Saturday, September 11, 2021

ತರಾತುರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಗೌರಿ-ಗಣೇಶ ಹಬ್ಬ ಆಚರಣೆ

ಭದ್ರಾವತಿ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದ ಬಳಿ ಹೊಸಸಿದ್ದಾಪುರ ಮಾರ್ಗದ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಸ್ ತಂಗುದಾಣದಲ್ಲಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು.
    ಭದ್ರಾವತಿ, ಸೆ. ೧೧: ಕೊರೋನಾ ೩ನೇ ಅಲೆ ಭೀತಿ ನಡುವೆಯೂ ಸರ್ಕಾರ ಈ ಬಾರಿ ಸಾರ್ವಜನಿಕವಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ನಗರದ ವಿವಿಧೆಡೆ ಕೆಲವು ಸಂಘಟನೆಗಳ ಯುವಕರು ತರಾತುರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂಜೆಯೇ ವಿಸರ್ಜನೆ ಮಾಡಿದರೆ, ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಹೊರತುಪಡಿಸಿ ಕೆಲವು ಸಂಘಟನೆಗಳು ೩ ರಿಂದ ೫ ದಿನಗಳ ವರೆಗೆ ಪ್ರತಿಷ್ಠಾಪನೆಗೆ ಮುಂದಾಗಿವೆ.
    ಈ ಬಾರಿ ಗೌರಿ-ಗಣೇಶ ಹಬ್ಬ ತಾಲೂಕಿನಾದ್ಯಂತ ಸಂಭ್ರಮ-ಸಡಗರದಿಂದ ನಡೆಯಿತು. ಸರ್ಕಾರ ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪನೆಗೆ ವಿಳಂಬವಾಗಿ ತಿರ್ಮಾನ ಕೈಗೊಂಡ ಹಿನ್ನಲೆಯಲ್ಲಿ ಹೆಚ್ಚಾಗಿ ಯುವ ಸಮುದಾಯ ಮೂರ್ತಿಗಳ ಪ್ರತಿಷ್ಠಾಪನೆಗೆ ಮುಂದಾಗಿರುವುದು ಕಂಡು ಬಂದಿತು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಶ್ರೀ ಕರುಮಾಯಮ್ಮ ದೇವಸ್ಥಾನದ ಪಕ್ಕದಲ್ಲಿ ಶ್ರೀ ಕರುಮಾಯಮ್ಮ ದೇವಸ್ಥಾನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ವಿನಾಯಕ ಮೂರ್ತಿ.
    ಪೆಂಡಾಲ್‌ಗಳ ನಿರ್ಮಾಣಕ್ಕೆ ಹೆಚ್ಚಿನ ಸಮಯ ಹಾಗು ಹಣ ಅಧಿಕವಾಗುವ ಹಿನ್ನಲೆಯಲ್ಲಿ ಕೇವಲ ಶಾಮೀಯಾನ ಬಳಸಿ, ಬಯಲು ಶಾಲಾ ರಂಗ ಮಂಟಪ, ಬಸ್ ಶೆಲ್ಟರ್ ಸೇರಿದಂತೆ ಇನ್ನಿತರೆಡೆ ಪೆಂಡಾಲ್ ನಿರ್ಮಾಣ ಮಾಡದೆ ಸರಳವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೆಲವು ಸಂಘಟನೆಗಳು ಗಮನ ಸೆಳೆದವು.


ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ೪೯ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು.
    ಹಿಂದೂ ಮಹಾಸಭಾ ವಿನಾಯಕ ಮೂರ್ತಿ ಪ್ರತಿಷ್ಠಾಪನೆ :
    ಪ್ರತಿ ವರ್ಷದಂತೆ ಈ ಬಾರಿ ನಗರದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾಗಿರುವ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ೪೯ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.
ಹಳೇನಗರದ ಶಿಲ್ಪಿ ರುದ್ರಪ್ಪ ಅವರಿಂದ ನಿರ್ಮಾಣಗೊಂಡ ಮೂರ್ತಿಯನ್ನು ಸಂಜೆ ಮೆರವಣಿಗೆ ಮೂಲಕ ಸಿ.ಎನ್ ರಸ್ತೆ ಹಾಗು ಹೊಸಮನೆ ಮುಖ್ಯ ರಸ್ತೆ ಮೂಲಕ ಪ್ರತಿಷ್ಠಾಪನಾ ಸ್ಥಳಕ್ಕೆ ತರಲಾಯಿತು. ಮೆರವಣೆಗೆಯಲ್ಲಿ ಸಮಿತಿ ಅಧ್ಯಕ್ಷ ವಿ. ಕದಿರೇಶ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಹಿಂದೂ ಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
    ಮಾಧವಚಾರ್ ವೃತ್ತದಲ್ಲಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ :
    ಶ್ರೀ ವರಸಿದದಿ ವಿನಾಯಕ ಭಕ್ತ ಮಂಡಳಿ ಸ್ವಾತಂತ್ರ್ಯ ಪೂರ್ವದ ಸಂಘಟನೆಯಾಗಿದ್ದು, ಹಳೇನಗರದ ಮಾಧವಚಾರ್ ವೃತ್ತದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿಕೊಂಡು ಬರುತ್ತಿದೆ. ಈ ಬಾರಿ ಸಹ ೮೮ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ವಿವಿಧ ಕಾರ್ಯಕ್ರಮಗಳೊಂದಿಗೆ ಸೆ.೧೪ರಂದು ಮೂರ್ತಿಯ ವಿಸರ್ಜನೆ ನಡೆಯಲಿದೆ.
    ಕೋವಿಡ್ ೩ನೇ ಅಲೆ ಭೀತಿ ನಡುವೆಯೂ ಹಬ್ಬ ಆಚರಣೆಗೆ ಒಂದೆಡೆ ಸರ್ಕಾರ ಅನುಮತಿ ನೀಡಿರುವುದನ್ನು ಕೆಲವು ಸಂಘಟನೆಗಳು ದುರ್ಬಳಕೆ ಮಾಡಿಕೊಂಡಿವೆ. ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದಿರುವುದು ಕಂಡು ಬಂದಿತು. ಭಕ್ತರು ಸಹ ಸಾಮಾಜಿಕ ಅಂತರ, ಮಾಸ್ಕ್ ಬಳಸದಿರುವುದು ಸೋಂಕು ಹೆಚ್ಚಳವಾಗುವ ಆತಂಕವನ್ನುಂಟು ಮಾಡಿದೆ.


ಭದ್ರಾವತಿ ಜನ್ನಾಪುರ ಭಾಗದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾಗಿರುವ ರಾಮ ರಾಜ್ಯ ಸಂಘಟನೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಶ್ರೀ ವಿನಾಯಕ ಮೂರ್ತಿ

No comments:

Post a Comment