Wednesday, September 7, 2022

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ೧೫೦೦ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳ ನಿಯೋಜನೆ

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವದಲ್ಲಿ ಭಕ್ತಾಧಿಗಳಿಗೆ ವಿತರಿಸಲು ಸಿದ್ದಗೊಳ್ಳುತ್ತಿರುವ ಮೈಸೂರು ಪಾಕ್.  
    ಭದ್ರಾವತಿ, ಸೆ. ೭:  ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆ ತಮಿಳು ಶಾಲೆ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಗುರುವಾರ ನಡೆಯಲಿದ್ದು, ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್  ಕೈಗೊಳ್ಳಲು ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ೧೫೦೦ಕ್ಕೂ ಮಂದಿ ನಿಯೋಜನೆಗೊಳಿಸಲಾಗಿದೆ.
    ಈಗಾಗಲೇ ರಾಜಬೀದಿ ಉತ್ಸವ ಮೆರವಣಿಗೆ ನಡೆಯುವ ಪ್ರಮುಖ ರಸ್ತೆಗಳ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಗರಸಭೆ ವತಿಯಿಂದ ಬ್ಯಾರಿಗೇಡಿಗಳನ್ನು ನಿರ್ಮಿಸಿಕೊಡಲಾಗಿದೆ.
    ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್‌ಗಾಗಿ ೬ ಪೊಲೀಸ್ ಉಪಾಧೀಕ್ಷಕರು, ೧೯ ವೃತ್ತ ನಿರೀಕ್ಷಕರು, ೩೧ ಠಾಣಾಧಿಕಾರಿಗಳು, ೮೨ ಸಹಾಯಕ ಠಾಣಾಧಿಕಾರಿಗಳು, ೯೨೨ ಕಾನ್ಸ್‌ಸ್ಟೇಬಲ್‌ಗಳು ಮತ್ತು ೪೦೮ ಗೃಹ ರಕ್ಷಕದಳ ಸಿಬ್ಬಂದಿ ಹಾಗು ೭ ಕ್ಯಾಮೆರಾ ಮೆನ್‌ಗಳು ಸೇರಿದಂತೆ ಒಟ್ಟು ೧೫೦೦ಕ್ಕೂ ಹೆಚ್ಚು ಮಂದಿ ನಿಯೋಜನೆಗೊಳಿಸಲಾಗಿದೆ. ಪೊಲೀಸ್ ಇಲಾಖೆ ಜೊತೆಗೆ ರ‍್ಯಾಪಿಡ್ ಆಕ್ಷನ್ ಫೋರ್ಸ್(ಆರ್‌ಎಎಫ್) ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಹ ನಿಯೋಜನೆಗೊಳಿಸುವ ಸಾಧ್ಯತೆ ಇದೆ.
    ವಿನಾಯಕ ಮೂರ್ತಿ ಪ್ರತಿಷ್ಠಾಪನಾ ಸ್ಥಳದಿಂದ ಬೆಳಿಗ್ಗೆ ಆರಂಭಗೊಳ್ಳುವ ರಾಜಬೀದಿ ಉತ್ಸವ ಮೆರವಣಿಗೆ ಸಂಜೆ ನಗರಸಭೆ ಮುಂಭಾಗ ಅಂತ್ಯಗೊಳ್ಳಲಿದ್ದು, ನಂತರ ಭದ್ರಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ.
     ಸಾರ್ಥಕ ಸಮಾಜಮುಖಿ ಟ್ರಸ್ಟ್ ವತಿಯಿಂದ ೧೦ ಸಾವಿರ ಮೈಸೂರು ಪಾಕ್ ವಿತರಣೆ:
    ೫೦ನೇ ವರ್ಷದ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಹಿನ್ನಲೆಯಲ್ಲಿ ಸಾರ್ಥಕ ಸಮಾಜಮುಖಿ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜೊತೆಗೆ ವಿಶೇಷವಾಗಿ ಸುಮಾರು ೧೦ ಸಾವಿರ ಮೈಸೂರು ಪಾಕ್ ವಿತರಣೆ ನಡೆಯಲಿದೆ.
  ಸಾರ್ಥಕ ಸಮಾಜಮುಖಿ ಟ್ರಸ್ಟ್ ಹಲವಾರು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು  ಟ್ರಸ್ಟ್ ಸಂಸ್ಥಾಪಕ ಚಂದ್ರಶೇಖರ್ ಬಿ ಮಾನಾಚಾರಿ ಕೋರಿದ್ದಾರೆ.

