Monday, May 8, 2023
ಕಡ್ಡಾಯ ಮತದಾನ ಜಾಗೃತಿ ಅಭಿಯಾನ : ಬೀದಿ ನಾಟಕ, ಕರಪತ್ರ ವಿತರಣೆ
ಅಪ್ಪರ್ ಹುತ್ತಾ ಗೆಳೆಯರ ಬಳಗದಿಂದ ವಿಶೇಷ ಕಾರ್ಯಕ್ರಮ
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಭದ್ರಾವತಿ ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ವಿಶೇಷವಾಗಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಪ್ಪರ್ ಹುತ್ತಾ ಸೇರಿದಂತೆ ವಿವಿಧೆಡೆ ತೆರಳಿ ಕರಪತ್ರಗಳನ್ನು ವಿತರಿಸಿ, ಬೀದಿ ನಾಟಕ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಭದ್ರಾವತಿ, ಮೇ. ೮ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ವಿಶೇಷವಾಗಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಪ್ಪರ್ ಹುತ್ತಾ ಸೇರಿದಂತೆ ವಿವಿಧೆಡೆ ತೆರಳಿ ಕರಪತ್ರಗಳನ್ನು ವಿತರಿಸಿ, ಬೀದಿ ನಾಟಕ ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಮತದಾನ ಪ್ರತಿಯೊಬ್ಬರ ಸಂವಿಧಾನ ಬದ್ಧ ಹಕ್ಕು. ಪ್ರತಿಯೊಬ್ಬ ಮತದಾರ ತಮ್ಮ ಮತವನ್ನು ಯಾವುದೇ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಟ್ರಸ್ಟ್ ಕೆಲವು ದಿನಗಳಿಂದ ಅಭಿಯಾನ ಹಮ್ಮಿಕೊಂಡಿದೆ.
ವಿಶೇಷವಾಗಿ ಮೇ.೭ರ ಸಂಜೆ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ, ಗೋಲ್ಡನ್ ಜ್ಯೂಬಿಲಿ ಉದ್ಯಾನವನದ ಬಳಿ, ಅಪ್ಪರ್ ಹುತ್ತಾ ಶ್ರೀ ನಂದಿ ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಬಳಿ ಮತ್ತು ಕೇಶವರಾವ್ ವೃತ್ತದ ಬಳಿ ಬೀದಿ ನಾಟಕ ಆಯೋಜಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಟ್ರಸ್ಟ್ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಕಲಾವಿದರು ಪಾಲ್ಗೊಂಡಿದ್ದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ : ಜಿಲ್ಲೆಗೆ ೭ನೆ ಸ್ಥಾನ
೧೪ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ
ಭದ್ರಾವತಿ ಕಾಗದನಗರ ನಿವಾಸಿ ಜಾನಿ ಹಾಗೂ ಲಿಲ್ಲಿ ಗ್ರೇಸ್‌ರವರ ಪುತ್ರಿ, ನ್ಯೂಟೌನ್ ಎಸ್.ಎ.ವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶೈನಿ ಅಂಜಲ್ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೧ ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದು, ಈ ವಿದ್ಯಾರ್ಥಿನಿಯನ್ನು ಸೋಮವಾರ ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರಮುಖರಾದ ಭಾಸ್ಕರ್ ಬಾಬು, ಆಮೋಸ್, ಅಂತೋಣಿ, ಜಯಶೀಲ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ, ಮೇ. ೮: ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಗೆ ಕೊನೆಯ ೭ನೇ ಸ್ಥಾನ ಕಾಯ್ದುಕೊಂಡಿದ್ದು, ಶೇ.೭೫.೩೮ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಿದ್ದ ೪೧೨೬ ವಿದ್ಯಾರ್ಥಿಗಳ ಪೈಕಿ ೧೩೬೭ ಬಾಲಕರು, ೧೭೪೩ ಬಾಲಕಿಯರು ಸೇರಿದಂತೆ ಒಟ್ಟು ೩೧೧೦ ಮಂದಿ ಉತ್ತೀರ್ಣರಾಗಿದ್ದಾರೆ. ಉಳಿದಂತೆ ೧೦೧೬ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಸರ್ಕಾರಿ ಶಾಲೆಯ ೪, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಶಾಲೆಗಳ ೭, ಅನುದಾನಿತ ಶಾಲೆಯ ೧ ಮತ್ತು ಖಾಸಗಿ ಶಾಲೆಯ ೩೯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೫೧ ವಿದ್ಯಾರ್ಥಿಗಳು ೬೦೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಗ್ರಾಮಾಂತರ ಭಾಗದ ೨೨೯೭ ವಿದ್ಯಾರ್ಥಿಗಳ ಪೈಕಿ ೧೭೧೫ ಹಾಗು ನಗರ ಭಾಗದ ೧೮೨೯ ವಿದ್ಯಾರ್ಥಿಗಳ ಪೈಕಿ ೧೩೯೫ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ತಾಲೂಕಿನ ೧ ಸರ್ಕಾರಿ ಶಾಲೆ, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ೪ ಶಾಲೆಗಳು ಮತ್ತು ೯ ಖಾಸಗಿ ಶಾಲೆಗಳು ಸೇರಿದಂತೆ ಒಟ್ಟು ೧೪ ಶಾಲೆಗಳು ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ.
