Saturday, July 5, 2025

ಪರಿಸರ ನಾಶದಿಂದ ದುಷ್ಪರಿಣಾಮ : ಗೀತಾ ರಾಜಕುಮಾರ್

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆ ಅಂಗವಾಗಿ ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಡಲಾಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್, ಶಿವಬಸಪ್ಪ, ಗುರುಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.     
    ಭದ್ರಾವತಿ: ಮನುಷ್ಯರಿಂದಲೇ ಪರಿಸರ ನಾಶವಾಗುತ್ತಿದ್ದು, ಪರಿಸರ ವೈಪರೀತ್ಯದಿಂದಾಗಿ ಕಾಲಕಾಲಕ್ಕೆ ಮಳೆಯಾಗುತ್ತಿಲ್ಲ. ಇದರಿಂದಾಗಿ ಅತಿವೃಷ್ಟಿ-ಅನಾವೃಷ್ಟಿಗಳಿಂದ ಅನಾಹುತಗಳು, ಸಾವು-ನೋವುಗಳು ಹೆಚ್ಚಾಗುತ್ತಿವೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಕಳವಳ ವ್ಯಕ್ತ ಪಡಿಸಿದರು. 
    ಅವರು ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುರಾಸೆಗೆ ಬಲಿಯಾಗಿ ಗಿಡಮರಗಳನ್ನು, ಕಾಡನ್ನು ಕಡಿದು ನಾಶ ಮಾಡುವುದರಲ್ಲಿ ನಿರತನಾಗಿದ್ದಾನೆ. ಆದರೆ ತನ್ನ ಮುಂದಿನ ಭವಿಷ್ಯದಲ್ಲಿ, ಮುಂದಿನ ಪೀಳಿಗೆಯನ್ನು ಉಳಿಸಿ ಬೆಳೆಸಿ ರಕ್ಷಣೆ ಮಾಡುವಲ್ಲಿ ವಿಫಲನಾಗಿದ್ದಾನೆ.  ಮುಂದಾದರೂ ಎಚ್ಚೆತ್ತುಕೊಂಡು ಪರಿಸರ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದರು.
    ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಮಾತನಾಡಿ, ನಗರಗಳು ವಿಸ್ತಾರಗೊಂಡದಂತೆ ಅಭಿವೃದ್ದಿ ಹೆಸರಲ್ಲಿ ಗಿಡಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗುತ್ತಿದೆ. ಆದರೆ ಅಷ್ಟೇ ಪ್ರಮಾಣದಲ್ಲಿ ಗಿಡ ಮರಗಳನ್ನು ಬೆಳೆಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲದಿರುವುದು ದುರಂತವಾಗಿದೆ. ಅಂಧರ ಕೇಂದ್ರದ ಸುತ್ತಲೂ ಸುಮಾರು ೬೦ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.  
    ಭೂತನಗುಡಿ ಎಸ್‌ಎಲ್‌ಎನ್ ಡೇ ಕೇರ್ ವೈದ್ಯ ಡಾ. ಸುಶಿತ್ ಶೆಟ್ಟಿ ಮಾತನಾಡಿ, ಕರೋನಾ ಕಾಲದಲ್ಲಿ ಲಕ್ಷಾಂತರ ಮಂದಿ ಆಮ್ಲಜನಕವಿಲ್ಲದೆ ಅದರ ಕೊರತೆ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. ಆ ಸಮಯದಲ್ಲಿ ಕಂಡ ಅನೇಕ ಘೋರ ಘಟನೆಗಳನ್ನು ಜೀವನದಲ್ಲಿ ಯಾರೂ ಮರೆಯುವಂತಿಲ್ಲ. ಆದ್ದರಿಂದ ಮನುಷ್ಯನಿಗೆ ಅತ್ಯಾವಶ್ಯಕವಾಗಿ ಬೇಕಿರುವ ಆಮ್ಲಜನಕಕ್ಕಾಗಿ ನಮ್ಮ ಸುತ್ತಲೂ ಮರಗಿಡಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕಾಗಿದೆ ಎಂದರು.
    ಸಿದ್ದಾರ್ಥ ಅಂಧ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ, ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಗರಸಭೆ ಸದಸ್ಯ ಚನ್ನಪ್ಪ, ಕಾಂಚನ ಹೋಟೆಲ್ ಮಾಲೀಕ ವಾಗೀಶ್, ಬಿ.ಎ.ಕಾಟ್ಕೆ, ನಿವೃತ್ತ ಶಿಕ್ಷಕ ಶ್ರೀನಿವಾಸ್, ರಾಜಶೇಖರ್ ಮತ್ತು ಅಡವೀಶಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅಂಧರ ಕೇಂದ್ರದ ವಿಕಲಚೇತನರಾದ ಆಶಾ ಮತ್ತು ಸಲ್ಮಾ ಪ್ರಾರ್ಥಿಸಿ, ಉಪನ್ಯಾಸಕಿ ಸೃಷ್ಟಿ ಸ್ವಾಗತಿಸಿ, ಪ್ರಾಂಶುಪಾಲ ಹನುಮಂತಪ್ಪ ನಿರೂಪಿಸಿದರು. 

No comments:

Post a Comment