Wednesday, September 28, 2022

ಪ್ರೇಕ್ಷಕರ ಮನಸೂರೆಗೊಂಡ ದಸರಾ ಜಾನಪದ ಉತ್ಸವ

ಭದ್ರಾವತಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಬುಧವಾರ ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ದಸರಾ ಜಾನಪದ ಉತ್ಸವ ಪ್ರೇಕ್ಷಕರ ಮನಸೂರೆಗೊಂಡಿತು.
    ಭದ್ರಾವತಿ, ಸೆ. ೨೮: ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಬುಧವಾರ ಹಳೇನಗರದ ಕನಕಮಂಟಪದಲ್ಲಿ ಆಯೋಜಿಸಲಾಗಿದ್ದ ದಸರಾ ಜಾನಪದ ಉತ್ಸವ ಪ್ರೇಕ್ಷಕರ ಮನಸೂರೆಗೊಂಡಿತು.
ಜನಪದ ಕಲಾ ಪ್ರಾಕಾರಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿರುವುದು ಈ ಬಾರಿ ನಾಡಹಬ್ಬ ದಸರಾ ವಿಶೇಷತೆಗಳಲ್ಲಿ ಒಂದಾಗಿದೆ. ಜಾನಪದ ಕಲೆಗಳು ಎಂದರೆ ಮೂಗು ಮುರಿಯುವ ಇಂದಿನ ಯುವ ಜನತೆಯ ಮನಸ್ಥಿತಿಯನ್ನು ಬದಲಾಯಿಸುವ ಹೊಸ ಪ್ರಯತ್ನ ಸಹ ಇಂದಿನ ಜಾನಪದ ಕಲಾವಿದರು ಮೈಗೂಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಪ್ರಯೋಗಗಳೊಂದಿಗೆ ಕಲಾವಿದರು ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.


    ಜಾನಪದ ಕಲಾವಿದ ತಮಟೆ ಜಗದೀಶ್ ನೇತೃತ್ವದಲ್ಲಿ ವಿವಿಧ ಜನಪದ ಕಲಾ ತಂಡಗಳು ತಮ್ಮ ಪ್ರತಿಭೆಗಳನ್ನು ವೇದಿಕೆಯಲ್ಲಿ ಅನಾವರಣಗೊಳಿಸಿದವು.
ಜಾನಪದ ಕಲಾಸಕ್ತರು, ವಿವಿಧ ಸಂಘಟನೆಗಳ ಪ್ರಮುಖರು, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗು ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ಹಳೇನಗರ, ಹೊಸಮನೆ ಸೇರಿದಂತೆ ಸುತ್ತಮುತ್ತಲಿನ ಭಾಗದ ನಿವಾಸಿಗಳು ದಸರಾ ಜಾನಪದ ಉತ್ಸವ ಕಣ್ತುಂಬಿಕೊಂಡರು.



ನಾಡಹಬ್ಬ ದಸರಾ : ಸೆ.೨೯ರಂದು ಪರಿಸರ ದಸರಾ


    ಭದ್ರಾವತಿ, ಸೆ. ೨೮ : ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಅಂಗವಾಗಿ ಸೆ.೨೯ರಂದು ಪರಿಸರ ದಸರಾ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೭ ಗಂಟೆಗೆ ಮಾಧವಚಾರ್ ವೃತ್ತದ ಎಡ ಮತ್ತು ಬಲ ಬದಿಯ ನದಿ ತಟದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಭದ್ರಾ ನದಿ ತಟದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಂತರ ೧೧ ಗಂಟೆಗೆ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಿಂದ ಪರಿಸರ ಜನಜಾಗೃತಿ ಜಾಥಾ ಮತ್ತು ಕಲಾ ತಂಡಗಳಿಂದ ಪರಿಸರ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಲಿದೆ.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ಸಂಜೆ ೬.೩೦ಕ್ಕೆ ಗಾಂಧಿ ಕಂಡ ಕನಸು ಸ್ವಚ್ಛತೆ ಕುರಿತು ನಗರಸಭಾ ಪೌರ ಕಾರ್ಮಿಕರಿಂದ ರೂಪಕ ಹಾಗು ಕಾಲಾಯ ತಸ್ಮೈ ನಮಃ ವಿಡಂಬನಾತ್ಮಕ ರೂಪಕ ನಗರಸಭೆ ಸಿಬ್ಬಂದಿಗಳಿಂದ ನಡೆಯಲಿದ್ದು, ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ರೂಪಕ ರಚಿಸಿ ನಿರ್ದೇಶಿಸಿದ್ದಾರೆ.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಪೌರಾಯುಕ್ತ  ಎಚ್.ಎಂ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಪ್ರೊ. ಬಿ. ಕೃಷ್ಣಪ್ಪನವರ ಡಿಎಸ್‌ಎಸ್ ದುರ್ಬಳಕೆ : ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ

ಕೆಲವು ಕಿಡಿಗೇಡಿಗಳು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಸೆ. ೨೮ : ಕೆಲವು ಕಿಡಿಗೇಡಿಗಳು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಪೇಪರ್‌ಟೌನ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಹಾಗು ಜಿಲ್ಲಾ ಸಂಚಾಲಕ ಚಿನ್ನಯ್ಯ ನೇತೃತ್ವದಲ್ಲಿ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದ್ದು, ನ್ಯಾಯ ಲಭಿಸುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
    ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಕೆ.ಟಿ ಪ್ರಸನ್ನ, ರವಿನಾಯ್ಕ ಸೇರಿದಂತೆ ಇನ್ನೂ ಕೆಲವು ವ್ಯಕ್ತಿಗಳು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗು ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಾಮಗಾರಿಗಳಲ್ಲಿ ಕಮಿಷನ್ ನೀಡುವಂತೆ ಪೀಡಿಸುತ್ತಿದ್ದಾರೆ. ಗ್ರಾಮಠಾಣಾ ಜಾಗಕ್ಕೆ ಸಂಬಂಧಿಸಿದಂತೆ ವಿನಾಕಾರಣ ಗ್ರಾಮದಲ್ಲಿ ಗೊಂದಲದ ವಾತಾವರಣ ಮೂಡಿಸುತ್ತಿದ್ದಾರೆ. ಇಷ್ಟೆ ಅಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗು ಸದಸ್ಯರ ವಿರುದ್ಧ ಜಾತಿನಿಂದನೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
    ಪ್ರೊ. ಬಿ ಕೃಷ್ಣಪ್ಪನವರು ಸ್ಥಾಪಿಸಿರುವ ಸಂಘಟನೆ ನಮ್ಮದ್ದಾಗಿದ್ದು, ನ್ಯಾಯಾಲಯದಲ್ಲಿ ಈ ಸಂಬಂಧ ಆದೇಶವಾಗಿದೆ ಎಂದು ಸುಳ್ಳು ಹೇಳಿಕೊಂಡು ಎಲ್ಲೆಡೆ ವಂಚಿಸಲಾಗುತ್ತಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಂ. ಗುರುಮೂರ್ತಿ ಎಂಬುವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಈ ನಡುವೆಯೂ ಇದೀಗ ಹಿರಿಯೂರು ಗ್ರಾಮದಲ್ಲಿ ಸಂಘಟನೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಂಘಟನೆಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತಿದೆ. ಇಂತಹವರನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
    ಪ್ರಮುಖರಾದ ವಿ. ವಿನೋದ್, ಕೆ. ರಂಗನಾಥ್, ಕುಪೇಂದ್ರಪ್ಪ, ಜಿಂಕ್‌ಲೈನ್ ಮಣಿ, ಕಾಣಿಕ್‌ರಾಜ್, ಎನ್. ಗೋವಿಂದ ಹಾಗು ಹಿರಿಯೂರು ಗ್ರಾಮ ಮುಖಂಡರು ಹಾಗು ಡಿಎಸ್‌ಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕೆಎಸ್‌ಆರ್‌ಟಿಸಿ ಬಸ್-ದ್ವಿಚಕ್ರ ವಾಹನ ನಡುವೆ ಅಪಘಾತ : ಓರ್ವ ಸ್ಥಳದಲ್ಲಿಯೇ ಸಾವು

ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮುಂಭಾಗ ಬುಧವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಆಂಜನೇಯ ಅಗ್ರಹಾರ ಮೂರನೇ ಕ್ರಾಸ್ ನಿವಾಸಿ ಲೋಕೇಶ್.
    ಭದ್ರಾವತಿ, ಸೆ. ೨೮: ನಗರದ ಉಂಬ್ಳೆಬೈಲು ರಸ್ತೆ  ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮುಂಭಾಗ ಬುಧವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ  ದ್ವಿಚಕ್ರ  ವಾಹನ ಸವಾರನೋರ್ವ ಸ್ಥಳದಲ್ಲಿಯೇ ಮತಪಟ್ಟಿರುವ  ಘಟನೆ ನಡೆದಿದೆ.
    ಆಂಜನೇಯ ಅಗ್ರಹಾರ ಮೂರನೇ ಕ್ರಾಸ್ ನಿವಾಸಿ ಲೋಕೇಶ್(೩೬) ಮೃತಪಟ್ಟಿದ್ದು, ಈತ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ  ಹೋಗುವಾಗ ಕೆಎಸ್‌ಆರ್ ಟಿ ಸಿ ಬಸ್ ನಡುವೆ ಅಪಘಾತ ಸಂಭವಿಸಿ ತಲೆಗೆ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮತಪಟ್ಟಿದ್ದಾನೆ.
    ಈ ರಸ್ತೆಯಲ್ಲಿ ಶಾಲಾ-ಕಾಲೇಜು, ಪೊಲೀಸ್ ಠಾಣೆ, ಚರ್ಚ್ ಗಳು ಅಧಿಕವಾಗಿವೆ. ಈ ರಸ್ತೆಯನ್ನು ಇತ್ತೀಚೆಗೆ ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕಲ್ಪಿಸಿಕೊಡಲಾಗಿದೆ. ಆದರೂ ಸಹ ಈ ರಸ್ತೆಯಲ್ಲಿ ವಾಹನ ದಟ್ಟನೆ ಅಧಿಕವಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಅಲ್ಲದೆ  ವೇಗ ಮಿತಿ ಇಲ್ಲದಿರುವುದು ಸಹ ಅಪಘಾತ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಮುಂಭಾಗ ಬುಧವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರವಾಹನ ವಾಹನ ಕೆಎಸ್‌ಆರ್‌ಟಿಸಿ ಬಸ್‌ಗೆ ಸಿಲುಕಿಕೊಂಡಿರುವುದು.