ಹೋರಾಟ ಹತ್ತಿಕ್ಕಲು ಹೋರಾಟಗಾರರ ಬಂಧನ ಸರಿಯಲ್ಲ : ಕರವೇ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸೇರಿದಂತೆ ಬಂಧಿಸಲಾಗಿರುವ ಕನ್ನಡ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ : ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸೇರಿದಂತೆ ಬಂಧಿಸಲಾಗಿರುವ ಕನ್ನಡ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ವೇದಿಕೆ ತಾಲೂಕು ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕಛೇರಿ ಮುಂಭಾಗ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ರ್‍ಯಾಲಿಗೆ ವಿನಾಕಾರಣ ಪೊಲೀಸರು ತಡೆಯೊಡ್ಡಿ ವೇದಿಕೆಯ ಸುಮಾರು ೧ ಸಾವಿರ ಕಾರ್ಯಕರ್ತರನ್ನು ಬಂಧಿಸಿದ್ದು, ಅಲ್ಲದೆ ಮಧ್ಯ ರಾತ್ರಿ ಟಿ.ಎ ನಾರಾಯಣಗೌಡ ಅವರನ್ನು ಬಲವಂತಾಗಿ ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಮಾರ್ಗಸೂಚಿಯನ್ವಯ ನಾಮಫಲಕ ಅಳವಡಿಕೆಯಲ್ಲಿ ಕನ್ನಡ ಭಾಷೆಗೆ ಶೇ.೬೦ ಹಾಗು ಇತರೆ ಭಾಷೆಗೆ ಶೇ.೪೦ರಷ್ಟು ಸ್ಥಾನ ಮೀಸಲಿಡಬೇಕೆಂಬುದು ವೇದಿಕೆ ಆಶಯವಾಗಿದ್ದು, ಬಹಳಷ್ಟು ಜನರು ಇದನ್ನು ಪಾಲಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಹಲವಾರು ಬಾರಿ ಮನವಿ ಮಾಡಿಕೊಂಡರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೂ ಸಹ ಮನವಿ ಸಲ್ಲಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ವೇದಿಕೆ ರ್‍ಯಾಲಿ ಹಮ್ಮಿಕೊಂಡಿತ್ತು. ಆದರೆ ಸರ್ಕಾರ ಹೋರಾಟ ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು ಕಾರ್ಯಕರ್ತರು ಹಾಗು ಟಿ.ಎ ನಾರಾಯಣಗೌಡ ಅವರನ್ನು ಬಂಧಿಸಿ ಅಪರಾಧಿಗಳಂತೆ ಬಿಂಬಿಸಿ ಕಿರುಕುಳ ನೀಡಿರುವುದು ಸರಿಯಲ್ಲ. ತಕ್ಷಣ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಯುವ ಘಟಕದ ಅಧ್ಯಕ್ಷ ಎಚ್. ರಾಮಕೃಷ್ಣ, ಸಂಘಟನಾ ಕಾರ್ಯದರ್ಶಿ ಎನ್. ರಮೇಶ್, ತುಕಾರಾಂ, ಎ. ಮಂಜುನಾಥ್, ಪ್ರವೀಣ, ಮುನ್ನಾಬಾಯ್, ಉಮೇಶ್ ಮತ್ತು ಪವನ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.