ಮುರುಘಾ ಶ್ರೀಗಳ ಮೇಲಿನ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಯಲಿ, ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ಭದ್ರೆತೆ, ನ್ಯಾಯ ಒದಗಿಸಿ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಕೆ

ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಮೇಲಿನ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಬಿಗಿ ಭದ್ರತೆ ನೀಡಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಸೆ. ೭: ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಮೇಲಿನ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಬಿಗಿ ಭದ್ರತೆ ನೀಡಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹಾಗು ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಸೇರಿದಂತೆ  ಪ್ರಮುಖರು ಮಾತನಾಡಿ, ಶ್ರೀಗಳು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದು, ಕಾನೂನು ಪ್ರಕಾರ ಎಲ್ಲರೂ ಒಂದೇ ಆಗಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ(ಪೋಕ್ಸೋ)ಯಡಿ ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಆರೋಪ ಎದುರಿಸುತ್ತಿರುವವರನ್ನು ಬಂಧಿಸಬೇಕು. ಆದರೆ ಶ್ರೀಗಳನ್ನು ವಿಳಂಬವಾಗಿ ಬಂಧಿಸಲಾಗಿದೆ. ಆರೋಪ ಎದುರಿಸುವ ಸಾಮಾನ್ಯ ಜನರಿಗೆ ಒಂದು ರೀತಿ ಕಾನೂನು, ಶ್ರೀಗಳಿಗೆ ಒಂದು ರೀತಿ ಕಾನೂನು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಶ್ರೀಗಳು ತಮ್ಮ ಮೇಲೆ ಬಂದಿರುವ ಆರೋಪವನ್ನು ಏಸು, ಬುದ್ಧ, ಸೆಕ್ರಿಟಿಸ್ ಮತ್ತು ಬಸವಣ್ಣನವರ ಮೇಲೆ ಬಂದ ಆರೋಪಗಳೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಶ್ರೀಗಳು ಮಹಾನ್ ವ್ಯಕ್ತಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸುವ ಮೂಲಕ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
    ಏಸು, ಬುದ್ಧ, ಸೆಕ್ರಿಟಿಸ್ ಮತ್ತು ಬಸವಣ್ಣನವರಂತಹ ಮಹಾಪುರುಷರೇ ಅವರ ಮೇಲೆ ಆರೋಪಗಳು ಬಂದಾಗ ಅವರು ನಿಷ್ಪಕ್ಷವಾಗಿ ಸ್ವಯಂ ತಾವುಗಳೇ ತನಿಖೆಗೆ ಒಳಪಡಲು ಸಿದ್ದರಾಗಿ ನಂತರ ಅವರ ಮೇಲಿನ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರ ಬಂದಿರುತ್ತಾರೆ. ಇದೆ ರೀತಿ ಶ್ರೀಗಳು ಸಹ ಸ್ವಯಂ ತನಿಖೆಗೆ ಒಳಪಟ್ಟು ನಿರಪರಾಧಿ ಎಂದು ಸಾಬೀತು ಮಾಡಬೇಕು. ಅಲ್ಲಿಯ ವರೆಗೂ ಮಠದ ಅಧಿಕಾರದಿಂದ ದೂರವಿರಬೇಕೆಂದು ಆಗ್ರಹಿಸಿದರು.
    ಮುಖ್ಯಮಂತ್ರಿಗಳು ಶ್ರೀಗಳ ಮೇಲಿನ ಪ್ರಕರಣ ನಿಷ್ಪಕ್ಷವಾಗಿ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕು. ಸಂತ್ರಸ್ಥ ಅಪ್ರಾಪ್ತ ಬಾಲಕಿಯರಿಗೆ ನ್ಯಾಯ ಒದಗಿಸಿಕೊಡುವ ಜೊತೆಗೆ ಬಿಗಿ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.
    ಒಕ್ಕೂಟದ ಪ್ರಮುಖರಾದ ಎಸ್. ವೆಂಕಟೇಶ್, ವಿ. ಅರವಿಂದ್, ಸಂಧ್ಯಾ, ಕುಮಾರ್, ರಾಮು, ಸುಶೀಲಮ್ಮ, ಎಚ್. ನಿಂಗರಾಜ್, ಮಹೇಶ್ವರಿ, ಬಸವರಾಜ್, ಭಾನುಪ್ರಿಯ, ಎನ್. ವೆಂಕಟೇಶ್, ಚಲುವರಾಜ್, ಅರುಳ್, ಕೆ. ರಾಜು, ಗೀತಾ, ಎಸ್. ಕುಮಾರ್, ಸುಬ್ರಮಣಿ, ಸುಧಾಕರ್, ನಾಗರಾಜ್ ಮತ್ತು ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾಸಕರಿಂದ ಪೊಲೀಸ್ ಠಾಣೆಗೆ ಟಿ.ವಿ ಕೊಡುಗೆ

