Wednesday, November 2, 2022

ಕೇರಳ ಸಮಾಜಂ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಅಚರಿಸಲಾಯಿತು.
    ಭದ್ರಾವತಿ, ನ. ೨: ಪ್ರತಿ ವರ್ಷದಂತೆ ಈ ಬಾರಿ ಸಹ ಕೇರಳ ಸಮಾಜಂ ವತಿಯಿಂದ ೬೭ನೇ ಕನ್ನಡ ರಾಜ್ಯೋತ್ಸವ ಅಚರಿಸಲಾಯಿತು.
      ನಗರದಲ್ಲಿ ಕೇರಳ ಸಮಾಜಂ ವಿಶೇಷವಾಗಿ ಗುರುತಿಸಿಕೊಂಡಿದ್ದು, ಅದರಲ್ಲೂ ಪ್ರತಿವರ್ಷ ಓಣಂ ಆಚರಣೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಕನ್ನಡ ರಾಜ್ಯೋತ್ಸವ ಅಂಗವಾಗಿ ಜನ್ನಾಪುರದಲ್ಲಿರುವ ಸಮಾಜಂ ಕಛೇರಿ ಕಟ್ಟಡದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
       ಸಮಾಜಂ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ವಿ.ಕೆ ಮಾಹಿನ್, ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್, ಖಂಚಾಚಿ ಎ. ಚಂದ್ರಶೇಖರ್, ಸಲಹೆಗಾರಾದ ಸುಕುಮಾರನ್ ಹಾಗೂ ಸದಸ್ಯರಾದ ರಾಧಾಕೃಷ್ಣನ್, ಸತ್ಯನಾರಾಯಣ, ಕೆ.ಸಿ ರಾಜಶೇಖರ್, ಮಹಿಳಾ ವಿಭಾಗಂ ಪ್ರಧಾನ ಕಾರ್ಯದರ್ಶಿ ಕಲ್ಯಾಣಿ ಶಶಿಧರನ್ ಹಾಗೂ ಜಂಟಿ ಕಾರ್ಯದರ್ಶಿ ರೇಖಾ ಚಂದ್ರನ್, ಯೂತ್ ವಿಂಗ್ಸ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂಪಿಎಂ ಉದ್ಯೋಗಿ ಆನಂದನ್ ನಿಧನ

ಆನಂದನ್
    ಭದ್ರಾವತಿ, ನ.೨: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಉದ್ಯೋಗಿ ಆನಂದನ್(೫೧) ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು.
    ಕಾಗದನಗರ ೧ನೇ ವಾರ್ಡ್ ಅಧಿಕಾರಿಗಳ ವಸತಿ ಗೃಹದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದರು. ಈ ದಂಪತಿ ಮಕ್ಕಳಿಲ್ಲದ ಕಾರಣ ಮಗುವೊಂದನ್ನು ದತ್ತು ಪಡೆದಿದ್ದರು. ಕಾರ್ಖಾನೆಯ ಪಲ್ಪ್ ಮಿಲ್-೨ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದನ್ ೨೦೧೭ರಲ್ಲಿ ಸ್ವಯಂ ನಿವೃತ್ತಿ ಪಡೆಯದೆ ಉಳಿದುಕೊಂಡಿದ್ದರು. ಕಳೆದ ೩ ವರ್ಷಗಳಿಂದ ಎಂಪಿಎಂ ಜೆಂಟ್ಸ್ ರಿಕ್ರಿಯೇಷನ್ ಕ್ಲಬ್ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಗುರುವಾರ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ನಡೆಯಲಿದೆ.
    ೧೫ ವರ್ಷಗಳಿಂದ ಬೀದಿನಾಯಿಗಳಿಗೆ ಅನ್ನ :
    ಕಳೆದ ಸುಮಾರು ೧೫ ವರ್ಷಗಳಿಂದ ಆನಂದನ್‌ರವರು ಕಾರ್ಖಾನೆ ಒಳಭಾಗದಲ್ಲಿ ಹಾಗು ಕಾಗದನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಬೆಳಿಗ್ಗೆ, ರಾತ್ರಿ ಅನ್ನ   ಹಾಕುವ ಮೂಲಕ ಮಾನವೀಯತೆ ಮೆರೆದಿದ್ದರು.  ಮನೆಯಲ್ಲಿಯೇ ಅಡುಗೆ ತಯಾರಿಸಿ ಬೀದಿನಾಯಿಗಳಿಗೆ ಅನ್ನ ಹಾಕುವ ಇವರ ಕಾರ್ಯ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಇವರ ನಿಧನಕ್ಕೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಸೇರಿದಂತೆ ಕಾರ್ಮಿಕ ಮುಖರು ಹಾಗು ಕಾಗದನಗರ ವ್ಯಾಪ್ತಿಯ ನಿವಾಸಿಗಳು ಸಂತಾಪ ಸೂಚಿಸಿದ್ದಾರೆ.  

