Monday, December 4, 2023

ಮೋದಿ ಪ್ರಧಾನಿ ಆದ ನಂತರ ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ ಪರಿಚಯ : ಕೆ.ಎಸ್ ಈಶ್ವರಪ್ಪ

ದೇವಾಲಯ ಸಂವರ್ಧನಾ ಸಮಿತಿ-ಕರ್ನಾಟಕ ಹಾಗು ಬೆಂಗಳೂರಿನ ಸುಧರ್ಮ ಜಾಗೃತಿ ಟ್ರಸ್ಟ್ ವತಿಯಿಂದ ಭದ್ರಾವತಿ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ೧೬ ದಿನಗಳ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ ಮತ್ತು ದೀಕ್ಷಾಂತ ಕಾರ್ಯಕ್ರಮ ಸೋಮವಾರ ನಡೆಯಿತು.  ಚಿತ್ರದುರ್ಗ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.
    ಭದ್ರಾವತಿ: ಮೋದಿಯವರು ಪ್ರಧಾನಿ ಆದ ನಂತರ ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ ಪರಿಚಯವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು.
    ದೇವಾಲಯ ಸಂವರ್ಧನಾ ಸಮಿತಿ-ಕರ್ನಾಟಕ ಹಾಗು ಬೆಂಗಳೂರಿನ ಸುಧರ್ಮ ಜಾಗೃತಿ ಟ್ರಸ್ಟ್ ವತಿಯಿಂದ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ ೧೬ ದಿನಗಳ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ ಮತ್ತು ದೀಕ್ಷಾಂತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
    ಹೊರದೇಶಿಗರು ಶ್ರೀಮಂತರಾಗಿದ್ದರೂ ಶಿವರಾತ್ರಿಯಂದು ಭಾರತಕ್ಕೆ ಆಗಮಿಸಿ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಅನುಸರಿಸುತ್ತಾರೆ. ಇದು ನಮ್ಮ ಸಂಸ್ಕೃತಿಗೆ ಇರುವ ಹಿರಿಮೆ. ಮಹಿಳೆಯರು ಮಕ್ಕಳನ್ನು ದೇವಾಲಯಗಳಿಗೆ ಕರೆತರುವ ಮೂಲಕ ಯುವಜನತೆಯಲ್ಲಿಯೂ ಧಾರ್ಮಿಕ ಭಾವನೆಗಳನ್ನು ಬೆಳೆಸಬೆಕು. ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆದಷ್ಟು ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯ. ದೇಶಭಕ್ತಿ ಬೆಳೆಸುವಲ್ಲಿಯೂ ದೇವಾಲಯಗಳ ಪಾತ್ರ ಬಹಳಷ್ಟಿದೆ. ರಾಜ್ಯದ ೨.೫ ಲಕ್ಷ ಅರ್ಚಕರಲ್ಲಿ ಕೆಲವರು ಪಾಂಡಿತ್ಯಗಳಿಸಿದ್ದು, ಉಳಿದವರು ಸಹ ತರಬೇತಿ ಪಡೆಯುವುದು ಮುಖ್ಯ ಎಂದರು.
    ಚಿತ್ರದುರ್ಗ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಬಸವಣ್ಣನವರು ದೇವರು ಮತ್ತು ದೇವಾಲಯಗಳನ್ನು ವಿರೋಧಿಸುತ್ತಿದ್ದರು ಎಂಬ ಕೆಲವರ ಹೇಳಿಕೆ ತಪ್ಪುಕಲ್ಪನೆ. ಬಸವಣ್ಣ ವಿರೋಧಿಸಿದ್ದು ಅರ್ಚಕರ ಕೆಲವು ತಪ್ಪುಗಳನ್ನು ಹೊರತು, ದೇವರು ಮತ್ತು ದೇವಾಲಯಗಳನ್ನಲ್ಲ ಎಂದರು.
