೩೬.೭೧ ಟಿಎಂಸಿ ನೀರನ್ನು ಹರಿಸಬೇಕಾಗಿದೆ. ಬೃಹತ್ ನಗರಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ಮಾತ್ರವಲ್ಲದೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ೭.೦೪೮ ಟಿಎಂಸಿ ನೀರನ್ನು ಜೋಪಾನ ಮಾಡಬೇಕಾಗಿದೆ. ಪ್ರಸ್ತುತ ನೀರಿನ ಪ್ರಮಾಣ ಗಮನಿಸಿದರೆ ಉಪಯೋಗಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ೩೭.೫೮೬ ಟಿಎಂಸಿ ಇದ್ದು, ಆದರೆ ಜಲಾಶಯದಲ್ಲಿ ಬಳಸಬಹುದಾದ ನೀರಿನ ಪ್ರಮಾಣ ಲಭ್ಯತೆ ೩೫.೩೬೮ ಟಿಎಂಸಿ ಆಗಿದೆ.  ೨.೨೧೮ ಟಿಎಂಸಿ ಪ್ರಮಾಣದ ನೀರಿನ ಕೊರತೆ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಭದ್ರಾ ಜಲಾಶಯದಿಂದ ೭ ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಯಾವುದೇ ಕಾರಣಕ್ಕೂ ಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರ ೭ ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯಬೇಕೆಂದರು.
    ಜಿಲ್ಲಾ ರೈತ ಸಂಘದ ಕಾರ್ಯಧ್ಯಕ್ಷ ಯಶವಂತರಾವ್ ಘೋರ್ಪಡೆ ಮಾತನಾಡಿ, ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ಯಾವುದೇ ಕಾರಣಕ್ಕೂ ೭ ಟಿಎಂಸಿ ನೀರು ಹರಿಸಬಾರದು. ಸರ್ಕಾರದ ಪ್ರಸ್ತುತ ಹೊರಡಿಸಿರುವ ಆದೇಶದ ವಿರುದ್ಧ ಚಳುವಳಿ ರೂಪಿಸಬೇಕೆಂದರು.
    ಶಿವಮೊಗ್ಗ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಪುಟ್ಟಪ್ಪ ಮಾತನಾಡಿ, ನೀರಾವರಿ ಸಲಹಾ ಸಮಿತಿ ನಿರ್ಣಯದಂತೆ ನೀರು ಪಡೆದುಕೊಳ್ಳುವುದು ನಮ್ಮ ಹಕ್ಕು. ಮೊದಲು ಅಚ್ಚುಕಟ್ಟುದಾರರ ಬೆಳೆಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ ಹಾಗೂ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಈ ಹಿನ್ನಲೆಯಲ್ಲಿ ಯಾವುದೇ ಕಾರಣಕ್ಕೂ ಜಲಾಶಯದಿಂದ ನೀರು ಹರಿಸಬಾರದು ಎಂದರು.
    ತಾಲೂಕು ರೈತ ಸಂಘದ ಅಧ್ಯಕ್ಷ ಹಿರಣ್ಣಯ್ಯ, ಅಗಸನಹಳ್ಳಿ ಹಿರಿಯ ರೈತ ಮುಖಂಡರಾದ ಯಲ್ಲಪ್ಪ, ಮೂರ್ತಣ್ಣ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪಾದಯಾತ್ರೆ ವೇಳೆ ನಡುರಸ್ತೆಯಲ್ಲಿಯೇ ಕುಳಿತು ಉಪಹಾರ ಸೇವಿಸಿದ ಮಾಜಿ ಶಾಸಕರ ಪುತ್ರ

ಭದ್ರಾವತಿ ವಿಐಎಸ್‌ಎಲ್ ಮುಚ್ಚುವ ಆದೇಶದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಸೋಮವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ಎಂ.ಎ ಅಜಿತ್ ನಡುರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿ ಗಮನ ಸೆಳೆದರು. 
    ಭದ್ರಾವತಿ, ಫೆ. ೨೭: ವಿಐಎಸ್‌ಎಲ್ ಮುಚ್ಚುವ ಆದೇಶದ ವಿರುದ್ಧ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಸೋಮವಾರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ, ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪುತ್ರ ಎಂ.ಎ ಅಜಿತ್ ನಡುರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿ ಗಮನ ಸೆಳೆದರು.
