Monday, October 16, 2023

ಮಲೆಯಾಳಿ ಭಾಷಿಕರು ಇತರರಿಗೆ ಮಾದರಿ : ಬಿ.ಕೆ ಸಂಗಮೇಶ್ವರ್

ಕೇರಳ ಸಮಾಜಂ ವತಿಯಿಂದ ಭದ್ರಾವತಿ ಬಿ.ಹೆಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ೧೧ನೇ ವರ್ಷದ ಓಣಂ ದಿನಾಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ: ಮಲೆಯಾಳಿ ಭಾಷಿಕರು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿ ತಮ್ಮದೆ ಆದ ಕೊಡುಗೆಗಳನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
    ಅವರು ನಗರದ ಕೇರಳ ಸಮಾಜಂ ವತಿಯಿಂದ ಬಿ.ಹೆಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ೧೧ನೇ ವರ್ಷದ ಓಣಂ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಕೇರಳ ರಾಜ್ಯದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾವಂತರಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅಲ್ಲದೆ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕುವ ಗುಣ ರೂಪಿಸಿಕೊಂಡಿದ್ದಾರೆ. ಇವರ ಏಳಿಗೆಗೆ ಬದ್ಧನಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಉಡುಪಿಯ ಕೇರಳ ಸಮಾಜಂ ಅಧ್ಯಕ್ಷ ಸುಗುಣ ಕುಮಾರ್ ಮಾತನಾಡಿ, ಮಲಯಾಳಿ ಭಾಷಿಕರು ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿಸಬೇಕು. ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ ಮಾತನಾಡಿ, ಸಮಾಜದ ಸದಸ್ಯರುಗಳು ತಮ್ಮ ಸಮುದಾಯದ ಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಲದೆ ಮರಣದ ನಂತರ ತಮ್ಮ ಕಣ್ಣುಗಳನ್ನು ಮತ್ತೊಬ್ಬರಿಗೆ ದಾನ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗಬೇಕೆಂದರು.
    ಪ್ರಮುಖರಾದ ಎನ್.ಡಿ.ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯುವ ಘಟಕದ ಅಧ್ಯಕ್ಷ ಎಸ್.ಪ್ರಸನ್ನ ಕುಮಾರ್, ಅಬ್ದುಲ್ ನಜೀಬ್, ಡಾ.ಪ್ರವೀಣ ಜೇಕೋಬ್, ಕೆ.ಇಬ್ರಾಹಿಂ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಓಣಂ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಆರ್ಯ ಚಂದ್ರನ್ ಪ್ರಾರ್ಥಿಸಿ, ವಿಜಯ್ ಕುಮಾರ್ ಸ್ವಾಗತಿಸಿದರು. ಪ್ರಶಾಂತ್ ನಿರೂಪಿಸಿ, ವಂದಿಸಿದರು.

ಇಂಧನ ಬಳಸದೆ ಅಡುಗೆ ಮಾಡುವ ಕಲೆಯಲ್ಲೂ ಮುಂಚೂಣಿ ಬನ್ನಿ : ಡಾ. ವರ್ಷಾ

ನಾಡಹಬ್ಬ ದಸರಾ ಅಂಗವಾಗಿ ಸೋಮವಾರ ಭದ್ರಾವತಿ ನ್ಯೂಟೌನ್ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಹಾರ ಮೇಳ ಇಂಧನ ರಹಿತ ಅಡುಗೆ ತಯಾರಿಕೆ ಸ್ಪರ್ಧೆ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ವರ್ಷಾ ಉದ್ಘಾಟಿಸಿದರು.

    ಭದ್ರಾವತಿ: ಮಹಿಳೆಯರು ಅಡುಗೆ ಮಾಡುವ ವಿಧಾನದಲ್ಲೂ ಸವಾಲು ಎದುರಿಸುವಂತಾಗಿದ್ದು, ಇಂಧನ ಬಳಸದೆ ಅಡುಗೆ ಮಾಡುವ ಕಲೆಯಲ್ಲೂ ಸಹ ಮಹಿಳೆಯರು ಮೈಗೂಡಿಸಿಕೊಳ್ಳಬೇಕೆಂದು ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ವರ್ಷಾ ಹೇಳಿದರು.

    ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಸೋಮವಾರ ನ್ಯೂಟೌನ್ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಹಾರ ಮೇಳ ಇಂಧನ ರಹಿತ ಅಡುಗೆ ತಯಾರಿಕೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

