Thursday, October 13, 2022

ಅ.೧೬ರಂದು ಜನ್ನಾಪುರ ಲಿಂಗಾಯತರ ಬೀದಿ ವಿನಾಯಕ ಮೂರ್ತಿ ವಿಸರ್ಜನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿಯಲ್ಲಿ ಸ್ವಾಗತ್ ಯುವಕರ ಸಂಘದ ವತಿಯಿಂದ ೨೫ನೇ ವರ್ಷದ ವಿನಾಯಕ ಮಹೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಅ.೧೬ರ ಭಾನುವಾರ ನಡೆಯಲಿದ್ದು, ಗುರುವಾರ ಸತ್ಯನಾರಾಯಣ ಪೂಜೆ, ಗಣಹೋಮ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ಭದ್ರಾವತಿ, ಅ. ೧೩ : ನಗರಸಭೆ ವ್ಯಾಪ್ತಿಯ ಜನ್ನಾಪುರ ಲಿಂಗಾಯತರ ಬೀದಿಯಲ್ಲಿ ಸ್ವಾಗತ್ ಯುವಕರ ಸಂಘದ ವತಿಯಿಂದ ೨೫ನೇ ವರ್ಷದ ವಿನಾಯಕ ಮಹೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಅ.೧೬ರ ಭಾನುವಾರ ನಡೆಯಲಿದೆ.
    ಈ ಬಾರಿ ಅಯೋಧ್ಯೆ ಶ್ರೀರಾಮ ಮಂದಿರ ಮಾದರಿ ಭವ್ಯವಾದ ಪ್ರತಿಷ್ಠಾಪನಾ ವೇದಿಕೆ ನಿರ್ಮಿಸುವ ಮೂಲಕ ಅದ್ದೂರಿಯಾಗಿ ವಿನಾಯಕ ಮಹೋತ್ಸವ ಆಚರಿಸಲಾಗುತ್ತಿದ್ದು, ಗುರುವಾರ ಸತ್ಯನಾರಾಯಣ ಪೂಜೆ, ಗಣಹೋಮ, ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.
     ಶಾಸಕರಾದ ಬಿ.ಕೆ ಸಂಗಮೇಶ್ವರ್,  ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್‌ರವರ ತಾಯಿ ಉಮಾದೇವಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಕಾಂತ್‌ರಾಜ್, ಯುವ ಮುಖಂಡರಾದ ಬಿ.ಎಸ್ ಗಣೇಶ್, ಬಿವಿಕೆ ಕೃಷ್ಣರಾಜ್, ಹರೀಶ್, ಸಂಘದ ಗೌರವಾಧ್ಯಕ್ಷ ಆರ್. ವೇಣುಗೋಪಾಲ್, ಅಧ್ಯಕ್ಷ ಸುಂದರ್, ಉಪಾಧ್ಯಕ್ಷ ಎಚ್ ಮಧುಸೂಧನ್, ಪ್ರಧಾನ ಕಾರ್ಯದರ್ಶಿ ಹರ್ಷ, ಮನೋಜ್ ಕುಮಾರ್, ಸಹ ಕಾರ್ಯದರ್ಶಿ ಧನುಷ್, ಪವನ್, ಮಂಜು, ಅರುಣ, ಸಂತೋಷ್, ಖಜಾಂಚಿ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು, ಜನ್ನಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಪಾಲ್ಗೊಂಡಿದ್ದರು.
    ಅ.೧೬ರಂದು ಜನ್ನಾಪುರ ಕೆರೆಯಲ್ಲಿ ಮೂರ್ತಿ ವಿಸರ್ಜನೆ ನಡೆಯಲಿದ್ದು, ಇದಕ್ಕೂ ಮೊದಲು ವಿವಿಧ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ.

