ಮಂಗಳವಾರ, ಸೆಪ್ಟೆಂಬರ್ 23, 2025

ಇಂಧನ ರಹಿತ ಆಹಾರ ತಯಾರಿಕೆಯಿಂದ ಶ್ರಮ, ಸಮಯ ಉಳಿತಾಯ : ಭಾಗ್ಯ ಮೂರ್ತಿ

ನಾಡಹಬ್ಬ ದಸರಾ ಅಂಗವಾಗಿ ಭದ್ರಾವತಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಇಂಧನ ರಹಿತ ಆಹಾರ ತಯಾರಿಕೆ ಸ್ಪರ್ಧೆ ಆರ್ಟ್ ಲೀವಿಂಗ್ ಯೋಗ ಶಿಕ್ಷಕ ಭಾಗ್ಯ ಮೂರ್ತಿ ಉದ್ಘಾಟಿಸಿದರು. 
    ಭದ್ರಾವತಿ : ಇಂಧನ ರಹಿತ ಆಹಾರ ತಯಾರಿಕೆಯಿಂದ ಹೆಚ್ಚಿನ ಶ್ರಮ ಹಾಗು ಸಮಯ ಉಳಿತಾಯವಾಗಲಿದ್ದು, ಮಹಿಳೆಯರು ಅಡುಗೆ ತಯಾರಿಕೆಯಲ್ಲಿ ಶುದ್ಧತೆ ಕಾಪಾಡಿಕೊಳ್ಳಬೇಕೆಂದು ಆರ್ಟ್ ಲೀವಿಂಗ್ ಯೋಗ ಶಿಕ್ಷಕ ಭಾಗ್ಯ ಮೂರ್ತಿ ಹೇಳಿದರು. 
    ಅವರು ಮಂಗಳವಾರ ನಾಡಹಬ್ಬ ದಸರಾ ಅಂಗವಾಗಿ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಇಂಧನ ರಹಿತ ಆಹಾರ ತಯಾರಿಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. 
    ವಿವಿಧ ಬಗೆಯ ಆಹಾರ ತಯಾರಿಕೆಗಳಿದ್ದು, ಇವುಗಳ ಬಗ್ಗೆ ಮಹಿಳೆಯರು ಇನ್ನೂ ಹೆಚ್ಚಿನ ಮಾಹಿತಿ ಹೊಂದಬೇಕು. ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಇದನ್ನು ಅರಿತುಕೊಳ್ಳಬೇಕೆಂದರು. 
    ಪೌರಾಯುಕ್ತ ಎನ್.ಕೆ ಹೇಮಂತ್ ಮಾತನಾಡಿ, ಮಹಿಳೆಯರು ಅಡುಗೆ ಮಾಡಿ ಬಡಿಸುವುದರಿಂದ ಪುರುಷರಾದ ನಾವುಗಳು ಸದೃಢವಾಗಿ, ಆರೋಗ್ಯದಿಂದರಲು ಸಾಧ್ಯವಾಗಿದೆ. ದಸರಾ ಅಂಗವಾಗಿ ಏರ್ಪಡಿಸಲಾಗಿರುವ ಸ್ಪರ್ಧೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಶಿವಮೊಗ್ಗ ಪುಷ್ಪ ಶೆಟ್ಟಿ, ಸುಜಾತ ಮತ್ತು ರೇಖಾ ಕಾರ್ಯ ನಿರ್ವಹಿಸಿದರು. ಸಮುದಾಯ ಸಂಘಟನಾ ಅಧಿಕಾರಿ ಎಂ. ಸುಹಾಸಿನಿ ಕಾರ್ಯಕ್ರಮ ನಿರೂಪಿಸಿದರು. 
    ನಗರದ ಸ್ವ-ಸಹಾಯ ಸಂಘಗಳ ಮಹಿಳೆಯರು ಹಾಗು ವಿವಿಧ ಮಹಿಳಾ ಸಂಘಟನೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