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಪ್ರೌಢಶಾಲೆ, ಲೋಯರ್ ಹುತ್ತಾ, ಬಿ.ಎಚ್ ರಸ್ತೆ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ, ಆನವೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹುತ್ತಾ ಕಾಲೋನಿ ಅನನ್ಯ ಪ್ರೌಢಶಾಲೆ, ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ, ನ್ಯೂಟೌನ್ ತರಂಗ ಕಿವುಡು ಮತ್ತು ಮೂಕ ಮಕ್ಕಳ ಪ್ರೌಢಶಾಲೆ, ಕಾರೇಹಳ್ಳಿ ಶ್ರೀ ಆದಿಚುಂಚನಗಿರಿ ಕೇಂದ್ರೀಯ ವಿದ್ಯಾಲಯ(ಬಿಜಿಎಸ್ ಶಾಲೆ), ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವರನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕವಲಗುಂದಿ ಹಳೇಜೇಡಿಕಟ್ಟೆ ಸೇಂಟ್ ತೆರೇಸಾ ಪ್ರೌಢ ಶಾಲೆ, ಹೊಳೆಹೊನ್ನೂರು ವಿವೇಕಾನಂದ ಲಯನ್ಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ, ಅಂತರಗಂಗೆ ರಾಘವೇಂದ್ರ ಪ್ರೌಢಶಾಲೆ, ಹಳೇನಗರ ಬಸವೇಶ್ವರ ವೃತ್ತದ ಶ್ರೀ ಕನಕ ಪ್ರೌಢಶಾಲೆ ಮತ್ತು ದೊಡ್ಡೇರಿ ಅಲ್ಪ ಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇಕಡ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿವೆ.
ಹಳ್ಳಿಕೆರೆ ಸೇಂಟ್ ಡೊಮೆನಿಕ್ ಶಾಲೆಯ ವಿದ್ಯಾರ್ಥಿನಿ ಎಸ್. ನಿಖಿತಾ ೬೨೫ಕ್ಕೆ ೬೨೩, ನ್ಯೂಟೌನ್ ಎಸ್.ಎ.ವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶೈನಿ ಅಂಜಲ್ ೬೨೫ಕ್ಕೆ ೬೨೧, ಲೋಯರ್ ಹುತ್ತಾ, ಬಿ.ಎಚ್ ರಸ್ತೆ, ಪೂರ್ಣಪ್ರಜ್ಞ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಎಸ್. ಹರ್ಷಿಣಿ ೬೨೫ಕ್ಕೆ ೬೧೯ ಹಾಗು ಆರ್.ಎಲ್ ಮೌಲ್ಯ ೬೨೫ಕ್ಕೆ ೬೧೯ ತಾಲೂಕಿನಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗು ಶೇ.೧೦೦ರಷ್ಟು ಫಲಿತಾಂಶ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಜೂಜಾಟ : ದಾಳಿ
ಭದ್ರಾವತಿ, ಮೇ. ೮ : ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಹಳೇನಗರ ಠಾಣೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ನಗರದ ತರೀಕೆರೆ ರಸ್ತೆ ರೈಲ್ವೆ ಮೇಲ್ಸುತುವೆ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಹೊಸೂರು ನಿವಾಸಿ ಮಂಜುನಾಥ್ ಹಾಗು ಇತರೆ ೪ ಜನರು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಬೃಹತ್ ರೋಡ್ ಶೋ
ಭದ್ರಾವತಿ, ಮೇ. ೮: ಮತದಾನ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಬೃಹತ್ ರೋಡ್ ಶೋ ನಡೆಸಿದರು.
