Friday, November 22, 2024

೧೦೦ ದಿನ ಪೂರೈಸಿದ ನಿರ್ಗತಿಕರಿಗೆ ಉಚಿತ ಉಪಾಹಾರ ಸೇವಾ ಕಾರ್ಯ


ಭದ್ರಾವತಿ ನಗರದ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ನಿರ್ಗತಿಕರಿಗೆ ಬೆಳಗಿನ ಉಚಿತ ಉಪಾಹಾರ ವಿತರಿಸುವ ಸೇವಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದ್ದು, ಶನಿವಾರ ೧೦೦ನೇ ದಿನ ಪೂರೈಸಿದೆ.
    ಭದ್ರಾವತಿ : ನಗರದ ತಮಿಳು ಯೂತ್ಸ್ ಅಸೋಸಿಯೇಷನ್ ವತಿಯಿಂದ ನಿರ್ಗತಿಕರಿಗೆ ಬೆಳಗಿನ ಉಚಿತ ಉಪಾಹಾರ ವಿತರಿಸುವ ಸೇವಾ ಕಾರ್ಯ ನಡೆಸಿಕೊಂಡು ಬರಲಾಗುತ್ತಿದ್ದು, ಶನಿವಾರ ೧೦೦ನೇ ದಿನ ಪೂರೈಸಿದೆ.
    ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ತಮಿಳು ಯೂತ್ಸ್ ಅಸೋಸಿಯೇಷನ್ ಸೇವಾ ಚಟುವಟಿಕೆಗಳನ್ನು ಕೈಗೊಂಡಿದ್ದು, ವಿಶೇಷವಾಗಿ ೧೦೦ನೇ ದಿನದ ಅಂಗವಾಗಿ ಬೆಳಿಗ್ಗೆ ರಂಗಪ್ಪ ವೃತ್ತದಲ್ಲಿ ಉಚಿತ ಉಪಾಹಾರ ವಿತರಣೆ ಮಾಡಲಾಯಿತು. 
    ತಮಿಳು ಯೂತ್ಸ್ ಅಸೋಸಿಯೇಷನ್ ಸೇವಾ ಕಾರ್ಯಕ್ಕೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಪೂರಕವಾಗುವ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ನೆರವಾಗಿ : ವಿ. ವಿನೋದ್


ಪ್ರಿಯಾಂಕ ಖರ್ಗೆ ಅಭಿಮಾನಿಗಳ ಬಳಗ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್  ಖರ್ಗೆರವರ ಹುಟ್ಟುಹಬ್ಬದ ಪ್ರಯುಕ್ತ ೨೫೦ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಶುಕ್ರವಾರ ಆಯೋಜಿಸಲಾಗಿತ್ತು. 
    ಭದ್ರಾವತಿ: ಸರ್ಕಾರಿ ಶಾಲೆಗೆ ಬರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದ ಮಕ್ಕಳಾಗಿರುತ್ತಾರೆ. ಅವರ ಶಿಕ್ಷಣಕ್ಕೆ ಪೂರಕವಾಗುವ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೆರವಾಗಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು. 
       ಪ್ರಿಯಾಂಕ ಖರ್ಗೆ ಅಭಿಮಾನಿಗಳ ಬಳಗ ತಾಲೂಕು ಶಾಖೆ ವತಿಯಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್  ಖರ್ಗೆರವರ ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ೨೫೦ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  
    ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು. 
    ತರೀಕೆರೆ ಎಆರ್‌ಟಿಓ ಎನ್. ಮಂಜುನಾಥ್ ಮಾತನಾಡಿ, ಯುವರಾಜಕಾರಣಿಯಾಗಿರುವ ಪ್ರಿಯಾಂಕ್ ಖರ್ಗೆಯವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅವರು ಬಸವ, ಅಂಬೇಡ್ಕರ್ ಅವರ ಅನುಯಾಯಿಯಾಗಿ ಅವರ ಸಿದ್ಧಾಂತಗಳ ಪ್ರಕಾರ ಪ್ರಬುದ್ಧ ರಾಜಕೀಯ ಮತ್ತು ಜನಸೇವೆ ಮಾಡುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಪ್ರಯುಕ್ತ  ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪೂರಕವಾಗಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಹಾಗೂ ಲೇಖನ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದರು. 
