ಮಂಗಳವಾರ, ಸೆಪ್ಟೆಂಬರ್ 23, 2025

ಇಂಧನ ರಹಿತ ಆಹಾರ ತಯಾರಿಕೆಯಿಂದ ಶ್ರಮ, ಸಮಯ ಉಳಿತಾಯ : ಭಾಗ್ಯ ಮೂರ್ತಿ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಇಂಧನ ರಹಿತ ಆಹಾರ ತಯಾರಿಕೆ ಸ್ಪರ್ಧೆ ಆರ್ಟ್ ಲೀವಿಂಗ್ ಯೋಗ ಶಿಕ್ಷಕ ಭಾಗ್ಯ ಮೂರ್ತಿ ಉದ್ಘಾಟಿಸಿದರು. 
    ಭದ್ರಾವತಿ : ಇಂಧನ ರಹಿತ ಆಹಾರ ತಯಾರಿಕೆಯಿಂದ ಹೆಚ್ಚಿನ ಶ್ರಮ ಹಾಗು ಸಮಯ ಉಳಿತಾಯವಾಗಲಿದ್ದು, ಮಹಿಳೆಯರು ಅಡುಗೆ ತಯಾರಿಕೆಯಲ್ಲಿ ಶುದ್ಧತೆ ಕಾಪಾಡಿಕೊಳ್ಳಬೇಕೆಂದು ಆರ್ಟ್ ಲೀವಿಂಗ್ ಯೋಗ ಶಿಕ್ಷಕ ಭಾಗ್ಯ ಮೂರ್ತಿ ಹೇಳಿದರು. 
    ಅವರು ಮಂಗಳವಾರ ನಾಡಹಬ್ಬ ದಸರಾ ಅಂಗವಾಗಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಇಂಧನ ರಹಿತ ಆಹಾರ ತಯಾರಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. 
    ವಿವಿಧ ಬಗೆಯ ಆಹಾರ ತಯಾರಿಕೆಗಳಿದ್ದು, ಇವುಗಳ ಬಗ್ಗೆ ಮಹಿಳೆಯರು ಇನ್ನೂ ಹೆಚ್ಚಿನ ಮಾಹಿತಿ ಹೊಂದಬೇಕು. ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಇದನ್ನು ಅರಿತುಕೊಳ್ಳಬೇಕೆಂದರು. 
    ಪೌರಾಯುಕ್ತ ಎನ್.ಕೆ ಹೇಮಂತ್ ಮಾತನಾಡಿ, ಮಹಿಳೆಯರು ಅಡುಗೆ ಮಾಡಿ ಬಡಿಸುವುದರಿಂದ ಪುರುಷರಾದ ನಾವುಗಳು ಸದೃಢವಾಗಿ, ಆರೋಗ್ಯದಿಂದರಲು ಸಾಧ್ಯವಾಗಿದೆ. ದಸರಾ ಅಂಗವಾಗಿ ಏರ್ಪಡಿಸಲಾಗಿರುವ ಸ್ಪರ್ಧೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶಿವಮೊಗ್ಗ ಪುಷ್ಪ ಶೆಟ್ಟಿ, ಸುಜಾತ ಮತ್ತು ರೇಖಾ ಕಾರ್ಯ ನಿರ್ವಹಿಸಿದರು. ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ ಕಾರ್ಯಕ್ರಮ ನಿರೂಪಿಸಿದರು. 
    ನಗರದ ಸ್ವ-ಸಹಾಯ ಸಂಘಗಳ ಮಹಿಳೆಯರು ಹಾಗು ವಿವಿಧ ಮಹಿಳಾ ಸಂಘಟನೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 

ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ಯತ್ನಾಳ್ ಶಾಸಕ ಸ್ಥಾನ ವಜಾ ಮಾಡಿ ಪ್ರಕರಣ ದಾಖಲಿಸಿ

ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಡಿಎಸ್‌ಎಸ್ ಮನವಿ ಸಲ್ಲಿಸಿ ಆಗ್ರಹ 

