Tuesday, May 25, 2021

ಛಾಯಾಗ್ರಾಹಕ ವಡಿವೇಲು ನಿಧನ

ವಡಿವೇಲು
ಭದ್ರಾವತಿ, ಮೇ. ೨೫: ನಗರದ ಆಂಜನೇಯ ಅಗ್ರಹಾರ ಕೂಲಿಬ್ಲಾಕ್ ಶೆಡ್ ನಿವಾಸಿ, ಛಾಯಾಗ್ರಾಹಕ ವಡಿವೇಲು(೩೭) ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದರು.
    ತಂದೆ, ಇಬ್ಬರು ಸಹೋದರಿಯರನ್ನು ಹೊಂದಿದ್ದರು. ಹಲವಾರು ವರ್ಷಗಳಿಂದ ನಗರದಲ್ಲಿ ಛಾಯಾಗ್ರಾಹಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ತಾಲೂಕು ಛಾಯಾಗ್ರಾಹಕರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ತಾಲೂಕು ಛಾಯಾಗ್ರಾಹಕರ ಸಂಘ ಸಂತಾಪ ಸೂಚಿಸಿದೆ.

ವಿವಿಧೆ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪೋಸ್ಟರ್ ಚಳುವಳಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಲಾಕ್‌ಡೌನ್ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯ ವ್ಯಾಪಿ ಆನ್ಲೈನ್ ಮೂಲಕ ಪೋಸ್ಟರ್ ಚಳುವಳಿ ನಡೆಸಿ ಗಮನ ಸೆಳೆದರು.
    ಭದ್ರಾವತಿ, ಮೇ. ೨೫: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಲಾಕ್‌ಡೌನ್ ಹಿನ್ನಲೆಯಲ್ಲಿ ವಿಶೇಷವಾಗಿ ರಾಜ್ಯ ವ್ಯಾಪಿ ಆನ್ಲೈನ್ ಮೂಲಕ ಪೋಸ್ಟರ್ ಚಳುವಳಿ ನಡೆಸಿ ಗಮನ ಸೆಳೆದರು.
   ಎಐಯುಟಿಯುಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಮನೆಯಿಂದ, ಕೆಲಸದ ಸ್ಥಳದಿಂದಲೇ ಪೋಸ್ಟರ್ ಚಳುವಳಿ ನಡೆಸಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ವಿವಿಧ ಕೊರೋನಾ ವಾರಿಯರ್ಸ್‌ಗಳಿಗೆ ನೀಡಿರುವಂತೆ ಆಶಾ ಕಾರ್ಯಕರ್ತೆಯರಿಗೂ ಸಹ ಕೋವಿಡ್ ವಿಶೇಷ ಪ್ರೋತ್ಸಾಹ ಧನ ಮಾಸಿಕ ರು. ೫೦೦೦ ನೀಡುವಂತೆ ಆಗ್ರಹಿಸಿದರು.
    ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಸೋಂಕಿನ ತೀವ್ರತೆಗೆ ಅನುಗುಣವಾಗಿ (ಕನಿಷ್ಠ ೨೫ ಸಾವಿರ ರು.) ಪರಿಹಾರ ನೀಡುವುದು. ಅಗತ್ಯವಿರುವಷ್ಟು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ನೀಡುವುದು. ೩ ತಿಂಗಳು ಬಾಕಿ ಇರುವ ೪,೦೦೦ ರು. ಮಾಸಿಕ ಗೌರವ ಧನ ತಕ್ಷಣ ಬಿಡುಗಡೆಗೊಳಿಸುವುದು ಹಾಗು ಮೊದಲ ಅಲೆಯಲ್ಲಿ ನಿಧನ ಹೊಂದಿರುವ ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ ಕೋವಿಡ್ ವಿಮೆ ಹಣ ತಕ್ಷಣ ನೀಡುವಂತೆ ಒತ್ತಾಯಿಸಿದರು.
   ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಚಳುವಳಿ ನಡೆಸಲಾಯಿತು. ಶಾಯಿನಾ ಬಾನು, ಚಂದ್ರಕಲಾ, ಆಶಾ, ವಸಂತ ಮತ್ತು ಸುಜಾತ ನಗರದಲ್ಲಿ ಚಳುವಳಿ ನಡೆಸುವ ಮೂಲಕ ಗಮನ ಸೆಳೆದರು.

೧೩೫ ಸೋಂಕು, ಶತಕ ದಾಟಿದ ಸಾವಿನ ಸಂಖ್ಯೆ

ಭದ್ರಾವತಿ, ಮೇ. ೨೫: ಮೊದಲ ಹಂತದ ಲಾಕ್‌ಡೌನ್ ಮುಗಿದು ಎರಡನೇ ಹಂತದ ಲಾಕ್‌ಡೌನ್ ಜಾಲ್ತಿಯಲ್ಲಿದ್ದು, ಆದರೂ ಸಹ ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿಲ್ಲ. ಮಂಗಳವಾರ ೧೩೫ ಸೋಂಕು ದೃಢಪಟ್ಟಿದೆ.
    ಒಟ್ಟು ೩೫೨ ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, ಈ ಪೈಕಿ ೧೩೫ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು ೮೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಒಂದು ಸಾವು ಸಂಭವಿಸಿದೆ.
     ತಾಲೂಕಿನಲ್ಲಿ ಒಟ್ಟು ಸಾವಿನ ಸಂಖ್ಯೆ ಶತಕ ದಾಟಿದ್ದು, ೧೦೧ ಮಂದಿ ಮೃತಪಟ್ಟಿದ್ದಾರೆ. ಒಟ್ಟು ೩೨೭ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ತಾಲೂಕಿನ ನಗರ ವ್ಯಾಪ್ತಿಯಲ್ಲಿ ಒಟ್ಟು ೬೬ ಕಂಟೈನ್‌ಮೆಂಟ್ ಜೋನ್‌ಗಳಿವೆ.