    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಯು. ಮಹದೇವಪ್ಪ, ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಆರ್ ರೇವಣ್ಣಪ್ಪ, ನಿವೃತ್ತ ಮುಖ್ಯ ಶಿಕ್ಷಕ ಡಿ. ಕರಿಯಪ್ಪ, ದಲಿತ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ. ಚನ್ನಪ್ಪ,  ಪ್ರಿಯಾಂಕ ಖರ್ಗೆ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಆದರ್ಶ ಸಿ ಪಾಟೀಲ್ ಹಾಗೂ ತಾಲೂಕ ಪ್ರಧಾನ ಕಾರ್ಯದರ್ಶಿ ಸುನಿಲ್ ಕೋಠಿ,  ಭೂತನಗುಡಿ ಶಾಲೆ ಮುಖ್ಯ ಶಿಕ್ಷಕರಾದ ಹಿರೇಮಠ, ಸುಜಾತ ಶಿಕ್ಷಕರಾದ ಪ್ರಕಾಶ್, ಮೀನಾಕ್ಷಮ್ಮ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ರಾಘವೇಂದ್ರ ಸ್ವಾಮಿ ಮಠದಲ್ಲಿ ಆಶ್ಲೇಷ ಬಲಿ ಪೂಜೆ

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಪ್ರತಿವರ್ಷದಂತೆ ಈ ವರ್ಷ ಸಹ ಆಶ್ಲೇಷ ಬಲಿ ಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. 
ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಪ್ರತಿವರ್ಷದಂತೆ ಈ ವರ್ಷ ಸಹ ಆಶ್ಲೇಷ ಬಲಿ ಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. 
  ಪ್ರಧಾನ ಅರ್ಚಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ಮತ್ತು ಹೋಮ ಹಾಗೂ ಆಶ್ಲೇಷ ಬಲಿ ಪೂಜೆ ನೆರವೇರಿತು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರಳಿಧರ ತಂತ್ರಿ, ಉಪಾಧ್ಯಕ್ಷರಾದ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ, ಖಜಾಂಚಿ ನಿರಂಜನಾಚಾರ್ಯ, ಶುಭ ಗುರುರಾಜ್, ಸುಪ್ರಿತ ತಂತ್ರಿ, ವಿದ್ಯಾನಂದ ನಾಯಕ ಹಾಗೂ ಗೋಪಾಲ್ ಆಚಾರ್, ಶ್ರೀನಿವಾಸ ಆಚಾರ್, ಸುಧೀಂದ್ರ ಜೆ. ತೀರ್ಥ, ಕೇಶವಮೂರ್ತಿ, ಮಾಧುರಾವ್, ಪ್ರಶಾಂತ್ ಸೇರಿದಂತೆ ಹಳೇನಗರ, ಹೊಸಮನೆ, ನ್ಯೂಟೌನ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.  

