Wednesday, February 3, 2021

ಕೇಂದ್ರ ಬಜೆಟ್ : ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ

 ಆಮ್ ಆದ್ಮಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್
    ಭದ್ರಾವತಿ, ಫೆ. ೩: ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಕೊಡುಗೆಗಳಿಲ್ಲ. ರಾಜ್ಯದ ಮಟ್ಟಿಗೆ ಇಂದೊಂದು ಶೂನ್ಯ ಬಜೆಟ್ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆರೋಪಿಸಿದ್ದಾರೆ.
     ಜನಸಾಮಾನ್ಯರು ಬಳಸುವ ದಿನ ಬಳಕೆ ವಸ್ತುಗಳ ಮೇಲೆ ಸೆಸ್ ಹೆಚ್ಚಳ ಮಾಡಿರುವುದು ಈಗಾಗಲೇ ಕೊರೋನಾ ಸಂಕಷ್ಟದಿಂದ ಬಳಲುತ್ತಿರುವವರ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸಿದಂತಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಆದರೆ ಇದೀಗ ಬಜೆಟ್‌ನಲ್ಲಿ ತಮಿಳುನಾಡು, ಕೇರಳ, ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಿಗೆ ಮಾತ್ರ  ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದು ದೂರಿದ್ದಾರೆ.  
    ಕೃಷಿ ಸೆಸ್ ಹೆಸರಿನಲ್ಲಿ ಕೃಷಿಕರಿಗೆ ಅನುಕೂಲ ಮಾಡುವ ನೆಪದಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡಲಾಗುತ್ತಿದೆ. ಡೀಸೆಲ್ ಮೇಲಿನ ಸೆಸ್ ಹೆಚ್ಚಳದಿಂದ ಅಗತ್ಯ ವಸ್ತುಗಳು ದುಬಾರಿಯಾಗುತ್ತವೆ.  ಕಳೆದ ವರ್ಷದ ವಿತ್ತೀಯ ಕೊರತೆ ಶೇ.೩ರಷ್ಟಿದ್ದು, ಪ್ರಸ್ತುತ ಶೇ.೯.೫ರಷ್ಟಾಗಿದೆ.  ಮುಂದಿನ ವರ್ಷಕ್ಕೆ ಇದು ಶೇ.೬.೮ರಷ್ಟಾಗಬಹುದೆಂದು ಅಂದಾಜಿಸಲಾಗಿದೆ. ಈ ಕೊರತೆ ತುಂಬಲು ೧೨ ಲಕ್ಷ ಕೋಟಿ ಸಾಲ ಮಾಡಬೇಕಾದ ಅನಿವಾರ್ಯತೆ ಕೇಂದ್ರಕ್ಕೆ ಉಂಟಾಗಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದೇಶದ ಜನರು ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
     ಬಜೆಟ್‌ನಲ್ಲಿ ವಿದ್ಯುತ್ ಖಾಸಗಿಕರಣಕ್ಕೆ ಮುನ್ನುಡಿ ಬರೆಯಲಾಗಿದೆ. ಈ ಮೂಲಕ ಜನರ ಅಗತ್ಯತೆಯ ಮೂಲಕ್ಕೆ ಕೈ ಹಾಕಲಾಗಿದೆ. ಅಲ್ಲದೆ ಸರ್ಕಾರದ ಖಾಲಿ ಜಾಗ, ಆಸ್ತಿಗಳ ಮಾರಾಟ ಹೀಗೆ ಹಂತ, ಹಂತವಾಗಿ ದೇಶದ ಭೂಮಿಯನ್ನು, ಅಮೂಲ್ಯ ಸಂಪನ್ಮೂಲಗಳನ್ನು ಖಾಸಗಿಯವರ ತೆಕ್ಕೆಗೆ ವಹಿಸಿಕೊಡುವ ಲಕ್ಷಣಗಳು ಕಂಡು ಬರುತ್ತಿವೆ. ಅತಿ ದೊಡ್ಡ ವಿಮಾ ಕ್ಷೇತ್ರ ಕ್ಷೇತ್ರದಲ್ಲಿ  ಶೇ.೭೪ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಿರುವುದು, ಸಾರ್ವಜನಿಕ ರಂಗದ ಎರಡು ಬ್ಯಾಂಕುಗಳು ಮತ್ತು  ಒಂದು ಜನರಲ್ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಮುಂದಾಗಿರುವುದು ವಿಪರ್ಯಾಸದ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.  

No comments:

Post a Comment