ಭದ್ರಾವತಿ, ಜು. ೨೯: ಉಕ್ಕಿನ ನಗರದಲ್ಲಿ ಕೆಲವು ದಿನಗಳಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬುಧವಾರ ಸಹ ನಗರಸಭೆ ವ್ಯಾಪ್ತಿಯಲ್ಲಿ ೩ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ೪ ಒಟ್ಟು ೭ ಪ್ರಕರಣಗಳು ಪತ್ತೆಯಾಗಿವೆ.
ತಾಲೂಕಿನಲ್ಲಿ ಕೆಲವು ದಿನಗಳಿಂದ ಸುಮಾರು ೫ಕ್ಕೂ ಅಧಿಕ ಸೋಂಕು ಪ್ರಕರಣಗಳು ಕಂಡು ಬರುತ್ತಿವೆ. ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಸುಮಾರು ೪೫ ವರ್ಷದ ವ್ಯಕ್ತಿ, ಹೊಸಮನೆ ಅಶ್ವತ್ಥ್ ನಗರದಲ್ಲಿ ೭೫ ವರ್ಷದ ವೃದ್ಧೆ ಮತ್ತು ಸಿ.ಎನ್ ರಸ್ತೆಯಲ್ಲಿ ೬೫ ವರ್ಷದ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ನಿಗದಿತ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಗ್ರಾಮಾಂತರ ಭಾಗದಲ್ಲಿ ೪ ಪ್ರಕರಣಗಳು ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಹಿರಿಯ ಆರೋಗ್ಯ ನಿರೀಕ್ಷರಾದ ಲತಾಮಣಿ, ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ.