Tuesday, June 27, 2023

ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರ ಹಿತ ಕಾಪಾಡಿ

ವಿಐಎಸ್‌ಎಲ್ ಆಡಳಿತ ಮಂಡಳಿ ಜೊತೆಗೆ ಶಾಸಕ ಸಂಗಮೇಶ್ವರ್ ಚರ್ಚೆ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
    ಭದ್ರಾವತಿ, ಜೂ. ೨೭: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸದೆ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
    ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಹಾಗು ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಮತ್ತು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವಂತೆ ಆಗ್ರಹಿಸಿ ಕಳೆದ ಸುಮಾರು ೬ ತಿಂಗಳಿನಿಂದ ನಿರಂತರವಾಗಿ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಆರಂಭದಿಂದಲೂ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲ ಸೂಚಿಸಿಕೊಂಡು ಬಂದಿದ್ದು, ಈ ನಡುವೆ ವಿಧಾನಸಭಾ ಚುನಾವಣೆ ಎದುರಾದ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.
    ಕಳೆದ ತಿಂಗಳು ಚುನಾವಣೆ ಮುಕ್ತಾಯಗೊಂಡಿದ್ದು, ೪ನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಸಂಗಮೇಶ್ವರ್ ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದ ಇವರು ಕಳೆದ ೪ ತಿಂಗಳ ಹಿಂದೆ ನಗರಕ್ಕೆ ಆಗಮಿಸಿದ್ದು, ಈ ಹಿನ್ನಲೆಯಲ್ಲಿ ಮಂಗಳವಾರ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಪ್ರಸ್ತುತ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದು ಗುತ್ತಿಗೆ ಕಾರ್ಮಿಕರ ಹಿತಕಾಪಾಡುವ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಚರ್ಚಿಸಿದರು.
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ಹಾಗು ಕಾಯಂ ಮತ್ತು ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸದೃಢ ಸಮಾಜ ನಿರ್ಮಾಣಕ್ಕೆ ಯುವ ಸಮೂಹ ಪಾತ್ರ ಅಗತ್ಯ : ಶಾಂತಲಾ

ಮಾದಕ ವಸ್ತುಗಳ ಸಾಗಣಿಕೆ, ಸೇವನೆ ವಿರೋಧ ದಿನದ ಪ್ರಯುಕ್ತ ಭದ್ರಾವತಿ ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೨೭: ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ಇದರಿಂದ ಯುವ ಸಮೂಹ ದಾರಿ ತಪ್ಪುತ್ತಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕೆಂದು ನಗರದ ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲಾ ಹೇಳಿದರು.
    ಅವರು ಜಿಲ್ಲಾ ಪೊಲೀಸ್ ಮಾರ್ಗದರ್ಶನದಲ್ಲಿ ಸಂಚಾರಿ ಠಾಣೆ ವತಿಯಿಂದ ಮಾದಕ ವಸ್ತುಗಳ ಸಾಗಣಿಕೆ, ಸೇವನೆ ವಿರೋಧ ದಿನದ ಪ್ರಯುಕ್ತ ನಗರದ ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
    ವಿದ್ಯಾರ್ಥಿಗಳಿಗೆ ಮಾದಕ ವಸ್ತು  ಸೇವನೆಯಿಂದ ಉಂಟಾಗುವ ದುಷ್ಪಾರಿಣಾಮಗಳು ಹಾಗೂ ಸಂಚಾರ ನಿಯಮ ಪಾಲನೆ ಮತ್ತು ಅಪಘಾತ ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಹಿರಿಯಣ್ಣ ಮತ್ತು ಉಪನ್ಯಾಸಕ ವೃಂದದವರು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಬದುಕು ಸಾರ್ಥಕಗೊಳ್ಳಲು ಮಹಾನ್ ವ್ಯಕ್ತಿಗಳ ಆದರ್ಶತನ ಮೈಗೂಡಿಸಿಕೊಳ್ಳಿ

ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಅಪ್ಪರ್ ಹುತ್ತಾದಲ್ಲಿ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಕೆಂಪೇಗೌಡರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಶಾಸಕ ಬಿ.ಕೆ ಸಂಗಮೇಶ್ವರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
     ಭದ್ರಾವತಿ, ಜೂ. ೨೭ : ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶತನಗಳು ನಮಗೆ ದಾರಿದೀಪವಾಗಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಮಂಗಳವಾರ ನಗರಸಭೆ ವ್ಯಾಪ್ತಿಯ ಅಪ್ಪರ್ ಹುತ್ತಾದಲ್ಲಿ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮನುಷ್ಯನ ಹುಟ್ಟು-ಸಾವು ಸಹಜ. ಆದರೆ ಈ ನಡುವೆ ಸಮಾಜಕ್ಕೆ ನಾವು ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯವಾಗಿದೆ. ನಾಡಪ್ರಭು ಕೆಂಪೇಗೌಡರು ಸೇರಿದಂತೆ ಅನೇಕ ಮಹಾನ್ ನಾಯಕರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಬದುಕಿಲ್ಲದಿದ್ದರೂ ಸಹ ಮಾನಸಿಕವಾಗಿ ನಮ್ಮೆಲ್ಲರ ಮುಂದೆ ಇಂದಿಗೂ ಉಳಿದುಕೊಂಡಿದ್ದಾರೆ ಎಂದರು.
    ಕೆಂಪೇಗೌಡರು ಅಂದು ನಿರ್ಮಿಸಿರುವ ಕೆರೆಕಟ್ಟೆಗಳು, ಅದರಲ್ಲೂ ವಿಶೇಷವಾಗಿ ಪ್ರಸ್ತುತ ಜಗತ್ತಿನ ಎಲ್ಲಾ ರಾಷ್ಟ್ರಗಳ ಗಮನ ಸೆಳೆಯುತ್ತಿರುವ ಬೆಂಗಳೂರು ನಿರ್ಮಾಣ ಕೆಂಪೇಗೌಡರು ಹೊಂದಿರುವ ಜನಪರ ಕಾಳಜಿಗಳು, ದೂರದೃಷ್ಟಿ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿಯಾಗಿದೆ. ಈ ಹಿನ್ನಲೆಯಲ್ಲಿ ಕೆಂಪೇಗೌಡರನ್ನು ಸ್ಮರಿಸಿಕೊಳ್ಳುವುದು ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
    ಹಿತರಕ್ಷಣಾ ವೇದಿಕೆ ಪ್ರಮುಖರಾದ ಎಸ್. ಕುಮಾರ್, ಬಾಲಕೃಷ್ಣ, ಟಿ. ಚಂದ್ರೇಗೌಡ, ವೆಂಕಟೇಶ್, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಲತಾ ಚಂದ್ರಶೇಖರ್, ಮಣಿ ಎಎನ್‌ಎಸ್, ಆರ್. ಮೋಹನ್‌ಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ದೇವಾಂಗ ಸಮಾಜದ ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಪ್ರಜಾಪ್ರತಿನಿಧಿ ಸುರೇಶ್, ಎಂ.ಎಸ್ ಸುಧಾಮಣಿ, ಚನ್ನಪ್ಪ, ಕಬಡ್ಡಿ ಕೃಷ್ಣೇಗೌಡ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವೇದಿಕೆ ವತಿಯಿಂದ ಸಿಹಿ ಹಂಚಲಾಯಿತು. ಅಲ್ಲದೆ ಸಾವಿರಾರು ಮಂದಿಗೆ ಬಾಡೂಟದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಭದ್ರಾವತಿ ವಿವಿಧೆಡೆ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ

ಭದ್ರಾವತಿಯಲ್ಲಿ ನಾಡಹಬ್ಬ ಜಯಂತ್ಯೋತ್ಸವದ ಅಂಗವಾಗಿ ಮಂಗಳವಾರ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಚಾಲನೆ ನೀಡಿದರು.
    ಭದ್ರಾವತಿ, ಭದ್ರಾವತಿ, ಜೂ. ೨೭: ನಗರದ ವಿವಿಧೆಡೆ  ಮಂಗಳವಾರ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ  ವಿಜೃಂಭಣೆಯಿಂದ ಆಚರಿಸಲಾಯಿತು.
    ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಗೆ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಚಾಲನೆ ನೀಡಿದರು.
    ನಗರದ ಬಿ.ಎಚ್ ರಸ್ತೆ, ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ವಿವಿಧ ಕಲಾತಂಡಗಳೊಂದಿಗೆ ಆರಂಭಗೊಂಡ ಮೆರವಣಿಗೆ ಕೆಎಸ್‌ಆರ್ ಟಿಸಿ ಮುಖ್ಯ ಬಸ್ ನಿಲ್ದಾಣ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿವರೆಗೂ ತಲುಪಿತು.
    ಮೆರವಣಿಗೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹಾಗೂ ಪದಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಮಣಿಶೇಖರ್, ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.
    ಆಟೋ ಚಾಲಕರು ಮತ್ತು ಸ್ನೇಹ ಜೀವಿ ಬಳಗದಿಂದ ಜಯಂತಿ ಆಚರಣೆ :
    ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಈ ಬಾರಿ ಸಹ ಸರ್.ಎಂ ವಿಶ್ವೇಶ್ವರಾಯ ಆಟೋ ಚಾಲಕರು, ಮಾಲೀಕರ ಸಂಘ ಹಾಗು ಸ್ನೇಹ ಜೀವಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಆಚರಿಸಲಾಯಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆಗೆ ಹಾಗು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಒಕ್ಕಲಿಗ ಸಮಾಜದ ಮುಖಂಡ ಅರುಣ್‌ಗೌಡ ಸಾವಿರಾರು ಮಂದಿಗೆ ಮೈಸೂರು ಪ್ಯಾಕ್ ವಿತರಿಸಿದರು. ಅಲ್ಲದೆ ಸುಮಾರು ೩ ಸಾವಿರ ಮಂದಿಗೆ ಬಾಡೂಟದ ವ್ಯವಸ್ಥೆ ಕೈಗೊಳ್ಳಲಾಗಿತ್ತು.


ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗ ಈ ಬಾರಿ ಸಹ ಸರ್.ಎಂ ವಿಶ್ವೇಶ್ವರಾಯ ಆಟೋ ಚಾಲಕರು, ಮಾಲೀಕರ ಸಂಘ ಹಾಗು ಸ್ನೇಹ ಜೀವಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಆಚರಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಿಹಿ ತಿನಿಸುವ ಮೂಲಕ ಸಂಭ್ರಮಿಸಲಾಯಿತು.
    ಪ್ರಮುಖರಾದ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್, ಹ ಸರ್.ಎಂ ವಿಶ್ವೇಶ್ವರಾಯ ಆಟೋ ಚಾಲಕರು, ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಅರುಣ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕು ಕಛೇರಿಯಲ್ಲಿ ಕೆಂಪೇಗೌಡ ಜಯಂತಿ :
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು.


ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸಲಾಯಿತು. ತಾಲೂಕು ಆಡಳಿತ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರನ್ನು ಅಭಿನಂದಿಸಲಾಯಿತು.
ಶಾಸಕರಾದ ಬಿ.ಕೆ ಸಂಗಮೇಶ್ವರ್ ಮತ್ತು ಶಾರದಪೂರ‍್ಯಾನಾಯ್ಕ ಕಾರ್ಯಕ್ರಮದಲ್ಲಿ ಒಟ್ಟಿಗೆ ಪಾಲ್ಗೊಂಡು ಗಮನ ಸೆಳೆದರು. ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಕಾರ್ಯದರ್ಶಿ ಪ್ರಭಾಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾ ಸದಸ್ಯ ಮಣಿ ಎಎನ್‌ಎಸ್ ಸೇರಿದಂತೆ ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.