Wednesday, May 13, 2020

ಬಿ.ಕೆ ಸಂಗಮೇಶ್ವರ್ ಜಲಸಂಪನ್ಮೂಲ ಖಾತೆ ಸಚಿವರ ಭೇಟಿ : ಮಾತುಕತೆ

ಭದ್ರಾ ಮೇಲ್ದಂಡೆ ಕಾಮಗಾರಿ ಪರಿಶೀಲನೆಗೆ ಮಂಗಳವಾರ ಭದ್ರಾವತಿಗೆ ಆಗಮಿಸಿದ್ದ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಲ. ಜಾರಕಿಹೊಳಿ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದರು. 
ಭದ್ರಾವತಿ: ಭದ್ರಾ ಮೇಲ್ದಂಡೆ ಕಾಮಗಾರಿ ಪರಿಶೀಲನೆಗೆ ಮಂಗಳವಾರ ಆಗಮಿಸಿದ್ದ ಜಲಸಂಪನ್ಮೂಲ ಖಾತೆ ಸಚಿವ ರಮೇಶ್ ಲ. ಜಾರಕಿಹೊಳಿ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದರು.
ರಮೇಶ್ ಲ. ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆ ಸಚಿವರಾದ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಲಾಯಿತು. ತಾಲೂಕಿನ ಅಭಿವೃದ್ಧಿ ವಿಚಾರಗಳ ಹೊರತಾಗಿ ಖಾಸಗಿ ವಿಚಾರಗಳನ್ನು ಚರ್ಚಿಸಲಾಯಿತು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಪತ್ರಿಕೆಗೆ ತಿಳಿಸಿದರು. 

ಸವಿತಾ ಸಮಾಜದ ಸಹಕಾರ ಸಂಘದಲ್ಲಿ ಕಳ್ಳತನಕ್ಕೆ ಯತ್ನ

ಭದ್ರಾವತಿ ಹಳೇನಗರದ ಪತ್ರಿಕಾ ಭವನ ಬಳಿ ಇರುವ ಸವಿತಾ ಸಮಾಜದ ಸಹಕಾರ ಸಂಘದ 
ಕಟ್ಟಡದ ಗೋಡೆ ಕಿಂಡಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವುದು. 
ಭದ್ರಾವತಿ, ಮೇ. ೧೩: ಹಳೇನಗರದ ಪತ್ರಿಕಾ ಭವನ ಬಳಿ ಇರುವ ಸವಿತಾ ಸಮಾಜದ ಸಹಕಾರ ಸಂಘದ ಕಟ್ಟಡದ ಗೋಡೆ ಕಿಂಡಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಸಹಕಾರ ಸಂಘದಲ್ಲಿ ಏನಾದರೂ ಬೆಲೆ ಬಾಳುವ ಸ್ವತ್ತುಗಳು ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಗೋಡೆ ಕಿಂಡಿ ಮಾಡಲಾಗಿದೆ. ಆದರೆ ಕಛೇರಿಯಲ್ಲಿರುವ ಸ್ವತ್ತುಗಳನ್ನು ಕಳವು ಮಾಡಿಲ್ಲ ಎನ್ನಲಾಗಿದೆ. ಈ ಸಂಬಂಧ ಹಳೇನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿವಿಧ ರಾಜ್ಯಗಳಿಂದ ಆಗಮಿಸಿರುವ ೩೪ ಮಂದಿಗೆ ಕ್ವಾರಂಟೈನ್

