ಭದ್ರಾವತಿ ಎಂಪಿಎಂ ಅರಣ್ಯ ವ್ಯಾಪ್ತಿಯ ತಮ್ಮಡಿ ಹಳ್ಳಿಯ ಎಸ್‌ಎಲ್ ನಂ.೮೬೩, ೮೬೪, ೮೬೫ ಮತ್ತು ೮೬೬ರ ಭೂಮಿಯಲ್ಲಿ ನಾಯಿಗಳನ್ನು ಜೀವಂತವಾಗಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭದ್ರಾವತಿ, ಸೆ. ೯: ನಾಯಿಗಳನ್ನು ಜೀವಂತವಾಗಿ ಹೂತಿಟ್ಟು ಮಾರಾಣ ಹೋಮಕ್ಕೆ ಕಾರಣವಾಗಿರುವ ಘಟನೆಗೆ ಸಂಬಂಧಿಸಿದಂತೆ ನಾಯಿಗಳ ಮೃತದೇಹಗಳ ಮಾದರಿಯನ್ನು ಸಂಗ್ರಹಿಸಿ ಪ್ರಾಣಿಶಾಸ್ತ್ರಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ನಂತರ ಕೃತ್ಯದ ಬಗ್ಗೆ ನಿಖರವಾದ ಮಾಹಿತಿ ಲಭಿಸಲಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಕೃತ್ಯ ನಡೆದಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ನಾಯಿಗಳ ಮೃತ ದೇಹಗಳ ಸಂಖ್ಯೆ ಸಹ ನಿಖರವಾಗಿ ತಿಳಿದು ಬಂದಿಲ್ಲ. ನಾಯಿಗಳು ಯಾವ ರೀತಿ ಸಾವನ್ನಪ್ಪಿವೆ ಎಂಬುದು ಸಹ ತಿಳಿದುಬಂದಿಲ್ಲ. ಈ ಹಿನ್ನಲೆಯಲ್ಲಿ ನಾಯಿಗಳ ಮೃತದೇಹಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಅಲ್ಲದೆ ಈ ಕುರಿತು ಉತ್ತರಿಸುವಂತೆ ಕಂಬದಾಳಲು-ಹೊಸೂರು ಗ್ರಾಮ ಪಂಚಾಯಿತಿಗೂ ನೋಟಿಸ್ ನೀಡಲಾಗಿದೆ. ಅಲ್ಲಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರದಿ ನೀಡಲಿದ್ದಾರೆ. ಅಲ್ಲದೆ ಪ್ರಯೋಗಾಲಯದ ವರದಿ ಸಹ ಬರಲಿದೆ. ನಂತರ ಸತ್ಯಾಂಶ ಏನೆಂಬುದು ತಿಳಿಯಲಿದೆ ಎಂದರು.
No comments:
Post a Comment