    ದಸರಾ ಹಬ್ಬ ಎಂದರೆ ಮಹಿಳೆಯರಿಗೆ ಸಂಭ್ರಮ. ಮನೆಯಲ್ಲಿ ಮಹಿಳೆಯರು ಖುಷಿಯಿಂದ ಇದ್ದಾಗ ಮಾತ್ರ ಕುಟುಂಬ ಸಹ ಸಂಭ್ರಮದಲ್ಲಿರುತ್ತದೆ. ಅಡುಗೆ ತಯಾರಿಕೆ ಸ್ಪರ್ಧೆ ಎಂದರೆ ಮಹಿಳೆಯರಿಗೆ ನೀಡಿರುವ ಪ್ರಮುಖ ಸಾಧ್ಯತೆ ಎಂಬುದಾಗಿದೆ. ಎಲ್ಲರೂ ಸ್ಪರ್ಧೆಯಲ್ಲಿ ಸಂಭ್ರಮದಿಂದ ಭಾಗವಹಿಸಿ ಪ್ರೀತಿಯಿಂದ ಅಡುಗೆ ತಯಾರಿಕೆ ಮಾಡುವ ಮೂಲಕ ತಮ್ಮ ಪ್ರತಿಭೆಗಳನ್ನು ಹೊರಬೇಕೆಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಪೌರಾಯುಕ್ತ ಎಚ್.ಎಂ ಮನುಕುಮಾರ್, ಮೈಸೂರಿಗೂ ಭದ್ರಾವತಿ ನಗರಕ್ಕೂ ಬಿಡಿಸಲಾದ ನಂಟಿದೆ. ಮೈಸೂರು ದೊರೆಗಳ ಹಾಗು ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಕೊಡುಗೆ ಅನನ್ಯವಾಗಿದೆ. ಈ ನಿಟ್ಟಿನಲ್ಲಿ ಭದ್ರಾವತಿ, ಶಿವಮೊಗ್ಗ ಸೇರಿದಂತೆ ಇಡೀ ಜಿಲ್ಲೆಯಲ್ಲಿ ದಸರಾ ಹಬ್ಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮ ನಾಡಿನ ಪರಂಪರೆ, ಸಂಸ್ಕೃತಿ, ಕಲೆ, ಕ್ರೀಡೆ ಎಲ್ಲವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕರ್ತವ್ಯ ನಮ್ಮೆಲ್ಲದ್ದಾಗಿದೆ. ದಸರಾ ಎಲ್ಲರ ಹಬ್ಬವಾಗಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗಾಗಿ ಆಹಾರ ಮೇಳ ಆಯೋಜಿಸಲಾಗಿದೆ ಎಂದರು.

ನಾಡಹಬ್ಬ ದಸರಾ ಅಂಗವಾಗಿ ಸೋಮವಾರ ಭದ್ರಾವತಿ ನ್ಯೂಟೌನ್ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಹಾರ ಮೇಳ ಇಂಧನ ರಹಿತ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಸುಮಾರು 15 ಮಹಿಳಾ ತಂಡಗಳು ಭಾಗವಹಿಸಿದ್ದವು.

    ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭಾ ಸದಸ್ಯರಾದ ಚನ್ನಪ್ಪ, ಸವಿತಾ ಉಮೇಶ್, ಮಣಿ ಎಎನ್ಎಸ್, ಕಾಂತರಾಜ್, ಮಂಜುಳ ಸುಬ್ಬಣ್ಣ, ಜಯಶೀಲ ಸುರೇಶ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಲತಾ ಚಂದ್ರಶೇಖರ್, ಅನುಪಮಾ ಚನ್ನೇಶ್, ತೀರ್ಪುಗಾರರಾದ ವಿಕ್ರಂ ಶೆಟ್ಟಿ, ಗೀತಾ ಬೆಂಗಳೂರು ಮತ್ತು ವೀಣಾ ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರ ಎಚ್. ಹರಪ್ಪನಹಳ್ಳಿ ವಂದಿಸಿದರು. ಸ್ಪರ್ಧೆಯಲ್ಲಿ ಸುಮಾರು 15 ಮಹಿಳಾ ತಂಡಗಳು ಭಾಗವಹಿಸಿದ್ದವು.

ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು

ಭದ್ರಾವತಿಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯಾಧಿಕಾರಿಗಳ ಕಚೇರಿ ಹಾಗು ಡಾ. ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಸೊಸೈಟಿ, ಸ್ಕೂಲ್ ಆಫ್ ನರ್ಸಿಂಗ್ ಅಂಡ್ ಪ್ಯಾರಮೆಡಿಕಲ್ ಇನ್‌ಸ್ಟಿಟ್ಯೂಟ್ ವತಿಯಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.
    ಭದ್ರಾವತಿ: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯಾಧಿಕಾರಿಗಳ ಕಚೇರಿ ಹಾಗು ಡಾ. ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಸೊಸೈಟಿ, ಸ್ಕೂಲ್ ಆಫ್ ನರ್ಸಿಂಗ್ ಅಂಡ್ ಪ್ಯಾರಮೆಡಿಕಲ್ ಇನ್‌ಸ್ಟಿಟ್ಯೂಟ್ ವತಿಯಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.
    ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ಡಾ. ಅಂಬೇಡ್ಕರ ಪ್ಯಾರಾ ಮೆಡಿಕಲ್ ಎಜುಕೇಷನ್ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಉದ್ಘಾಟಿಸಿದರು.
    ತಾಲೂಕು ಆರೋಗ್ಯಾಧಿಕಾರಿ ಸುಶೀಲ, ನ್ಯಾಯವಾದಿ ಟಿ.ಎಸ್ ರಾಜು, ಡಾ. ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಟಿ. ರಾಜೇಂದ್ರ, ಕಾರ್ಯದರ್ಶಿ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.೧೭ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ: ಮೆಸ್ಕಾಂ  ಕೂಡ್ಲಿಗೆರೆ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ಅ.೧೭ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಗುಡ್ಡದನೇರಲಕೆರೆ, ಕಲ್ಲಾಪುರ, ದಾನವಾಡಿ, ಡಿ.ಬಿ ಹಳ್ಳಿ, ಅರಕೆರೆ, ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಅರಕೆರೆ, ಅರಬಿಳಚಿ, ತಿಮ್ಲಾಪುರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.