    ಸಂಸ್ಕಾರವಂತರನ್ನು ಗೌರವಿಸುವ ದೇಶ ಭಾರತ. ಪಶುಪಕ್ಷಿಗಳು ಪ್ರತಿದಿನ ತಮ್ಮ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಮಾಡುವ ಮೂಲಕ ಸಂಸ್ಕಾರ ಹೊಂದಿವೆ. ಆದ್ದರಿಂದ ಮನುಷ್ಯರಾದ ನಾವುಗಳು ಜೀವನದಲ್ಲಿ ಸಂಸ್ಕಾರ, ಶಿಸ್ತು, ಧಾರ್ಮಿಕತೆಯನ್ನು ಅಳವಡಿಸಿಕೊಂಡು ಉನ್ನತ ರೀತಿ ಬದುಕಬೇಕೆಂದು ಕರೆ ನೀಡಿದರು.
    ಭಾರತದಲ್ಲಿ ಮತಾಂತರಕ್ಕೆ ಜಾತಿ ತಾರತಮ್ಯವೇ ಕಾರಣ. ಅರ್ಚಕರು ಪ್ರಯತ್ನಸಿದರೆ ಮತಾಂತರ ತಡೆಯಬಹುದು. ಮತಾಂತರ ತಡೆಯುವಲ್ಲಿ ಅರ್ಚಕರ ಪಾತ್ರ ಬಹುಮುಖ್ಯವಾಗಿದೆ. ಕೆಲವು ಜನರಲ್ಲಿ ಶಿಸ್ತು ಕಲಿಸಬೇಕು, ಜಾತಿ ಹೆಸರಿನಲ್ಲಿ ದೂರವಿರಿಸಬಾರದು. ಇಂತಹ ಘಟನೆಗಳಿಂದಲೇ ಮತಾಂತರಗಳು ನಡೆಯುವುದು ಎಂದರು.
    ವೇದಿಕೆಯಲ್ಲಿ ಪಾಂಡುರಂಗ ಸಾಧಾಕಾಶ್ರಮದ ಮುಕ್ತಾನಂದ ಮಾಯಿ (ಮಾತಾಜಿ), ಶಿರಾಳಕೊಪ್ಪದ ಬಾಲಚಂದ್ರ ಶಾಸ್ತ್ರಿಗಳು, ಶಿಬಿರದ ಪ್ರಮುಖ್ ಜಯರಾಮ್ ಗೊಂದಿ, ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ್ ಮನೋಹರ ಮಠದ್ ಮತ್ತಿತರರಿದ್ದರು. ತರಬೇತಿ ಪಡೆದ ಅರ್ಚಕರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ವಾಹನ ಸವಾರರಿಗೆ ಪೂರ್ಣ ಪ್ರಮಾಣದ ಗುಣಮಟ್ಟದ ಹೆಲ್ಮೆಟ್ ಧರಿಸಲು ಜಾಗೃತಿ

ಉಪವಿಭಾಗದ ಪೊಲೀಸರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಭಾಗಿ

ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಭದ್ರಾವತಿ ನಗರದ ಉಪವಿಭಾಗದ ಪೊಲೀಸರು ಸೋಮವಾರ ವಾಹನ ಸವಾರರಿಗೆ ಪೂರ್ಣ ಪ್ರಮಾಣದ ಐಎಸ್‌ಐ ಪ್ರಮಾಣೀಕೃತ ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
    ಭದ್ರಾವತಿ: ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ನಗರದ ಉಪವಿಭಾಗದ ಪೊಲೀಸರು ಸೋಮವಾರ ವಾಹನ ಸವಾರರಿಗೆ ಪೂರ್ಣ ಪ್ರಮಾಣದ ಐಎಸ್‌ಐ ಪ್ರಮಾಣೀಕೃತ ಗುಣಮಟ್ಟದ ಹೆಲ್ಮೆಟ್ ಧರಿಸುವ ಮೂಲಕ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
    ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ವಾಹನ ಸವಾರರಿಗೆ ತಿಳುವಳಿಕೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ವಾಹನ ಸವಾರರಿಗೆ ಈ ಹಿಂದೆ ಅರ್ಧ ಹೆಲ್ಮೆಟ್ ಧರಿಸದಂತೆ ಸೂಚನೆ ನೀಡಿದ್ದರೂ ಸಹ ಬಳಸುತ್ತಿರುವುದು ಸರಿಯಲ್ಲ. ನಿಯಮ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ ಎಂದರು.