ಒಂದೆಡೆ ಬಿಜೆಪಿ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷಗಳು ರೋಡ್ ಶೋ ನಡೆಸಿವೆ. ಶಾರದ ಅಪ್ಪಾಜಿ ಸಹ ಈ ಎರಡೂ ಪಕ್ಷಗಳಿಗೂ ಸೆಡ್ಡು ಹೊಡೆಯುವಂತೆ ರೋಡ್ ಶೋ ನಡೆಸಿ ಗಮನ ಸೆಳೆದರು.
ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ಹೊಸಮನೆ ಶಿವಾಜಿ ವೃತ್ತ ತಲುಪಿ ನಂತರ ತರೀಕೆರೆ ಗಾಂಧಿವೃತ್ತದವರೆಗೂ ರೋಡ್ ಶೋ ನಡೆಯಿತು. ಪಕ್ಷದ ಪ್ರಮುಖರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಈಗಾಗಲೇ ಗ್ರಾಮಾಂತರ ಹಾಗು ನಗರ ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ವ್ಯಾಪಕ ಪ್ರಚಾರ ನಡೆಸಲಾಗಿದೆ. ಮನೆ ಮನೆ ಪ್ರಚಾರ ಬಾಕಿ ಉಳಿದಿದ್ದು, ಪಕ್ಷದ ಅಭ್ಯರ್ಥಿ, ಮುಖಂಡರು, ಕಾರ್ಯಕರ್ತರು ಮತದಾರರನ್ನು ಯಾವ ರೀತಿ ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮತದಾನ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಭದ್ರಾವತಿಯಲ್ಲಿ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಬೃಹತ್ ರೋಡ್ ಶೋ ನಡೆಸಿದರು.
ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತನೆ : ಓರ್ವನ ವಿರುದ್ಧ ಪ್ರಕರಣ ದಾಖಲು
ಭದ್ರಾವತಿ, ಮೇ. ೮: ಗಾಂಜಾ ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ನೂರಾನಿ ಮಸೀದಿ ಬಳಿ ನಿವಾಸಿ ಮುಜಾಹಿಲ್(೩೫) ಎಂಬಾತ ಮೇ.೬ರಂದು ಮದ್ಯಾಹ್ನ ೧೨:೩೦ರ ಸಮಯದಲ್ಲಿ ನಗರದ ತರೀಕೆರೆ ರಸ್ತೆಯ ಮೂಪಾ ಕಾಂಫೌಂಡ್ ಹತ್ತಿರ ಸಾರ್ವಜನಿಕರೊಂದಿಗೆ ಆಸಭ್ಯವಾಗಿ ವರ್ತಿಸುತ್ತಿದ್ದು, ಈ ಭಾಗದಲ್ಲಿ ಗಸ್ತಿನಲ್ಲಿದ್ದ ಹಳೇನಗರ ಠಾಣೆ ಪೊಲೀಸರು ಈತನ ವಿಚಾರಣೆ ನಡೆಸಿದಾಗ ಯಾವುದೋ ಮಾದಕ ವಸ್ತು ಸೇವನೆಯಿಂದ ಅಮಲಿನಲ್ಲಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಈತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನೆಯ ಮುಂಭಾಗ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳವು
ಭದ್ರಾವತಿ, ಮೇ. ೮ : ಮನೆಯ ಮುಂಭಾಗ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಕಳವು ಮಾಡಿರುವ ಘಟನೆ ನಗರಸಭೆ ವ್ಯಾಪ್ತಿಯ ಕಣಕಟ್ಟೆ ಗ್ರಾಮದಲ್ಲಿ ನಡೆದಿದೆ.