ಉಪ ವಿಭಾಗಾಧಿಕಾರಿ ವಿರುದ್ಧ ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷ, ಉಲ್ಲಂಘನೆ ಆರೋಪ

ಕ್ರಮಕ್ಕೆ ಆಗ್ರಹಿಸಿ ನ.೨೬ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ 

 
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು
   ಭದ್ರಾವತಿ : ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣರವರ ವಿರುದ್ಧ ಜಾತಿನಿಂದನೆ(ಅಟ್ರಾಸಿಟಿ) ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆಗ್ರಹಿಸುವ ಜೊತೆಗೆ ನ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಈ ಸಂಬಂಧ ತಾಲೂಕು ಕಛೇರಿ ಮುಂಭಾಗ ಪ್ರತಿಭಟನಾ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿ.ಟಿ.ಸಿ.ಎಲ್ ಕಾಯ್ದೆ ಪ್ರಕಾರ ಪ.ಜಾ/ವರ್ಗದ ಜನರಿಗೆ ಸರ್ಕಾರ ನೀಡಿದಂತಹ ಜಮೀನು ಸರ್ಕಾರದ ಅನುಮತಿ ಇಲ್ಲದೆ ಮಾರಾಟವಾಗಲೀ, ಭೋಗ್ಯವಾಗಲೀ ಇನ್ನಿತರೆ ಯಾವುದೇ ರೂಪದಲ್ಲಿ ಮಾರಾಟ ಮಾಡುವುದು ನಿಷೇಧವಾಗಿದೆ. ಒಂದು ವೇಳೆ ಸರ್ಕಾರದ ಅನುಮತಿ ಪಡೆಯದೆ ಪರಬಾರೆ ಮಾಡಿದರೆ ಪಿ.ಟಿ.ಸಿ.ಎಲ್ ಕಾಯ್ದೆಯ ಪ್ರಕಾರ ಪುನಃ ಮೂಲ ಮಂಜೂರುದಾರರಿಗೆ ಜಮೀನು ಹಿಂತಿರುಗಿಸಿ ಅವರ ಹೆಸರಿಗೆ ವರ್ಗಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳು ಈ ಕಾಯ್ದೆ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಮನಸ್ಸಿಗೆ ಬಂದಂತೆ ತೀರ್ಪು ನೀಡಿ ಆದೇಶಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು. 
    ತಾಲೂಕಿನ ಹೆಬ್ಬಂಡಿ ಲಕ್ಷ್ಮೀಪುರದ ನಿವಾಸಿ ವೆಂಕಟರಾಮಣ್ಣ ಬಿನ್ ವೆಂಕಟಸ್ವಾಮಯ್ಯ ಎಂಬ ಭೋವಿ ಜಾತಿಯ ಇವರುಗಳ ಜಮೀನು ೧.೨೦ ಗುಂಟೆ ಸರ್ಕಾರವು ದರಕಾಸ್ತ್‌ನಲ್ಲಿ ಮಂಜೂರು ಮಾಡಿದ್ದು, ಲಕ್ಷ್ಮೀಪುರದ ನಿವಾಸಿ ಬ್ಯಾಡ್ ತಿಮ್ಮೇಗೌಡ ಎಂಬ ವ್ಯಕ್ತಿ ೨೦೦೦ ರು. ಕೈ ಸಾಲಕ್ಕೆ ಸದರಿ ಹಣಕ್ಕೆ ಆಧಾರವಾಗಿ ಜಮೀನನ್ನು ಭೋಗ್ಯಕ್ಕೆ ಪಡೆದಿದ್ದು, ನಂತರ ಬ್ಯಾಡ್ ತಿಮ್ಮೇಗೌಡ ಲಕ್ಷ್ಮೀಪುರ ಗ್ರಾಮದ ನಿವಾಸಿ ಕೆಂಪಮ್ಮ ಕೋಂ ಸಿದ್ದೇಗೌಡ ರವರ ಹೆಸರಿಗೆ ಅಕ್ರಮವಾಗಿ ಮಾರಾಟ ಮಾಡಿರುತ್ತಾರೆ. ಈ ವಿಚಾರವಾಗಿ ಪ್ರಶ್ನೆ ಮಾಡಿದ ವೆಂಕಟರಾಮಣ್ಣನವರ ಮೇಲೆ ಅನೇಕ ಬಾರಿ ಹಲ್ಲೆ ಮಾಡಿ ದೌರ್ಜನ್ಯ ನಡೆಸಿರುತ್ತಾರೆ ಎಂದು ಆರೋಪಿಸಿದರು. 
