Wednesday, February 3, 2021

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಫೆ.೧೪ರೊಳಗೆ ಚುನಾವಣೆ

ಜಿಲ್ಲಾಧಿಕಾರಿಯಿಂದ ಚುನಾವಣಾಧಿಕಾರಿಗಳ ನೇಮಕ

ಭದ್ರಾವತಿ, ಫೆ. ೩: ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದವು. ಕಳೆದ ವಾರದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಯಾದ ನಂತರ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ. ಈ ನಡುವೆ ಫೆ.೧೪ರೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
    ತಾಲೂಕಿನ ಒಟ್ಟು ೩೭ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ೫ ಅಧಿಕಾರಿಗಳಿಗೆ ತಲಾ ೫ ಗ್ರಾಮ ಪಂಚಾಯಿತಿಗಳು ಮತ್ತು ೩ ಅಧಿಕಾರಿಗಳಿಗೆ ತಲಾ ೪ ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆಸುವ ಜವಾಬ್ದಾರಿ ವಹಿಸಲಾಗಿದೆ.
   ಸೈದರಕಲ್ಲಹಳ್ಳಿ, ನಿಂಬೆಗೊಂದಿ, ಆನವೇರಿ, ಗುಡುಮಘಟ್ಟ ಮತ್ತು ಮಂಗೋಟೆ ಗ್ರಾ. ಪಂ.ಗಳಿಗೆ ತಾ.ಪಂ. ಸಹಾಯಕ ನಿರ್ದೇಶಕ ಚೇತನ್, ಸನ್ಯಾಸಿಕೋಡಮಗ್ಗೆ, ಆಗರದಹಳ್ಳಿ, ಯಡೇಹಳ್ಳಿ, ಅರಹತೊಳಲು ಮತ್ತು ಕಲ್ಲಿಹಾಳ್ ಗ್ರಾ.ಪಂ.ಗಳಿಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ ಶಶಿಧರ್, ದಾಸರಕಲ್ಲಹಳ್ಳಿ, ಮಾರಶೆಟ್ಟಿಹಳ್ಳಿ, ಅರಕೆರೆ, ಅರಬಿಳಚಿ ಮತ್ತು ನಾಗತಿಬೆಳಗಲು ಗ್ರಾ.ಪಂ.ಗಳಿಗೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್‌ರಾಜ್, ಕೂಡ್ಲಿಗೆರೆ, ಅತ್ತಿಗುಂದ, ಕೋಮಾರನಹಳ್ಳಿ, ತಡಸ ಮತ್ತು ದೊಣಬಘಟ್ಟ ಗ್ರಾ.ಪಂ.ಗಳಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಬಿಳಿಕಿ, ಕಾಗೇಕೋಡಮಗ್ಗೆ, ಅರಳಿಹಳ್ಳಿ, ವೀರಾಪುರ ಮತ್ತು ಕಲ್ಲಹಳ್ಳಿ ಗ್ರಾ.ಪಂ.ಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯರವರನ್ನು ನೇಮಕಗೊಳಿಸಲಾಗಿದೆ.
   ಅಂತರಗಂಗೆ, ದೊಡ್ಡೇರಿ, ಯರೇಹಳ್ಳಿ ಮತ್ತು ಮಾವಿನಕೆರೆ ಗ್ರಾ.ಪಂ.ಗಳಿಗೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್, ಬಾರಂದೂರು, ಕಂಬದಾಳು ಹೊಸೂರು, ಕಾರೇಹಳ್ಳಿ ಮತ್ತು ಅರಳಿಕೊಪ್ಪ ಗ್ರಾ.ಪಂ.ಗಳಿಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ. ನಟರಾಜ್ ಹಾಗು ಸಿಂಗನಮನೆ, ಹಿರಿಯೂರು, ಮೈದೊಳಲು ಮತ್ತು ತಾವರಘಟ್ಟ ಗ್ರಾ.ಪಂ.ಗಳಿಗೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೆ. ಬಸವರಾಜ್‌ರವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
    ಪ್ರಮುಖ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದು, ತಾಲೂಕಿನ ಪ್ರತಿಯೊಂದು ಗ್ರಾ.ಪಂ. ಸಹ ಇದೀಗ ಎಲ್ಲರ ಗಮನ ಸೆಳೆದಿವೆ.

