Thursday, September 9, 2021

ನಾಯಿಗಳ ಮಾರಾಣ ಹೋಮ ಘಟನೆ ಸ್ಥಳಕ್ಕೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭೇಟಿ : ಪರಿಶೀಲನೆ

ಭದ್ರಾವತಿ ಎಂಪಿಎಂ ಅರಣ್ಯ ವ್ಯಾಪ್ತಿಯ ತಮ್ಮಡಿ ಹಳ್ಳಿಯ ಎಸ್‌ಎಲ್ ನಂ.೮೬೩, ೮೬೪, ೮೬೫ ಮತ್ತು ೮೬೬ರ ಭೂಮಿಯಲ್ಲಿ ನಾಯಿಗಳನ್ನು ಜೀವಂತವಾಗಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಸೆ. ೯: ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮಕ್ಕೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ನಾಯಿಗಳ ಮೃತದೇಹಗಳ ಮಾದರಿಯನ್ನು ಸಂಗ್ರಹಿಸಿ ಪ್ರಾಣಿಶಾಸ್ತ್ರಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ನಂತರ ಕೃತ್ಯದ ಬಗ್ಗೆ ನಿಖರವಾದ ಮಾಹಿತಿ ಲಭಿಸಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ತಿಳಿಸಿದ್ದಾರೆ.  
    ಅವರು ಪತ್ರಿಕೆಯೊಂದಿಗೆ ಮಾತನಾಡಿ, ಕೃತ್ಯ ನಡೆದಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ನಾಯಿಗಳ ಮೃತ ದೇಹಗಳ ಸಂಖ್ಯೆ ಸಹ ನಿಖರವಾಗಿ ತಿಳಿದು ಬಂದಿಲ್ಲ. ನಾಯಿಗಳು ಯಾವ ರೀತಿ ಸಾವನ್ನಪ್ಪಿವೆ ಎಂಬುದು ಸಹ ತಿಳಿದುಬಂದಿಲ್ಲ. ಈ ಹಿನ್ನಲೆಯಲ್ಲಿ ನಾಯಿಗಳ ಮೃತದೇಹಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
    ಅಲ್ಲದೆ ಈ ಕುರಿತು ಉತ್ತರಿಸುವಂತೆ ಕಂಬದಾಳಲು-ಹೊಸೂರು ಗ್ರಾಮ ಪಂಚಾಯಿತಿಗೂ ನೋಟಿಸ್ ನೀಡಲಾಗಿದೆ. ಅಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರದಿ ನೀಡಲಿದ್ದಾರೆ. ಅಲ್ಲದೆ ಪ್ರಯೋಗಾಲಯದ ವರದಿ ಸಹ ಬರಲಿದೆ. ನಂತರ ಸತ್ಯಾಂಶ ಏನೆಂಬುದು ತಿಳಿಯಲಿದೆ ಎಂದರು.

ಹೊಸ ಶಿಕ್ಷಣ ನೀತಿಗೆ ಹೊಂದಿಕೊಳ್ಳಿ, ಭವಿಷ್ಯದಲ್ಲಿ ಉತ್ತಮ ಪ್ರತಿಫಲ ಎದುರು ನೋಡಿ : ಡಾ. ಬಿ.ಜಿ ಧನಂಜಯ


ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗು ಐಸಿಟಿ ವಿಭಾಗಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-೨೦೨೦ ವಿಷಯ ಕುರಿತ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಮಾತನಾಡಿದರು.
    ಭದ್ರಾವತಿ, ಸೆ. ೯: ಸರ್ಕಾರ ಪ್ರಸ್ತುತ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರತಿಫಲ ಪಡೆಯಲು ಸಾಧ್ಯ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
    ಅವರು ಕಾಲೇಜಿನಲ್ಲಿ ಐಕ್ಯೂಎಸಿ ಹಾಗು ಐಸಿಟಿ ವಿಭಾಗಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-೨೦೨೦ ವಿಷಯ ಕುರಿತ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಯಾವುದೇ ಹೊಸ ವಿಷಯಗಳಿಗೆ ಹೊಂದಿಕೊಳ್ಳುವುದು ಸ್ವಲ್ಪಮಟ್ಟಿಗೆ ಕಷ್ಟವಾದರೂ ಅದಕ್ಕೆ ಹೊಂದಿಕೊಳ್ಳುವುದರಿಂದ ನಮಗೆ ಅದರಿಂದ ಸಿಗುವ ಪ್ರತಿಫಲ ಹೆಚ್ಚು. ಹಾಗಾಗಿ ಈ ಶಿಕ್ಷಣ ನೀತಿಯನ್ನು ಅರ್ಥಮಾಡಿಕೊಂಡು ಅನುಷ್ಠಾನಗೊಳಿಸಿ ದೇಶದ ಸರ್ವಾಂಗೀಣ ಪ್ರಗತಿಗೆ ನಮ್ಮದೇ ಆದ ಕೊಡುಗೆಯನ್ನು ಸಲ್ಲಿಸಬೇಕೆಂದರು.
    ಡಾ. ಕಸ್ತೂರಿ ರಂಗನ್‌ರವರ ವರದಿ ಆಧರಿಸಿ ಎಲ್ಲಾ ಹಂತಗಳಲ್ಲೂ ಚರ್ಚಿಸಿ ಕೂಲಂಕುಶವಾಗಿ ಅಧ್ಯಯನ ನಡೆಸಿ ಈ ನೀತಿಯನ್ನು ಜಾರಿಗೆ ತರಲಾಯಿತು. ಶಾಲಾ ಶಿಕ್ಷಣ, ಉನ್ನತ ಶಿಕ್ಷಣದಲ್ಲಿ ಪಠ್ಯಕ್ರಮ ಸುಧಾರಣೆ, ಆಡಳಿತ ಮತ್ತು ನಿಯಂತ್ರಣ, ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಪೋಷಿಸುವುದು. ನಮ್ಯತೆ ಹಾಗು ಸರ್ವಾಂಗೀಣ ಪ್ರಗತಿ ಹೊಸ ಶಿಕ್ಷಣ ನೀತಿಯ ಗುರಿಗಳಾಗಿವೆ ಎಂದರು.
    ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿಯ ಅಧಿಕಾರಿ ವಿದ್ಯಾಮರಿಯಾ ಜೋಸೆಫ್, ಪ್ರೊ. ಉಮೇಶ್‌ಕುಮಾರ್, ಡಾ. ಬಿ.ಜಿ ಅಮೃತೇಶ್ವರ್, ಪ್ರೊ. ಮಲ್ಲಪ್ಪ, ಡಾ. ಬಿ. ಬಸವರಾಜಪ್ಪ, ಡಾ. ರಾಜಶೇಖರ್, ಪ್ರೊ. ಎನ್.ಯು.ಆರ್ ಹೆಗ್ಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂ ಮಹಾಸಭಾ ಗಣಪತಿ ೯ ದಿನ ಪ್ರತಿಷ್ಠಾಪನೆ : ಜಿಲ್ಲಾಡಳಿತಕ್ಕೆ ಸಮಿತಿ ಮನವಿ

ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ.
    ಭದ್ರಾವತಿ, ಸೆ. ೯: ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಈ ಬಾರಿ ೯ ದಿನಗಳ ಕಾಲ ಮೂರ್ತಿ ಪ್ರತಿಷ್ಠಾಪಿಸಲು ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ ಎಂದು ಸಮಿತಿ ಅಧ್ಯಕ್ಷ ವಿ. ಕದಿರೇಶ್ ತಿಳಿಸಿದ್ದಾರೆ.
    ಸಮಿತಿ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಈ ಬಾರಿ ಸಹ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಗೆ ಶಿವಮೊಗ್ಗದಲ್ಲಿ ೧೦ ದಿನಗಳ ಕಾಲ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ಸಂದರ್ಭದಲ್ಲಿ ಇಲ್ಲಿಯೂ ೯ ದಿನಗಳ ಕಾಲ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಕೋರಲಾಗಿದೆ.
    ಸರ್ಕಾರ ರಾಜ್ಯದ ಎಲ್ಲಾ ಕಡೆ ಪ್ರತಿಷ್ಠಾಪನೆಗೆ ಒಂದೇ ರೀತಿಯ ಅವಕಾಶ ನೀಡಿದ್ದಲ್ಲಿ ಅದಕ್ಕೂ ಬದ್ಧವಾಗಿರುವುದಾಗಿ ತಿಳಿಸಿದರು.