    ಶ್ರೀಮಂತರಾದ ಬ್ಯಾಡ್ ತಿಮ್ಮೇಗೌಡ ದೌರ್ಜನ್ಯ ದಬ್ಬಾಳಿಕೆಯಿಂದ ಜಮೀನನ್ನು ಪಡೆದಿದ್ದರಿಂದ ಇವರ ವಿರುದ್ಧ ೧೯೭೮ರ ಪಿ.ಟಿ.ಸಿ.ಎಲ್ ಕಾಯ್ದೆಯ ಪ್ರಕಾರ ಮಾನ್ಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ೧೯೯೩ ರಲ್ಲಿ ವೆಂಕಟರಾಮಣ್ಣ ರವರ ಪರವಾಗಿ ಆದೇಶವಾಗಿ ಸ್ವತಃ ಅಂದಿನ ಉಪವಿಭಾಗಾಧಿಕಾರಿಗಳು ಜಮೀನು ಮತ್ತು ಜಮೀನಿನಲ್ಲಿ ಇದ್ದ ಮನೆಯನ್ನು ಬಿಡಿಸಿಕೊಟ್ಟಿರುತ್ತಾರೆ. ನಂತರದಲ್ಲಿ ಕೆಂಪಮ್ಮ ಮತ್ತು ಸಿದ್ದೇಗೌಡ ರವರು ಎ.ಸಿ/ಡಿ.ಸಿ ಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಪ್ರಕರಣ ಮುಂದುವರೆಸಿಕೊಂಡು ಹೋಗಿದ್ದು, ಆದರೆ ಕೆಂಪಮ್ಮರವರ ವಿರುದ್ಧ ಖುಲಾಸೆಗೊಂಡಿರುತ್ತದೆ ಎಂದರು. 
    ವೆಂಕಟರಾಮಣ್ಣನವರು ಅವರ ಮಕ್ಕಳಾದ ಲಕ್ಷ್ಮಮ್ಮ, ನಾಗರತ್ನ, ಜಯಮ್ಮ, ಮತ್ತು ಸೀನಪ್ಪ ಎಂಬುವವರಿಗೆ ವಿಲ್ ರಿಜಿಸ್ಟರ್ ಮಾಡಿಸಿದ್ದರು. ಆದರೆ ಖಾತೆ ಮಾಡುವ ಮುನ್ನವೆ ಜಮೀನು ಉಳುಮೆ ಮಾಡಲು ಬಿಡದೆ ಕೆಂಪಮ್ಮ ಮತ್ತು ಮಕ್ಕಳು ಪದೇ ಪದೇ ಗಲಾಟೆ ನಡೆಸಿ ಜಮೀನಿಗೆ ಬಾರದಂತೆ ತೊಂದರೆ ನೀಡುತ್ತಿದ್ದರು. ಜಮೀನು ಸಾಗುವಳಿ ಮಾಡುತ್ತಿದ್ದಾಗ ಪದೇ ಪದೇ ಕೆಂಪಮ್ಮ ಮತ್ತು ಅವರ ಮಕ್ಕಳು ನಾಗರಾಜ. ಗೌತಮಿ, ಬೇಬಿಯಮ್ಮ. ರಾಘವೇಂದ್ರ, ದೇವರಾಜ ಸೇರಿದಂತೆ ಇನ್ನಿತರರು
ಹಲ್ಲೆ ನಡೆಸಿ ಜಾತಿ ನಿಂದನೆ ಮಾಡುತ್ತಿದ್ದರು. ಈ ವೇಳೆ ೨ ಬಾರಿ ನ್ಯೂಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆ. ೧೨ ರಂದು ತಹಶೀಲ್ದಾರ್, ಆರ್.ಐ/ವಿ.ಎ ಸರ್ವೆ ಇಲಾಖೆಯ ಅಧಿಕಾರಿಗಳು, ನ್ಯೂಟೌನ್ ಪೋಲಿಸರು ಸುಮಾರು ೨೦ ಮಂದಿ ವೆಂಕಟರಾಮಣ್ಣರವರ ಮಕ್ಕಳ ರಕ್ಷಣೆಗಾಗಿ ನಿಂತು ಜಮೀನಿನಲ್ಲಿ ಕೆಲಸ ಮಾಡಲು ರಕ್ಷಣೆ ನೀಡಿ ಎದುರುದಾರರಿಗೆ ಯಾವುದೇ ತೊಂದರೆ ನೀಡದಂತೆ ಎಚ್ಚರಿಸಿದರು. ಈ ಬಗ್ಗೆ ವೀಡಿಯೋ ಸಹ ದಾಖಲಾಗಿರುತ್ತದೆ. ಮತ್ತೊಮ್ಮೆ ಆ.೨೦ ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರವೇಶ ಮಾಡಿ ಬಿಸಿಲಿನ ತಾಪಕ್ಕೆ ಕಟ್ಟಿಕೊಂಡಿದ್ದ ತಾರ್ಪಲ್/ಗೂಟಗಳನ್ನು ಕಿತ್ತುಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಮತ್ತೊಮ್ಮೆ ದೂರು ದಾಖಲಾಗಿರುತ್ತದೆ ಎಂದರು. 