ಪುಶು ವೈದ್ಯರಿಂದ ಕಾನೂನು ಉಲ್ಲಂಘಿಸಿ ಗೋ ಸಾಗಾಣಿಕೆಗೆ ಪರವಾನಗಿ

ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರಿಂದ ಕಾರ್ಯಾಚರಣೆ : ದೂರು

ಕಾನೂನು ಉಲ್ಲಂಘಿಸಿ ಹೆಚ್ಚಿನ ಗೋವುಗಳ ಸಾಗಾಣಿಕೆಗೆ ಪರವಾನಗಿ ನೀಡಿರುವ ಪಶು ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಿದರು.
    ಭದ್ರಾವತಿ, ಫೆ. ೩:  ಕಾನೂನು ಉಲ್ಲಂಘಿಸಿ ಹೆಚ್ಚಿನ ಗೋವುಗಳ ಸಾಗಾಣಿಕೆಗೆ ಪರವಾನಗಿ ನೀಡಿರುವ ಪಶು ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಿರುವ ಘಟನೆ ನಡೆದಿದೆ.
   ತಾಲೂಕಿನ ಅಂತರಗಂಗೆ ಗ್ರಾಮದಿಂದ ೩ ಗೋವುಗಳನ್ನು ಟಾಟಾ ಮೆಗಾ ವಾಹನದಲ್ಲಿ ಸಾಗಾಣಿಕೆ ಮಾಡಲು ಫೆ.೨ರಂದು ಪಶು ವೈದ್ಯ ಡಾ. ಕೆ. ರವೀಂದ್ರ ಎಂಬುವರು ಪರವಾನಗಿ ನೀಡಿದ್ದು, ಮಂಗಳವಾರ ಗೋವುಗಳನ್ನು ಸಾಗಾಣಿಕೆ ಮಾಡುತ್ತಿದ್ದಾಗ ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಹೆಚ್ಚಿನ ಗೋವುಗಳು ಕಂಡು ಬಂದಿದ್ದು, ಜೊತೆಗೆ ಒಂದು ಗೋವು ಗರ್ಭಿಣಿ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಈ ಗೋವು ಸಾಗಾಣಿಕೆ ಮಾಡುವುದು ಕಷ್ಟಕರವಾಗಿದೆ. ಪಶು ವೈದ್ಯರು ಯಾವುದೇ ಅಂಶವನ್ನು ಪರಿಗಣಿಸದೆ ನಿರ್ಲಕ್ಷ್ಯತನ ವಹಿಸಿ ಪರವಾನಗಿ ನೀಡಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ತನಿಖೆ ಕೈಗೊಂಡು ಗೊಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
   ಕಾರ್ಯಾಚರಣೆಯಲ್ಲಿ ಪ್ರಮುಖರಾದ ಚರಣ್ ದೇವಾಂಗ, ಚಂದನ್‌ರಾವ್, ಮನುಗೌಡ, ಲತೇಶ್ ಶೆಟ್ಟಿ, ವಿನೋದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಸಾಗಾಣಿಕೆಗೆ ಪರವಾನಗಿ ಪಡೆದ ಗೋವುಗಳಿಗಿಂತ ಹೆಚ್ಚಿನ ಗೋವುಗಳನ್ನು ಸಾಗಾಣಿಕೆ ಮಾಡುತ್ತಿರುವುದು.