ನಾಡಹಬ್ಬ ದಸರಾ ಅಚರಣೆ ಸಂದರ್ಭದಲ್ಲಿ ದಲಿತ ಮಹಿಳೆಯರ ಭಾವನೆಗಳಿಗೆ ಧಕ್ಕೆ ಬರುವಂತೆ ಹೇಳಿಕೆ ನೀಡುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆಗ್ರಹಿಸಿ ಮಂಗಳವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. 
    ಭದ್ರಾವತಿ: ನಾಡಹಬ್ಬ ದಸರಾ ಅಚರಣೆ ಸಂದರ್ಭದಲ್ಲಿ ದಲಿತ ಮಹಿಳೆಯರ ಭಾವನೆಗಳಿಗೆ ಧಕ್ಕೆ ಬರುವಂತೆ ಹೇಳಿಕೆ ನೀಡುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಕರ್ನಾಟಕ    ದಲಿತ ಸಂಘರ್ಷ ಸಮಿತಿ(ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆಗ್ರಹಿಸಿ ಮಂಗಳವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. 
    ಈ ಬಾರಿ ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ ನಂತರ ಕೋಮುವಾದಿಗಳು ನಿರಂತರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ವಿರೋಧ ವ್ಯಕ್ತಪಡಿಸುವ ಜೊತೆಗೆ `ತಾಯಿ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲು ಸನಾತನ ಧರ್ಮದವರು ಹೊರತುಪಡಿಸಿ ಒಬ್ಬ ದಲಿತ ಮಹಿಳೆಗೂ ಕೂಡ ಅಧಿಕಾರ ಇಲ್ಲ' ಎಂದು ಹೇಳಿಕೆ ನೀಡುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಲಾಯಿತು. 
    ಈ ಹೇಳಿಕೆ ಮೂಲಕ ಯತ್ನಾಳ್ ಕೋಮು ಬಣ್ಣ ಬಯಲಾಗಿದೆ. ಈ ದೇಶದ ಸಂವಿಧಾನದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸಮಾನತೆ ನೀಡಲಾಗಿದೆ. ಪ್ರತಿಯೊಬ್ಬರು ಸಮಾನರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಹೇಳಿದ್ದಾರೆ. ಸಂವಿಧಾನವನ್ನು ಗಾಳಿಗೆ ತೂರಿ ಅಗೌರವದಿಂದ ವರ್ತಿಸುವ ಜೊತೆಗೆ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿರುವ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಲಾಯಿತು. 
    ಇದಕ್ಕೂ ಮೊದಲು ರಂಗಪ್ಪ ವೃತ್ತದಿಂದ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ನಂತರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
    ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ರಾಜ್ಯ ಮಹಿಳಾ ಸಹ ಸಂಚಾಲಕಿ ಶಾಂತಮ್ಮ, ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಸಂದೀಪ್ ಆರ್. ಅರಹತೊಳಲು, ಜಿಲ್ಲಾ ಸಹ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯ ಮಣಿ ಜಿಂಕ್‌ಲೈನ್, ಜಿಲ್ಲಾ ಸಂಘಟನಾ ಸಂಚಾಲಕಿ ಸುವರ್ಣಮ್ಮ, ಜಿಲ್ಲಾ ಸಮಿತಿ ಸದಸ್ಯ ಕೆ. ರಂಗನಾಥ್, ಜಿಲ್ಲಾ ಅಂಗವಿಕಲರ ವಿಭಾಗದ ಕಾಣಿಕ್‌ರಾಜ್, ತಾಲೂಕು ಸಂಘಟನಾ ಸಂಚಾಲಕ ಕೆ. ಸುರೇಶ್, ನರಸಿಂಹ, ಪಿ.ಸಿ ರಾಜು(ದಾಸ್), ಸುರೇಶ್ ಅಗರದಹಳ್ಳಿ, ಗಿರೀಶ್, ಕೃಷ್ಣಪ್ಪ, ಬಿ. ಸಂಗಮೇಶ, ಯೋಗೇಶ್ವರ ನಾಯ್ಕ, ರಫೀಕ್ ಅಹಮದ್, ಕೆ. ರಾಮಲಿಂಗಂ, ಎನ್. ಪ್ರಸನ್ನಕುಮಾರ್, ಎಂ. ರೇಖಾ, ಆರ್. ವೆಂಕಟೇಶ್, ಸಿ. ಜಯಪ್ಪ, ಪರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಿ.ಎಸ್.ಟಿ ದರಗಳಲ್ಲಿ ಭಾರಿ ಕಡಿತ, ಸುಧಾರಣೆ : ಬಡ-ಮಧ್ಯಮ ವರ್ಗದವರಿಗೆ ಅನುಕೂಲ