    ಶಿವಮೊಗ್ಗ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಗುತ್ತಿಗೆ ಕಾರ್ಮಿಕರು ಕೈಗೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಂ.ಎ ಅಜಿತ್ ಹಾಗು ಜೆಡಿಎಸ್ ಪಕ್ಷದ ಮುಖಂಡರು ಬಿಳಿಕಿ ಕ್ರಾಸ್‌ವರೆಗೂ ಸಾಗಿದರು. ಈ ಸಂದರ್ಭದಲ್ಲಿ ಪೊಲೀಸರು ಪಾದಯಾತ್ರೆ ತಡೆಯುವಲ್ಲಿ ಯಶಸ್ವಿಯಾದರು. ಪಾದಯಾತ್ರೆಯಲ್ಲಿ ಪಾಲ್ಗೊಂಡವರನ್ನು ವಶಕ್ಕೆ ಪಡೆದರು.
    ಈ ಅವಧಿಯಲ್ಲಿ ಎಂ.ಎ ಅಜಿತ್ ನಡುರಸ್ತೆಯಲ್ಲಿಯೇ  ಕುಳಿತು ಉಪಹಾರ ಸೇವಿಸಿದರು. ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಖಾನೆ-ಕಾರ್ಮಿಕರ ಹಿತಕಾಪಾಡುವ ಹೋರಾಟಕ್ಕೆ ಬೆಂಬಲ : ಬಿ.ಕೆ ಸಂಗಮೇಶ್ವರ್

ಮನವಿ ಸಲ್ಲಿಸಲು ಅವಕಾಶ ನೀಡದೆ ವಶಕ್ಕೆ ಪಡೆದು ಪ್ರಜಾಪ್ರಭುತ್ವ ಕಗ್ಗೊಲೆ

ಭದ್ರಾವತಿಯಲ್ಲಿ ಗುತ್ತಿಗೆ ಕಾರ್ಮಿಕರ ಪರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಕಾಗದನಗರದ ಚಂದ್ರಾಲಯಕ್ಕೆ ಕರೆ ತಂದಿರುವುದು.
    ಭದ್ರಾವತಿ, ಫೆ. ೨೭: ಕಾರ್ಖಾನೆ ಹಾಗು ಕಾರ್ಮಿಕರ ಹಿತಕಾಪಾಡಲು ಮತ್ತು ಕ್ಷೇತ್ರದ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲು ಪಾದಯಾತ್ರೆ ನಡೆಸಿದ ನಮ್ಮನ್ನು ವಶಕ್ಕೆ ಪಡೆಯುವ ಮೂಲಕ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
    ಅವರು ಕಾಗದನಗರದ ಚಂದ್ರಾಲಯದಲ್ಲಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಜನಪ್ರತಿನಿಧಿಯಾಗಿರುವ ನನ್ನ ಮೇಲೆಯೇ ಇಷ್ಟೊಂದು ದೌರ್ಜನ್ಯ ನಡೆಸಿದರೆ ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಈ ಕಾರ್ಖಾನೆಯನ್ನು ಮುಚ್ಚಲು ಹುನ್ನಾರ ನಡೆಸುತ್ತಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
    ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮನವಿ ಸಲ್ಲಿಸುವುದು ಸಂವಿಧಾನದ ಹಕ್ಕು ಇದನ್ನು ಮೊಟಕುಗೊಳಿಸಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಕಾರ್ಖಾನೆಯನ್ನು ಮುಚ್ಚಬಾರದು. ಇದಕ್ಕೆ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾಯಂ ಹಾಗು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದರು.
    ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ.ಚಂದ್ರೇಗೌಡ ಮಾತನಾಡಿ, ಓರ್ವ ಜನಪ್ರತಿನಿಧಿಗೆ ಮನವಿ ಸಲ್ಲಿಸಲು ಅವಕಾಶ ನೀಡದಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಇಂತಹ ಸರ್ಕಾರಗಳಿಗೆ ಧಿಕ್ಕಾರ ಹಾಕಬೇಕು. ಮೋದಿ ಗೋ ಬ್ಯಾಕ್ ಎಂದು ಕೂಗಬೇಕಾಗಿದೆ ಎಂದರು.
    ಎಎಪಿ ಪಕ್ಷದ ಮುಖಂಡ ಎಚ್. ರವಿಕುಮಾರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಅಧ್ಯಕ್ಷ ಸುದೀಪ್‌ಕುಮಾರ್, ಸದಸ್ಯರಾದ ಸರ್ವಮಂಗಳ ಭೈರಪ್ಪ, ಲತಾ ಚಂದ್ರಶೇಖರ್, ಕಾಂತರಾಜ್, ಶೃತಿ ವಸಂತ, ಕಾರ್ಮಿಕ ಮುಖಂಡರಾದ ಬಸವಂತಪ್ಪ, ಬಂಜಾರ ರೈತ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯಕ, ಶ್ರೀನಿವಾಸ್, ಲೋಕೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬಿಎಸ್‌ವೈ-ಬಿವೈಆರ್ ನೀಚಮಟ್ಟದ ರಾಜಕಾರಣ : ಶಾರದ ಅಪ್ಪಾಜಿ

ಭದ್ರಾವತಿಯಲ್ಲಿ ಗುತ್ತಿಗೆ ಕಾರ್ಮಿಕರ ಪರ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಹಾಗು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಕಾಗದನಗರದ ಚಂದ್ರಾಲಯಕ್ಕೆ ಕರೆ ತಂದಿರುವುದು.