ಅ.೧೪ರಂದು ಪ್ರೊ. ಬಿ. ಕೃಷ್ಣಪ್ಪ ೮೫ನೇ ಜನ್ಮದಿನ

    ಭದ್ರಾವತಿ, ಅ. ೧೩: ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ಅ. ೧೪ರಂದು ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಪ್ರೊ. ಬಿ.ಕೃಷ್ಣಪ್ಪನವರ ೮೫ನೇ ಜನ್ಮದಿನ ಸಾಮಾಜಿಕ ನ್ಯಾಯದ ದಿನ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ತಾಲೂಕಿನಲ್ಲಿ ೭೦ರ ದಶಕದಲ್ಲಿ ದಲಿತ ಚಳುವಳಿ ಹುಟ್ಟು ಹಾಕಿ ಶೋಷಿತರ ಪರವಾಗಿ ಹೋರಾಟದ ಧ್ವನಿಯಾಗುವ ಮೂಲಕ ದಲಿತರನ್ನು ಜಾಗೃತಗೊಳಿಸಿದ ಪ್ರೊ. ಬಿ. ಕೃಷ್ಣಪ್ಪನವರು ಚಳುವಳಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಜೊತೆಗೆ ಹಲವು ಹೋರಾಟಗಳಿಗೆ ಶಕ್ತಿ ತುಂಬಿದರು. ದಲಿತರಪರವಾದ ಹೋರಾಟಗಳಿಗೆ ನ್ಯಾಯ ಒದಗಿಸಿಕೊಟ್ಟರು. ದಲಿತರಿಗೆ ಸ್ವಾಭಿಮಾನದ ಬದುಕು ರೂಪಿಸಿಕೊಟ್ಟರು. ಈ ಹಿನ್ನಲೆಯಲ್ಲಿ ಇವರ ಜನ್ಮದಿನ ಆಚರಿಸಲಾಗುತ್ತಿದ್ದು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು, ಶೋಷಿತ ಸಮುದಾಯದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕು ಸಂಚಾಲಕ ಎಂ. ಪಳನಿರಾಜ್ ಕೋರಿದ್ದಾರೆ.

ಬಾಬಳ್ಳಿ ಗ್ರಾಮದಲ್ಲಿ ಅ.೧೫ರಂದು ವಿದ್ಯುತ್ ಅದಾಲತ್




    ಭದ್ರಾವತಿ, ಅ. ೧೩: ಗ್ರಾಮೀಣ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಆದೇಶದಂತೆ ಮೆಸ್ಕಾಂ ವತಿಯಿಂದ ಗ್ರಾಮ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ.
    ಅ.೧೫ರಂದು ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಾಂತರ ಉಪವಿಭಾಗ, ಘಟಕ-೩ರ ಕೂಡ್ಲಿಗೆರೆ ಶಾಖೆಯಲ್ಲಿನ ಕಾಗೆಕೋಡಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಬಳ್ಳಿ ಗ್ರಾಮದಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ.
    ಪಂಚಾಯಿತಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಅದಾಲತ್‌ನಲ್ಲಿ ಭಾಗವಹಿಸಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಹವಾಲುಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ವಿಐಎಸ್‌ಎಲ್ ಖಾಸಗೀಕರಣ ಕೈಬಿಟ್ಟಿರುವುದು ಒಳ್ಳೆಯ ಬೆಳವಣಿಗೆ, ಅಗತ್ಯವಿರುವ ಬಂಡವಾಳ ತೊಡಗಿಸಿ

ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಆಗ್ರಹ

ಜೆ. ಜಗದೀಶ್
    ಭದ್ರಾವತಿ, ಅ. ೧೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಬಿಟ್ಟಿರುವುದು ಒಳ್ಳೆಯ ಬೆಳವಣಿಯಾಗಿದ್ದು, ಉಕ್ಕು ಪ್ರಾಧಿಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಆಗ್ರಹಿಸಿದ್ದಾರೆ.
    ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳದಾರರು ಆಸಕ್ತಿ ತೋರಿಸದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುವ ಪ್ರಕ್ರಿಯೆ ಕೈಬಿಟ್ಟಿದೆ. ಇದರಿಂದ ಈ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಲು ಸಾಧ್ಯವಿಲ್ಲ ಎಂಬುದು ಇದರಿಂದ ಮನವರಿಕೆಯಾಗಿದೆ ಎಂದರು.


    ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸಬೇಕೆಂದು ಕಳೆದ ಸುಮಾರು ೨೦ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯಲಿದೆ. ಖಾಸಗೀಕರಣ ಪ್ರಕ್ರಿಯೆ ಕೈಬಿಟ್ಟಿರುವ ಹಿನ್ನಲೆಯಲ್ಲಿ ಈಗಲಾದರೂ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಬೇಕು. ಕಳೆದ ಸುಮಾರು ೩೦ ವರ್ಷಗಳಿಂದ ಅಗತ್ಯವಿರುವ ಬಂಡವಾಳ ತೊಡಗಿಸದೆ ಉಕ್ಕು ಪ್ರಾಧಿಕಾರ ಮಲತಾಯಿ ಧೋರಣೆ ಅನುಸರಿಸಿಕೊಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪ್ರಾಧಿಕಾರಕ್ಕೆ ಬಂಡವಾಳ ತೊಡಗಿಸಲು ನಿರ್ದೇಶಿಸಬೇಕೆಂದು ಆಗ್ರಹಿಸಿದರು.
    ರಾಜ್ಯ ಸರ್ಕಾರ ಈಗಾಗಲೇ ಅಗತ್ಯವಿರುವ ಗಣಿ ಮಂಜೂರಾತಿ ಮಾಡಿದ್ದು, ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಮುಂದಿನ ಒಂದೂವರೆ ವರ್ಷದಲ್ಲಿ ಗಣಿಗಾರಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ. ಅಷ್ಟರಲ್ಲಿ ಸರ್ಕಾರ ಅಗತ್ಯವಿರುವ ಬಂಡವಾಳ ತೊಡಗಿಸಿದ್ದಲ್ಲಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಲು ಸಾಧ್ಯ. ಪ್ರಸ್ತುತ ಬೆಳವಣಿಗೆ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಜನಪ್ರತಿನಿಧಿಗಳ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದರು.

ರೇಖಿ ಚಿಕಿತ್ಸಕ ಎಂ.ಡಿ ಬೋರಲಿಂಗಯ್ಯ ನಿಧನ

ಎಂ.ಡಿ ಬೋರಲಿಂಗಯ್ಯ
    ಭದ್ರಾವತಿ, ಅ. ೧೩ : ನಗರದ ಹುತ್ತಾಕಾಲೋನಿ ನಿವಾಸಿ, ರೇಖಿ ಚಿಕಿತ್ಸಕ ಎಂ.ಡಿ ಬೋರಲಿಂಗಯ್ಯ(೮೪) ಗುರುವಾರ ನಿಧನ ಹೊಂದಿದರು.
    ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ಹುತ್ತಾಕಾಲೋನಿ ನಂದಿ ಈಶ್ವರ-ಸಂಕಷ್ಟಹರ ಗಣಪತಿ ದೇವಸ್ಥಾನ ಸಮೀಪ ವಾಸವಿದ್ದರು. ಮೂಲತಃ ಮೆಕಾನಿಕಲ್ ಇಂಜಿನಿಯರ್ ಪದವಿಧರರಾಗಿದ್ದ ಬೋರಲಿಂಗಯ್ಯ ಕರುಣ ರೇಖಿ ಚಿಕಿತ್ಸೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ನೈಸರ್ಗಿಕ ಹೀಲಿಂಗ್‌ನಲ್ಲೂ ಬೋಧಕ ಮಟ್ಟದ ತರಬೇತಿ ಪಡೆದುಕೊಂಡಿದ್ದರು. ರೇಖಿ ಗ್ರಾಂಡ್ ಮಾಸ್ಟರ್ ಎಂದು ಗುರುತಿಸಿಕೊಂಡಿದ್ದರು.
    ಇವರ ಅಂತ್ಯಕ್ರಿಯೆ ಸಂಜೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.