ಭದ್ರಾವತಿಯಲ್ಲಿ ಪೊಲೀಸ್ ಇಲಾಖೆಗೆ ಸಿ.ಸಿ ಕ್ಯಾಮೆರಾ ಮೂಲಕ ನಗರದ ಪ್ರಮುಖ ವೃತ್ತಗಳ ವೀಕ್ಷಣೆಗೆ ಅನುಕೂಲವಾಗುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಟಿ.ವಿ ಕೊಡುಗೆಯಾಗಿ ನೀಡಿದ್ದಾರೆ.
    ಭದ್ರಾವತಿ, ಸೆ. ೭: ಪೊಲೀಸ್ ಇಲಾಖೆಗೆ ಸಿ.ಸಿ ಕ್ಯಾಮೆರಾ ಮೂಲಕ ನಗರದ ಪ್ರಮುಖ ವೃತ್ತಗಳ ವೀಕ್ಷಣೆಗೆ ಅನುಕೂಲವಾಗುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಟಿ.ವಿ ಕೊಡುಗೆಯಾಗಿ ನೀಡಿದ್ದಾರೆ.
    ಪೊಲೀಸ್ ನಗರ ವೃತ್ತ ನಿರೀಕ್ಷಕರ ಕಛೇರಿಗೆ ಟಿ.ವಿ ಅಗತ್ಯತೆ ಮನಗಂಡು ಕೊಡುಗೆಯಾಗಿ ನೀಡಲಾಗಿದ್ದು, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಹಾಗು ಸಿಬ್ಬಂದಿಗಳು ಟಿ.ವಿ ಸ್ವೀಕರಿಸಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರ ಬಿ.ಎಸ್ ಬಸವೇಶ್, ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಳಾಸ ದೃಢೀಕರಣ ಮಾಹಿತಿ ನೀಡಿ ಸಹಕರಿಸಿ

    ಭದ್ರಾವತಿ, ಸೆ. ೭ : ನಗರದ ಚನ್ನಗಿರಿ ರಸ್ತೆಯ ಶ್ರೀ ಭವಾನಿ ಸಂಕೀರ್ಣದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಸರ್ವ ಸದಸ್ಯರ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಒಂದು ವೇಳೆ ಸದಸ್ಯರ ವಿಳಾಸ ಬದಲಾವಣೆಯಾಗಿದ್ದಲ್ಲಿ ವಿಳಾಸದ ದೃಢೀಕರಣ ದಾಖಲಾತಿಯೊಂದಿಗೆ ಸಂಘದ ಕಛೇರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
    ಸರ್ವ ಸದಸ್ಯರ ಸಭೆ ಹಿನ್ನಲೆಯಲ್ಲಿ ಈಗಾಗಲೇ ಸದಸ್ಯರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಗಳನ್ನು ಕಳುಹಿಸಲಾಗಿದೆ. ಆದರೆ ಕೆಲವು ಆಹ್ವಾನ ಪತ್ರಿಕೆಗಳು ಹಿಂದಿರುಗಿವೆ. ಒಂದು ವೇಳೆ ಸದಸ್ಯರ ವಿಳಾಸಗಳು ಬದಲಾವಣೆಯಾಗಿದ್ದಲ್ಲಿ ಅಥವಾ ತಾಲೂಕಿನ ಹೊರಗೆ ವಾಸಿಸುತ್ತಿದ್ದರೇ ತಕ್ಷಣ ವಿಳಾಸ ದೃಡೀಕರಣದ ಮಾಹಿತಿಯನ್ನು ಸಂಘದ ಕಛೇರಿಗೆ ತಿಳಿಸುವಂತೆ ಸಂಘದ ಕಾರ್ಯದರ್ಶಿ ವಿಶ್ವೇಶ್ವರರಾವ್ ಗಾಯಕ್‌ವಾಡ್ ಕೋರಿದ್ದಾರೆ.