Wednesday, April 27, 2022

ಡಾ. ಶ್ವೇತಾ ಅಮಿತ್‌ಗೆ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್

ಭದ್ರಾವತಿ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ಭದ್ರಾವತಿ, ಏ.೨೭: ನಗರದ ತರೀಕೆರೆ ರಸ್ತೆಯ ಎನ್‌ಟಿಸಿ ರೈಸ್ ಮಿಲ್ ಮಾಲೀಕ, ಉದ್ಯಮಿ ಡಾ. ಎನ್‌ಟಿಸಿ ನಾಗೇಶ್‌ರವರ ಪುತ್ರಿ, ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಓ ಡಾ. ಶ್ವೇತಾ ಅಮಿತ್ ರಕ್ಷಣಾ ಇಲಾಖೆಯ ಡಿಫೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
    ನವದೆಹಲಿಯ ಉದ್ಯೋಗ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಾ. ಶ್ವೇತಾ ಅಮಿತ್‌ರವರಿಗೆ ಪ್ರಶಸ್ತಿಯನ್ನು ವಿತರಿಸಿದರು.  ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಆಫ್ ಚಾಲೆಂಜ್-೫ರಲ್ಲಿ ಹೆಲ್ಮೆಟ್ ಮೌಂಟ್ ಕನ್‌ಫರ್ಮಬಲ್ ಆಂಟೈನಾ ಎಂಬ ವಿಷಯದಲ್ಲಿ ಸಾಧಿಸಿದ ಸಾಧನೆಯ ಫಲವಾಗಿ ಬೆಂಗಳೂರಿನ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಡಾ.ಶ್ವೇತಾ ಅವರನ್ನು ಗೌರವಿಸಲಾಗಿದೆ.
    ಇನ್ನೋವೇಷನ್ಸ್ ಫಾರ್ ಡಿಫೆನ್ಸ್ ಎಕ್ಷಲೆನ್ಸಿ ಆಯ್ಕೆಯ ಜವಾಬ್ದಾರಿಯನ್ನು ನಿರ್ವಹಿಸಿ ಮೀಂಡರ್ ಸ್ಪೆಕ್ಟ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರನ್ನು ಶಿಫಾರಸ್ಸು ಮಾಡಿತ್ತು.  ಡಾ.ಶ್ವೇತಾ ಅಮಿತ್‌ರವರಿಗೆ ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.  

ಉಚಿತ ಸಾಮೂಹಿಕ ವಿವಾಹ : ಸದುಪಯೋಗಕ್ಕೆ ಕರೆ

    ಭದ್ರಾವತಿ, ಏ. ೨೭: ವಿಶ್ವ ಹಿಂದು ಪರಿಷದ್, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ.೨೯ರ ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ಸಿದ್ದಾರೂಢನಗರ ಕಾಳಿದಾಸ ಬಡಾವಣೆಯಲ್ಲಿರುವ ಧರ್ಮಶ್ರೀ ಸಭಾಭವನದಲ್ಲಿ ನಡೆಯಲಿದೆ.
    ಕಡ್ಡಾಯವಾಗಿ ವರನಿಗೆ ೨೧ ವರ್ಷ, ವಧುವಿಗೆ ೧೮ ವರ್ಷ ತುಂಬಿರಬೇಕು. ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ವಿವಾಹಕ್ಕೆ ಅಪೇಕ್ಷೆಯುಳ್ಳವರು ಮೇ.೧೦ರೊಳಗೆ ಕೋರಿಕೆ ಪತ್ರ ನೀಡುವುದು. ವಿಧವಾ ವಿವಾಹಕ್ಕೆ ಅವಕಾಶವಿದ್ದು, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶತಾಯುಷಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು.
    ಸಾರ್ವಜನಿಕರು, ದಾನಿಗಳು, ಗಣ್ಯರು, ಸಂಘ-ಸಂಸ್ಥೆಗಳು ಸಾಮೂಹಿಕ ವಿವಾಹಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಲು ಸಹಕರಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೭೬೨೨೮೭೦೧೮ ಅಥವಾ ೯೮೮೦೭೭೯೨೯೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿ. ಮಧು ಲೇಪಾಕ್ಷಿ

ಭದ್ರಾವತಿ ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿ. ಮಧು ಲೇಪಾಕ್ಷಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ, ಯುವ ಮುಖಂಡ ಬಿ.ಎಸ್ ಬಸವೇಶ್ ಸೇರಿದಂತೆ ಇನ್ನಿತರರು ಅಭಿನಂದಿಸಿದರು.
    ಭದ್ರಾವತಿ, ಏ. ೨೭: ತಾಲೂಕಿನ ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸಿ. ಮಧು ಲೇಪಾಕ್ಷಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸಿ. ಮಧು ಲೇಪಾಕ್ಷಿ ಆಯ್ಕೆಯಾಗಿದ್ದಾರೆ. ಒಟ್ಟು ೧೦ ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಧಿಕಾರ ಹಂಚಿಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.  ಮೊದಲ ಅವಧಿಗೆ ಬೆಳ್ಳಿಗೆರೆ ಕ್ಷೇತ್ರದ ಆಗಷರೀಫ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
    ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಕರ್ ಉಪಸ್ಥಿತರಿದ್ದರು.
    ನೂತನ ಅಧ್ಯಕ್ಷರನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಪುತ್ರ, ಯುವ ಮುಖಂಡ ಬಿ.ಎಸ್ ಬಸವೇಶ್, ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಪಕ್ಷದ ಮುಖಂಡರು ಸೇರಿದಂತೆ ಇನ್ನಿತರರು ಅಭಿನಂದಿಸಿದರು.