    ಹೆಲ್ಮೆಟ್ ವಿಚಾರ ಕಾನೂನು ಕ್ರಮ ಮಾತ್ರವಲ್ಲ. ವಾಹನ ಸವಾರರ ಜವಾಬ್ದಾರಿ. ದಂಡ ಪಾವತಿಯಿಂದ ಸಮಸ್ಯೆ ಸಂಪೂರ್ಣ ನಿವಾರಣೆ ಅಸಾಧ್ಯ. ಜನರು ಸುರಕ್ಷತೆಯನ್ನು ತಮ್ಮ ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರ ಸುರಕ್ಷತೆ ಸಾಧ್ಯ ಎಂದು ಸಲಹೆ ನೀಡಿದರು.
    ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್, ನಗರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ವಿವಿಧ ಠಾಣೆಗಳ ಠಾಣಾಧಿಕಾರಿಗಳಾದ  ಶಾಂತಲ, ರಮೇಶ್, ಶರಣಪ್ಪ ಹಂಡ್ರಾಗಲ್, ಸಹಾಯಕ ಠಾಣಾಧಿಕಾರಿ ಎಂ. ರಾಜಪ್ಪ ಸೇರಿದಂತೆ ಹಲವು ಸಿಬ್ಬಂದಿಗಳು ಪಾಲ್ಗೊಂಡಿದ್ದರು.  
    ಇದಕ್ಕೂ ಮೊದಲು ನಗರದ ಪ್ರಮುಖ ವೃತ್ತಗಳಲ್ಲಿ ಕಾರ್ಯಾಚರಣೆ ನಡೆಸಿ ಅರ್ಧ ಹೆಲ್ಮೆಟ್ ಧರಿಸಿರುವ ದ್ವಿಚಕ್ರ ವಾಹನ ಸವಾರರಿಂದ ಹೆಲ್ಮೆಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು.

ನಾರಾಯಣಸ್ವಾಮಿ ನಾಯ್ಡು ಸ್ಮರಣೆ : ಮಕ್ಕಳಿಗೆ ಬ್ಯಾಗ್ ವಿತರಣೆ

ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಭದ್ರಾವತಿ ತಾಲೂಕು ಶಾಖೆ ನೇತೃತ್ವದಲ್ಲಿ ದಿವಂಗತ ನಾರಾಯಣಸ್ವಾಮಿ ನಾಯ್ಡುರವರ ನೆನಪಿಗಾಗಿ ಕಡದಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ  ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು.
    ಭದ್ರಾವತಿ: ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ತಾಲೂಕು ಶಾಖೆ ನೇತೃತ್ವದಲ್ಲಿ ದಿವಂಗತ ನಾರಾಯಣಸ್ವಾಮಿ ನಾಯ್ಡುರವರ ನೆನಪಿಗಾಗಿ ಕಡದಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ  ಶಾಲಾ ಬ್ಯಾಗ್‌ಗಳನ್ನು ವಿತರಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಲಾಯಿತು.
    ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್, ಪ್ರಾಂತೀಯ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಎಂ. ದಿವಾಕರ್, ವೈಸ್ ಛೇರ್ಮನ್ ರಾಮಮೂರ್ತಿ ನಾಯ್ಡು, ಚಂದ್ರಶೇಖರ್, ದಿವಂಗತ ನಾರಾಯಣಸ್ವಾಮಿ ಅವರ ಪುತ್ರ ಶ್ರೀನಿವಾಸ್ ನಾಯ್ಡು ಹಾಗು ಕುಟುಂಬ ವರ್ಗದವರು,  ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜಮಹಾರಾಜರಂತೆ ಇಂದಿನ ಸರ್ಕಾರಗಳು ಕಲಾವಿದರಿಗೆ ಪ್ರೋತ್ಸಾಹ ನೀಡಲಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಜನಪದ ಜಾತ್ರೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ: ಹಿಂದೆ ಕಲಾವಿದರಿಗೆ ರಾಜಮಹಾರಾಜರು ನೀಡುತ್ತಿದ್ದ ಗೌರವ, ಪ್ರೋತ್ಸಾಹ ಇಂದು ಕಂಡು ಬರುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಇಂದಿನ ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಆಗ್ರಹಿಸಿದರು.
    ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಜನಪದ ಜಾತ್ರೆ ಉದ್ಘಾಟಿಸಿ ಮಾತನಾಡಿದರು.
    ರಾಜರ ಆಳ್ವಿಕೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದ ಮಾದರಿಯಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಜರ ಕಾಲದಲ್ಲಿ ಇನಾಂ ನೀಡುತ್ತಿದ್ದಂತೆಯೇ ಇಂದು ಕಲಾವಿದರಿಗೆ ಆರ್ಥಿಕ ಸಹಕಾರ ನೀಡಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
    ಜಾನಪದ ಪುರಾತನ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಕ್ಕಳನ್ನು ದುಶ್ಚಟಗಳಿಂದ ದೂರಮಾಡಲು ಕಲೆಗಳನ್ನು ಕಲಿಸುವುದು ಮುಖ್ಯ. ವಿದ್ಯಾಭ್ಯಾಸದ ಜೊತೆಗೆ ಕಲೆಗಳು ಸಹ ಮುಖ್ಯ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ಮಕ್ಕಳಿಗೂ ಅರಿವು ಮೂಡಿಸಬೇಕೆಂದು ಕರೆ ನೀಡಿದರು.
    ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಜಾನಪದರು ವಿದ್ಯಾವಂತರಲ್ಲ, ಆದರೆ ಬದುಕಿನ ಮಹತ್ವ ಅರಿತವರು. ಆರೋಗ್ಯದ ಮಹತ್ವ ತಿಳಿದವರು. ೬೪ವಿದ್ಯೆಗಳಿಗೂ ತಾಯಿ ಬೇರು ಭಾರತ. ಜ್ಞಾನಪೀಠ ಪಡೆದ ಎಲ್ಲ ಸಾಹಿತಿಗಳು ಹಳ್ಳಿಯ ಮಹತ್ವ ಅರಿತಿದ್ದರು. ಆದ್ದರಿಂದ ಅವರಿಗೆ ಬದುಕು-ಬವಣೆಗಳ ಮಹತ್ವ ತಿಳಿದಿತ್ತು ಎಂದರು.
    ವೇದಿಕೆಯಲ್ಲಿ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್, ಬೆಂಗಳೂರು ಬ್ಯಾಟರಾಯನಪುರ ಪೊಲೀಸ್ ಠಾಣಾಧಿಕಾರಿ ಸಿ. ಯೋಗೀಶ್ ಕುಮಾರ್, ರಂಗಕರ್ಮಿ ಸಾಸ್ವೇಹಳ್ಳಿ ಸತೀಶ್, ಚಲನಚಿತ್ರ ನಿರ್ದೇಶಕ ಹರ್ಷಪ್ರಿಯ, ನಗರಸಭೆ ಸದಸ್ಯ ಬಿ.ಎಂ ಮಂಜುನಾಥ್, ಮುಖಂಡರಾದ ಬಿ.ಕೆ ಜಗನ್ನಾಥ್, ಬಿ.ಎಸ್ ಗಣೇಶ್, ಉಮೇಶ್, ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ಕಾರ್ಯದರ್ಶಿ ಜಗದೀಶ್, ದಿವಾಕರ್ ಸೇರಿದಂತೆ ಮತ್ತಿತರರಿದ್ದರು.
    ಸಿಂಧು ಪ್ರಾರ್ಥಿಸಿ, ಜಗದೀಶ್ ಸ್ವಾಗತಿಸಿದರು. ಸೌಮ್ಯ ನಿರೂಪಿಸಿ, ವಂದಿಸಿದರು. ಇದಕ್ಕೂ ಮೊದಲು ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಿಂದ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದವರೆಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.