Monday, January 30, 2023

ವಿಐಎಸ್‌ಎಲ್ ಉಳಿಸಲು ನಿವೃತ್ತ ಕಾರ್ಮಿಕರಿಂದ ಜ.೩೧ರಂದು ದೆಹಲಿ ಜಾಥಾ


    ಭದ್ರಾವತಿ, ಜ. ೩೦: ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ನಿವೃತ್ತ ಕಾರ್ಮಿಕರು ಜ.೩೧ರಂದು ದೆಹಲಿ ಜಾಥಾ ನಡೆಸಲಿದ್ದಾರೆ.
    ರಾಜ್ಯದ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಒಂದಾಗಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ತೆಗೆದುಕೊಂಡಿರುವ ನಿರ್ಧಾರ ದುರಾದೃಷ್ಟಕರ ಸಂಗತಿಯಾಗಿದ್ದು, ಈ ಬೆಳವಣಿಗೆಯನ್ನು ಖಂಡಿಸುವ ಜೊತೆಗೆ ಲಕ್ಷಾಂತರ ಜನರಿಗೆ ಅನ್ನ ನೀಡಿದ ಹಾಗು ಕ್ಷೇತ್ರದ ಉಸಿರಾಗಿರುವ ಈ ಕಾರ್ಖಾನೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ನಿಯೋಗ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ನೇತೃತ್ವದಲ್ಲಿ ದೆಹಲಿ ಜಾಥಾ ನಡೆಸಲಿದೆ.
    ನಿಯೋಗ ಜ.೩೧ರಂದು ದೆಹಲಿಯಲ್ಲಿ ಸಂಬಂಧಪಟ್ಟ ಸಚಿವರು ಹಾಗು ರಾಜ್ಯದ ಎಲ್ಲಾ ಸಂಸದರನ್ನು ಭೇಟಿಯಾಗಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಹಾಗು ಸೂಕ್ತ ಬಂಡವಾಳ ತೊಡಗಿಸಿ ಆಧುನೀಕರಣಗೊಳಿಸಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಲಿದೆ ಎಂದು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಿ.ಆರ್ ನಾಗರಾಜ ತಿಳಿಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಎಚ್‌ಡಿಕೆ ಬೆಂಬಲ : ಫೆ.೩ರಂದು ನಗರಕ್ಕೆ ಆಗಮನ

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಪಂಚರತ್ನ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರನ್ನು ಭದ್ರಾವತಿ ಜೆಡಿಎಸ್ ಪಕ್ಷದ ಯುವ ಮುಖಂಡರು ಹಾಗು ಕಾರ್ಮಿಕ ಸಂಘಟನೆಗಳ ಪ್ರಮುಖರು ಭೇಟಿ ಮಾಡಿ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.
    ಭದ್ರಾವತಿ, ಜ. ೩೦: ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಕಳೆದ ೧೨ ದಿನಗಳಿಂದ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ.
    ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ತಾಲೂಕು ಘಟಕದ ಅಧ್ಯಕ್ಷ ಎಂ.ಎ ಅಜಿತ್, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ರಮೇಶ್, ಉಮೇಶ್ ಸುರಗಿತೋಪು, ಪರಮೇಶ್ ಸೇರಿದಂತೆ ಯುವ ಮುಖಂಡರು ಸೋಮವಾರ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಪಂಚರತ್ನ ಕಾರ್ಯಕ್ರಮದ ವೇದಿಕೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ಫೆ.೩ರಂದು ಮಧ್ಯಾಹ್ನ ೩ ಗಂಟೆಗೆ ಹೋರಾಟ ಸ್ಥಳಕ್ಕೆ ಆಗಮಿಸಲಿದ್ದಾರೆ.
    ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಕಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಕ್ಷೇತ್ರದ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿ ಸೋಮವಾರ ನಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.
    ಭದ್ರಾವತಿ, ಜ. ೩೦ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ಸೋಮವಾರ ನಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.


