Saturday, August 21, 2021

ಪ್ರವೇಶಾತಿ


ಭದ್ರಾವತಿ ವಿಐಎಸ್‌ಎಸ್‌ಜೆ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶಾತಿ ಅವಧಿ ವಿಸ್ತರಣೆ


ಹೆಚ್ಚುವರಿ ಶುಲ್ಕ ವಸೂಲಾತಿ ನಿಲ್ಲಿಸಿ : ಖಾಸಗಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ಚರಿಕೆ

ಸಾರ್ವಜನಿಕರ ದೂರು, ಎಎಪಿ ಪಕ್ಷದ ಹೋರಾಟಕ್ಕೆ ಸ್ಪಂದನೆ

ಭದ್ರಾವತಿಯಲ್ಲಿ ಅನುದಾನ ಹಾಗು ಅನುದಾನ ರಹಿತ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ಪಡೆಯದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶಿಸಿರುವುದು.
    ಭದ್ರಾವತಿ, ಆ. ೨೧: ಶಿಕ್ಷಣ ಸಂವಿಧಾನ ಬದ್ಧವಾದ ಮೂಲಭೂತ ಹಕ್ಕು,  ಸಮಾಜದ ಎಲ್ಲಾ ವರ್ಗದವರಿಗೂ ಸುಲಭವಾಗಿ ಲಭಿಸುವಂತಾಗಬೇಕೆಂಬ ಆಶಯದೊಂದಿಗೆ ಹೋರಾಟ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ ಈ ನಿಟ್ಟಿನಲ್ಲಿ ಒಂದು ಹಂತದಲ್ಲಿ ಯಶಸ್ಸು ಸಾಧಿಸಿದೆ.
    ಖಾಸಗಿ ಶಾಲೆಗಳು ಶಾಲಾ ಶುಲ್ಕದ ನೆಪದಲ್ಲಿ ನಡೆಸುತ್ತಿರುವ ಅಕ್ರಮಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಎಎಪಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಕೋವಿಡ್-೧೯ರ ಪರಿಣಾಮ ಸಮಾಜದಲ್ಲಿ ಉಂಟಾಗಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
    ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿಯಿಂದಾಗಿ ಪ್ರಪಂಚದಾದ್ಯಂತ ಜನರ ಬದುಕು ಅದರಲ್ಲೂ ಬಡ ಹಾಗು ಮಧ್ಯಮ ವರ್ಗದವರ ಬದುಕು ತೀರ ಸಂಕಷ್ಟಕ್ಕೆ ಒಳಗಾಗಿದೆ. ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಖಾಸಗಿ ಶಾಲೆಗಳು ಶಾಲಾ ಶುಲ್ಕದ ನೆಪದಲ್ಲಿ ಹೆಚ್ಚುವರಿ ಹಣ ವಸೂಲಾತಿ ಮಾಡುವ ಮೂಲಕ ಶೋಷಣೆ ನಡೆಸುತ್ತಿವೆ. ಈ ನಡುವೆ ಕೇವಲ ಬೋಧನಾ ಶುಲ್ಕ ಮಾತ್ರ ಶೇ.೭೦ರಷ್ಟು ಮಾತ್ರ ಪಡೆದುಕೊಳ್ಳಲು ಸರ್ಕಾರವೇ ಆದೇಶಿಸಿದ್ದರೂ ಸಹ ಖಾಸಗಿ ಶಾಲೆಗಳು ವಸೂಲಾತಿಯಲ್ಲಿ ತೊಡಗಿವೆ. ಆನ್‌ಲೈನ್ ತರಗತಿ ನೆಪದಲ್ಲಿ ಹೆಚ್ಚುವರಿ ಹಣ ಪಡೆಯುವುದು. ಬಾಕಿ ಹಣ ಪಾವತಿಸಿದ ನಂತರ ವರ್ಗಾವಣೆ ಪತ್ರ ಕೊಡುವುದಾಗಿ ಬೆದರಿಕೆ ಹಾಕುವುದು ಇತ್ಯಾದಿ ಶೋಷಣೆಗಳು ನಡೆಯುತ್ತಿವೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದವು. ಅಲ್ಲದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗು ತಹಸೀಲ್ದಾರ್ ಅವರಿಗೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮನವಿಗಳು ಸಹ ಸಲ್ಲಿಕೆಯಾಗಿದ್ದವು.
    ಈ ನಡುವೆ ಎಎಪಿ ಸಹ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುದಾನ ಹಾಗು ಅನುದಾನ ರಹಿತ ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಶುಲ್ಕ ಹೊರತುಪಡಿಸಿ ಹೆಚ್ಚುವರಿ ಶುಲ್ಕ ಪಡೆಯದೆ ಕೇವಲ ಬೋಧನಾ ಶುಲ್ಕ ಶೇ.೭೦ರಷ್ಟು ಮಾತ್ರ ಪಡೆದುಕೊಳ್ಳುವಂತೆ ಆದೇಶಿಸಿದ್ದಾರೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ವಿಐಎಸ್‌ಎಲ್ ಪುನಶ್ಚೇತನಕ್ಕೆ ಆಗ್ರಹಿಸಿ ಕೇಂದ್ರ ಉಕ್ಕು ಸಚಿವರಿಗೆ ಜೆಡಿಯು ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಕೇಂದ್ರ ಉಕ್ಕು ಸಚಿವ ಆರ್.ಪಿ.ಸಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಆ. ೨೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಕೇಂದ್ರ ಉಕ್ಕು ಸಚಿವ ಆರ್.ಪಿ.ಸಿ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ನಗರದ ನಿವಾಸಿಗಳಾದ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಹಾಗು ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್‌ರವರು ವಿಐಎಸ್‌ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಕೇಂದ್ರ ಸಚಿವರಿಗೆ ಒತ್ತಾಯಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಮಹಿಮ ಜೆ. ಪಟೇಲ್‌ರವರು ಜೆಡಿಯು ಪಕ್ಷದವರೇ ಆದ ಉಕ್ಕು ಸಚಿವ ಆರ್.ಪಿ.ಸಿ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸುವ ಮೂಲಕ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿದ್ದಾರೆ.
    ಪಕ್ಷದ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ರಾಜ್ಯ ಸಭಾ ಮಾಜಿ ಸದಸ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಕರ್ನಾಟ ರಾಜ್ಯ ಉಸ್ತುವಾರಿ ಸಂಜಯ್ ಝಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಧನಂಜಯ, ಉಪಾಧ್ಯಕ್ಷ ಸುಭಾಷ್ ಕಪಾಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೇಂದ್ರ ಸಚಿವರು ತಕ್ಷಣ ಮನವಿಗೆ ಪೂರಕವಾಗಿ ಸ್ಪಂದಿಸಿ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೆ ಮುಂದಾಗಬೇಕು. ಯುವ ಘಟಕದ ನೇತೃತ್ವದಲ್ಲಿ ಪುನಃ ಸಚಿವರನ್ನು ಭೇಟಿ ಮಾಡಿ ಕಾರ್ಖಾನೆ ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಹಾಗು ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಾಬು ದೀಪಕ್ ಕುಮಾರ್‌ರವರು ತಿಳಿಸಿದ್ದಾರೆ.