ಭದ್ರಾವತಿ ದೇವರನರಸೀಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ. 
ಭದ್ರಾವತಿ, ಮೇ. ೧೩: ಕೊನೆಗೂ ಜಿಲ್ಲಾಡಳಿತ ತಾಲೂಕಿನಲ್ಲಿ ೨ ಕ್ವಾರಂಟೈನ್‌ಗಳನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದು, ಹೊರ ರಾಜ್ಯಗಳಿಂದ ಬಂದ ಸುಮಾರು ೩೪ ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ.
ಕಳೆದ ೩-೪ ದಿನಗಳ ಹಿಂದೆ ಜಿಲ್ಲಾಡಳಿತ ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲು ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರಂಟೈನ್ ತೆರೆಯಲು ನಿರ್ಧರಿಸಿತ್ತು. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬೇರೆಡೆ ತೆರೆಯುವುದಾಗಿ ಭರವಸೆ ನೀಡಿತ್ತು.
ಮಂಗಳವಾರ ಗ್ರಾಮೀಣ ಭಾಗದ ದೇವರ ನರಸೀಪುರ ಮತ್ತು ಹಂಚಿನ ಸಿದ್ದಾಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ತೆರೆಯಲಾಗಿದೆ. ಕ್ವಾರಂಟೈನ್‌ನಲ್ಲಿರುವವರಿಗೆ ಊಟದ ವ್ಯವಸ್ಥೆ ಸೇರಿದಂತೆ ಅವಶ್ಯಕ ಸೌಲಭ್ಯ ಕಲ್ಪಿಸುವುದು ವಸತಿ ಶಾಲೆ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ. ಒಟ್ಟಾರೆ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಲಾಗಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಹ ತಮಗೆ ವಹಿಸಿರುವ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್ ತಿಳಿಸಿದ್ದಾರೆ.
ಪ್ರಸ್ತುತ ದೇವರ ನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಮಿಳು, ಚನ್ನೈ ನಗರಗಳಿಂದ ಆಗಮಿಸಿರುವ ೧೫ ಮಂದಿಯನ್ನು ಹಾಗು ಹಂಚಿನ ಸಿದ್ದಾಪುರದ ವಸತಿ ಶಾಲೆಯಲ್ಲಿ ಗೋವಾ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಂದ ನಗರಕ್ಕೆ ಬಂದಿರುವ ೨೭ ಮಂದಿಯನ್ನು ಒಟ್ಟು ೩೪ ಮಂದಿಯನ್ನು ನಿಗಾದಲ್ಲಿರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್ ತಿಳಿಸಿದ್ದಾರೆ.
ಸಮುದಾಯಕ್ಕೆ ಹರಡದಂತೆ ಎಚ್ಚರ ವಹಿಸಲು ಕ್ವಾರಂಟೈನ್:
ಮೂಲತಃ ತಾಲೂಕಿನ ನಿವಾಸಿಗಳಾಗಿದ್ದು, ವಿವಿಧ ಕಾರಣಗಳಿಂದ ಲಾಕ್‌ಡೌನ್ ಘೋಷಣೆಯಾಗುವ ಮೊದಲು ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರು ಪುನಃ ತಮ್ಮ ತಮ್ಮ ಸ್ವಂತ ಊರುಗಳಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರನ್ನು ಪ್ರತ್ಯೇಕವಾಗಿರಿಸಿ ಆರೋಗ್ಯ ತಪಾಸಣೆ ನಡೆಸುವ ಮೂಲಕ ಮಹಾಮಾರಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡದಂತೆ ಎಚ್ಚರವಹಿಸಲು ಕ್ವಾರಂಟೈನ್‌ಗಳನ್ನು ತೆರೆಯಲಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ಬಂದವರು ನೇರವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುವುದರಿಂದ ಒಂದು ವೇಳೆ ಕೊರೋನಾ ವೈರಸ್ ಬಾಧಿತರಿಂದ ಕುಟುಂಬಕ್ಕೆ, ಸಮುದಾಯಕ್ಕೆ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಸ್ಥಳೀಯರು ಇದನ್ನು ತಪ್ಪಗಿ ಭಾವಿಸುವ ಮೂಲಕ ಕ್ವಾರಂಟೈನ್‌ಗಳನ್ನು ತೆರೆಯಲು ಆಕ್ಷೇಪಿಸುತ್ತಿರುವುದು ಆತಂಕದ ಬೆಳೆವಣಿಗೆಯಾಗಿದೆ ಎಂದು ಕೊರೋನಾ ವೈರಸ್ ನಿರ್ಮೂಲನೆಗಾಗಿ  ಹಗಲಿರುಳು ಹೋರಾಟ ನಡೆಸುತ್ತಿರುವವರು ವಿಷಾದ ವ್ಯಕ್ತಪಡಿಸಿದ್ದಾರೆ. 

ಹೊರ ರಾಜ್ಯ, ಜಿಲ್ಲೆಗಳಿಂದ ಕಣ್ತಪ್ಪಿ ಬಂದವರ ಬಗ್ಗೆ ಮಾಹಿತಿ ನೀಡಿ

ಭದ್ರಾವತಿ, ಮೇ. ೧೩: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಘೋಷಿಸಲಾಗಿದ್ದ ಲಾಕ್‌ಡೌನ್ ಇದೀಗ ಸಡಿಲಗೊಳ್ಳುತ್ತಿದ್ದು, ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಗೆ ತೆರಳಿದ್ದ ಕ್ಷೇತ್ರದ ನಿವಾಸಿಗಳು ಪುನಃ ಕ್ಷೇತ್ರಕ್ಕೆ ಹಿಂದಿರುಗುತ್ತಿದ್ದಾರೆ. ಕೆಲವರು ಕಾಲ್ನಡಿಗೆ ಮೂಲಕ, ಮತ್ತೆ ಕೆಲವರು ಸ್ವಂತ ವಾಹನಗಳ ಮೂಲಕ ಬರುತ್ತಿದ್ದಾರೆ. ಇವರೆಲ್ಲರ ಆರೋಗ್ಯ ತಪಾಸಣೆ ನಡೆಸುವ ಅಗತ್ಯವಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕೆಲವರು ಕಾಲ್ನಡಿಗೆ ಮೂಲಕ, ಮತ್ತೆ ಕೆಲವರು ಸ್ವಂತ ವಾಹನಗಳ ಮೂಲಕ ಆರೋಗ್ಯ ತಪಾಸಣೆ ಪ್ರಕ್ರಿಯೆಯಿಂದ ತಪ್ಪಿಸಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಇದ್ದು, ಇವರನ್ನು ಗುರುತಿಸಿ ಆರೋಗ್ಯ ತಪಾಸಣೆ ನಡೆಸಿ ಪ್ರತ್ಯೇಕಿಸುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ, ಅಕ್ಕ-ಪಕ್ಕದ ಮನೆಗಳಿಗೆ ಯಾರಾದರೂ ಬಂದಿರುವ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ತಕ್ಷಣ ದೂರವಾಣಿ ಸಂಖ್ಯೆ ೦೮೨೮೨-೨೬೬೩೫೬ ಸಂಖ್ಯೆಗೆ ಕರೆ ಮಾಡುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.


ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮೇ.೨೦ರವರೆಗೆ ಪೋನ್ ಇನ್ ಕಾರ್ಯಕ್ರಮ

ಭದ್ರಾವತಿ, ಮೇ. ೧೩: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ದತೆಗಾಗಿ ವಿಷಯವಾರು ಕ್ಲಸ್ಟಾಂಶಗಳ ಬಗ್ಗೆ ಇರುವ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಮೇ.೧೪ ರಿಂದ ೨೦ರ ವರೆಗೆ ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾಲೂಕಿನ ಎಲ್ಲಾ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಬಂಧ ಮಾಹಿತಿ ನೀಡುವುದು. ಪ್ರತಿ ಶಾಲೆಯಿಂದ ಕನಿಷ್ಠ ೪ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಿಗ್ಗೆ ೧೦.೩೦ ರಿಂದ ೧೨.೩೦ರವರೆಗೆ ಕರೆ ಮಾಡಬಹುದಾಗಿದೆ. ಮೇ.೧೪ರಂದು ಕನ್ನಡ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಡಾ. ಬಿ.ಎ ತಂಬೂಳಿ-ಮೊ:೯೪೪೯೧೦೦೧೫೬, ಕೆ. ಬಸವರಾಜ-ಮೊ:೯೬೮೬೧೯೦೫೬೩, ಅಣ್ಣಪ್ಪ-ಮೊ:೮೩೧೦೬೩೬೬೪೪. ೧೫ರಂದು ಆಂಗ್ಲ ವಿಷಯ ಕುರಿತು ಶಿಕ್ಷಕರಾದ ದಿವಾಕರ್-ಮೊ:೯೬೧೧೦೨೨೪೧೮, ಶಾಲಿನ ಜಾದವ್-ಮೊ:೯೮೪೫೨೫೧೩೬೮, ಜೈ ಕುಮಾರ್-ಮೊ:೯೪೮೩೬೬೪೮೫೩, ಇಂತಿಯಾಜ್ ಅಹ್ಮದ್-ಮೊ:೯೪೮೦೧೪೨೬೬, ೧೬ರಂದು ಹಿಂದಿ ವಿಷಯ ಕುರಿತು ಶಿಕ್ಷಕರಾದ ಆರ್. ರೇಖಾ-ಮೊ:೮೦೫೦೧೫೬೩೬೬, ವಿಶ್ವನಾಥ್-ಮೊ:೯೦೬೦೩೦೭೫೮೯, ಭಾರತಿ-ಮೊ: ೯೪೮೦೪೮೬೮೯೩, ನಾಗರಾಜು-ಮೊ: ೯೪೮೦೧೪೨೦೬೬, ೧೮ರಂದು ಗಣಿತ ವಿಷಯ ಕುರಿತು ಶಿಕ್ಷಕರಾದ ಪರಮೇಶ್ವರಪ್ಪ-ಮೊ:೯೩೪೧೯೯೬೧೦೧, ಎಂ.ವಿ.ಎಸ್ ಸ್ವಾಮಿ-ಮೊ:೯೮೮೦೪೯೮೩೦೦, ಮುಕ್ತೇಶ್-ಮೊ:೯೪೮೧೨೫೭೪೯೫, ೧೯ರಂದು ವಿಜ್ಞಾನ ವಿಷಯ ಕುರಿತು ಶಿಕ್ಷಕರಾದ ಎಚ್. ಉಮೇಶ್-ಮೊ:೯೭೩೧೮೦೫೯೯೭, ಜಿ.ಕೆ ಶ್ರೀನಿವಾಸ್-ಮೊ:೬೩೬೧೬೭೬೮೭೦, ಜಿ. ಕೀರ್ತಿ-ಮೊ: ೯೯೦೨೧೯೫೫೫೪ ಹಾಗೂ ೨೦ರಂದು ಸಮಾಜ ವಿಜ್ಞಾನ ಕುರಿತು ಶಿಕ್ಷಕರಾದ ಸಿ.ಡಿ ಮಂಜುನಾಥ್:ಮೊ:೮೧೦೫೭೦೪೫೪೩, ಸತ್ಯನಾರಾಯಣ-ಮೊ:೮೧೯೭೭೧೮೮೯೭ ಮತ್ತು ಸಿ. ರಾಜು-ಮೊ:೯೯೪೫೯೯೪೦೩೬ ಪಾಲ್ಗೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ         ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಶಿಕ್ಷಣ ಸಂಯೋಜಕ   ರವಿಕುಮಾರ್ ಕೋರಿದ್ದಾರೆ.