    ಉಜ್ಜನಿಪುರ ಆನೇಕೊಪ್ಪ ಎಂಪಿಎಂ ಬಡಾವಣೆ ಸಮೀಪ ಬೈಪಾಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಹಳೇನಗರದ ನಿವಾಸಿ ಶ್ರೀಕಾಂತ್ ಎಂಬುವರಿಗೆ ಸೇರಿದ ಹೊಂಡ ಸಿಟಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೀವ್ರಗೊಂಡ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ : ದಿಗ್ಭ್ರಮೆಗೊಂಡ ಸಂಸದ

೨ ದಿನದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹಿಂದಿರುಗಿದ ಬಿ.ವೈ ರಾಘವೇಂದ್ರ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲ ವ್ಯಕ್ತಪಡಿಸಿದರು.
    ಭದ್ರಾವತಿ, ಜ. ೩೦ : ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಳೆದ ೧೨ ದಿನಗಳಿಂದ ನಿರಂತರವಾಗಿ ಕಾರ್ಖಾನೆ ಮುಂಭಾಗ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಸೋಮವಾರ ಪ್ರತಿಭಟನೆ ಏಕಾಏಕಿ ತೀವ್ರಗೊಳಿಸಿದ್ದು, ಇದರಿಂದಾಗಿ ಸಂಸದ ಬಿ.ವೈ ರಾಘವೇಂದ್ರ ಸಹ ದಿಗ್ಭ್ರಮೆಗೊಳ್ಳುವಂತೆ ಮಾಡಿತು.
    ನಗರದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಸಂಸದರು ಆಗಮಿಸುವ ಹಿನ್ನಲೆಯಲ್ಲಿ ಪ್ರತಿಭಟನೆಗೆ ನಡೆಸಲು ಪೂರ್ವ ಸಿದ್ದತೆ ಮಾಡಿಕೊಂಡಿದ್ದ ಗುತ್ತಿಗೆ ಕಾರ್ಮಿಕರು ಕೆಎಸ್‌ಆರ್‌ಟಿಸಿ ಮುಖ್ಯಬಸ್‌ನಿಲ್ದಾಣದ ಬಳಿ ಆಗಮಿಸಿದ್ದು, ಅಷ್ಟರಲ್ಲಿ ಪೊಲೀಸರು ಬ್ಯಾರಿಗೇಡ್ ಬಳಸಿ ಗುತ್ತಿಗೆ ಕಾರ್ಮಿಕರನ್ನು ತಡೆಯುವಲ್ಲಿ ಯಶಸ್ವಿಯಾದರು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಪ್ರತಿಭಟನೆಯನ್ನು ಏಕಾಏಕಿ ತೀವ್ರಗೊಳಿಸಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಸಂಸದರ ವಿರುದ್ಧ ಧಿಕ್ಕಾರ ಹಾಕುವ ಮೂಲಕ ತಮ್ಮ ಅಳಲು ತೋರ್ಪಡಿಸಿಕೊಂಡರು.
    ಈ ನಡುವೆ ಕೆಲವು ಕಾರ್ಮಿಕರು ಸಂಸದರ ಕಾಲಿಗೆ ಬಿದ್ದರೇ, ಇನ್ನೂ ಕೆಲವು ಕಾರ್ಮಿಕರು ಕಣ್ಣೀರಿನ ಕೋಡಿ ಸುರಿಸಿ ತಮ್ಮ ಸಂಕಷ್ಟಗಳನ್ನು ತೋಪಡಿಸಿಕೊಂಡರು. ಮಹಿಳಾ ಕಾರ್ಮಿಕರು ಬಿ.ವೈ ರಾಘವೇಂದ್ರ ಹಾಗು ಬಿ.ಎಸ್ ಯಡಿಯೂರಪ್ಪನವರಿಗೆ ಹಿಡಿಶಾಪ ಹಾಕುತ್ತಿರುವುದು ಸಹ ಕಂಡು ಬಂದಿತು. ಕಾರ್ಮಿಕರ ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸಂಸದರು ದಿಕ್ಕುಕಾಣದೆ ಮುಂದಿನ ೨ ದಿನಗಳ ಒಳಗಾಗಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಸ್ಥಳದಿಂದ ಕಾಲ್ಕಿತ್ತರು.
    ಸಂಸದರು ಹಿಂದಿರುಗಿದ ನಂತರ ಕಾರ್ಮಿಕರು ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
    ಕಾರ್ಮಿಕರ ಪ್ರತಿಭಟನೆಗೆ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಪಕ್ಷದ ಮುಖಂಡರ ಶಾರದ ಅಪ್ಪಾಜಿ, ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ ಮಾಯಣ್ಣ, ಕಾಳೇಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಎಎಪಿ ಎಚ್ ರವಿಕುಮಾರ್ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ, ಕಾರ್ಮಿಕ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು. ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.