ಕೇಂದ್ರ ಬಜೆಟ್ : ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ

 ಆಮ್ ಆದ್ಮಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್
    ಭದ್ರಾವತಿ, ಫೆ. ೩: ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಕೊಡುಗೆಗಳಿಲ್ಲ. ರಾಜ್ಯದ ಮಟ್ಟಿಗೆ ಇಂದೊಂದು ಶೂನ್ಯ ಬಜೆಟ್ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
     ಜನಸಾಮಾನ್ಯರು ಬಳಸುವ ದಿನ ಬಳಕೆ ವಸ್ತುಗಳ ಮೇಲೆ ಸೆಸ್ ಹೆಚ್ಚಳ ಮಾಡಿರುವುದು ಈಗಾಗಲೇ ಕೊರೋನಾ ಸಂಕಷ್ಟದಿಂದ ಬಳಲುತ್ತಿರುವವರ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸಿದಂತಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಆದರೆ ಇದೀಗ ಬಜೆಟ್‌ನಲ್ಲಿ ತಮಿಳುನಾಡು, ಕೇರಳ, ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಿಗೆ ಮಾತ್ರ  ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದು ದೂರಿದ್ದಾರೆ.  
    ಕೃಷಿ ಸೆಸ್ ಹೆಸರಿನಲ್ಲಿ ಕೃಷಿಕರಿಗೆ ಅನುಕೂಲ ಮಾಡುವ ನೆಪದಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡಲಾಗುತ್ತಿದೆ. ಡೀಸೆಲ್ ಮೇಲಿನ ಸೆಸ್ ಹೆಚ್ಚಳದಿಂದ ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ.  ಕಳೆದ ವರ್ಷದ ವಿತ್ತೀಯ ಕೊರತೆ ಶೇ.೩ರಷ್ಟಿದ್ದು, ಪ್ರಸ್ತುತ ಶೇ.೯.೫ರಷ್ಟಾಗಿದೆ.  ಮುಂದಿನ ವರ್ಷಕ್ಕೆ ಇದು ಶೇ.೬.೮ರಷ್ಟಾಗಬಹುದೆಂದು ಅಂದಾಜಿಸಲಾಗಿದೆ. ಈ ಕೊರತೆ ತುಂಬಲು ೧೨ ಲಕ್ಷ ಕೋಟಿ ಸಾಲ ಮಾಡಬೇಕಾದ ಅನಿವಾರ್ಯತೆ ಕೇಂದ್ರಕ್ಕೆ ಉಂಟಾಗಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದೇಶದ ಜನರು ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
     ಬಜೆಟ್‌ನಲ್ಲಿ ವಿದ್ಯುತ್ ಖಾಸಗಿಕರಣಕ್ಕೆ ಮುನ್ನುಡಿ ಬರೆಯಲಾಗಿದೆ. ಈ ಮೂಲಕ ಜನರ ಅಗತ್ಯತೆಯ ಮೂಲಕ್ಕೆ ಕೈ ಹಾಕಲಾಗಿದೆ. ಅಲ್ಲದೆ ಸರ್ಕಾರದ ಖಾಲಿ ಜಾಗ, ಆಸ್ತಿಗಳ ಮಾರಾಟ ಹೀಗೆ ಹಂತ, ಹಂತವಾಗಿ ದೇಶದ ಭೂಮಿಯನ್ನು, ಅಮೂಲ್ಯ ಸಂಪನ್ಮೂಲಗಳನ್ನು ಖಾಸಗಿಯವರ ತೆಕ್ಕೆಗೆ ವಹಿಸಿಕೊಡುವ ಲಕ್ಷಣಗಳು ಕಂಡು ಬರುತ್ತಿವೆ. ಅತಿ ದೊಡ್ಡ ವಿಮಾ ಕ್ಷೇತ್ರ ಕ್ಷೇತ್ರದಲ್ಲಿ  ಶೇ.೭೪ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಿರುವುದು, ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳು ಮತ್ತು  ಒಂದು ಜನರಲ್ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಿರುವುದು ವಿಪರ್ಯಾಸದ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.  

ರು.೧೦ ಲಕ್ಷ ವೆಚ್ಚದಲ್ಲಿ ಖಬರ್‌ಸ್ತಾನ್ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಚಾಲನೆ

ಭದ್ರಾವತಿ ತರೀಕೆರೆ ರಸ್ತೆಯಲ್ಲಿ ಹಜರತ್ ಸೈಯದ್ ಸಾದತ್ ದರ್ಗಾ ಮುಂಭಾಗದಲ್ಲಿರುವ ಖಬರ್‌ಸ್ತಾನ್ ಸುತ್ತ ಸುಮಾರು ೧೦ ಲಕ್ಷ ರು. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಚಾಲನೆ ನೀಡಿದರು.
  ಭದ್ರಾವತಿ, ಫೆ. ೩: ನಗರದ ತರೀಕೆರೆ ರಸ್ತೆಯ ಹಜರತ್ ಸೈಯದ್ ಸಾದತ್ ದರ್ಗಾ ಮುಂಭಾಗದಲ್ಲಿರುವ ಖಬರ್‌ಸ್ತಾನ್ ಸುತ್ತ ಸುಮಾರು ೧೦ ಲಕ್ಷ ರು. ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಚಾಲನೆ ನೀಡಿದರು.
  ಖಬರ್‌ಸ್ತಾನ್ ಸುತ್ತ ಕಾಂಪೌಂಡ್ ಇಲ್ಲದೆ ಇರುವುದರಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಈ ಹಿನ್ನಲೆಯಲ್ಲಿ ಕಾಂಪೌಂಡ್ ನಿರ್ಮಿಸುವಂತೆ ದರ್ಗಾ ಕಮಿಟಿ ವತಿಯಿಂದ ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು.
    ಧರ್ಮಗುರುಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖರಾದ ಸಿ.ಎಂ ಖಾದರ್, ಮಹಮದ್ ಸನಾವುಲ್ಲಾ, ದಿಲ್‌ದಾರ್, ಬಾಬಾಜಾನ್, ಅಮೀರ್‌ಜಾನ್, ಅಬ್ದುಲ್ ಖದೀರ್, ಕಮಿಟಿ ಅಧ್ಯಕ್ಷ ಮುಕ್ರಂ ಖಾನ್ ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಅಪಘಾತ : ಇಬ್ಬರು ಕೂಲಿ ಕಾರ್ಮಿಕರು ಮೃತ

    ಭದ್ರಾವತಿ, ಫೆ. ೩: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ತಾಲೂಕು ದೊಡ್ಡೇರಿ ಗ್ರಾಮದ ಸಮೀಪ ನಡೆದಿದೆ.
    ಹೊಸಮನೆ ನಿವಾಸಿಗಳಾದ ಶಿವು(೨೮) ಮತ್ತು ರಾಘವೇಂದ್ರ(೩೦) ಮೃತಪಟ್ಟಿದ್ದಾರೆ. ಭದ್ರಾವತಿಯಿಂದ ಶಿವನಿ ಕಡೆಗೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಮತ್ತು ಭದ್ರಾವತಿಗೆ ಆಗಮಿಸುತ್ತಿದ್ದ ದ್ವಿಚಕ್ರವಾಹನಗಳ ನಡುವೆ ರಾತ್ರಿ ಸುಮಾರು ೯ ಗಂಟೆ ಸಮಯದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪರ್ಯಾಯ ವೇದಿಕೆ ಅಧ್ಯಕ್ಷರಾಗಿ ಬಿ. ಗಂಗಾಧರ

     ಭದ್ರಾವತಿ, ಫೆ. ೩: ಪರ್ಯಾಯ ವೇದಿಕೆ ಹೆಸರಿನಲ್ಲಿ ನೂತನ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ವೇದಿಕೆ ಅಧ್ಯಕ್ಷರಾಗಿ ಬಿ. ಗಂಗಾಧರ ನೇಮಕಗೊಂಡಿದ್ದಾರೆ.
    ಉಪಾಧ್ಯಕ್ಷರಾಗಿ ಡಿ. ಶ್ರೀನಿವಾಸ(ಕ್ರೀಡಾಪಟು), ಎಸ್. ಸತೀಶ್, ಪ್ರಧಾನಕಾರ್ಯದರ್ಶಿಯಾಗಿ ಬಿ.ಜಿ ಕಾರ್ತಿಕ್, ಖಜಾಂಚಿಯಾಗಿ ಸಂತೋಷ್, ಪ್ರಧಾನ ಸಂಚಾಲಕರಾಗಿ ಅಬ್ದುಲ್ ಖದೀರ್, ಕಾನೂನು ಸಲಹೆಗಾರರಾಗಿ ಜಿ. ಸತೀಶ್ ಹಾಗು ನಿರ್ದೇಶಕರಾಗಿ ಕಿಶೋರ್, ಕೆ. ಲಕ್ಷ್ಮೀಕಾಂತ ಮತ್ತು ಬಿ. ರಮೇಶ್ ನೇಮಕಗೊಂಡಿದ್ದಾರೆ.