Wednesday, September 7, 2022

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ೧೫೦೦ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳ ನಿಯೋಜನೆ

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವದಲ್ಲಿ ಭಕ್ತಾಧಿಗಳಿಗೆ ವಿತರಿಸಲು ಸಿದ್ದಗೊಳ್ಳುತ್ತಿರುವ ಮೈಸೂರು ಪಾಕ್.  
    ಭದ್ರಾವತಿ, ಸೆ. ೭:  ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಹೊಸಮನೆ ತಮಿಳು ಶಾಲೆ ಬಳಿ ಪ್ರತಿಷ್ಠಾಪಿಸಲಾಗಿರುವ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಗುರುವಾರ ನಡೆಯಲಿದ್ದು, ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್  ಕೈಗೊಳ್ಳಲು ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿ ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ೧೫೦೦ಕ್ಕೂ ಮಂದಿ ನಿಯೋಜನೆಗೊಳಿಸಲಾಗಿದೆ.
    ಈಗಾಗಲೇ ರಾಜಬೀದಿ ಉತ್ಸವ ಮೆರವಣಿಗೆ ನಡೆಯುವ ಪ್ರಮುಖ ರಸ್ತೆಗಳ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಗರಸಭೆ ವತಿಯಿಂದ ಬ್ಯಾರಿಗೇಡಿಗಳನ್ನು ನಿರ್ಮಿಸಿಕೊಡಲಾಗಿದೆ.
    ಬಿಗಿ ಪೊಲೀಸ್ ಪೊಲೀಸ್ ಬಂದೋಬಸ್ತ್‌ಗಾಗಿ ೬ ಪೊಲೀಸ್ ಉಪಾಧೀಕ್ಷಕರು, ೧೯ ವೃತ್ತ ನಿರೀಕ್ಷಕರು, ೩೧ ಠಾಣಾಧಿಕಾರಿಗಳು, ೮೨ ಸಹಾಯಕ ಠಾಣಾಧಿಕಾರಿಗಳು, ೯೨೨ ಕಾನ್ಸ್‌ಸ್ಟೇಬಲ್‌ಗಳು ಮತ್ತು ೪೦೮ ಗೃಹ ರಕ್ಷಕದಳ ಸಿಬ್ಬಂದಿ ಹಾಗು ೭ ಕ್ಯಾಮೆರಾ ಮೆನ್‌ಗಳು ಸೇರಿದಂತೆ ಒಟ್ಟು ೧೫೦೦ಕ್ಕೂ ಹೆಚ್ಚು ಮಂದಿ ನಿಯೋಜನೆಗೊಳಿಸಲಾಗಿದೆ. ಪೊಲೀಸ್ ಇಲಾಖೆ ಜೊತೆಗೆ ರ‍್ಯಾಪಿಡ್ ಆಕ್ಷನ್ ಫೋರ್ಸ್(ಆರ್‌ಎಎಫ್) ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಹ ನಿಯೋಜನೆಗೊಳಿಸುವ ಸಾಧ್ಯತೆ ಇದೆ.
    ವಿನಾಯಕ ಮೂರ್ತಿ ಪ್ರತಿಷ್ಠಾಪನಾ ಸ್ಥಳದಿಂದ ಬೆಳಿಗ್ಗೆ ಆರಂಭಗೊಳ್ಳುವ ರಾಜಬೀದಿ ಉತ್ಸವ ಮೆರವಣಿಗೆ ಸಂಜೆ ನಗರಸಭೆ ಮುಂಭಾಗ ಅಂತ್ಯಗೊಳ್ಳಲಿದ್ದು, ನಂತರ ಭದ್ರಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ.
     ಸಾರ್ಥಕ ಸಮಾಜಮುಖಿ ಟ್ರಸ್ಟ್ ವತಿಯಿಂದ ೧೦ ಸಾವಿರ ಮೈಸೂರು ಪಾಕ್ ವಿತರಣೆ:
    ೫೦ನೇ ವರ್ಷದ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಹಿನ್ನಲೆಯಲ್ಲಿ ಸಾರ್ಥಕ ಸಮಾಜಮುಖಿ ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜೊತೆಗೆ ವಿಶೇಷವಾಗಿ ಸುಮಾರು ೧೦ ಸಾವಿರ ಮೈಸೂರು ಪಾಕ್ ವಿತರಣೆ ನಡೆಯಲಿದೆ.
  ಸಾರ್ಥಕ ಸಮಾಜಮುಖಿ ಟ್ರಸ್ಟ್ ಹಲವಾರು ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು  ಟ್ರಸ್ಟ್ ಸಂಸ್ಥಾಪಕ ಚಂದ್ರಶೇಖರ್ ಬಿ ಮಾನಾಚಾರಿ ಕೋರಿದ್ದಾರೆ.

No comments:

Post a Comment