ಭದ್ರಾವತಿಯಲ್ಲಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಸೋಮವಾರ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಬೆಂಬಲ ವ್ಯಕ್ತಪಡಿಸಿದರು.  

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿ ತಾರತಮ್ಯ ಮಾಡಿಲ್ಲ

ಭದ್ರಾವತಿ ಹೊಸಸೇತುವೆ ರಸ್ತೆಯ ಸಿದ್ದರೂಢನಗರದ ಬಸವೇಶ್ವರ ಸಭಾಭವನದಲ್ಲಿ ಸೋಮವಾರ ನಡೆದ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು.

ಮುಖ್ಯಾಂಶಗಳು:

- ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆ ಇಂದಿನ ಸ್ಥಿತಿಗೆ ಬಿಜೆಪಿ ಸರ್ಕಾರ ಕಾರಣವಲ್ಲ 

- ಕಾರ್ಮಿಕರಿಂದ ಬೃಹತ್ ಪ್ರತಿಭಟನೆ, ೨ ದಿನದಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥ

- ಸಭೆನಂತರ ಹೋರಾಟದ ಮುಂದಿನ ತೀರ್ಮಾನ

- ಎಚ್.ಡಿ ಕುಮಾರಸ್ವಾಮಿ ಸೂಚನೆ ನಂತರ ಜಿಲ್ಲಾಧಿಕಾರಿ ಕಛೇರಿವರೆಗೂ ಪಾದಯಾತ್ರೆ

    ಭದ್ರಾವತಿ, ಜ. ೩೦ : ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿ ತಾರತಮ್ಯ ಮಾಡಿಲ್ಲ. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಈಗಲೂ ಬದ್ದವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
    ನಗರದ ಹೊಸಸೇತುವೆ ರಸ್ತೆಯ ಸಿದ್ದರೂಢನಗರದ ಬಸವೇಶ್ವರ ಸಭಾಭವನದಲ್ಲಿ ಸೋಮವಾರ ನಡೆದ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಇಂದಿನ ಸ್ಥಿತಿಗೆ ಬಿಜೆಪಿ ಪಕ್ಷ ಕಾರಣವಲ್ಲ. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಸೂಕ್ತ ಸಂದರ್ಭದಲ್ಲಿ ಅಂದಿನ ಸರ್ಕಾರಗಳು ಪೂರಕವಾಗಿ ಸ್ಪಂದಿಸಲಿಲ್ಲ. ಈ ಹಿನ್ನಲೆಯಲ್ಲಿ ಸಮಸ್ಯೆ ಎದುರಾಗಿದ್ದು, ಬಿಜೆಪಿ ಪಕ್ಷದ ಅಧಿಕಾರಕ್ಕೆ ಬಂದ ನಂತರ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದರು.
    ಈ ಎರಡು ಕಾರ್ಖಾನೆಗಳ ವಿಚಾರ ಒಂದೆಡೆಯಾದರೆ ಇಲ್ಲಿನ ಕಾರ್ಮಿಕರ ಹಿತಕ್ಕಾಗಿ ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಶಾಹಿ ಗಾರ್ಮೆಂಟ್ಸ್ ಆರಂಭಗೊಳ್ಳಲು ಕಾರಣಕರ್ತರಾಗಿದ್ದಾರೆ. ಇದರಿಂದಾಗಿ ಕ್ಷೇತ್ರದ ಸುಮಾರು ೨ ಸಾವಿರ ಮಂದಿಗೆ ಉದ್ಯೋಗ ಲಭಿಸಿದೆ. ಅಲ್ಲದೆ ಕೇಂದ್ರ ಹಾಗು ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.
    ಮಾಜಿ ಸಚಿವ  ಕೆ.ಎಸ್ ಈಶ್ವರಪ್ಪ ಮಾತನಾಡಿ, ನಮ್ಮದು ರಾಷ್ಟ್ರೀಯವಾದ ಹಿಂದುತ್ವವಾಗಿದೆ. ಹಿಂದುತ್ವ ಎಂಬುದು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಈ ದೇಶದಲ್ಲಿರುವ ಎಲ್ಲಾ ಹಿಂದುಗಳು ಕೂಡ ಒಂದೇ ಎಂಬ ಭಾವನೆಯನ್ನು ಹೊಂದಿದೆ. ನಮ್ಮದು ಯಾರನ್ನು ಓಲೈಕೆ ಮಾಡುವ ಪಕ್ಷವಲ್ಲ.  ಹಿಂದುತ್ವ ಆಧಾರದ ಮೇಲೆ  ಅಧಿಕಾರಕ್ಕೆ ಬಂದಿದೆ. ಜಿಲ್ಲೆಯಲ್ಲೂ ಸಹ ಮುಂಬರುವ ಚುನಾವಣೆಯಲ್ಲಿ ಭದ್ರಾವತಿ ಸೇರಿದಂತೆ  ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
    ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭಾ ಸದಸ್ಯರಾ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಆಯನೂರು ಮಂಜುನಾಥ್, ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಶಿವರಾಜ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಎರಡು ದಿನದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ : ಬಿ.ವೈ ರಾಘವೇಂದ್ರ ಭರವಸೆ
    ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಳೆದ ೧೨ ದಿನಗಳಿಂದ ನಿರಂತರವಾಗಿ ಕಾರ್ಖಾನೆ ಮುಂಭಾಗ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಸೋಮವಾರ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ ನಡೆಸಿದರು.
    ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಂಸದರು. ಪ್ರತಿಭಟನಾಕಾರರಿಗೆ ಪ್ರಸ್ತುತ ಸ್ಥಿತಿಗತಿಗಳ ಕುರಿತು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗದ ಹಿನ್ನಲೆಯಲ್ಲಿ ಮುಂದಿನ ೨ ದಿನಗಳಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
    ಸಭೆಯ ನಂತರ ಮುಂದಿನ ತೀರ್ಮಾನ :
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಸಂಸದರು ೨ ದಿನಗಳ ಒಳಗಾಗಿ ಕಾರ್ಖಾನೆ ಆಡಳಿತ ಮಂಡಳಿ, ಕಾರ್ಮಿಕ ಸಂಘಟನೆಗಳ ಪ್ರಮುಖರು ಹಾಗು ಗಣಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸಭೆ ನಂತರ ನಮ್ಮ ಮುಂದಿನ ಹೋರಾಟಕ್ಕೆ ತೀರ್ಮಾನಿಸಲಾಗುವುದು ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗದಿರುವಂತೆ ಮನವಿ ಮಾಡಿದರು.
    ಜಿಲ್ಲಾಧಿಕಾರಿ ಕಛೇರಿವರೆಗೂ ಪಾದಯಾತ್ರೆ :
    ಈ ನಡುವೆ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ವಿಐಎಸ್‌ಎಲ್ ಕಾರ್ಖಾನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಮುಂದಾಗಿದ್ದಾರೆ. ಅವರ ಸೂಚನೆ ನಂತರ ಕಾರ್ಖಾನೆ ಉಳಿವಿಗಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ವರೆಗೂ ಪಾದಯಾತ್ರೆ ನಡೆಸಲಾಗುವುದು. ಕಾರ್ಮಿಕರ ಎಲ್ಲಾ ರೀತಿಯ ಹೋರಾಟಕ್ಕೂ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಳೆದ ೧೨ ದಿನಗಳಿಂದ ನಿರಂತರವಾಗಿ ಕಾರ್ಖಾನೆ ಮುಂಭಾಗ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರು ಸೋಮವಾರ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ ನಡೆಸಿದರು.