ನಿರ್ಮಲಾ ನಿಧನ

ನಿರ್ಮಲಾ
   ಭದ್ರಾವತಿ, ಮೇ. ೨೫: ನಗರದ ಹೊಸಮನೆ ನಿವಾಸಿ, ಸುಗಮ ಸಂಗೀತ ಗಾಯಕ ಹಾಗು ಚಿತ್ರ ಕಲಾವಿದ ವಾಣಿ ಆರ್ಟ್ಸ್‌ನ ಸುಬ್ರಹ್ಮಣ್ಯ ಕೆ. ಅಯ್ಯರ್ ಅವರ ಪತ್ನಿ ನಿರ್ಮಲಾ(೪೯) ಮಂಗಳವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರಿಯನ್ನು ಹೊಂದಿದ್ದರು. ನಿರ್ಮಲಾ ಅವರು ಸುಬ್ರಹ್ಮಣ್ಯ ಅವರ ಕಲಾ ಕ್ಷೇತ್ರದ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜೊತೆಗೆ ಬೆನ್ನೆಲುಬಾಗಿದ್ದರು. ಇವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.


ರಂಗಪ್ಪ ನಿಧನ

ರಂಗಪ್ಪ  
   ಭದ್ರಾವತಿ, ಮೇ. ೨೫: ತಾಲೂಕಿನ ಬಾರಂದೂರು ಗ್ರಾಮದ ನಿವಾಸಿ ರಂಗಪ್ಪ(೭೦) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.
  ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಮಾದಿಗ ಸಮಾಜ, ಆದಿ ಜಾಂಬವ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೆ ಹಿರಿಯ ಮಾರ್ಗದರ್ಶಕರಾಗಿ ಬಾರಂದೂರು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು.
  ಇವರ ನಿಧನಕ್ಕೆ ಬಾರಂದೂರು ಗ್ರಾಮಸ್ಥರು, ಕರ್ನಾಟಕ ರಾಜ್ಯ ಮಾದಿಗ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ವಾಡ್.೨೯ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ


ಭದ್ರಾವತಿ, ಮೇ. ೨೫: ನಗರಸಭೆ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯ ಬಡ ಕುಟುಂಬಗಳಿಗೆ ವಾರ್ಡ್ ನಿವಾಸಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಜಿ ರಾಧಮ್ಮ ಪ್ರಭಾಕರ್ ಕುಟುಂಬದವರು ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
    ಭದ್ರಾವತಿ, ಮೇ. ೨೫: ನಗರಸಭೆ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ ಒಳಗೊಂಡಿರುವ ವಾರ್ಡ್ ನಂ.೨೯ರ ವ್ಯಾಪ್ತಿಯ ಬಡ ಕುಟುಂಬಗಳಿಗೆ ವಾರ್ಡ್ ನಿವಾಸಿ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಎ.ಜಿ ರಾಧಮ್ಮ ಪ್ರಭಾಕರ್ ಕುಟುಂಬದವರು ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
    ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿರುವ ಪರಿಣಾಮ ವಾರ್ಡ್‌ನಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಇದನ್ನು ಮನಗಂಡು ರಾಧಮ್ಮ ಕುಟುಂಬದವರು ಸುಮಾರು ೭೦ ಕುಟುಂಬಗಳಿಗೆ ವೈಯಕ್ತಿಕವಾಗಿ ದಿನಸಿಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರದಿದ್ದಾರೆ. ಕಳೆದ ಬಾರಿ ಸಹ ಲಾಕ್‌ಡೌನ್ ಸಂದರ್ಭದಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿತ್ತು.

ಮೆಸ್ಕಾಂ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ

ಭದ್ರಾವತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಮಂಗಳವಾರ ಮೆಸ್ಕಾಂ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು.
   ಭದ್ರಾವತಿ, ಮೇ. ೨೫: ಆರೋಗ್ಯ ಇಲಾಖೆ ವತಿಯಿಂದ ಆದ್ಯತೆ ಆಧಾರದ ಮೇಲೆ ಮೆಸ್ಕಾಂ ಸಿಬ್ಬಂದಿಗಳಿಗೆ ಮಂಗಳವಾರ ಕೊರೋನಾ ಲಸಿಕೆ ನೀಡಲಾಯಿತು.
    ಜೆಪಿಎಸ್ ಕಾಲೋನಿಯಲ್ಲಿರುವ ಮೆಸ್ಕಾಂ ಘಟಕ-೧ರ ಕಛೇರಿಯಲ್ಲಿ ೧೮ ರಿಂದ ೪೫ ವರ್ಷದೊಳಗಿನ ಸುಮಾರು ೧೦೦ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು.
     ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಎನ್. ಕೃಷ್ಣಪ್ಪ, ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಇಂಜಿನಿಯರ್ ಶಿವಪ್ರಸಾದ್, ಕಾರ್ಯನಿರ್ವಾಹಕ ಇಂಜಿನಿಯರ್ ಕಿಶೋರ್, ನಗರದ ವಿಭಾಗೀಯ ಕಛೇರಿ ಸಹಾಯಕ ಲೆಕ್ಕಾಧಿಕಾರಿ ಅಶ್ವಿನಿಕುಮಾರ್, ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಆನಂದ, ಹೇಮಣ್ಣ ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.