ಕೋವಿಡ್-೧೯ ಸಂಕಷ್ಟಕ್ಕೆ ಡಾನ್ ಬೋಸ್ಕೋ ಸ್ಪಂದನೆ

ಆರೋಗ್ಯ ಉಪಕರಣ, ಔಷಧ ಸಾಮಗ್ರಿ ವಿತರಣೆ

ಭದ್ರಾವತಿ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೋ ಐಟಿಐ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಆರೋಗ್ಯ ಉಪಕರಣಗಳು ಹಾಗು ಔಷಧ ಸಾಮಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಆ. ೨೧:  ಕೋವಿಡ್-೧೯ರ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಕಷ್ಟ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಹಲವು ರೀತಿಯಲ್ಲಿ ನೆರವಿಗೆ ಮುಂದಾಗುವಲ್ಲಿ ಡಾನ್ ಬೋಸ್ಕೋ ಸಂಸ್ಥೆ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಪಾದರ್ ಆರೋಗ್ಯರಾಜ್ ಹೇಳಿದರು.
     ಅವರು ಶನಿವಾರ ನಗರದ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿರುವ ಡಾನ್ ಬೋಸ್ಕೋ ಐಟಿಐ ವಿದ್ಯಾರ್ಥಿಗಳಿಗೆ ಕೋವಿಡ್-೧೯ ಆರೋಗ್ಯ ಉಪಕರಣಗಳು ಹಾಗು ಔಷಧ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
    ಸಂಸ್ಥೆಯ ಬೆಂಗಳೂರು ಕೇಂದ್ರ ಕಛೇರಿಯು ಕೋವಿಡ್-೧೯ ಎದುರಿಸುವ ನಿಟ್ಟಿನಲ್ಲಿ ಅಗತ್ಯವಿರುವ ನೆರವನ್ನು ಕಲ್ಪಿಸಿಕೊಡುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸೇವಾ ಕಾರ್ಯ ಸಾರ್ಥಕಗೊಳ್ಳುತ್ತದೆ ಎಂದರು.
   ಡಾನ್ ಬೋಸ್ಕೋ ಸಂಸ್ಥೆ ವತಿಯಿಂದ ಈಗಾಗಲೇ ನಗರದ ನಿರ್ಮಲ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ, ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರು ಸೇರಿದಂತೆ ಇನ್ನಿತರರಿಗೆ ಕೋವಿಡ್-೧೯ ಆರೋಗ್ಯ ಉಪಕರಣಗಳು ಹಾಗು ಔಷಧ ಸಾಮಗ್ರಿಗಳನ್ನು ವಿತರಿಸಲಾಗಿದೆ. ಜೊತೆಗೆ ಸ್ಥಳೀಯ ಕಡು ಬಡವರಿಗೆ ದಿನಸಿ ಸಾಮಾಗ್ರಿಗಳನ್ನು ಸಹ  ವಿತರಿಸಲಾಗಿದೆ.
    ಕಾಲೇಜಿನ ಪ್ರಾಂಶುಪಾಲ ಪಾದರ್ ಜೋಮಿ, ಆಡಳಿತಾಧಿಕಾರಿ ಪಾದರ್ ಸೋನಿಚೆನ್ ಮ್ಯಾಥ್ಯೂ, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.