ಸಮಾಜಮುಖಿ ಚಿಂತನೆಗಳೊಂದಿಗೆ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ

ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ನೆರವೇರಿಸಿದರು.
    ಭದ್ರಾವತಿ, ನ. ೨ : ಒಕ್ಕಲಿಗ ಸಮುದಾಯದ ಮಹಿಳೆಯರ ಹಿತರಕ್ಷಣೆ ಹಾಗು ಸಮಾಜಮುಖಿ ಚಿಂತನೆಗಳೊಂದಿಗೆ ನೂತನವಾಗಿ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ, ನಗರಸಭಾ ಸದಸ್ಯೆ ಲತಾ ಚಂದ್ರಶೇಖರ್ ಹೇಳಿದರು.
      ಅವರು ಬುಧವಾರ ಅಪ್ಪರ್ ಹುತ್ತಾದಲ್ಲಿರುವ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
      ಪ್ರಸ್ತುತ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸಾಕಷ್ಟು ಮಹಿಳೆಯರು ಹಲವಾರು ಸಮಸ್ಯೆಗಳಿಗೆ ಒಳಗಾಗಿದ್ದು, ಇಂತಹ ಮಹಿಳೆಯರ ನೆರವಿಗೆ ಮುಂದಾಗುವ ಜೊತೆಗೆ ಸಾಮಾಜಿಕ ಚಿಂತನೆಗಳೊಂದಿಗೆ ಟ್ರಸ್ಟ್  ಮುನ್ನಡೆಯಲಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
      ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಟ್ರಸ್ಟ್ ಉದ್ಘಾಟಿಸಿದರು.
      ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ವಿಶ್ವ ಒಕ್ಕಲಿಗ ಮಹಿಳಾ ವೇದಿಕೆ ಅಧ್ಯಕ್ಷೆ ಭಾರತಿ ಶಂಕರ್, ಕರ್ನಾಟಕ ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುರಭಿ ರಘು, ಟಾಟಾ ಇನ್‌ಸ್ಟಿಟ್ಯೂಟ್ ಫಂಡಮೆಂಟಲ್ ರಿಸರ್ಜ್ ಹಿರಿಯ ವಿಜ್ಞಾನಿ ಡಾ. ಗೀತಾ ತಿಮ್ಮೇಗೌಡ, ಟ್ರಸ್ಟ್ ಗೌರವಾಧ್ಯಕ್ಷೆ ಲಕ್ಷ್ಮೀರಾಜು, ಪ್ರಧಾನ ಕಾರ್ಯದರ್ಶಿ ಶಾಲಿನಿ ವಸಂತಕುಮಾರ್, ಖಜಾಂಚಿ ಯುಮನಾ ರಕ್ಷಿತ್, ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ಈಶ್ವರ್, ಸಹಕಾರ್ಯದರ್ಶಿ ಅಂಬಿಕ ಕಿರಣ್‌ಕುಮಾರ್, ಸಲಹೆಗಾರರಾದ ನೇತ್ರಾವತಿ ಮರೀಗೌಡ, ಲೋಹಿತ ನಂಜಪ್ಪ, ನಿರ್ದೇಶಕರಾದ ಜಯಮಾಲ, ಭಾಗ್ಯಲಕ್ಷ್ಮಿ, ಮಂಜುಳ, ವಸಂತ, ಗೀತಾ, ಪದ್ಮಿನಿ, ಶೋಭಾ, ಸಾವಿತ್ರಮ್ಮ, ಲೀಲಾವತಿ, ಪ್ರೇಮ, ಗೀತಾ, ಶೃತಿ, ಕವಿತ, ರೂಪ ಮತ್ತು ಶೃತಿ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.