    ಭದ್ರಾವತಿ, ಫೆ. ೨೭ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೇಂದ್ರರವರು ಇಷ್ಟೊಂದು ನೀಚಮಟ್ಟಕ್ಕೆ ರಾಜಕಾರಣ ನಡೆಸುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ. ಗುತ್ತಿಗೆ ಕಾರ್ಮಿಕರು ಮನವಿ ಕೊಡಲು ಸಹ ಅವಕಾಶ ನೀಡದೆ ನಮ್ಮನ್ನು ಕಳ್ಳರಂತೆ ವಶಕ್ಕೆ ಪಡೆದು ಕರೆತರುವ ಮೂಲಕ ದೌರ್ಜನ್ಯ ನಡೆಸಿದ್ದಾರೆಂದು ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಆಕ್ರೋಶ ವ್ಯಕ್ತಪಡಿಸಿದರು.
    ಅವರು ಕಾಗದನಗರ ಚಂದ್ರಾಲಯದಲ್ಲಿ ಮಾತನಾಡಿ, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟ ಕುರಿತು ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರರವರು ಪ್ರಧಾನಿ ಮೋದಿಯವರ ಗಮನಕ್ಕೆ ತಂದಿದ್ದಾರೋ, ಇಲ್ಲವೋ ಗೊತ್ತಿಲ್ಲ. ಸುಮಾರು ೧೫೦೦ ಗುತ್ತಿಗೆ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇಂದು  ೨-೩ ಕೋಟಿ ರು. ವೆಚ್ಚದಲ್ಲಿ ಅವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ೫೦೦ ಕೋ.ರು. ಬಂಡವಾಳ ವಿಐಎಸ್‌ಎಲ್ ಕಾರ್ಖಾನೆಗೆ ನೀಡಿದರೆ ಸಾಕು ಬಡ ಕಾರ್ಮಿಕರು ಬದುಕಿಕೊಳ್ಳುತ್ತಾರೆ ಎಂದರು.
    ಗುತ್ತಿಗೆ ಕಾರ್ಮಿಕರು ಮನವಿ ಕೊಡಲು ಸಹ ಅವಕಾಶ ನೀಡದಿರಲು ಕಾರಣ ಸ್ಪಷ್ಟಪಡಿಸಬೇಕು. ನಾವು ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಸದಾ ಬೆಂಬಲ ನೀಡುದ್ದೇವೆ. ಯಡಿಯೂರಪ್ಪ ಮತ್ತು ರಾಘವೇಂದ್ರರವರು ಅವರು ಮಾಡಿರುವ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ ಎಂದರು.
    ಪಕ್ಷದ ನಗರದ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಪ್ರಧಾನಿಯವರಿಗೆ ಮನವಿ ಕೊಡುವುದು ನಮ್ಮ ಹಕ್ಕು ಇದನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಕೇಂದ್ರ ಮತ್ತು ರಾಜ್ಯದ ಡಬ್ಬಲ್ ಇಂಜಿನ್ ಸರ್ಕಾರ ಕಾರ್ಮಿಕರ ಹಿತಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
    ಪಕ್ಷದ ರಾಜ್ಯ ಕಾರ್ಯದರ್ಶಿ ಜೆ.ಪಿ ಯೋಗೇಶ್ ಮಾತನಾಡಿ, ಕೇಂದ್ರ ಹಾಗು ರಾಜ್ಯಸರ್ಕಾರಗಳು ಗುತ್ತಿಗೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಕಾರ್ಖಾನೆ ಮುಚ್ಚುವುದರಿಂದ ಕೇವಲ ೧೫೦೦ ಮಂದಿ ಗುತ್ತಿಗೆ ಕಾರ್ಮಿಕರು ಮಾತ್ರವಲ್ಲ ಅವರ ಕುಟುಂಬ ವರ್ಗದವರು, ರೈತರು ಹಾಗು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಅವಲಂಬಿತರು ಸಹ ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದರು.
    ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ನಗರಸಭಾ ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಉದಯ್‌ಕುಮಾರ್, ಮೈಲಾರಪ್ಪ, ಮಧುಸೂದನ್, ಸುರೇಶ್, ವೆಂಕಟೇಶ್ ಉಜ್ಜನಿಪುರ, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.