ಸಿಹಿ ಹಂಚಿಕೆ ಮೂಲಕ ಪಟಾಕಿ ಸಿಡಿಸಿ ಬಿಜೆಪಿ ಮಂಡಲದಿಂದ ಸಂಭ್ರಮಾಚರಣೆ  



ಕೇಂದ್ರ ಸರ್ಕಾರ ಜಿ.ಎಸ್.ಟಿ ದರಗಳಲ್ಲಿ ಭಾರಿ ಕಡಿತ ಹಾಗೂ ಸುಧಾರಣೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ನಗರದ ರಂಗಪವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.
    ಭದ್ರಾವತಿ : ಕೇಂದ್ರ ಸರ್ಕಾರ ಜಿ.ಎಸ್.ಟಿ ದರಗಳಲ್ಲಿ ಭಾರಿ ಕಡಿತ ಹಾಗೂ ಸುಧಾರಣೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ನಗರದ ರಂಗಪವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.
      ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ಭಾರಿ ಆದಾಯ ತೆರಿಗೆ ವಿನಾಯಿತಿಯಿಂದ ದಿನಬಳಕೆಯ ಹಲವಾರು ವಸ್ತುಗಳ ಬೆಲೆಗಳು ಕಡಿಮೆಯಾಗಲಿದ್ದು, ಆಹಾರ ಪದಾರ್ಥಗಳು, ಔಷಧಿಗಳು, ಸೋಪು, ಬ್ರಷ್, ಪೇಸ್ಟ್, ಆರೋಗ್ಯ ಮತ್ತು ಜೀವವಿಮೆ ಸೌಲಭ್ಯ ಸೇರಿದಂತೆ ಅನೇಕ ಸರಕು ಮತ್ತು ಸೇವೆಗಳು ತೆರಿಗೆ ಮುಕ್ತ ಅಥವಾ ಕೇವಲ ಶೇ.೫ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದು ಪ್ರಧಾನಿ  ನರೇಂದ್ರ ಮೋದಿಯವರು ನೀಡಿರುವ ದಸರಾ ಹಬ್ಬದ ಕೊಡುಗೆಯಾಗಿದ್ದು, ಹಬ್ಬದ ದಿನದಿಂದಲೇ ಜಾರಿಗೆ ಬಂದಿರುತ್ತದೆ ಎಂದರು.
    ಭಾರಿ ಕಡಿತ ಹಾಗೂ ಸುಧಾರಣೆ ಜಾರಿಗೆ ತಂದಿರುವುದು ವ್ಯಾಪಾರಿಗಳು, ಉದ್ದಿಮೆದಾರರು, ವೃತ್ತಿಪರರು, ಮುಖ್ಯವಾಗಿ ಬಡ ಹಾಗು ಮಧ್ಯಮ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹಾಗು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. 
    ಪ್ರಮುಖರಾದ ಮಂಗೋಟೆ ರುದ್ರೇಶ್, ಎಂ.ಎಸ್ ಸುರೇಶಪ್ಪ, ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತನಾಯ್ಕ, ಪ್ರಸನ್ನ ಕುಮಾರ್,  ಜಿ.ವಿ ಕುಮಾರ್, ರವಿಕುಮಾರ್, ಅಶೋಕ್ ರಾವ್, ರಾಜಶೇಖರ್ ಉಪ್ಪಾರ್, ಧನುಷ್ ಬೋಸ್ಲೆ, ಶ್ರೀನಾಥ್ ಆಚಾರ್, ಬಿ.ಆರ್ ಸಚ್ಚಿದಾನಂದ, ಈಶ್ವರ್, ದಿವ್ಯ ಆದರ್ಶ್, ಪ್ರದೀಪ್ ಗೌಡರ್, ಆರ್. ದೀಪಕ್, ರುದ್ರೇಶ್ ಜಾವಳ್ಳಿ, ನಂಜಪ್ಪ, ಪ್ರೇಮ್, ಹರೀಶ್ ಕುಮಾರ್, ನಂದೀಶ್, ಸುಲೋಚನಾ ಪ್ರಕಾಶ್, ಲೋಲಾಕ್ಷಿ ರಾಜ್‌ಗುರು, ಆಶಾ ಪುಟ್ಟಸ್ವಾಮಿ, ಜಯಲಕ್ಷ್ಮಿ, ಕವಿತಾರಾವ್ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.