     ಒಮ್ಮೆ ಪಿ.ಟಿ.ಸಿಎಲ್ ಕಾಯ್ದೆಯ ಪ್ರಕಾರ ಬಿಡಿಸಿಕೊಟ್ಟ ಜಮೀನಿನ ವಿಚಾರದಲ್ಲಿ ಎ.ಸಿ/ಡಿ.ಸಿ/ತಹಶೀಲ್ದಾರ್ ಆಗಲೀ ತೀರ್ಪು ನೀಡಲು ಅವಕಾಶ ಇರುವುದಿಲ್ಲ. ಆದರೆ ಉಪವಿಭಾಗಾಧಿಕಾರಿ ಜಿ.ಎಚ್ ಸತ್ಯನಾರಾಯಣರವರು ಎದುರುದಾರರ ಪರವಾಗಿ ಈ ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಬಾರದು ಎಂದು ತಿಳುವಳಿಕೆ ನೀಡಿದ್ದಾರೆ. ಇದೆ ಉಪವಿಭಾಗಾಧಿಕಾರಿ ಜ.೨೫ ರಂದು ಸೀನಪ್ಪ ರವರ ಕುಟುಂಬಕ್ಕೆ ಪೋಲಿಸ್ ರಕ್ಷಣೆ ನೀಡಬೇಕೆಂದು ಸಹ ತಿಳುವಳಿಕೆ ನೀಡಿದ್ದಾರೆ. ಎರಡನ್ನೂ ಕೂಲಂಕುಶವಾಗಿ ಪರಿಶೀಲಿಸದೆ ಪಿ.ಟಿ.ಸಿ.ಎಲ್ ಕಾಯ್ದೆ ನಿರ್ಲಕ್ಷಿಸುವ ಜೊತೆಗೆ ಉಲ್ಲಂಘನೆ ಮಾಡುತ್ತಿರುವ ಹಾಗು ಮನಸ್ಸಿಗೆ ಬಂದಂತೆ ಆದೇಶಿಸುತ್ತಿರುವ ಇವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಹಿನ್ನಲೆಯಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. 
     ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬ್ರಹ್ಮಲಿಂಗಯ್ಯ, ಲಕ್ಷ್ಮಮ್ಮ, ಜಯಮ್ಮ, ನಾಗರತ್ನಮ್ಮ, ಸೀನಪ್ಪ, ರಾಜುಸ್ವಾಮಿ, ವೀರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ರಾಜಮ್ಮ ನಿಧನ

ರಾಜಮ್ಮ
   ಭದ್ರಾವತಿ: ತಾಲೂಕಿನ ನಿವಾಸಿ, ರಾಜ್ಯ ಆದಿ ದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ರಾಜ್ಯ ಉಪಾಧ್ಯಕ್ಷ ಇ. ವಿಶ್ವನಾಥ್‌ರವರ ಮಾತೃಶ್ರೀ ರಾಜಮ್ಮ(೮೦) ಗುರುವಾರ ನಿಧನ ಹೊಂದಿದರು. 
   ಇವರಿಗೆ ೫ ಜನ ಮಕ್ಕಳಿದ್ದು, ವಯೋಸಹಜವಾಗಿ ನಿಧನ ಹೊಂದಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಹಿರಿಯೂರಿನ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ರಾಜ್ಯ ಆದಿ ದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ವತಿಯಿಂದ ಇವರ ನಿಧನಕ್ಕೆ ಸಂತಾಪ ಸೂಚಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಜೆ. ಸೆಂದಿಲ್ ಕುಮಾರ್ ತಿಳಿಸಿದ್ದಾರೆ.