ಏ.೩೦ರಂದು ರಾತ್ರಿ ೧೧.೩೦ರ ಸಮಯದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ ಮನೆಯ ಮುಂಭಾಗ ನಿಲ್ಲಿಸಲಾಗಿದ್ದು, ಬೆಳಿಗ್ಗೆ ೫.೩೦ರ ಸಮಯದಲ್ಲಿ ನೋಡಿದಾಗ ಕಳುವಾಗಿರುವುದು ಕಂಡು ಬಂದಿದೆ. ಈ ಸಂಬಂಧ ಸಂತೋಷ್ ಎಂಬುವರು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತದಾನ ಜಾಗೃತಿ : ಬೈಕ್ ರ‍್ಯಾಲಿ
ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರ ಮತದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು.
ಭದ್ರಾವತಿ, ಮೇ. ೮ : ತಾಲೂಕು ಆಡಳಿತ, ತಾಲೂಕು ಪಂಚಾಯತಿ, ನಗರಸಭೆ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರ ಮತದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.
ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣದಲ್ಲಿ ಕುಠಿತಗೊಂಡಿದ್ದು, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ನಗರದ ಅಂಬೇಡ್ಕರ್ ವೃತ್ತದಿಂದ ತಾಲೂಕು ಪಂಚಾಯಿತಿ ಆವರಣದವರೆಗೂ ಬೈಕ್ ಜಾಥಾ ನಡೆಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ತಹಸೀಲ್ದಾರ ಸುರೇಶ್ ಆಚಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ನಗರಸಭೆ, ತಾಲೂಕು ಪಂಚಾಯಿತಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಬೃಹತ್ ರೋಡ್ ಶೋ
ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮಂಗೋಟೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದರು.
ಭದ್ರಾವತಿ, ಮೇ. ೮: ಈ ಬಾರಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಬಿಜೆಪಿ ಪಕ್ಷದ ಅಭ್ಯರ್ಥಿ ಮಂಗೋಟೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದರು.
ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್‌ನಿಂದ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಆರಂಭಗೊಂಡ ರೋಡ್ ಶೋ ಹಲವು ವಿಶಿಷ್ಟತೆಯಿಂದ ಕಂಡು ಬಂದಿತು. ಬಿಜೆಪಿ ಕೇಸರಿ ಪೇಟ ಧರಿಸಿ ಬಜರಂಗದಳ ಕಾರ್ಯಕರ್ತರಂತೆ ಕಂಗೊಳಿಸುವ ಮೂಲಕ ಶ್ರೀ ಆಂಜನೇಯ ಸ್ವಾಮಿಯ ಪ್ರತಿಮೆಯೊಂದಿಗೆ ಬೈಕ್ ರ‍್ಯಾಲಿ ನಡೆಸಿದರು.
ಕಾರ್ಯಕರ್ತರು, ಅಭಿಮಾನಿಗಳು ಸೇಬು, ಮೂಸುಂಬೆಯಿಂದ ತಯಾರಿಸಿದ ಬೃಹತ್ ಹಾರ ಕ್ರೇನ್ ಮೂಲಕ ಅರ್ಪಿಸಿದರು. ಡೊಳ್ಳು ಕುಣಿತದೊಂದಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಜ್ಜೆ ಹಾಕಿದರು.
ಚಲನಚಿತ್ರ ನಟಿ ತಾರ, ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ ಹಾಗು ಪಕ್ಷದ ವಿವಿಧ ಮೋರ್ಚಾಗಳ, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಹಾಗು ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು. ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತದವರೆಗೂ ರೋಡ್ ಶೋ ನಡೆಯಿತು.
ಭದ್ರಾವತಿಯಲ್ಲಿ ಸೋಮವಾರ ನಡೆದ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್‌ರವರ ರೋಡ್ ಶೋ ವಿಶೇಷವಾಗಿ ಗಮನ ಸೆಳೆಯಿತು. ಕಾರ್ಯಕರ್ತರು, ಅಭಿಮಾನಿಗಳು ಸೇಬು, ಮೂಸುಂಬೆಯಿಂದ ತಯಾರಿಸಿದ ಬೃಹತ್ ಹಾರ ಕ್ರೇನ್ ಮೂಲಕ ಅರ್ಪಿಸಿದರು.
Subscribe to:
Posts (Atom)