![](https://blogger.googleusercontent.com/img/a/AVvXsEhHiClhoau_xXnQl_bE9YPrZ6RKEnlApfR716VbwtHMOp38OLF6LnBs1DfbeqDwtRheQ65IBXQPg0L2ZWIQNtScy0WULb1XLCAYBdkUtm2qSOQNHwNBKJEx22ziaczlZ8YhxwNg165P6tECIEIsvUNrJVewkYx9gafaUKl4SA88HAKqGHGYCmpBUhFw5A=w400-h235-rw)
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್‌ರವರಿಗೆ ಮನವಿ ಸಲ್ಲಿಸಿದೆ.
ಭದ್ರಾವತಿ, ಜೂ. ೧೬: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್‌ರವರಿಗೆ ಮನವಿ ಸಲ್ಲಿಸಿದೆ.
ಪ್ರಾಥಮಿಕ ಶಾಲೆಗಳಲ್ಲಿ ೧ ರಿಂದ ೭ನೇ ತರಗತಿವರೆಗೆ ಕಾರ್ಯನಿರ್ವಹಿಸುತ್ತಿರುವ ಸೇವಾನಿರತ ಎಲ್ಲಾ ಪದವಿಧರ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರುಗಳೆಂದು ಪದನಾಮೀಕರಿಸಿ ವಿಲೀನಗೊಳಿಸುವುದರ ಜೊತೆಗೆ ವೇತನ ಬಡ್ತಿ ನೀಡುವುದು. ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಪುನಃ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು. ೨೦೦೫ರಲ್ಲಿ ಅಧಿಸೂಚನೆಯಾಗಿ ೨೦೦೭ರ ಜನವರಿಯಲ್ಲಿ ನೇಮಕಾತಿ ಆದೇಶ ಪಡೆದ ಶಿಕ್ಷಕರುಗಳಿಗೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಸಂಬಂಧ ನ್ಯಾಯಾಲಯದ ತೀರ್ಪಿನ ಅನ್ವಯದಂತೆ ಕ್ರಮ ಕೈಗೊಳ್ಳಲು ಇಲಾಖೆಗೆ ಸೂಚಿಸುವುದು ಹಾಗು ಖಾಸಗಿ ಶಾಲೆಗಳ ಸ್ಥಾಪನೆಗೆ ನೀಡುವ ಅನುಮತಿ ಕಡಿಮೆಗೊಳಿಸಿ ಮೂಲ ಸೌಲಭ್ಯಗಳೊಂದಿಗೆ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವಂತೆ ಮನವಿ ಮಾಡಲಾಗಿದೆ.
ಜಿ.ಪಿ.ಟಿ ಹುದ್ದೆಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪರಿಗಣಿಸುವ ಸಂದರ್ಭದಲ್ಲಿ ಯಾವುದೇ ಶಿಕ್ಷಕರಿಗೂ ತೊಂದರೆಯಾಗದಂತೆ ಎಲ್ಲಾ ವರ್ಗದ ಶಿಕ್ಷಕರಿಗೂ ನ್ಯಾಯ ದೊರಕುವಂತಾಗಬೇಕು. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಲೋಪದೋಷಗಳು ಕಂಡುಬಾರದಂತೆ ವ್ಯವಸ್ಥಿತವಾಗಿ ಪ್ರತಿ ವರ್ಷ ವರ್ಗಾವಣೆ ನಡೆಸುವುದು. ಪ್ರತಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯ, ತರಗತಿಗೆ ಒಬ್ಬ ಹಾಗು ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು, ಗುಮಾಸ್ತರನ್ನು, ಡಿ ದರ್ಜೆ ನೌಕರರನ್ನು ಹಾಗು ಗಣಕಯಂತ್ರ ಶಿಕ್ಷಕರನ್ನು ನಿಯುಕ್ತಿಗೊಳಿಸುವುದು. ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೊಳಿಸುವುದು ಹಾಗು ಶಿಕ್ಷಕರುಗಳನ್ನು ಶಿಕ್ಷಣೇತರ ಕಾರ್ಯಗಳಿಂದ ವಿಶೇಷವಾಗಿ ಮತಗಟ್ಟೆ ಅಧಿಕಾರಿಗಳಾಗಿ(ಬಿಎಲ್‌ಓ) ಕಾರ್ಯನಿರ್ವಹಿಸುವ ಕೆಲಸದಿಂದ ವಿಮುಕ್ತಿಗೊಳಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಣ ಸಂಯೋಜಕರ ಹುದ್ದೆಗಳನ್ನು ಯಾವುದೇ ಪರೀಕ್ಷೆ ನಡೆಸದೆ ಸೇವಾ ಜೇಷ್ಠತೆ ಆಧಾರದ ಮೇಲೆ ಹಿರಿಯ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವ ಮೂಲಕ ಭರ್ತಿ ಮಾಡುವುದು. ಶಾಲಾ ದಾಖಲಾತಿ ೧೦೦ ಮಕ್ಕಳನ್ನು ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪದವಿಧರೇತರ ಮುಖ್ಯೋಪಾಧ್ಯಾಯರ ಹುದ್ದೆಯೆಂದು ಪರಿಗಣಿಸಿ ಆದೇಶ ಹೊರಡಿಸುವುದು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ, ಆರ್ಥಿಕ ಹಾಗು ಇನ್ನಿತರೆ ಎಲ್ಲಾ ಸೇವಾ ಸೌಲಭ್ಯ ನೀಡುವುದು. ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವುದು ಹಾಗು ಹಿಂದಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಿ ವರ್ಗಾವಣೆಯಲ್ಲಿ ಅವಕಾಶ ಕಲ್ಪಿಸಿಕೊಡುವುದು ಸೇರಿದಂತೆ ಒಟ್ಟು ೧೮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ತಹಸೀಲ್ದಾರ್ ಆರ್. ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಯು. ಮಹಾದೇವಪ್ಪ, ಬಸವಂತರಾವ್‌ದಾಳೆ, ರೇವಣಪ್ಪ, ಎ. ತಿಪ್ಪೇಸ್ವಾಮಿ, ಡಿ.ಎಸ್ ರಾಜಪ್ಪ, ರಂಗನಾಥಪ್ರಸಾದ್, ಡಿ. ನಾಗರತ್ನ, ಶಿವಲಿಂಗೇಗೌಡ, ಶಿಕ್ಷಣ ಸಂಯೋಜಕ ರವಿಕುಮಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.